ರಾಜ್ಯದ 5 ಮಹಾನಗರಗಳಲ್ಲಿ 1000 SC-ST ವಿದ್ಯಾರ್ಥಿ ನಿಲಯ ನಿರ್ಮಾಣ

Social Share

ಬೆಂಗಳೂರು,ಸೆ.25- ರಾಜ್ಯದ ಐದು ಮಹಾನಗರಗಳಲ್ಲಿ 1000 ಎಸ್ಸಿ-ಎಸ್ಟಿ ವಿದ್ಯಾರ್ಥಿ ನಿಲಯಗಳನ್ನು ನಿರ್ಮಾಣ ಮಾಡಲಿದ್ದು, ಹಾಸ್ಟೆಲ್‍ಗೆ ಪಂಡಿತ್ ದೀನ ದಯಾಳ್ ಉಪಾಧ್ಯಾಯರ ಹೆಸರನ್ನು ನಾಮಕರಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಾರ್ಡ್ ನಂ.9ರ ವಿರೂಪಾಕ್ಷಪುರದಲ್ಲಿರುವ ಉದ್ಯಾನವನಕ್ಕೆ ಪಂಡಿತ್ ದೀನ ದಯಾಳ್ ಉಪಾಧ್ಯಾಯರ ಉದ್ಯಾನವನ ಎಂದು ನಾಮಕರಣ ಮಾಡುವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಆಯವ್ಯಯದಲ್ಲಿ ಹಾಸ್ಟೆಲ್ ನಿರ್ಮಾಣಕ್ಕೆ ಹಣ ಒದಗಿಸಲಾಗಿದ್ದು, ಬೆಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ, ಮಂಗಳೂರು ಹಾಗೂ ಬೆಳಗಾವಿಯಲ್ಲಿ ಒಂದು ಸಾವಿರ ಎಸ್ಸಿ-ಎಸ್ಟಿ ಹಾಸ್ಟೆಲ್ ನಿರ್ಮಾಣ ಮಾಡಲಾಗುವುದು ಎಂದರು.

ದೀನದಯಾಳ್ ಉಪಾಧ್ಯಾಯ ಅವರು ಎಸ್ಸಿ-ಎಸ್ಟಿ ಸಮುದಾಯದ ಅಭಿವೃದ್ದಿಗೆ ಶ್ರಮಿಸಿದ್ದರು. ಉದ್ಯಾನವನಕ್ಕೆ ಅವರ ಹೆಸರು ಇಟ್ಟಿರುವುದು ಒಳ್ಳೆಯ ಕೆಲಸ ಎಂದು ಶ್ಲಾಘಿಸಿದರು.

ಇದನ್ನೂ ಓದಿ : ಮಾಜಿ ಸಿಎಂ ಎಸ್.ಎಂ.ಕೃಷ್ಣ ಆಸ್ಪತ್ರೆಗೆ ದಾಖಲು

ಹೆಸರಿಗೆ ತಕ್ಕಂತೆ ಬದುಕಿದವರು. ಅವರ ಆದರ್ಶ ಜನರಿಗೆ ತಲುಪಬೇಕು. ಉದ್ಯಾನವನಕ್ಕೆ ನಾಮಕರಣ ಮಾಡುವಾಗ ಮಹಾನಗರ ಪಾಲಿಕೆಯ ಅನುಮತಿಯನ್ನು ಪಡೆದುಕೊಳ್ಳಬೇಕೆಂದು ಸೂಚಿಸಲಾಗಿದೆ. ದೊಡ್ಡವರ ಹೆಸರಿನಲ್ಲಿ ಕಾರ್ಯಕ್ರಮ ಮಾಡಿದಾಗ ಯಾವುದೇ ರೀತಿಯ ಚ್ಯುತಿಯಾಗದಂತೆ ಎಲ್ಲ ರೀತಿಯ ಅನುಮತಿಯನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.

ಈ ದೇಶ ಕಂಡಂತಹ ಅಪರೂಪದ ದೇಶಪ್ರೇಮಿ ದೀನ ದಯಾಳ್ ಉಪಾಧ್ಯಾಯ ಅವರು. ಭಾರತಕ್ಕೆ ಬೇರೆಯದೇ ಕಲ್ಪನೆ ಕೊಟ್ಟ ಚಿಂತಕರು ಎಂದು ಬಣ್ಣಿಸಿದರು.

ಶಿಕ್ಷಕರಾಗಿ, ಪತ್ರಕರ್ತರಾಗಿ, ಸ್ವಾತಂತ್ರ್ಯ ಹೋರಾಟದಲ್ಲೂ ಪಾಲ್ಗೊಂಡಿದ್ದರು. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಕೆಲವರು ಪಾಶ್ಚಿಮಾತ್ಯರ ಪ್ರಭಾವಕ್ಕೆ ಒಳಗಾಗಿದ್ದರೆ ಮತ್ತೆ ಕೆಲವರು ಕಮ್ಯುನಿಸ್ಟ್ ಪ್ರಭಾವದಲ್ಲಿದ್ದರು. ಆಗ ದೀನ ದಯಾಳರು ಭಾರತದ ನೆಲೆಗಟ್ಟನ್ನು ಪ್ರತಿಪಾದಿಸಿದರು ಎಂದು ಸ್ಮರಿಸಿದರು.

ಏಕಾತ್ಮ ಮನವಾತ್ಮ ಎಂಬ ಚಿಂತನೆ ನಡೆಸಿದ ಅವರು, ಭಗವಂತನನ್ನು ಓಲೈಸಿ ಜಗತ್ತಿನಲ್ಲಿ ಸತ್ಯದ ಮಾರ್ಗದಲ್ಲಿ ನಡೆಯಬೇಕೆಂದು ಅವರು ಬೋಸಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ವಸತಿ ಸಚಿವ ವಿ.ಸೋಮಣ್ಣ, ಮಾಜಿ ನಗರಸಭಾ ಸದಸ್ಯ ಚಕ್ರಪಾಣಿ ಮತ್ತಿತರರು ಉಪಸ್ಥಿತರಿದ್ದರು.

Articles You Might Like

Share This Article