13 ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ – ಎಸ್.ಎಂ.ಕೃಷ್ಣ ಭೇಟಿ
ಬೆಂಗಳೂರು, ಮಾ.7-ಕಾಂಗ್ರೆಸ್ ಪಕ್ಷಕ್ಕೆ ಸೋಡಾ ಚೀಟಿ ನೀಡಿರುವ ಕೇಂದ್ರದ ಮಾಜಿ ಸಚಿವ, ರಾಜ್ಯದ ರಾಜಕೀಯ ಮುತ್ಸದ್ಧಿ ಎಸ್.ಎಂ.ಕೃಷ್ಣ ಅವರು ಇದೇ 13 ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಭೇಟಿ ಮಾಡಲಿದ್ದಾರೆ. ನವದೆಹಲಿಗೆ ತೆರಳಲಿರುವ ಕೃಷ್ಣ ಅವರು ಅಂದು ಅಮಿತ್ ಷಾ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಪಕ್ಷ ಸೇರ್ಪಡೆ ಕುರಿತಂತೆ ಮಾತುಕತೆ ನಡೆಸಲಿದ್ದಾರ ಎಂದು ತಿಳಿದುಬಂದಿದೆ. ಮಾ.11 ರಂದು ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಹೊರಬೀಳಲಿದ್ದು, 13 ರಂದು ನವದೆಹಲಿಗೆ ಬರಬೇಕೆಂದು ಅಮಿತ್ ಷಾ ಕೃಷ್ಣ ಅವರಿಗೆ ಮನವಿ ಮಾಡಿದ್ದಾರೆ. ಕೃಷ್ಣ ಅವರೊಬ್ಬರೇ ಅಂದು ಪ್ರತ್ಯೇಕವಾಗಿ ಷಾ ಅವರನ್ನು ಭೇಟಿಯಾಗಲಿದ್ದು, ಉಭಯ ನಾಯಕರ ಮಾತುಕತೆ ನಂತರ ಪಕ್ಷ ಸೇರ್ಪಡೆಯ ದಿನಾಂಕ ನಿಗದಿಯಾಗಲಿದೆ.
ಸದ್ಯಕ್ಕೆ ಎಸ್ಎಂಕೆ ಒಬ್ಬರೇ ನವದೆಹಲಿಗೆ ತೆರಳುತ್ತಿದ್ದು, ದಿನಾಂಕ ನಿಗದಿಯಾದ ಬಳಿಕ ಬಿಜೆಪಿ ಕೇಂದ್ರ ಕಚೇರಿಯಲ್ಲೇ ಅಮಿತ್ ಷಾ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ರಾಜ್ನಾಥ್ಸಿಂಗ್, ಅರುಣ್ಜೇಟ್ಲಿ, ಅನಂತ್ಕುಮಾರ್, ಡಿ.ವಿ.ಸದಾನಂದಗೌಡ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ರಾಜ್ಯ ಉಸ್ತುವಾರಿ ಮುರಳೀಧರ್ರಾವ್ ಸಮ್ಮುಖದಲ್ಲಿ ವಿಧ್ಯುಕ್ತವಾಗಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ನಿನ್ನೆಯಷ್ಟೇ ಯಡಿಯೂರಪ್ಪ ಮತ್ತು ಅಶೋಕ್ ಅವರು ಕೃಷ್ಣ ಅವರನ್ನು ಭೇಟಿಯಾಗಿ ಪಕ್ಷಕ್ಕೆ ಸೇರ್ಪಡೆಯಾಗುವಂತೆ ಆಹ್ವಾನ ನೀಡಿದ್ದರು. ತಾವು ಸದ್ಯಕ್ಕೆ ಯಾವುದೇ ರೀತಿಯ ಆತುರದ ನಿರ್ಧಾರ ಕೈಗೊಳ್ಳುವುದಿಲ್ಲ. ಬೆಂಬಲಿಗರ ಜೊತೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಿ ಸೂಕ್ತ ಸಮಯದಲ್ಲಿ ತಮ್ಮ ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದರು.
ಮೂಲಗಳ ಪ್ರಕಾರ ಈಗಾಗಲೇ ಕೃಷ್ಣ ಅವರೊಂದಿಗೆ ಅಮಿತ್ ಷಾ ಒಂದು ಸುತ್ತಿನ ಮಾತುಕತೆಯನ್ನು ನಡೆಸಿದ್ದು, ಉತ್ತರ ಪ್ರದೇಶ, ಉತ್ತರಾಖಂಡ್, ಪಂಜಾಬ್, ಗೋವಾ ಮತ್ತು ಮಣಿಪುರ ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟಗೊಂಡ ಬಳಿಕ ಮೋದಿಯವರೊಂದಿಗೆ ಮಾತುಕತೆ ನಡೆಸುವುದಾಗಿ ತಿಳಿದುಬಂದಿದೆ.
< Eesanje News 24/7 ನ್ಯೂಸ್ ಆ್ಯಪ್ >