ಚಿಕ್ಕಮಗಳೂರು, ಆ.10- ನೂರು ವರ್ಷಗಳ ಗಡಿದಾಟಿರುವ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಸಂಪೇಕೊಳಲು ಗ್ರಾಮದ ಬೆಳ್ಳಜ್ಜಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ಅವರ ಬದುಕಿನ ಬೆಳ್ಳಿ ನೆನಪುಗಳನ್ನು ಹಂಚಿಕೊಂಡಿದ್ದಾರೆ.ಸ್ವಾತಂತ್ರ್ಯ ಪೂರ್ವದಲ್ಲಿ ವಿವಾಹವಾಗಿ ಇಂದಿಗೂ ಬದುಕು ಸಾಗಿಸುತ್ತಿರುವ ನೂರು ದಾಟಿದ ಬೆಳ್ಳಿಯಜ್ಜಿ. ಊರಿನ ಮಾದಾರ ಮಾಸ್ತಿಯವರ ಪತ್ನಿ. ಇವರ ಗಂಡ ಮಾದಾರ ಮಾಸ್ತಿ ತೀರಿಕೊಂಡು ಹಲವು ವರ್ಷಗಳೇ ಕಳೆದಿವೆ.
ಸುತ್ತ 10 ಹಳ್ಳಿಯ ಮಾದಾರನಾದ ಮಾಸ್ತಿ ಬಹಳ ಗಟ್ಟಿಗ ಅವನೊಬ್ಬನೇ ದಿನಕ್ಕೆ ನಾಲ್ಕಾಳುಗಳ ಕೆಲಸ ಮಾಡುತ್ತಿದ್ದ ಎಂಬುದನ್ನು ಊರಿನವರೆಲ್ಲ ಈಗಲೂ ಮಾತನಾಡಿಕೊಳ್ಳುತ್ತಾರೆ. ಅವರಂತೆ ಆತನ ಕೈಹಿಡಿದ ಬೆಳ್ಳಿ ಸಹ ಗಟ್ಟಿಗಿತ್ತಿ.
ಹಿಂದೆ ಹತ್ತು ಹಳ್ಳಿಗಳಲ್ಲಿ ಹಸು, ಎತ್ತುಗಳು ಸತ್ತಾಗ ಇವರೇ ಬಂದು ಮಣ್ಣು ಮಾಡಬೇಕಿತ್ತು. ಅಷ್ಟು ದೊಡ್ಡದಾದ ಎತ್ತನ್ನು ಮಾಸ್ತಿ ಒಬ್ಬನೇ ಗುಂಡಿ ತೆಗೆದು ಎಳೆದು ತಂದು ಗುಂಡಿಗೆ ಹಾಕುತ್ತಿದ್ದ. ಅಷ್ಟು ಗಟ್ಟಿಗ.ಬೆಳ್ಳಿ ಮದುವೆಯಾಗಿದ್ದು ಸ್ವಾತಂತ್ರ್ಯ ಪೂರ್ವದಲ್ಲಿ. 75ನೇ ಸ್ವಾತಂತ್ರೋತ್ಸವ ಈ ಸಂದರ್ಭದಲ್ಲೂ ಬದುಕು ನಡೆಸುತ್ತಿರುವ ಬೆಳ್ಳಜ್ಜಿಗೆ ಈ ಅಮೃತ ಮಹೋತ್ಸವದ ವೇಳೆ ಶೃಂಗೇರಿಯ ಇನ್ನರ್ ವ್ಹೀಲ್ ಕ್ಲಬ್ನ ಅಧ್ಯಕ್ಷೆ ಪ್ರಿಯದರ್ಶಿನಿ ಹಾಗು ಕಾರ್ಯದರ್ಶಿ ಸುಜಾತ ನೇತೃತ್ವದಲ್ಲಿ ನಾಗರಿಕ ಸನ್ಮಾನ ಮಾಡುತ್ತಿರುವುದು ವಿಶೇಷವೇ ಸರಿ.
