ಜೂ.30ರೊಳಗೆ ರಾಜ್ಯದಲ್ಲಿ 1000 ಎಲೆಕ್ಟ್ರಿಕಲ್ ವಾಹನಗಳ ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆ

Spread the love

ಮೈಸೂರು, ಮೇ 8- ರಾಜ್ಯಾದಾದ್ಯಂತ ಜೂನ್ 30ರೊಳಗೆ ಸಾವಿರ ಎಲೆಕ್ಟ್ರಿಕಲ್ ವಾಹನಗಳ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕøತಿ ಹಾಗೂ ಇಂಧನ ಸಚಿವ ವಿ.ಸುನಿಲ್ ಕುಮಾರ್ ತಿಳಿಸಿದರು. ಚಾಮುಂಡೇಶ್ವರಿ ವಿದ್ಯುತ್‍ಚ್ಛಕ್ತಿ ನಿಗಮಿತ ಮತ್ತು ಕರ್ನಾಟಕ ವಿದ್ಯುತ್‍ಚ್ಛಕ್ತಿ ಮಂಡಳಿಯ ಇಂಜಿನಿಯರ್‍ಗಳ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಸ್ಟೇಷನ್‍ಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಜಿಲ್ಲಾ, ಪ್ರವಾಸಿ ಕೇಂದ್ರಗಳು, ರಾಜ್ಯ ಹೆದ್ದಾರಿ ಮತ್ತು ರಾಷ್ಟ್ರೀಯ ಹೆದ್ದಾರಿಗಳು ಹಾಗೂ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಚಾರ್ಜಿಂಗ್ ಸ್ಟೇಷನ್‍ಗಳನ್ನು ಸ್ಥಾಪಿಸಲಾಗುವುದು. ಜೂನ್‍ನಲ್ಲಿ ರಾಜ್ಯಾದ್ಯಂತ ಚಾರ್ಜಿಂಗ್ ಸ್ಟೇಷನ್‍ಗಳ ಸ್ಥಾಪನೆ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಪರ್ವ ಆರಂಭವಾಗಿದೆ. ದೇಶದಲ್ಲಿ ಹಸಿರು ವಾಹನಗಳ ಸಂಖ್ಯೆ ಹೆಚ್ಚಿಸಬೇಕು. ವಿದ್ಯುತ್ ವಾಹನಗಳ ಬಳಕೆಯಿಂದ ಮಾಲಿನ್ಯವನ್ನು ಕಡಿಮೆ ಮಾಡಬಹುದು. ಪೆಟ್ರೋಲಿಯಂ ಉತ್ಪನ್ನಗಳ ಬಳಕೆಯ ವಾಹನಗಳಿಂದ ಕಾರ್ಬನ್ ಹೊರಸೂಸಿ ವಾಯುಮಾಲಿನ್ಯ ಹೆಚ್ಚಾಗುತ್ತದೆ.

ಕಾರ್ಬನ್‍ಗಳು ಮಾನವನ ಆರೋಗ್ಯ ಮತ್ತು ವಾತಾವರಣದ ಮೇಲೆ ಪರಿಣಾಮ ಬೀರುತ್ತವೆ. ಆದ್ದರಿಂದ ಸಾರ್ವಜನಿಕರು ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಮುಂದಾಗಬೇಕು. ಎಲೆಕ್ಟ್ರಿಕ್ ವಾಹನಗಳ ಉತ್ಪಾದನಾ ಕಂಪೆನಿಗಳು ಗ್ರಾಹಕರ ಕೈಗೆಟಕುವ ದರದಲ್ಲಿ ವಾಹನಗಳ ಮಾರಾಟ ಮಾಡಬೇಕು ಎಂದು ತಿಳಿಸಿದರು.

