10 ವರ್ಷಗಳಿಂದ ಬಾಡಿಗೆ ಕಟ್ಟಡದಲ್ಲಿ ಗ್ರಂಥಾಲಯ : ಇಲ್ಲಿಲ್ಲ ಮೂಲಭೂತ ಸೌಲಭ್ಯ

14
ಮುದ್ದೇಬಿಹಾಳ,ಫೆ.7- ಪಟ್ಟಣದಲ್ಲಿರುವ ಸಾರ್ವಜನಿಕ ಗ್ರಂಥಾಲಯಕ್ಕೆ ಸ್ವಂತ ಕಟ್ಟಡವಿಲ್ಲದೆ ಕಳೆದ ಹತ್ತು ವರ್ಷಗಳಿಂದ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ. 1990ರಲ್ಲಿ ಪಟ್ಟಣದ ನೇತಾಜಿ ಗಲ್ಲಿಯ ಸ್ವಂತ ಕಟ್ಟಡವೊಂದರಲ್ಲಿ ಕಾರ್ಯಾರಂಭ ಮಾಡಿತ್ತು. ನಂತರ 2006ರಲ್ಲಿ ಆಲಮಟ್ಟಿಯ ರಸ್ತೆಯಲ್ಲಿರುವ ಪ್ರವಾಸಿ ಮಂದಿರದ ಎದುರಿಗೆ ಖಾಸಗಿ ಕಟ್ಟಡವೊಂದಕ್ಕೆ ಸ್ಥಳಾಂತರ ಗೊಳಿಸಲಾಯಿತು. ಈ ಕಟ್ಟಡಕ್ಕೆ ಸ್ಥಳಾಂತರಗೊಂಡ ನಂತರ ವಾರ್ಷಿಕ ರೂ: 72,000 ಗಳನ್ನು ಬಾಡಿಗೆ ತುಂಬುತ್ತಿದ್ದು, ಇದು ಗ್ರಂಥಾಲಯ ಇಲಾಖೆಗೆ ಹೊರೆಯಾಗಿದೆ.
ದಿನದಿಂದ ದಿನಕ್ಕೆ ನಗರದಲ್ಲಿ ಓದುಗರ ಸಂಖ್ಯೆಯು ಹೆಚ್ಚಾಗುತ್ತಿದ್ದು, ಇದರಿಂದ ಈಗ ಖಾಸಗಿ ನೆಲಮಹಡಿಯೊಂದರಲ್ಲಿ ನಡೆಯುತ್ತಿದೆ. ಈ ಕಟ್ಟಡವು ಬಹಳ ಇಕ್ಕಟ್ಟಾಗಿದೆ. ಓದುಗರು ಗ್ರಂಥಾಲಯಕ್ಕೆ ಹೋಗಲು ಮೆಟ್ಟಿಲುಗಳು ಕೂಡಾ ಇರುವುದಿಲ್ಲ. ಇಳಿಜಾರಿನಿಂದ ಇಳಿಯಬೇಕು. ಇದರಿಂದ ವೃದ್ಧರು, ಮಕ್ಕಳು ಮತ್ತು ಮಹಿಳೆಯರು ಹಲವು ಬಾರಿ ಬಿದ್ದಿರುವ ಪ್ರಕರಣಗಳೂ ನಡೆದಿವೆ. ಅಲ್ಲದೆ ಈ ನೆಲಮಹಡಿಯೊಳಗೆ ಮಳೆಗಾಲದಲ್ಲಿ ಮಳೆ ನೀರು ಗ್ರಂಥಾಲಯದ ಒಳಗೆ ಬಂದು ಪುಸ್ತಕಗಳು ನೀರಿನಲ್ಲಿ ಮುಳುಗಿ ಹಾಳಾಗಿವೆ.
ಮಹಿಳೆಯರಿಗೆ ಓದಲು ಪ್ರತ್ಯೇಕ ಸ್ಥಳವಿಲ್ಲ.

