ಕಾಶ್ಮೀರದ ವೈಷ್ಣೋದೇವಿ ದೇಗುಲದಲ್ಲಿ ಭೀಕರ ಕಾಲ್ತುಳಿತ: 12 ಭಕ್ತರು ಸಾವು

Social Share

ಜಮ್ಮು,ಜ.1- ಜಮ್ಮು ಮತ್ತು ಕಾಶ್ಮೀರದಲ್ಲಿ ಮಾತಾ ವೈಷ್ಣೋದೇವಿ ದೇವಾಲಯದಲ್ಲಿ ಇಂದು ಬೆಳಗ್ಗೆ ಭಾರೀ ಜನಸಂದಣಿ ನೆರೆದು ನೂಕುನುಗ್ಗುಲಿನಿಂದ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠಪಕ್ಷ 12 ಮಂದಿ ಮೃತಪಟ್ಟು ಇತರ 20 ಮಂದಿ ಗಾಯಗೊಂಡ ದುರ್ಘಟನೆ ಜರುಗಿದೆ.
ಜಮ್ಮುವಿನಿಂದ 50 ಕಿ.ಮೀಗಳಷ್ಟು ದೂರವಿರುವ ತ್ರಿಕೂಟ ಪರ್ವತದ ಮೇಲಿರುವ ದೇವಾಲಯದ ಗರ್ಭಗುಡಿಯ ಹೊರಗೆ 3ನೇ ನಂಬರ್ ಗೇಟ್‍ನಲ್ಲಿ ಇಂದು ಮುಂಜಾನೆ ಕಾಲ್ತುಳಿತ ಸಂಭವಿಸಿತು.
ಹೊಸ ವರ್ಷದ ಪ್ರಯುಕ್ತ ಭಕ್ತಾಗಳು ದೇವಿಗೆ ಪೂಜೆ, ಪ್ರಾರ್ಥನೆ ನೆರವೇರಿಸಲು ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ ಕಾರಣ ನೂಕುನುಗಲಿನಿಂದ ಕಾಲ್ತುಳಿತ ಉಂಟಾಯಿತ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಕ್ತಾಗಳು ಸಾಮಾನ್ಯವಾಗಿ ಬೆಟ್ಟದ ತುದಿಯಲ್ಲಿರುವ ದೇವಾಲಯಕ್ಕೆ 13 ಕಿ.ಮೀಗಳಷ್ಟು ದೂರವಿರುವ ಕತ್ರಾ ಮೂಲ ಶಿಬಿರದಿಂದ ತಲುಪುತ್ತಾರೆ. ಕೆಲವರು ಹೆಲಿಕಾಪ್ಟರ್ ಮುಖಾಂತರ ಕತ್ರಾ ಮೂಲ ಶಿಬಿರ ತಲುಪುತ್ತಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಘಟನೆ ಬಗ್ಗೆ ದುಃಖ ವ್ಯಕ್ತಪಡಿಸಿದ್ದು, ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ ಮತ್ತು ಸನ್ನಿವೇಶದ ಬಗ್ಗೆ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತು ಕೇಂದ್ರ ಸಚಿವರಾದ ಜಿತೇಂದ್ರ ಸಿಂಗ್ ಹಾಗೂ ನಿತ್ಯಾಗಂದ ರಾಯ್ ಅವರ ಜೊತೆ ಮಾತನಾಡಿ ಮಾಹಿತಿ ಪಡೆದಿದ್ದಾರೆ.
ಮಾತಾ ವೈಷ್ಣೋದೇವಿ ಭವನ್‍ನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬದವರಿಗೆ ತಲಾ 2 ಲಕ್ಷ ರೂ. ಮತ್ತು ಗಾಯಾಳುಗಳಿಗೆ ತಲಾ 50,000 ರೂ.ಗಳ ತಾತ್ಕಾಲಿಕ ಪರಿಹಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದಾರೆ ಎಂದು ಪ್ರಧಾನಮಂತ್ರಿಯವರ ಕಾರ್ಯಾಲಯ ಟ್ವೀಟ್ ಮಾಡಿದೆ.
ಲೆಫ್ಟಿನೆಂಟ್ ಗವರ್ನರ್ ಸಿನ್ಹಾ ಅವರು ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ಪ್ರಧಾನಿ ಮೋದಿ ಅವರೊಂದಿಗೆ ಮಾತನಾಡಿದ್ದೇನೆ. ಮೃತರ ಕುಟುಂಬದವರಿಗೆ ತಲಾ 10 ಲಕ್ಷ ರೂ. ಮತ್ತು ಗಾಯಗೊಂಡವರಿಗೆ ತಲಾ 2 ಲಕ್ಷ ರೂ. ಪರಿಹಾರ ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ. ದೇವಾಲಯ ಮಂಡಳಿಯು ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಭರಿಸಲಿದೆ ಎಂದು ಸಿನ್ಹಾ ಟ್ವೀಟ್ ಮಾಡಿದ್ದಾರೆ.
ಹಿರಿಯ ಅಧಿಕಾರಿಗಳು ಮತ್ತು ದೇವಾಲಯ ಮಂಡಳಿ ಪ್ರತಿನಿಗಳು ಸ್ಥಳದಲ್ಲಿದ್ದಾರೆ. ಕಾಲ್ತುಳಿತದಲ್ಲಿ ಅಸುನೀಗಿದ 12 ಮಂದಿಯ ಶವಗಳನ್ನು ಗುರುತು ಪತ್ತೆಗಾಗಿ ಮತ್ತು ಇತರ ಔಪಚಾರಿಕತೆಗಳಿಗಾಗಿ ಕತ್ರಾ ಮೂಲ ಶಿಬಿರದ ಅಸ್ಪತ್ರೆಯೊಂದಕ್ಕೆ ಸಾಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಾಯಗೊಂಡಿರುವ 20 ಜನರಲ್ಲಿ ಹೆಚ್ಚಿನವರನ್ನು ಮಾತಾ ವೈಷ್ಣೋದೇವಿ ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅವರಲ್ಲಿ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ. ದೇವಸ್ಥಾನವು ಇತ್ತೀಚಿನ ವರದಿಗಳು ಬಂದಾಗ ತೆರೆದೇ ಇದ್ದು ಭಕ್ತಾದಿಗಳು ದೇವಿಯ ದರ್ಶನ ಪಡೆಯುತ್ತಿದ್ದರು.
ಗಣ್ಯರ ಕಂಬನಿ:
ಮಾತಾ ವೈಷ್ಣೋದೇವಿ ದೇವಸ್ಥಾನದಲ್ಲಿ ಇಂದು ಸಂಭವಿಸಿದ ಕಾಲ್ತುಳಿತ ದುರಂತಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್, ಕೇಂದ್ರ ಗೃಹ ಸಚಿವ ಅಮಿತ್ ಷಾ, ಕಾಂಗ್ರೆಸ್ ಧುರೀಣ ರಾಹುಲ್ ಗಾಂಧಿ ಅವರು ತೀವ್ರ ದುಃಖ ವ್ಯಕ್ತ¥ಸಿದ್ದು, ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ.
ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಸನ್ನಿವೇಶದ ಅಂದಾಜು ಪಡೆಯಲು ಸ್ಥಳಕ್ಕೆ ಧಾವಿಸಿದ್ದಾರೆ.

Articles You Might Like

Share This Article