ಬೆಂಗಳೂರು,ಸೆ.4- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ನಮ್ಮ ಕ್ಲಿನಿಕ್‍ಗೆ 103 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಕಾಂಗ್ರೆಸ್ ಟ್ವೀಟ್‍ಗಳಿಗೆ ಎದುರೇಟು ನೀಡಿರುವ ಸುಧಾಕರ್, ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್‍ನ ಪ್ರಣೀತ ಸುಳ್ಳುಗಳೇ ಸದ್ದು ಮಾಡುತ್ತವೆ. ಆದರೆ ಸತ್ಯದ ಸಮಾಧಿ ಮಾಡುವ ಪ್ರಯತ್ನ ಬೇಡ. ಸ್ವಲ್ಪ ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಛಾಟಿ ಬೀಸಿದ್ದಾರೆ.
ಅಲ್ಪ ವಿದ್ಯಾ ಮಹಾಗರ್ವಿ ಎಂಬ ಮಾತು ಕಾಂಗ್ರೆಸ್‍ಗೆ ಹೇಳಿ ಮಾಡಿಸಿದಂತಿದೆ. ಸತ್ಯ ಏನೆಂಬುದರ ಬಗ್ಗೆ ಪೂರ್ಣ ಮಾಹಿತಿ ಪಡೆಯದೆ ಪ್ರಾಸಬದ್ದ ಪ್ರಶ್ನೆಯ ಮೂಲಕ ಸುಳ್ಳಿನ ಮೆರವಣಿಗೆ ಮಾಡಹೊರಟ ನಿಮ್ಮ ಬಗ್ಗೆ ಅನುಕಂಪ ಮಾತ್ರ ವ್ಯಕ್ತಪಡಿಸಬಹುದು ಎಂದಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ 5 ವರ್ಷ ಪೂರ್ಣಾವ ಅಧಿಕಾರ ನಡೆಸಿದ್ದರೂ ಶೇ.40ರಷ್ಟು ಆಸ್ವಾಸನೆಗಳನ್ನೂ ಈಡೇರಿಸಲಾಗಲಿಲ್ಲ. ನುಡಿದಂತೆ ನಡೆದ ಸರ್ಕಾರ ಎಂದು ಅಬ್ಬರದ ಪ್ರಚಾರ ಮಾಡಿ ಕೊನೆಗೆ ಜನರಿಂದ ತಿರಸ್ಕರಿಸಲ್ಪಟ್ಟಿದೆ ಎಂದು ಲೇವಡಿ ಮಾಡಿದ್ದಾರೆ.
ಕೊರೊನಾ ಬಿಕ್ಕಟ್ಟಿನಿಂದ ಎರಡು ವರ್ಷ ನಮ್ಮ ಕ್ಲಿನಿಕ್ ಯೋಜನೆ ವಿಳಂಬವಾಗಿದೆ. ಈ ಸಾಲಿನ ಬಜೆಟ್‍ನಲ್ಲಿ ಘೋಷಣೆಯಾದಂತೆ ಶೀಘ್ರದಲ್ಲೇ ಬೆಂಗಳೂರಿನ ಪ್ರತಿ ವಾರ್ಡ್‍ಗೆ ಒಂದರಂತೆ ಕ್ಲಿನಿಕ್‍ಗಳು ಆರಂಭವಾಗಲಿದೆ ಎಂದರು.
ರಾಜ್ಯಾದ್ಯಂತ ನಗರಪ್ರದೇಶಗಳಲ್ಲಿ 438 ಕ್ಲಿನಿಕ್‍ಗಳನ್ನು ಇದಕ್ಕಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಈಗಾಗಲೇ 103.73 ಕೋಟಿ ರೂ. ಅನುದಾನ ಮಂಜೂರು ಮಾಡಿದ್ದಾರೆ ಎಂದು ತಿಳಿಸಿದ್ದಾರೆ.