ದಲಿತ ಕುಟುಂಬದಲ್ಲಿ ಹುಟ್ಟಿದ ಬೆಳ್ಳಿಗೆ 13ನೇ ವಯಸ್ಸಿಗೆ 30 ವಯಸ್ಸಿನ ಮಾಸ್ತಿಯೊಂದಿಗೆ ವಿವಾಹವಾಗಿತ್ತು. ಮದುವೆ ಎರಡು ದಿನ ನಡೆದರೂ ಒಂದು ತಿಂಗಳ ಸಂಭ್ರಮ ಮನೆ ಮಾಡಿತ್ತು. ಆದರೆ, ಅಂದಿನ ಕಾಲದಲ್ಲಿ ದಲಿತರ ಮದುವೆಗೆ ಧಾರೆಯೆರೆಯಲು ಪುರೋಹಿತರು ಬರುತ್ತಿರಲಿಲ್ಲ. ಅವರ ಕುಟುಂಬದವರೇ ಧಾರೆಯೆರೆದರು ಎಂದು ನೆನಪಿಸಿಕೊಳ್ಳುತ್ತಾರೆ ಬೆಳ್ಳಜ್ಜಿ .
ಯಾಕೆ ಅಷ್ಟು ಚಿಕ್ಕ ವಯಸ್ಸಿಗೆ ಮಾದುವೆಯಾದ್ರಿ ಅಜ್ಜಿ? ಎಂಬ ನಮ್ಮ ಪ್ರಶ್ನೆಗೆ … ನನ್ನ ನೋಡಲು ಹುಡುಗನ ಮನೆಯವರು ಬರುವುದೇ ಗೊತ್ತಿಲ್ಲ. ನನಗೆ ಏನೂ ತಿಳಿಯುತ್ತಿರಲಿಲ್ಲ ನಾನು ಅಂದು ಆಟವಾಡುತ್ತ ಮನೆಯ ಹಿತ್ತಲಲ್ಲಿ ಇದ್ದ . ಹುಡಗನ ಕಡೆ ಬಂದವರು ನನ್ನನ್ನು ಮದುವೆ ಮಾಡಿ ಕೊಡಿ ಎಂದರು. ನನ್ನ ಅಪ್ಪ ಒಪ್ಪಿಕೊಂಡ್ರು ನಾನು ಏನ್ಮಾಡ್ಲಿ ಅಯ್ಯ ಅಂತಾರೆ ಬೆಳ್ಳಜ್ಜಿ…
ಅಂದು ಸ್ವಾತಂತ್ರ್ಯ ಪೂರ್ವದಲ್ಲಿ ಮದುವೆಯಾಗಿ ಮದು ಮಕ್ಕಳ ದಿಬ್ಬಣ ಸುಮಾರು 20 ಕಿಲೋ ಮೀಟರ್ ಕಾಲ್ನಡಿಗೆಯಲ್ಲಿ ಬಂದಿತ್ತು. ಅಂದು ಶೃಂಗೇರಿಗೆ ರಸ್ತೆಗಳು ಇರಲಿಲ್ಲ. ಎತ್ತಿನ ಗಾಡಿಗಳು ಓಡಾಡುವ ರಸ್ತೆಗಳೇ ಮುಖ್ಯ ರಸ್ತೆಗಳು. ಅವುಗಳು ಸಹ ಗಿಡ-ಗಂಟೆಗಳಿಂದ ತುಂಬಿರುತ್ತಿದ್ದವು. ಅವರು ಮದುವೆಯಾಗಿ ಬರುವಾಗ ಶೃಂಗೇರಿಯ ತುಂಗಾನದಿ ದಾಟ ಬೇಕಿತ್ತು.
