ಬೆಂಗಳೂರು,ಸೆ.25- ಬಡವರಿಗೆ ಉಚಿತ ಆರೋಗ್ಯ ಸೇವೆ ಒದಗಿಸುವ 108 ಆ್ಯಂಬುಲೆನ್ಸ್‍ಗಳ ಸೇವೆಯಲ್ಲಿ ತಾಂತ್ರಿಕ ದೋಷ ಉಂಟಾಗಿರುವ ಕಾರಣ ರಾಜ್ಯಾದ್ಯಂತ ರೋಗಿಗಳು ಸಕಾಲದಲ್ಲಿ ಚಿಕಿತ್ಸೆ ಸಿಗದೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಐಡಿಹಳ್ಳಿ ಎಂಬಲ್ಲಿ ತೀವ್ರ ಜ್ವರದಿಂದ ಬಳಲುತ್ತಿದ್ದ ಜಯಮ್ಮ(65) ಎಂಬುವರಿಗೆ ಸಕಾಲದಲ್ಲಿ ಆ್ಯಂಬುಲೆನ್ಸ್ ಸಿಗದೆ ಸಾವನ್ನಪ್ಪಿರುವ ಘಟನೆಯೂ ನಡೆದಿದೆ.
ಶನಿವಾರದಿಂದ ರಾಜಧಾನಿ ಬೆಂಗಳೂರು, ಹಾವೇರಿ, ಕಲಬುರಗಿ, ತುಮಕೂರು, ಬೆಳಗಾವಿ, ವಿಜಯಪುರ, ಯಾದಗಿರಿ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ 108ಗೆ ಕರೆ ಮಾಡಿದರೆ ಸ್ವೀಕರಿಸುತ್ತಿಲ್ಲ. ಹೀಗಾಗಿ ತೀವ್ರ ಅನಾರೋಗ್ಯಕ್ಕೆ ತುತ್ತಾಗಿರುವವರು ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಬೆಂಗಳೂರಿನ ವಿಕ್ಟೋರಿಯಾ, ಕೆಸಿ ಜನರಲ್ ಆಸ್ಪತ್ರೆ ಸೇರಿದಂತೆ ರಾಜ್ಯದ ಜಿಲ್ಲಾ ಹಾಗು ತಾಲೂಕು ಆಸ್ಪತ್ರೆಗಳಲ್ಲಿ ಆ್ಯಂಬುಲೆನ್ಸ್ ಸೇವೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು, ಆರೋಗ್ಯ ಇಲಾಖೆಗೆ ಅನಾರೋಗ್ಯ ಬಂದಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.
ಭಾನುವಾರ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಆ್ಯಂಬುಲೆನ್ಸ್ ಸೇವೆ ಬಹುತೇಕ ಸ್ಥಗಿತಗೊಂಡಿದ್ದು, ರೋಗಿಗಳ ಪಾಡು ಹೇಳ ತೀರದಾಗಿದೆ. ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಎಲ್ಲಿ ನೋಡಿದರೂ ಖಾಸಗಿ ಆ್ಯಂಬುಲೆನ್ಸ್‍ಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿ ಬಂದಿದೆ. ಕೆಲವರು ಪರಿಸ್ಥಿತಿಯ ದುರ್ಲಾಭ ಮಾಡಿಕೊಂಡು ದುಪ್ಪಟ್ಟು ದರ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ತಲೆಕೆಡಿಸಿಕೊಳ್ಳದ ಸರ್ಕಾರ:
ಆ್ಯಂಬುಲೆನ್ಸ್ ಸೇವೆ ಸ್ಥಗಿತಗೊಂಡಿದ್ದರೂ ಇದನ್ನು ಸರಿಪಡಿಸಬೇಕಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ಡಾ.ಕೆ.ಸುಧಾಕರ್ ಇಲ್ಲವೇ ಸಂಬಂಧಪಟ್ಟ ಅಕಾರಿಗಳು ಸಮಸ್ಯೆ ಕಡೆ ಗಮನ ಕೊಡದೆ ತಮಗೂ ಇದಕ್ಕೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ.
