12ರಂದು ಹಾಸನಕ್ಕೆ ಕೇಂದ್ರ ಬರ ಅಧ್ಯಯನ ತಂಡ ಪರಿಸ್ಥಿತಿ ಪರಿಶೀಲನೆ

HASANA

ಹಾಸನ, ಫೆ.10- ಕೇಂದ್ರ ಬರ ಅಧ್ಯಯನ ತಂಡ ನಾಳೆ ಮತ್ತು 12ರಂದು ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಪರಿಶೀಲನೆ ನಡೆಸುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ವಿ.ಚೈತ್ರಾ ಪೂರ್ವಭಾವಿ ಸಿದ್ಧತಾ ಸಭೆ ಹಮ್ಮಿಕೊಂಡು ಜನಪ್ರತಿನಿಧಿಗಳ ಸಮ್ಮುಖದಲ್ಲಿ ಜಿಲ್ಲೆಯಲ್ಲಿನ ಬರ ಪರಿಸ್ಥಿತಿ, ಹಣಕಾಸಿನ ಲಭ್ಯತೆ ಹಾಗೂ ಕೇಂದ್ರ ಬರ ಅಧ್ಯಯನ ತಂಡ ವೀಕ್ಷಿಸಬಹುದಾದ ಸ್ಥಳಗಳ ಬಗ್ಗೆ ಚರ್ಚೆ ನಡೆಸಿದರು.ಅರಸೀಕೆರೆ ಕ್ಷೇತ್ರದ ಶಾಸಕರಾದ ಕೆ.ಎಂ.ಶಿವಲಿಂಗೇಗೌಡ, ಜಿಲ್ಲಾ ಪಂಚಾಯತಿ ಅಧ್ಯಕ್ಷರಾದ ಶ್ವೇತಾ ದೇವರಾಜ್, ನಗರಸಭೆ ಅಧ್ಯಕ್ಷರಾದ ಡಾ:ಹೆಚ್.ಎಸ್.ಅನಿಲ್ ಕುಮಾರ್, ಹಾಸನ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷರಾದ ಸತೀಶ್, ಮತ್ತಿತರ ಜನಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಗೋಶಾಲೆ, ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿರುವ ಗ್ರಾಮ, ತೆಂಗು ಬೆಳೆ ಹಾನಿ ವೇದಾವತಿ ನದಿ ಪುನಃಶ್ಚೇತನ ಕಾಮಗಾರಿಗಳನ್ನು ಕೇಂದ್ರ ಬರ ಅಧ್ಯಯನ ತಂಡಕ್ಕೆ ತೋರಿಸಲು ಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿ.ಚೈತ್ರ ಹೇಳಿದರು.ಬರ ಅಧ್ಯಯನಕ್ಕೆ ಕೇಂದ್ರದಿಂದ ರಾಜ್ಯಕ್ಕೆ 3 ತಂಡಗಳು ಆಗಮಿಸುತ್ತಿವೆ. ಹಾಸನ ಜಿಲ್ಲೆಗೆ ನಾಳೆ ಮಧ್ಯಾಹ್ನ 3.30ಕ್ಕೆ ಆಗಮಿಸುವ ತಂಡ ವಿವಿಧ ಸ್ಥಳಗಳನ್ನು ವೀಕ್ಷಿಸಿ ವಾಸ್ತವ್ಯ ಮಾಡಿ ಫೆಬ್ರವರಿ 12ರಂದು ಬೆಳಿಗ್ಗೆ ಯಗಚಿ ಡ್ಯಾಂ ಸೇರಿದಂತೆ ಬೇಲೂರು ತಾಲ್ಲೂಕಿನ ಒಂದೆರೆಡು ಸ್ಥಳಗಳಿಗೆ ಭೇಟಿ ನೀಡಬಹುದು ಎಂದು ಹೇಳಿದರು.ಭಾರತ ಸರ್ಕಾರದ ಕೃಷಿ ಮಂತ್ರಾಲಯದ ಹೆಚ್ಚುವರಿ ಕಾರ್ಯದರ್ಶಿ ಶ್ರೀವಾಸ್ತವ, ನವದೆಹಲಿಯ ಎನ್.ಐ.ಟಿ.ಐ. ಆಯೋಗದ ಸಂಶೋಧನಾಧಿಕಾರಿ ಅನುರಾಧ, ಕೇಂದ್ರ ಜಲಸಂಪನ್ಮೂಲ ಇಲಾಖೆಯ ಅಧೀಕ್ಷಕ ಇಂಜಿನಿಯರ್ ವಿ.ಮೋಹನ್ ಮುರುಳಿ ಕೇಂದ್ರದಿಂದ ಆಗಮಿಸುವ ತಂಡಗಳಲ್ಲಿರುವ ಅಧಿಕಾರಿಗಳಾಗಿದ್ದಾರೆ ಎಂದು ಅವರು ಹೇಳಿದರು.

ಶಾಸಕರಾದ ಕೆ.ಎಂ.ಶಿವಲಿಂಗೇಗೌಡರು ಮಾತನಾಡಿ ಅರಸೀಕೆರೆ ತಾಲ್ಲೂಕು ತೀವ್ರ ಬರ ಪರಿಸ್ಥಿತಿ ಎದುರಿಸುತ್ತಿದೆ. ಅಲ್ಲಿ ಹೆಚ್ಚಿನ ಸ್ಥಳಗಳನ್ನು ತೋರಿಸುವ ಅಗತ್ಯವಿದೆ ಎಂದರು.
ಜಿಲ್ಲೆಯಲ್ಲಿ ಅವ್ಯಾಹತವಾಗಿ ಖಾಸಗಿಕೊಳವೆ ಬಾವಿ ಕೊರೆಯಲಾಗುತ್ತಿದೆ. ಇವುಗಳನ್ನು ನಿಯಂತ್ರಿಸಬೇಕು ಎಂದರು.ಆಯಾಯಾ ಗ್ರಾಮ ಪಂಚಾಯಿತಿಗಳು ತಮ್ಮ ಬಳಿ ಇರುವ ಟ್ಯಾಂಕರುಗಳನ್ನು ಬಳಸಬೇಕು ಅಥವಾ ಕುಡಿಯುವ ನೀರಿನ ಪೂರೈಕೆಗೆ ಒದಗಿಸಿರುವ ಇತರೆ ಸಾಮಾನ್ಯ ಅನುದಾನವನ್ನು ಸಹ ಬಳಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.ಅಪರ ಜಿಲ್ಲಾಧಿಕಾರಿ ಕೆ.ಎಂ.ಜಾನಕಿ, ಉಪ ವಿಭಾಗಾಧಿಕಾರಿ ಡಾಹೆಚ್.ಎಲ್.ನಾಗರಾಜ್,ಪ್ರೋ ಐ.ಎ.ಎಸ್.ಅಧಿಕಾರಿ ಮಹಮದ್ ರೋಷನ್, ಕೃಷಿ ತೋಟಗಾರಿಕೆ, ಜಲಾನಯನ, ಪಶು ಸಂಗೋಪನೆ ಇಲಾಖೆ ಅಧಿಕಾರಿಗಳು, ವಿವಿಧ ತಾಲ್ಲೂಕು ತಹಸೀಲ್ದಾರ್, ಕಾರ್ಯನಿರ್ವಾಹಕಾಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin