ಶೇ.100ರಷ್ಟು ಪಲ್ಸ್ ಪೋಲಿಯೋ ಯಶಸ್ಸಿಗೆ ಕರೆ

Social Share

ಬೆಂಗಳೂರು, ಫೆ.25- ಈ ಬಾರಿಯೂ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಶೇ.100ರಷ್ಟು ಯಶಸ್ಸಿಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಇಂದಿಲ್ಲಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ನೆರೆ ರಾಷ್ಟ್ರಗಳಲ್ಲಿ ಪಲ್ಸ್ ಪೋಲಿಯೋ ಪ್ರಕರಣಗಳು ಕಾಣಿಸಿಕೊಂಡಿರುವುದರಿಂದ ನಮ್ಮ ದೇಶದಲ್ಲೂ ಇದೇ 27ರಿಂದ ಮಾ.3ರ ವರೆಗೆ ಪಲ್ಸ್ ಪೋಲಿಯೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಕಾರ್ಯಕ್ರಮದ ನೂರರಷ್ಟು ಯಶಸ್ಸಿಗೆ ನಾವು ಸಿದ್ಧರಾಗಿದ್ದು, ಸಾರ್ವಜನಿಕ ಆರೋಗ್ಯ ಇಲಾಖೆ ಯೋಜನೆಯಡಿ 141 ಯೋಜನಾ ಘಟಕಗಳಲ್ಲಿ 3400 ಬೂತ್‍ಗಳ ಮೂಲಕ ಎಲ್ಲ 198 ವಾರ್ಡ್‍ಗಳಲ್ಲೂ ಪಲ್ಸ್ ಪೋಲಿಯೋ ಲಸಿಕೆ ಹಾಕಲಾಗುವುದು ಎಂದು ವಿವರಣೆ ನೀಡಿದರು.
ಅಂಗನವವಾಡಿ ಕೇಂದ್ರಗಳು, ಶಾಲೆಗಳು, ಮಾರುಕಟ್ಟೆ, ಮೆಟ್ರೋ ನಿಲ್ದಾಣ, ಉದ್ಯಾನವನಗಳು, ಕೊಳಚೆ ಪ್ರದೇಶಗಳು ಸೇರಿದಂತೆ ಎಲ್ಲ ಜನನಿಬಿಡ ಪ್ರದೇಶಗಳಲ್ಲೂ ಮೊಬೈಲ್ ಮತ್ತು ಸ್ಥಿರ ಬೂತ್‍ಗಳನ್ನು ಸ್ಥಾಪಿಸುವ ಮೂಲಕ ಅವಶ್ಯಕತೆಯಿರುವ 10,80,000 ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕಲಾಗುವುದು ಎಂದು ಹೇಳಿದರು.
ಜನರಿಗೆ ಪಲ್ಸ್ ಪೋಲಿಯೋ ಲಸಿಕೆ ಬಗ್ಗೆ ಕಸ ವಿಲೇವಾರಿ ವಾಹನಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ. ನಮ್ಮ ಈ ಕಾರ್ಯಕ್ರಮದಲ್ಲಿ ಅದಮ್ಯ ಚೇತನ, ಅಕ್ಷಯ ಪಾತ್ರ ಸೇರಿದಂತೆ ಹಲವಾರು ಸಂಘಸಂಸ್ಥೆಗಳು ಪಾಲ್ಗೊಳ್ಳುತ್ತಿದ್ದು, ಒಟ್ಟಾರೆ 15 ಸಾವಿರಕ್ಕೂ ಹೆಚ್ಚು ಮಂದಿ ಪಲ್ಸ್ ಪೋಲಿಯೋ ಕರ್ತವ್ಯದಲ್ಲಿ ಭಾಗಿಯಾಗಲಿದ್ದಾರೆ ಎಂದು ಅವರು ವಿವರಿಸಿದರು.
ಈ ಹಿಂದೆ ನಿಮ್ಮ ಮಕ್ಕಳಿಗೆ ಪೋಲಿಯೋ ಹನಿ ಹಾಕಿಸಿದ್ದರೂ ಮತ್ತೆ ಐದು ವರ್ಷದೊಳಗಿನ ತಮ್ಮ ಮಕ್ಕಳನ್ನು ಬೂತ್‍ಗಳಿಗೆ ಕರೆತಂದು ಪೋಲಿಯೋ ಹಾಕಿಸುವಂತೆ ಅವರು ಮನವಿ ಮಾಡಿಕೊಂಡರು.

Articles You Might Like

Share This Article