1 ರಿಂದ 9 ತರಗತಿಗೆ ಪರೀಕ್ಷೆ ಬಗ್ಗೆ 2 ದಿನದಲ್ಲಿ ತೀರ್ಮಾನ : ಸಚಿವ ಸುರೇಶ್‍ಕುಮಾರ್

ಬೆಂಗಳೂರು, ಏ.5- ಒಂದರಿಂದ 9ನೇ ತರಗತಿವರೆಗೆ ಪರೀಕ್ಷೆ ನಡೆಸಬೇಕೆ ಬೇಡವೆ ಎಂಬುದರ ಬಗ್ಗೆ ಇನ್ನೆರೆಡು ದಿನಗಳಲ್ಲಿ ಸೂಕ್ತ ನಿರ್ಧಾರ ಪ್ರಕಟಿಸಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್‍ಕುಮಾರ್ ತಿಳಿಸಿದರು. ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು, ಪೋಷಕರ ಸಂಘಟನೆಗಳ ಪ್ರತಿನಿಧಿಗಳು, ಶಿಕ್ಷಣ ತಜ್ಞರು, ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳನ್ನೊಳಗೊಂಡ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಸಚಿವರು ಈ ಮಾಹಿತಿ ನೀಡಿದರು.

ಪೋಷಕರು ಹಾಗೂ ಖಾಸಗಿ ಶಿಕ್ಷಣ ಸಂಸ್ಥೆ ಸಂಘಟನೆಗಳ ಪ್ರತಿನಿಧಿಗಳ ಅಭಿಪ್ರಾಯವನ್ನು ಮುಕ್ತವಾಗಿ ಸ್ವೀಕರಿಸಲಾಗಿದೆ. ಇಂದಿನ ಸಭೆಯಲ್ಲಿ ವ್ಯಕ್ತವಾಗಿರುವ ಅಭಿಪ್ರಾಯ ಆಧರಿಸಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಪ್ರಧಾನಕಾರ್ಯದರ್ಶಿ ಹಾಗೂ ಇಲಾಖೆಯ ನಿರ್ದೇಶಕರು ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಂಡು ಅಧಿಕೃತ ಆದೇಶವನ್ನು ಪ್ರಕಟಿಸಲಾಗುವುದು ಎಂದರು.

ಈಗಾಗಲೇ 6ರಿಂದ 9ನೇ ತರಗತಿಗಳನ್ನು ಕೋವಿಡ್ ಹೆಚ್ಚಳದ ಹಿನ್ನೆಲೆಯಲ್ಲಿ ಏ.20ರವರೆಗೂ ಸ್ಥಗಿತಗೊಳಿಸಿ ಆದೇಶ ಹೊರಡಿಸಲಾಗಿದೆ. ಒಂದರಿಂದ 9ನೇ ತರಗತಿ ಪರೀಕ್ಷೆ ವಿಚಾರವಾಗಿ ಬಹುದೊಡ್ಡ ಚರ್ಚೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಜಿ.ಕುಮಾರ್ ನಾಯಕ್, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಆಯುಕ್ತ ಅನ್ಬುಕುಮಾರ್, ಇಲಾಖೆಯ ಎಲ್ಲಾ ನಿರ್ದೇಶಕರು, ಶಿಕ್ಷಣ ತಜ್ಞ ನಿರಂಜನ ಆರಾಧ್ಯ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಉತ್ತರ ಕರ್ನಾಟಕ ಅನುದಾನ ರಹಿತ ಶಾಲೆಗಳ ಸಂಘ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ರೂಪ್ಸಾ, ಪೋಷಕ ಸಂಘಟನೆಗಳ ಸಮನ್ವಯ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳ 44 ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಅವರಲ್ಲಿ 15 ಮಂದಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಖಾಸಗಿ ಶಾಲೆ ಸಂಘಟನೆಗಳ ಅಭಿಪ್ರಾಯ ಯಾವುದಾದರು ಒಂದು ಮಾದರಿಯಲ್ಲಿ ವಿದ್ಯಾರ್ಥಿಗಳ ಕಲಿಕೆಯ ಮೌಲ್ಯಾಂಕನ ಮಾಡಬೇಕು ಎಂಬುದಾಗಿದೆ. ಅಲ್ಲದೆ, ಆರ್‍ಟಿಇ ಅಡಿಯಲ್ಲಿ ಶುಲ್ಕ ಪಾವತಿಸಬೇಕು ಎಂಬ ವಿಚಾರವನ್ನೂ ಪ್ರಸ್ತಾಪ ಮಾಡಿದ್ದಾರೆ. ಶಿಕ್ಷಣ ತಜ್ಞರು ಸರ್ಕಾರಕ್ಕೆ ಮುಂದಿರುವ ದಾರಿಯನ್ನು ತೋರಿಸಿದ್ದಾರೆ. ಪೋಷಕರ ಸಂಘಟನೆಯವರು ಅವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಮೌಲ್ಯಾಂಕನ ನಡೆಸಬೇಕೆಂಬುದಾಗಿದೆ ಎಂದರು.

ಅರ್ಧಂಬಧರ್ ಪರೀಕ್ಷೆಯನ್ನು ಕೆಲವು ಶಾಲೆಗಳು ಮಾಡಿವೆ . ಇನ್ನು ಕೆಲವು ಶಾಲೆಗಳು ಸಿದ್ಧತೆ ಮಾಡುತ್ತಿವೆ. ಇನ್ನುಳಿದ ಶಾಲೆಗಳು ಮುಗಿಸಿವೆ ಎಂಬುದರ ಬಗ್ಗೆ ಪ್ರಸ್ತಾಪವಾಗಿದೆ. ಸರ್ಕಾರದ ಶಾಲೆಗಳಲ್ಲಿ ಪರೀಕ್ಷೆ ನಡೆಸಿಲ್ಲ ಎಂದು ಹೇಳಿದರು.

ಬಲವಂತವಾಗಿ ಪುಸ್ತಕ ಖರೀದಿ ವಿಚಾರ, ಆರ್‍ಟಿಇ ಹಣ ಬಿಡುಗಡೆ ಅಡೆತಡೆ ಬಗ್ಗೆಯೂ ಪ್ರಸ್ತಾಪವಾಗಿದ್ದು, ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು. ಶಾಲೆಗಳು ಸ್ಥಗಿತವಾಗಿದ್ದರೂ, ಟ್ಯುಟೋರಿಯಲ್ ನಡೆಸುತ್ತಿರುವ ಬಗ್ಗೆ ಸಂಘಟನೆಗಳು ದೂರು ನೀಡಿದ್ದು, ಇಲಾಖೆ ಆ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.