ಅದಕ್ಕೆ ಸೇತುವೆ ಸಹ ಇರಲಿಲ್ಲ. ನಾವು ಮಧ್ಯಾಹ್ನ 3ಗಂಟೆಗೆ ಹೊಳೆ ಹತ್ತಿರ ಬಂದು ದೋಣಿಗಾಗಿ ಕಾದೆವು. ಮೇಲ್ಜಾತಿಯವರನ್ನೆಲ್ಲ ದಾಟಿಸಿದ ಮೇಲೆ ನಮ್ಮನ್ನು ರಾತ್ರಿ 7ಕ್ಕೆ ತುಂಗಾನದಿ ದಾಟಿಸಿದರು ಎನ್ನುತ್ತಾರೆ ಬೆಳ್ಳಜ್ಜಿ.
ಬೆಳಜ್ಜಿಗೆ ಸುಮಾರು 15 ಜನ ಮಕ್ಕಳು. ಆದರೆ, ಉಳಿದದ್ದು ಏಳು ಎನ್ನುತ್ತಾರೆ. ಹಳೆಯ ಕೆಲ ಘಟನೆಗಳನ್ನು ಮರೆತಿದ್ದಾರೆ. ಸ್ವಲ್ಪ ಸ್ವಲ್ಪ ನೆನಪುಗಳನ್ನು ಮೆಲಕು ಹಾಕುತ್ತಾರೆ.
ಶೃಂಗೇರಿಗೆ ಮೈಸೂರಿನ ರಾಜರು, ಇಂದಿರಾಗಾಂ ಬಂದಾಗ ನಡೆದುಕೊಂಡು ಹೋಗಿದ್ದು, ಅಕ್ಕಿಮಿಲ್ಗಳೇ ಇಲ್ಲದ ಆ ಕಾಲದಲ್ಲಿ ಭತ್ತ ಕುಟ್ಟಿ ಅಕ್ಕಿ ಮಾಡುತ್ತಿದ್ದೆವು. ನಾವು ಸುಮಾರು 10 ರಿಂದ 15 ಹಳ್ಳಿಗಳ ಮಾದರಿಕೆ ಮಾಡುತ್ತಿದ್ದೆವು. ಗೌರಿ ಹಬ್ಬ.., ದೀಪಾವಳಿ ಹಬ್ಬಕ್ಕೆ ಮನೆ ಮನೆಗೆ ನಾವೇ ಪಚ್ಚೆತೆನೆ ಕೊಡುತ್ತಿದ್ದೆ ವು. ಯಾರು ಸತ್ತರೂ ನಾವೇ ಕಟ್ಟಿಗೆ ರೆಡಿಮಾಡುತ್ತಿದ್ದೆವು. ಹಸು ಸತ್ತರೂ ನಾವೇ ಹುಗಿಯಬೇಕು. ಮದುವೆ ಮನೆಗೆ ಹಾಲಗಂಬ ನಾವೇ ಕೊಡಬೇಕಿತ್ತು. ಮದುಮಗಳನ್ನು ಪಲ್ಲಕ್ಕಿ ತರ ಮಾಡಿ ಕರೆ ತರುತ್ತಿದ್ದರು ಎಂದು ಹಲವು ಹಳೆಯ ನೆನಪುಗಳನ್ನು ಬಿಚ್ಚಿಟ್ಟರು ಬೆಳ್ಳಜ್ಜಿ.
ಈಗಲೂ ಸಹ ಮರಣ ಹೊಂದಿದ ಮನೆಯವರು ಸುಡುಗಾಡಿನಲ್ಲಿ ನಿಂತು ಸುಡೋದಕ್ಕೆ ಮೂರ್ಮೆಟ್ಟ್ ಜಾಗ ಕೊಡು ಎಂದು ಕೇಳುವುದು ಚಾಲ್ತಿಯಲ್ಲಿದೆ. ಈ ಸಂಪ್ರದಾಯ ನೋಡಿದರೆ ಅವರೇ ಇಲ್ಲಿನ ಮೂಲ ನಿವಾಸಿಗಳಿರ ಬೇಕು.ನೂರು ವರ್ಷಗಳೇ ದಾಟಿದರೂ ಇದುವರೆಗೆ ಬೆಳ್ಳಜ್ಜಿ ಯಾವುದೇ ದೇವಸ್ಥಾನಗಳಿಗೆ ಕಾಲಿಟ್ಟಿಲ್ಲ. ದಲಿತರು ದೇವಸ್ಥಾನದ ಹತ್ತಿರ ಹೋದರೆ ಕೆಟ್ಟದಾಗುತ್ತೆ ಎನ್ನುವ ಭಯ ಇಂದಿಗೂ ಅಜ್ಜಿಗೆ ಕಾಡುತ್ತಿದೆ. ಹಾಗಾಗಿ ದೇವಸ್ಥಾನಕ್ಕೆ ಹೋಗೆ ಇಲ್ಲ.
