ನೀರಾವರಿ ಯೋಜನೆಗೆ 1 ಲಕ್ಷ ಕೋಟಿ ಅನುದಾನ ಅಗತ್ಯ : ಕಾರಜೋಳ

Social Share

ಬೆಂಗಳೂರು,ಸೆ.13- ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಿಲ್ಲ. ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು 1 ಒಂದು ಲಕ್ಷದ ಎರಡು ಸಾವಿರ ಕೋಟಿ ರೂ. ಅನುದಾನ ಬೇಕಾಗಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಎಂ.ಕಾರಜೋಳ ವಿಧಾನಸಭೆಗೆ ತಿಳಿಸಿದರು.

ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಶಾಸಕ ಟಿ.ರಘುಮೂರ್ತಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ನಮ್ಮ ಇಲಾಖೆಗೆ ವಾರ್ಷಿಕ 18ರಿಂದ 19 ಸಾವಿರ ಕೋಟಿ ರೂ. ಅನುದಾನ ಒದಗಿಸಲಾಗುತ್ತದೆ. ಆದರೆ ಒಂದು ಲಕ್ಷದ ಎರಡು ಸಾವಿರ ಕೋಟಿ ರೂ.ಗಿಂತ ಹೆಚ್ಚು ಕಾರ್ಯಭಾರವಿದೆ. ಅನುದಾನ ಲಭ್ಯತೆ ಆಧಾರದ ಮೇಲೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ತಾರತಮ್ಯ ಮಾಡುತ್ತಿಲ್ಲ ಎಂದರು.

ಭದ್ರ ಮೇಲ್ದಂಡೆ ಯೋಜನೆ ವ್ಯಾಪ್ತಿಯಲ್ಲಿ ಚಳ್ಳಕೆರೆ ತಾಲ್ಲೂಕಿನ ಬೊಸಿಕೆರೆ ಗ್ರಾಮದ ಬಳಿ ವೇದಾವತಿ ನದಿಗೆ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಮಾಡಲು 25 ಕೋಟಿ ಅನುದಾನವನ್ನು ಬಜೆಟ್‍ನಲ್ಲಿ ಘೋಷಿಸಲಾಗಿತ್ತು. ಆದರೆ ಒದಗಿಸಿರಲಿಲ್ಲ. ಅನುದಾನ ಲಭ್ಯತೆ ಆಧಾರದ ಮೇಲೆ ಈ ಬ್ಯಾರೇಜ್ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.

ಕೊಳ್ಳೆಗಾಲ ತಾಲ್ಲೂಕಿನ ಗುಂಡಾಲ್ ಜಲಾಶಯವು 1980ರಲ್ಲಿ ನಿರ್ಮಾಣವಾಗಿದ್ದು, ನಾಲ್ಕು ಬಾರಿ ಮಾತ್ರ ತುಂಬಿದೆ. ಕಾಲುವೆಗಳ ದುರಸ್ತಿಗೆ ಕ್ರಮ ಕೈಗೊಳ್ಳುವುದಾಗಿ ಕಾಂಗ್ರೆಸ್ ಶಾಸಕ ಆರ್.ನರೇಂದ್ರ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು.

15,100 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಲು ಯೋಜಿಸಲಾಗಿದೆ. ಕಾಲುವೆಗಳಲ್ಲಿ ಹೂಳು, ಗಿಡಗಂಟೆಗಳನ್ನು ತೆಗೆದು ದುರಸ್ತಿಗೊಳಿಸಿ ಬೆಳೆಗಳಿಗೆ ಸಮರ್ಪಕ ನೀರು ಹರಿಸಲು ಕ್ರಮ ಕೈಗೊಳ್ಳಲಾಗಿದೆ. ಪ್ರಸಕ್ತ ಸಾಲಿನಲ್ಲಿ 11.50 ಲಕ್ಷ ರೂ. ಅನುದಾನ ಒದಗಿಸಲಾಗಿದೆ ಎಂದರು.

Articles You Might Like

Share This Article