ಕುಟುಂಬದ ಪ್ರತಿಯೊಬ್ಬರಿಗೂ 10ಕೆಜಿ ಉಚಿತ ಅಕ್ಕಿ : ಕಾಂಗ್ರೆಸ್ ಘೋಷಣೆ

Social Share

ಬೆಂಗಳೂರು,ಫೆ.24- ಹಸುವಿನಿಂದ ಯಾರೂ ನಲುಗಬಾರದೆಂಬ ನಿಟ್ಟಿನಲ್ಲಿ ಬಿಪಿಎಲ್ ಕುಟುಂಬದ ಪ್ರತಿಯೊಬ್ಬರಿಗೂ ಉಚಿತ 10 ಕೆಜಿ ಅಕ್ಕಿ ನೀಡಲು ಕಾಂಗ್ರೆಸ್ ಸಂಕಲ್ಪ ತೊಟ್ಟಿದೆ.

ಕೆಪಿಸಿಸಿ ಕಚೇರಿಯಲ್ಲಿಂದು ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು, ಕಾಂಗ್ರೆಸ್ನ ಮೂರನೇ ಘೋಷಣೆ ಬಿಪಿಎಲ್ ಕುಟುಂಬದ ಪ್ರತಿ ಸದಸ್ಯರಿಗೆ ತಲಾ 10 ಕೆಜಿ ಅಕ್ಕಿ ನೀಡುವ ಭರವಸೆಯನ್ನು ನಾವು ನೀಡುತ್ತಿದ್ದೇವೆ ಎಂದು ಹೇಳಿದರು.

ಈಗಾಗಲೇ ಉಚಿತ ವಿದ್ಯುತ್ ನೀಡಿ ಕುಟುಂಬಕ್ಕೆ ಬೆಳಕು ನೀಡಲು ಸಂಕಲ್ಪ ಮಾಡಿದ್ದು, ಸ್ತ್ರೀ ಶಕ್ತಿಯನ್ನು ಹೆಚ್ಚಿಸಲು ಪ್ರತಿ ಮನೆ ಯಜಮಾನಿಗೆ ತಿಂಗಳಿಗೆ ಎರಡು ಸಾವಿರ ರೂ. ನೀಡಲು ಈಗಾಗಲೇ ನಾವು ಘೋಷಣೆ ಮಾಡಿದ್ದೇವೆ. ಈಗ ಬಡವರಿಗೆ ಅನ್ನಭಾಗ್ಯ ನೀಡಿ ಕ್ರಾಂತಿಕಾರಿ ಹೆಜ್ಜೆ ಇಟ್ಟಿದ್ದ ನಮ್ಮ ಹಿಂದಿನ ಕಾಂಗ್ರೆಸ್ ಸರ್ಕಾರದ ಯೋಜನೆಯನ್ನು ಮುಂದುವರೆಸುವ ವಾಗ್ದಾನವನ್ನು ಮಾಡುತ್ತಾ ಹಿಂದೆ ನಾವು ನೀಡುತ್ತಿದ್ದ ಉಚಿತ 7 ಕೆಜಿ ಅಕ್ಕಿ ಬದಲಾಗಿ ಈಗ 10 ಕೆಜಿ ನೀಡುತ್ತೇವೆ ಎಂದರು.

ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಹಿಂದೆ ನಮ್ಮ ಸರ್ಕಾರ ಬಂದಾಗ ಒಂದು ಗಂಟೆಯಲ್ಲೇ ಬಸವಜಯಂತಿ ದಿನದಂದು ಅನ್ನಭಾಗ್ಯ ಯೋಜನೆಯನ್ನು ಘೋಷಿಸಿ ಒಂದು ರೂ. ಪಡೆದು 7 ಕೆಜಿ ನೀಡುತ್ತಿದ್ದೆವು. ನಂತರ ಉಚಿತವಾಗಿ ನೀಡಲು ಆದೇಶ ಹೊರಡಿಸಲಾಗಿತ್ತು.

ಆದರೆ, ಈಗಿನ ಬಿಜೆಪಿ ಸರ್ಕಾರ ಐದು ಕೆಜಿಗೆ ಇಳಿಸಿದೆ. ಇದರಿಂದ ಜನರು ಸಂಕಷ್ಟಕ್ಕೆ ಈಡಾಗಿದ್ದಾರೆ. ಕೋವಿಡ್ ಸಂದರ್ಭದಲ್ಲಿ ನಾವು ಜಾರಿಗೆ ತಂದಿದ್ದ ಅನ್ನಭಾಗ್ಯ ಹಾಗೂ ನರೇಗಾದಿಂದ ಸಾಕಷ್ಟು ಮಂದಿ ಹಸುವಿನಿಂದ ಮುಕ್ತವಾಗಿದ್ದಾರೆ. ಸಾಕಷ್ಟು ನೆರವು ಸಿಕ್ಕಿದೆ. ಇದಿಲ್ಲದಿದ್ದರೆ ಬಹಳ ಕಷ್ಟದ ಸಂಕಷ್ಟ ಎದುರಿಸಬೇಕಾಗುತ್ತಿತ್ತು ಎಂದು ಸಿದ್ದರಾಮಯ್ಯ ಹೇಳಿದರು.

ನಾವು ಈಗಾಗಲೇ 24 ಜಿಲ್ಲೆಗಳಲ್ಲಿ ಪ್ರಜಾಧ್ವನಿ ಸಮಾವೇಶಕ್ಕೆ ತೆರಳಿದ್ದ ಸಂದರ್ಭದಲ್ಲಿ ಜನರು ಅನ್ನಭಾಗ್ಯ ಅಕ್ಕಿ ಕಡಿತಗೊಳಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾವು ಇದರ ಬಗ್ಗೆ ಗಮನ ಹರಿಸಬೇಕೆಂದು ಹೇಳಿದ್ದಾರೆ. ಇದರ ಬಗ್ಗೆ ನಮ್ಮ ಪಕ್ಷ ಗಮನ ಹರಿಸಿ ಬಿಪಿಎಲ್ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೂ 10 ಕೆಜಿ ಅಕ್ಕಿ ನೀಡಲು ನಿರ್ಧರಿಸಿದ್ದೇವೆ ಎಂದರು.

#10kgFreeRice, #amilymembers, #Congress #announcement,

Articles You Might Like

Share This Article