ಬೆಂಗಳೂರು ನಗರಕ್ಕೆ 10 ಸಾವಿರ ಕೋಟಿ ರೂ. ಬಂಪರ್ ಕೊಡುಗೆ

Social Share

ಬೆಂಗಳೂರು, ಫೆ, 17- ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಸಿಲಿಕಾನ್ ಸಿಟಿ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಬಾರಿಯ ಬಜೆಟ್‍ನಲ್ಲಿ ನಗರದ ಅಭಿವೃದ್ಧಿಗೆ 10 ಸಾವಿರ ಕೋಟಿ ರೂ.ಗಳ ಬಂಪರ್ ಕೊಡುಗೆ ಘೋಷಣೆ ಮಾಡಿದ್ದಾರೆ.

ನಗರದಲ್ಲಿ ಸುಗಮ ಸಂಚಾರ, ರಸ್ತೆ, ರಾಜಕಾಲುವೆಗಳ ಅಭಿವೃದ್ಧಿ ಮೂಲಕ ಪ್ರವಾಹ ತಡೆಗಟ್ಟುವುದು, ವೈಜ್ಞಾನಿಕ ಹಾಗೂ ದಕ್ಷ ತ್ಯಾಜ್ಯ ನಿರ್ವಹಣೆ ವ್ಯವಸ್ಥೆ ಜಾರಿಗೊಳಿಸುವ ಬಗ್ಗೆ ಬಜೆಟ್‍ನಲ್ಲಿ ಪ್ರಸ್ತಾಪಿಸಲಾಗಿದೆ. ಅಮೃತ ನಗರೋತ್ಥಾನ ಯೋಜನೆಯಡಿ ನಗರದಲ್ಲಿ 6 ಸಾವಿರ ಕೋಟಿ ರೂ. ವೆಚ್ಚದ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಹೈ ಡೆನ್ಸಿಟಿ ಕಾರಿಡಾರ್,ಯೋಜನೆಯಡಿ 108 ಕಿ.ಮೀ. ಉದ್ದದ ರಸ್ತೆಗಳನ್ನು 273 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.

ಮಳೆ ನೀರು ಮುಕ್ತವಾಗಿ ಹರಿದು ಪ್ರವಾಹ ಪರಿಸ್ಥಿತಿ ತಪ್ಪಿಸಲು 195 ಕಿ.ಮೀ ಉದ್ದದ ಚರಂಡಿ ಮತ್ತು ಕಲ್ವರ್ಟ್‍ಗಳ ಅಭಿವೃದ್ಧಿಪಡಿಸಲು 1813 ಕೋಟಿ ರೂ.ಗಳನ್ನು ಒದಗಿಸಿಕೊಡಲಾಗಿದೆ. ನಗರದ ಸಂಚಾರ ದಟ್ಟಣೆ ತಪ್ಪಿಸಲು ವಾಹನ ದಟ್ಟಣೆ ಇರುವ 75 ಜಂಕ್ಷನ್‍ಗಳಲ್ಲಿ 150 ಕೋಟಿ ರೂ.ಗಳ ವೆಚ್ಚದಲ್ಲಿ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ತಂತ್ರಜ್ಞಾನದೊಂದಿಗೆ ಟ್ರಾಫಿಕ್ ಸಿಗ್ನಲ್‍ಗಳ ನಿರ್ವಹಣೆ ಮಾಡುವ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.

ಬೊಮ್ಮಾಯಿ ಬಜೆಟ್ – 2023-2024 (Live Updates)

ಟಿನ್ ಫ್ಯಾಕ್ಟರಿಯಿಂದ ಮೇಡಳ್ಳಿವರೆಗೆ 350 ಕೋಟಿ ರೂ. ವೆಚ್ಚದಲ್ಲಿ 5 ಕಿ.ಮೀ ಉದ್ದದ ಎಲಿವೇಟೆಡ್ ರಸ್ತೆ ನಿರ್ಮಾಣ ಹಾಗೂ ಸಬ್‍ಅರ್ಬನ್ ರೈಲ್ವೆ ನಿಗಮದ ರೈಲು ಜಾಲದೊಂದಿಗೆ ಸಮನ್ವಯ ಸಾಸಿ ಯಶವಂತಪುರದ ರೈಲು ನಿಲ್ದಾಣದಿಂದ ಮತ್ತಿಕೆರೆ ಹಾಗೂ ಬಿಎಎಲ್ ರಸ್ತೆಯವರೆಗೆ ಇಂಟಿಗ್ರೆಟೆಡ್ ಮೇಲ್ಸೇತುವೆ ನಿರ್ಮಿಸಿ ನೇರ ಸಂಪರ್ಕ ಕಲ್ಪಿಸಲು ನಿರ್ಧರಿಸಲಾಗಿದೆ.

ಒಂದು ಸಾವಿರ ಕೋಟಿ ರೂ.ವೆಚ್ಚದಲ್ಲಿ ನಗರದ 120 ಕಿ.ಮೀ ಉದ್ದದ ಆರ್ಟೀರಿಯಲ್ ರಸ್ತೆಯ ವೈಟ್ ಟಾಪಿಂಗ್, ಹಾಗೂ 300 ಕಿ.ಮೀ ಉದ್ದದ ಸಬ್-ಆರ್ಟೀರಿಯಲ್ ರಸ್ತೆಗಳನ್ನು 450 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಭರವಸೆ ನೀಡಲಾಗಿದೆ.

ರೈತರ ಅಲ್ಪಾವಧಿ ಸಾಲದ ಮಿತಿ 3 ರಿಂದ 5 ಲಕ್ಷಕ್ಕೆ ಏರಿಕೆ

ಬಿಬಿಎಂಪಿಗೆ ಹೊಸದಾಗಿ ಸೇರ್ಪಡೆಯಾಗಿರುವ 110 ಗ್ರಾಮಗಳ ದುಸ್ಥಿತಿಯಲ್ಲಿರುವ ರಸ್ತೆಗಳ ಪುನರ್‍ನಿರ್ಮಾಣಕ್ಕೆ 300 ಕೋಟಿ ರೂ.ನಿಗದಿಪಡಿಸಲಾಗಿದೆ. ಬೈಯಪ್ಪನ ಹಳ್ಳಿಯ ಸರ್‍ಎಂವಿ ಮೆಟ್ರೊ ಟರ್ಮಿನಲ್ ಸಮರ್ಪಕ ಬಳಕೆ ಉದ್ದೇಶದಿಂದ ಸುತ್ತಮುತ್ತಲ ಸಂಚಾರ ದಟ್ಟಣೆ ತಗ್ಗಿಸಲು 300 ಕೋಟಿ ರೂ.ವೆಚ್ಚದಲ್ಲಿ ಅಗತ್ಯ ಕಾಮಗಾರಿ ಕೈಗೆತ್ತಿಕೊಳ್ಳುವ ಭರವಸೆಯನ್ನು ಬಜೆಟ್‍ನಲ್ಲಿ ಘೋಷಿಸಲಾಗಿದೆ.

#10thousandcrores ,#BangaloreDevelopment, #BasavarajBommai,  #Budget2023, #StateBudget2023, #BommaiBudget, #ಬಜೆಟ್,  #ಬಜೆಟ್2023,

Articles You Might Like

Share This Article