ಜೀವನವಿಡೀ ಒಂದು ಹೊತ್ತಿನ ಅನ್ನಕ್ಕೆ ದುಡಿದೇ ಬದುಕಿದ ಜೀವ ಈಗಲೂ ಹೆಚ್ಚು ಆಸ್ಪತ್ರೆಗಳನ್ನು ಕಾಣದೆ ಓಡಾಡಿಕೊಂಡಿರುವುದು ನೋಡಿದರೆ ಈಗಿನ ಯುವಕ-ಯುವತಿಯರಲ್ಲಿ ಉತ್ಸಾಹ ಮೂಡಬೇಕು. ಹಾಗಿದೆ ಅಜ್ಜಿಯ ದಿನದ ಕಾರ್ಯವೈಖರಿ.
75ನೇ ಸ್ವಾತಂತ್ರೋತ್ಸವ ಸಂದರ್ಭದಲ್ಲಿ ಬ್ರಿಟಿಷರ ಕಾಲದಲ್ಲಿ ವಿವಾಹವಾದ ಈ ಅಜ್ಜಿಯನ್ನು ಸನ್ಮಾನಿಸಬೇಕೆಂದು ಶೃಂಗೇರಿ ಇನ್ನರ್ವ್ಹಿಲ್ ಮುಂದಾಗಿ ಸಂಸ್ಥೆಯ ಪ್ರಿಯದರ್ಶಿನಿ, ಸುಜಾತ ಹಾಗೂ ರೋಟರಿ ಮಂಜುನಾಥ್ ಗೌಡ, ಸಂತೋಷ್ ಕಾಳ್ಯಾರೊಂದಿಗೆ ಅವರ ಮನೆಗೆ ಹೋದಾಗ ಅವರಿಗೆ ನೆನಪುಗಳನ್ನು ಬಗೆದಷ್ಟೂ ಕುತೂಹಲ ಮೂಡುತ್ತಿದ್ದವು. ಬೆಳ್ಳಜ್ಜಿಗೆ ತುಂಬಾ ವಯಸ್ಸಾಗಿರುವುದರಿಂದ ವಯೋಸಹಜವಾಗಿ ಕೆಲ ವಿಷಯಗಳು ಮರೆತಿವೆ ಎನ್ನುತ್ತಾರೆ ಅವರ 14ನೇ ಕೊನೆಯ ಮಗ.
ಹತ್ತಳ್ಳಿಯಲ್ಲಿ ಸೂಲಗಿತ್ತಿಯಾಗಿಯೂ ಸೇವೆ ಮಾಡಿದ ಅನುಭವ ಹಂಚಿಕೊಂಡ ಈ ಅಜ್ಜಿಗೆ ಸಿಗದ ಜೀವನದ ಹಕ್ಕುಗಳ ಸ್ವಾತಂತ್ರ್ಯಕ್ಕೆ 75 ತುಂಬಿದ ಇಂತಹ ಸಂದರ್ಭದಲ್ಲಿ ನಾಗರಿಕ ಅಭಿನಂದನೆ ಸಲ್ಲಿಸುವ ಜೊತೆಗೆ ಬೆಳಜ್ಜಿಗೆ ನೆರವಾಗುತ್ತಿರುವುದು ನಿಜಕ್ಕೂ ಸ್ವಾಗತಾರ್ಹ.