ಮಧ್ಯಪ್ರದೇಶ, ಜು. 12- ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ವೇಳೆ ಮೊಸಳೆಯೊಂದು 10 ವರ್ಷದ ಬಾಲಕನ ಮೇಲೆ ದಾಳಿ ಮಾಡಿ ನುಂಗಿ ಹಾಕಿರುವ ಘಟನೆ ಶಿಯೋಪುರದ ಚಂಬಲ್ ನದಿಯಲ್ಲಿ ನಡೆದಿದೆ. ಬಾಲಕ ಸೋಮವಾರ ಬೆಳಗ್ಗೆ ಚಂಬಲ್ನದಿಯಲ್ಲಿ ಸ್ನಾನಕ್ಕೆಂದು ಹೋದಾಗ ಮೊಸಳೆ ಏಕಾಏಕಿ ದಾಳಿ ಮಾಡಿ ಬಾಲಕನ್ನು ಎಳೆ ದೊಯ್ದಿದೆ.
ಸ್ಥಳದಲ್ಲಿದ್ದ ಸ್ಥಳೀಯರು ಕೂಡಲೇ ಆತನ ಕುಟುಂಬ ಹಾಗೂ ಸಂಬಂಧಿಕರಿಗೆ ಕರೆ ಮಾಡಿ ದೊಣ್ಣೆ, ಹಗ್ಗ ಹಾಗೂ ಬಲೆಯಿಂದ ಮೊಸಳೆಯನ್ನು ಹಿಡಿದು, ನದಿಯಿಂದ ಹೊರಗೆ ಎಳೆತಂದಿದ್ದಾರೆ. ಅಷ್ಟರಲ್ಲಿ ಘಟನೆಯ ಬಗ್ಗೆ ಮಾಹಿತಿ ಪಡೆದ ಅಲಿಗೇಟರ್ ವಿಭಾಗದ ತಂಡ ಮತ್ತು ಪೊಲೀಸರು ಸ್ಥಳಕ್ಕೆ ಆಗಮಿಸಿ, ಎರಡೂ ತಂಡಗಳು ಮೊಸಳೆಯನ್ನು ಗ್ರಾಮಸ್ಥರ ಹಿಡಿತದಿಂದ ರಕ್ಷಿಸಲು ಯತ್ನಿಸಿದವು.
ಆದರೆ, ಸಂಜೆಯವರೆಗೂ ಬಾಲಕನ ಕುಟುಂಬಸ್ಥರು ಇದಕ್ಕೆ ಒಪ್ಪಿರಲಿಲ್ಲ. 10 ವರ್ಷದ ಮಗುವಿನ ಕುಟುಂಬಸ್ಥರು ಮೊಸಳೆಯ ಹೊಟ್ಟೆಯಲ್ಲಿ ಮಗು ಜೀವಂತವಾಗಿರ ಬಹುದೆಂಬ ನಿರೀಕ್ಷೆಯಲ್ಲಿದ್ದರು. ಮಗುವನ್ನು ಉಗುಳಿದಾಗ ಮಾತ್ರ ಮೊಸಳೆಯನ್ನು ಬಿಡುತ್ತೇವೆ ಎಂದು ಒತ್ತಾಯಿಸಿದರು.
ರಘುನಾಥಪುರ ಪೊಲೀಸ್ ಠಾಣೆಯ ಉಸ್ತುವಾರಿ ಶ್ಯಾಮ್ ವೀರ್ ಸಿಂಗ್ ತೋಮರ್ ಪ್ರಕಾರ, ಬಾಲಕ ಸ್ನಾನ ಮಾಡುವಾಗ ನದಿಯ ಆಳಕ್ಕೆ ಹೋದನು. ಮಗುವನ್ನು ಮೊಸಳೆ ನುಂಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.