ಪ್ರಧಾನ ಮಂತ್ರಿಗಳು 2030ರ ವೇಳೆಗೆ ದೇಶದಲ್ಲಿ 500 ಗಿಗಾವ್ಯಾಟ್ ಹಸಿರು ವಿದ್ಯುತ್ ಉತ್ಪಾದನೆ ಮಾಡವ ಗುರಿ ಹೊಂದಿದ್ದಾರೆ. ಅದೇ ರೀತಿ ರಾಜ್ಯದಲ್ಲಿ 10 ಗಿಗಾವ್ಯಾಟ್ ಉತ್ಪಾದಿಸುವ ಗುರಿ ಹೊಂದಲಾಗಿದೆ. ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಸಬ್ಸಿಡಿ ನೀಡಲಾಗುತ್ತದೆ. ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಸ್ಟೇಷನ್ ಆರಂಭಿಸಲು ಸರ್ಕಾರದಿಂದ ಸಬ್ಸಿಡಿ ನೀಡಲಾಗುವುದು.

ನವೀಕರಿಸಬಹುದಾದ ಇಂಧನಗಳ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ನವೀಕರಿಸಬಹುದಾದ ಇಂಧನಗಳ ಬಳಕೆ ಹಾಗೂ ಅಭಿಯಾನದಲ್ಲಿ ಇತರ ರಾಜ್ಯಗಳಿಗಿಂತ ಕರ್ನಾಟಕ ರಾಜ್ಯ ಮುಂಚೂಣಿಯಲ್ಲಿದೆ ಎಂದು ತಿಳಿಸಿದರು. ಇಂಧನ ಇಲಾಖೆಯನ್ನು ಜನಸ್ನೇಹಿ ಇಲಾಖೆಯಾಗಿ ಪರಿವರ್ತಿಸಲಾಗುತ್ತಿದೆ.

ಆ ನಿಟ್ಟಿನಲ್ಲಿ ಟಿಸಿ ಕೆಟ್ಟುಹೋದ 24 ಗಂಟೆಯೊಳಗೆ ಬದಲಿಸುವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಪ್ರಾರಂಭದಲ್ಲಿ ಇದು ಅಸಾಧ್ಯ ಎಂದವರು ಇಂದು ಸಾಧ್ಯ ಎನ್ನುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇವೆ. 24 ಗಂಟೆಯೊಳಗೆ ಟಿಸಿ ಬದಲಾಯಿಸುವ ಕಾರ್ಯದಲ್ಲಿ ಶೇಕಡಾ 86 ರಷ್ಟು ಪ್ರಗತಿ ಸಾಸಿದ್ದೇವೆ. ಮುಂದಿನ ದಿನಗಳಲ್ಲಿ ಶೇಕಡ 100 ರಷ್ಟು ಗುರಿ ಮುಟ್ಟುವ ವಿಶ್ವಾಸವಿದೆ ಎಂದು ಭರವಸೆ ನೀಡಿದರು.

ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ಪ್ರತಿಯೊಂದು ಪೆಟ್ರೋಲ್‍ಬಂಕ್ ಸ್ಟೇಷನ್ ಹತ್ತಿರ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯುವಂತೆ ಹಾಗೂ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕೆಇಬಿ ಸ್ಟೇಷನ್‍ಗಳ ಕೊರತೆ ಇದ್ದು, ಶೀಘ್ರವಾಗಿ ಸ್ಟೇಷನ್‍ಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳುವಂತೆ ಇಂಧನ ಸಚಿವರಲ್ಲಿ ಮನವಿ ಮಾಡಿದರು.

ಚೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಜಯವಿಭವಸ್ವಾಮಿ, ಶಾಸಕ ಹರ್ಷವರ್ಧನ್, ವಿಧಾನ ಪರಿಷತ್ ಸದಸ್ಯ ಮಂಜೇಗೌಡ, ಗುಲ್ಬರ್ಗ ವಿಭಾಗದ ತಾಂತ್ರಿಕ ನಿರ್ದೇಶಕ ಸೋಮಶೇಖರ್, ಇಂಜಿನಿಯರ್‍ಗಳ ಸಂಘದ ಅಧ್ಯಕ್ಷ ಶಿವಪ್ರಕಾಶ್, ನೌಕರರ ಎಸ್‍ಸಿ-ಎಸ್‍ಟಿ ಸಂಘದ ಅಧ್ಯಕ್ಷ ದಾಸ್ ಪ್ರಕಾಶ್, ವಿದ್ಯುತ್‍ಚ್ಛಕ್ತಿ ಮಂಡಳಿಯ ಎಂಜಿನಿಯರ್‍ಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.