ಈ ಬಾಡಿಗೆ ಗ್ರಂಥಾಲಯವು ಬಹಳ ಚಿಕ್ಕದಾಗಿರುವುದರಿಂದ ಇಲ್ಲಿ ಮಹಿಳೆಯರಿಗೆ ಓದಲು ಪ್ರತ್ಯೇಕ ಸ್ಥಳದ ವ್ಯವಸ್ಥೆ ಇಲ್ಲ. ಹೀಗಾಗಿ ಈ ಗ್ರಂಥಾಲಯಕ್ಕೆ ಮಹಿಳಾ ಓದುಗರು ಕೂಡಾ ಬರುತ್ತಿಲ್ಲ. ಓದುಗರಿಗೆ ಕುಳಿತುಕೊಳ್ಳಲು ಸರಿಯಾದ ಖುರ್ಚಿ, ಬೆಂಚು, ಮುಂತಾದ ಆಸನಗಳ ವ್ಯವಸ್ಥೆ ಇರುವುದಿಲ್ಲ. ಇತರೆ ಸೌಲಭ್ಯಗಳಾದ ಕುಡಿಯುವ ನೀರು, ಶೌಚಾಲಯ ಮತ್ತು ಪುಸ್ತಕಗಳನ್ನು ಇಡುವ ಕಪಾಟುಗಳು ಇರುವುದಿಲ್ಲ. ಇಂತಹ ಮೂಲಭೂತ ಸೌಲಭ್ಯಗಳ ಸಮಸ್ಯೆ ಇರುವುದರಿಂದ ಗ್ರಂಥಾಲಯಕ್ಕೆ ಉಚಿತ ಜಾಗ ಒದಗಿಸುವಂತೆ ಹಿಂದಿನ ಉಪ ನಿರ್ದೇಶಕರು ಪುರಸಭೈ ಅವರಿಗೆ ದಿ : 8-9-2014 ಮನವಿ ಮಾಡಿದ್ದು, ಅದು ಇದುವರೆಗೂ ಕಾರ್ಯರೂಪಕ್ಕೆ ಬಂದಿರುವುದಿಲ್ಲ. ಈ ವಿಳಂಬಕ್ಕೆ ಕಾಣದ ಕೈಗಳ ಒತ್ತಡವಿದೆ ಎಂದು ಕೆಲವು ಪ್ರಗತಿಪರರ ಅನಿಸಿಕೆಯಾಗಿದೆ.
ಈಗ ದಿ: 11-01-2017ರಲ್ಲಿ ವಿಜಯಪುರ ಜಿಲ್ಲಾ ಪಂಚಾಯತಿಯಲ್ಲಿ ನಡೆದ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೈಯಲ್ಲಿ, ಸರಕಾರದ ವಿವಿದ ಇಲಾಖೆಗಳ ವ್ಯಾಪ್ತಿಯಲ್ಲಿ ಬರುವ ಸರಕಾರಿ ಇಲಾಖೆಗಳಿಗೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ಇರುವ ಅವಶ್ಯವಿರುವ ಜಾಗೆಗಳ ಸಮಸ್ಯೆಯನ್ನು ತಕ್ಷಣ ಬಗೆಹರಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ ಸೂಚನೆ ನೀಡಿದ್ದಾರೆ. ಹೀಗಾಗಿ ಪಟ್ಟಣದ ಸಾರ್ವಜನಿಕ ಗ್ರಂಥಾಲಯ ಸ್ವಂತ ಕಟ್ಟಡ ಹೊಂದಿ ಪತ್ರಿಕಾ ವಿಭಾಗ, ಪರಾಮರ್ಶನೆ ವಿಭಾಗ ಮಕ್ಕಳು, ಮಹಿಳಾ ಸ್ಪರ್ಧಾತ್ಮಕ ವಿದ್ಯಾರ್ಥಿಗಳ ವಿಭಾಗ, ಕುಡಿಯುವ ನೀರು, ಪ್ರತ್ಯೇಕ ಮಹಿಳಾ ಪುರುಷ ಶೌಚಾಲಯ ವ್ಯವಸ್ಥೆ ಕಲ್ಪಿಸುವ ಕಾರ್ಯವನ್ನು ಸಂಬಂಧಿಸಿದ ಅಧಿಕಾರಿಗಳು ಮಾಡಲೆಂಬುದು ನಾಗರಿಕರ ಆಗ್ರಹ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Sri Raghav

Admin