108 ಸೇವೆಗೆ ಹೊಸದಾಗಿ 800 ಆಂಬುಲೆನ್ಸ್’ಗಳ ಸೇರ್ಪಡೆ : ಡಾ : ಶಾಲಿನಿ ರಜನೀಶ್
ತುಮಕೂರು, ಅ.19- ಗ್ರಾಮೀಣ ಪ್ರದೇಶದ ಜನರಿಗೆ ತುರ್ತು ಆರೋಗ್ಯ ಸೇವೆ ಕಲ್ಪಿಸುವ ಉದ್ದೇಶದಿಂದ ಹೊಸದಾಗಿ 800 ಆಂಬುಲೆನ್ಸ್ಗಳನ್ನು 108 ಕ್ಕೆ ಸೇರ್ಪಡೆ ಮಾಡುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ: ಶಾಲಿನಿ ರಜನೀಶ್ ತಿಳಿಸಿದರು. ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ, ಆಸ್ಪತ್ರೆ ಸಿಬ್ಬಂದಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಇದೀಗ 800 ಆ್ಯಂಬುಲೆನ್ಸ್ ವಾಹನಗಳಿದ್ದು, ಇನ್ನಷ್ಟು ತುರ್ತು ಆರೋಗ್ಯ ಸೇವೆಯನ್ನು ವಿಸ್ತರಿಸುವ ಉದ್ದೇಶದಿಂದ ಸುಮಾರು 15 ಕಿ.ಮೀ. ಅಂತರದಲ್ಲಿ ಆಂಬುಲೆನ್ಸ್ ಸೇವೆ ಜನರಿಗೆ ದೊರೆಯುವಂತೆ ಮಾಡಲು ಶೀಘ್ರವೇ 800 ಆಂಬುಲೆನ್ಸ್ಗಳನ್ನು ಹೊಸದಾಗಿ 108 ಗೆ ಸೇರ್ಪಡೆ ಮಾಡಲಾಗುವುದು ಎಂದರು.
ಇದೀಗ ಕೇವಲ 25 ಕಿ.ಮೀ. ಅಂತರದಲ್ಲಿ ಆಂಬುಲೆನ್ಸ್ ಸೇವೆ ದೊರೆಯುತ್ತಿದೆ. ಇದನ್ನು 2 ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಡುವೆ ಜನರಿಗೆ ಲಭಿಸಬೇಕು. ಮೊದಲಿಗೆ ಆಂಬುಲೆನ್ಸ್ಗಳು ರೋಗಿಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಬೇಕು. ಒಂದು ವೇಳೆ ಆ ರೋಗಿಗೆ ಸಂಬಂಧಿಸಿದ ಚಿಕಿತ್ಸಾ ಸೌಲಭ್ಯ ಸರ್ಕಾರಿ ಆಸ್ಪತ್ರೆಯಲ್ಲಿ ದೊರೆಯದ ಪಕ್ಷದಲ್ಲಿ ಖಾಸಗೀ ಆಸ್ಪತ್ರೆಗೆ ದಾಖಲು ಮಾಡಬೇಕು ಎಂದು ಅವರು ಹೇಳಿದರು. ರೋಗಿಗಳು ಆಸ್ಪತ್ರೆಗೆ ಬಂದಾಗ ನೆಪ ಹೇಳಿ ಅಥವಾ ಕಾರಣ ನೀಡಿ ವಾಪಸ್ ಕಳುಹಿಸಬಾರದು. ಇದರಿಂದ ಕೆಟ್ಟ ಹೆಸರು ಆರೋಗ್ಯ ಇಲಾಖೆಗೆ ಬರುತ್ತದೆ. ಯಾವುದೇ ನಿರ್ಲಕ್ಷ ವಹಿಸದೆ ಎಂತಹ ಪ್ರಕರಣವನ್ನಾದರೂ ಅಟೆಂಡ್ ಮಾಡಿ ತೃಪ್ತಿದಾಯಕವಾಗಿ ಕಾರ್ಯನಿರ್ವಹಿಸುವಂತೆ ಆಸ್ಪತ್ರೆಯ ಸಿಬ್ಬಂದಿಗೆ ಸೂಚಿಸಿದರು.
ದಂತ ಭಾಗ್ಯ ಯೋಜನೆಯಡಿ ಜಿಲ್ಲೆಯಲ್ಲಿ ಫಲಾನುಭವಿ ರೋಗಿಗಳಿಗೆ ದಂತ ಚಿಕಿತ್ಸಾ ಸೌಲಭ್ಯ ಒದಗಿಸಲು ವಿಳಂಬವಾಗುತ್ತಿದೆ. ಹೀಗಾಗಿ ಆಸ್ಪತ್ರೆಯಲ್ಲಿಯೇ ತಾಂತ್ರಿಕ ಸೌಲಭ್ಯಗಳನ್ನು ಕಲ್ಪಿಸಿದರೆ ಜಿಲ್ಲಾಸ್ಪತ್ರೆಯಲ್ಲಿಯೇ ಚಿಕಿತ್ಸೆಯನ್ನು ಪರಿಣಾಮಕಾರಿಯಾಗಿ ನೀಡಲು ಸಾಧ್ಯವಾಗುತ್ತದೆ ಎಂದು ದಂತ ವೈದ್ಯೆ ಡಾ: ಶೋಭಾ ಪ್ರಧಾನ ಕಾರ್ಯದರ್ಶಿಗಳಿಗೆ ಮನವಿ ಮಾಡಿದರು.ರಾಜ್ಯದಲ್ಲಿ ಪಿಪಿಪಿ ಯೋಜನೆಯಲ್ಲಿ 5 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ನಿರ್ಮಿಸಲು ಉದ್ದೇಶಿಸಿದ್ದು, ಒಂದು ಆಸ್ಪತ್ರೆ ತುಮಕೂರು ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಬರಲಿದೆ. ಸದರಿ ಆಸ್ಪತ್ರೆಯು ಮುಂದಿನ ಒಂದು ವರ್ಷದೊಳಗೆ ಸಾರ್ವಜನಿಕರ ಚಿಕಿತ್ಸೆಗೆ ಮುಕ್ತವಾಗಬೇಕು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.