ನಾನು ಸಚಿವ ಸುಧಾಕರ್ ಅವರೊಂದಿಗೆ ಮಾತನಾಡಿ, ಸಮಸ್ಯೆ ಇತ್ಯರ್ಥಪಡಿಸಲು ಸೂಚಿಸುವುದಾಗಿ ಸಿಎಂ ಬೊಮ್ಮಾಯಿ ಕೈ ತೊಳೆದುಕೊಂಡಿದ್ದಾರೆ.
ಆಸ್ಪತ್ರೆಯತ್ತ ಮುಖ ಮಾಡದ ಜನ:
ಸರ್ಕಾರಿ ಆಸ್ಪತ್ರೆಗಳಲ್ಲಿ ಆ್ಯಂಬುಲೆನ್ಸ್ ಸೇವೆ ಸ್ಥಗಿತಗೊಳ್ಳುತ್ತಿದ್ದಂತೆ ಅಲ್ಲಿನ ದುಸ್ಥಿತಿ ಕಂಡು ರೋಗಿಗಳು ಆಸ್ಪತ್ರೆಯತ್ತ ಮುಖ ಮಾಡುತ್ತಿಲ್ಲ. ಆ್ಯಂಬುಲೆನ್ಸ್ ಸಿಗದೆ ಇರುವಾಗ ಆಸ್ಪತ್ರೆಗೆ ಹೋಗುವ ಪ್ರಮೇಯವೇನು ಎಂದು ಅನೇಕರು ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡುತ್ತಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, 2008ರಲ್ಲಿ ಜಿವಿಕೆ ಎಂಬ ಸಂಸ್ಥೆ ಜೊತೆ ಒಡಂಬಡಿಕೆ ಮಾಡಿಕೊಂಡಿತ್ತು 108ಗೆ ದೂರವಾಣಿ ಕರೆ ಮಾಡಿದರೆ ಉಚಿತವಾಗಿ ಆ್ಯಂಬುಲೆನ್ಸ್ ಸೇವೆ ಒದಗಿಸಲಾಗುತ್ತಿತ್ತು. ಪ್ರತಿದಿನ ಜಿವಿಕೆಗೆ ಕನಿಷ್ಟ ಪಕ್ಷ 8ರಿಂದ 10 ಸಾವಿರ ಕರೆಗಳು ಬರುತ್ತಿದ್ದವು.
ನಿನ್ನೆಯಿಂದ ಜಿವಿಕೆಯಲ್ಲಿ ಮದರ್ ಬ್ರೋರ್ಡ್ ಕೈಕೊಟ್ಟಿರುವುದರಿಂದ ಕರೆಯನ್ನು ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ.
ಮದರ್‍ಬೋರ್ಡ್ 15 ವರ್ಷವಾಗಿರುವುದರಿಂದ ತಾಂತ್ರಿಕ ಸಮಸ್ಯೆ ಉಂಟಾಗಿದೆ. ಶೀಘ್ರದಲ್ಲೇ ಇದನ್ನು ಸರಿಪಡಿಸುವುದಾಗಿ ಸಂಸ್ಥೆಯವರು ಹೇಳಿದ್ದಾರೆ. ಸಾರ್ವಜನಿಕರು 108 ದೂರವಾಣಿ ಕರೆಗೆ ಸಂಪರ್ಕ ಸಿಗದಿದ್ದರೆ 112ಕ್ಕೆ ಕರೆ ಮಾಡಬಹುದು. ಇದರಿಂದ ಸೇವೆಗಳು ಲಭ್ಯವಾಗುತ್ತವೆ ಎಂದು ಆರೋಗ್ಯ ಸಚಿವ ಸುಧಾಕರ್ ಸಲಹೆ ಮಾಡಿದ್ದಾರೆ. ಆದರೆ 112ಕ್ಕೆ ಕರೆ ಮಾಡಿದರೆ ಕರೆಯನ್ನು ಸ್ವೀಕರಿಸುವವರೇ ಇಲ್ಲದಂತಾಗಿದೆ. ಹೀಗಾಗಿ ರೋಗಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.