1.86ಲಕ್ಷ ವಿದ್ಯಾರ್ಥಿಗಳಿಗೆ ನವೆಂಬರ್ ಒಳಗಾಗಿ ಉಚಿತ ಲ್ಯಾಪ್‍ಟಾಪ್ ..!

Free-Laptom

ಬೆಂಗಳೂರು, ಸೆ.28- ಉನ್ನತ ಶಿಕ್ಷಣ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ನವೆಂಬರ್ ಒಳಗಾಗಿ ಉಚಿತ ಲ್ಯಾಪ್‍ಟಾಪ್ ವಿತರಣೆ ಮಾಡಲು ಕ್ರಮಕೈಗೊಳ್ಳುವುದಾಗಿ ಉನ್ನತ ಶಿಕ್ಷಣ ಸಚಿವ ಬಸವರಾಜರಾಯರೆಡ್ಡಿ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಎ, ಬಿಕಾಂ, ಬಿಎಸ್ಸಿ, ಎಂಬಿಎ, ಇಂಜಿನಿಯರ್ ಸೇರಿದಂತೆ ಉನ್ನತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‍ಟಾಪ್ ನೀಡಲು ಬಜೆಟ್‍ನಲ್ಲಿ ಘೋಷಿಸಲಾಗಿತ್ತು. ಅದರಂತೆ 30ಸಾವಿರ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳು ಸೇರಿದಂತೆ 1.86ಲಕ್ಷ ವಿದ್ಯಾರ್ಥಿಗಳಿಗೆ ಬ್ರ್ಯಾಂಡೆಡ್ ಲ್ಯಾಪ್‍ಟಾಪ್ ನೀಡಲು ಉನ್ನತ ಶಿಕ್ಷಣ ಇಲಾಖೆ ಟೆಂಡರ್ ಕರೆದು ಲ್ಯಾಪ್‍ಟಾಪ್ ಖರೀದಿಸಲಾಗುವುದು ಎಂದರು.

ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಗುಣಮಟ್ಟ ಹಾಳು ಮಾಡಿ ವಿಶ್ವವಿದ್ಯಾಲಯದ ಮಾನ್ಯತೆ ರದ್ದಾಗಲು ಕಾರಣರಾಗಿದ್ದ ಸಿಬ್ಬಂದಿ ಹಾಗೂ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಲು ಸರ್ಕಾರ ಮುಂದಾಗಿದೆ. ಮುಕ್ತ ವಿವಿಯ ಮಾನ್ಯತೆಯನ್ನು ರದ್ದು ಮಾಡಲು ಕಳಪೆ ಗುಣಮಟ್ಟವೇ ಕಾರಣ. ಶಿಕ್ಷಣ ತಜ್ಞರು ವಿವಿಯನ್ನು ಉದ್ದಾರಿ ಮಾಡುವುದಾಗಿ ಹೇಳಿಕೊಂಡು ಅವನತಿಯ ಹಾದಿಗೆ ತಂದಿದ್ದಾರೆ. ಈ ಸಂಬಂಧ ಇಬ್ಬರು ಕುಲಪತಿಗಳನ್ನು ಅಮಾನತು ಮಾಡಲಾಗಿದೆ ಎಂದು ಹೇಳಿದರು. ಅಲ್ಲಿನ ಲೋಪದೋಷಗಳಿಗೆ ಕಾರಣರಾದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ವರದಿ ನೀಡುವಂತೆ ಕಾನೂನು ಇಲಾಖೆ ಕಾರ್ಯದರ್ಶಿಗಳಿಗೆ ಸೂಚನೆ ನೀಡಲಾಗಿದೆ.

ಕಳೆದ ಮೂರು ವರ್ಷಗಳಿಂದ ವಿಶ್ವವಿದ್ಯಾಲಯ ಮುಚ್ಚಿದೆ. ಇದರಿಂದ ಮೂರು ಲಕ್ಷ ವಿದ್ಯಾರ್ಥಿಗಳ ಬದುಕು ಅತಂತ್ರವಾಗಿದೆ. ಇದರಲ್ಲಿದ್ದ 700 ಸಿಬ್ಬಂದಿಗಳನ್ನು ಬೇರೆ ವಿವಿಗಳಿಗೆ ಸ್ಥಳಾಂತರಿಸಲಾಗಿದೆ. ಇದರ ಸಂಪೂರ್ಣ ವರದಿ ನೀಡುವಂತೆ ಸರ್ಕಾರದ ಅಪರ ಮುಖ್ಯಕಾರ್ಯದರ್ಶಿ ರತ್ನಪ್ರಭ ಅವರ ಸಮಿತಿ ರಚಿಸಲಾಗಿದೆ ಎಂದರು. ಬೆಂಗಳೂರು ವಿವಿ ಜ್ಞಾನಭಾರತಿ ಆವರಣದಲ್ಲಿ ಸ್ಥಾಪಿಸಲಾಗಿರುವ ಡಾ.ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್‍ನ ಶೈಕ್ಷಣಿಕ ಪ್ರಾರಂಭೋತ್ಸವವನ್ನು ಅ.4ರಂದು ಮಾಜಿ ಪ್ರಧಾನಿ ಮನಮೋಹನ್‍ಸಿಂಗ್ ಉದ್ಘಾಟಿಸಲಿದ್ದಾರೆ. ಅಂದಿನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಆರ್‍ಬಿಐ ಮಾಜಿ ಗೌರ್ನರ್ ರಘುರಾಮರಾಜನ್, ಲೋಕಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಚಿವರಾದ ಆರ್.ವಿ.ದೇಶಪಾಂಡೆ, ರೋಷನ್‍ಬೇಗ್, ಕೆ.ಜೆ.ಜಾರ್ಜ್, ಎಚ್.ಸಿ.ಮಹದೇವಪ್ಪ, ಆಂಜನೇಯ ಸೇರಿದಂತೆ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

Sri Raghav

Admin