Thursday, September 19, 2024
Homeರಾಜ್ಯHorrific Accident : ಹಾವೇರಿ ಬಳಿ ಭೀಕರ ಅಪಘಾತ, ಲಾರಿಗೆ ಟಿಟಿ ವಾಹನ ಡಿಕ್ಕಿ, 13...

Horrific Accident : ಹಾವೇರಿ ಬಳಿ ಭೀಕರ ಅಪಘಾತ, ಲಾರಿಗೆ ಟಿಟಿ ವಾಹನ ಡಿಕ್ಕಿ, 13 ಜನ ದುರ್ಮರಣ

ಹಾವೇರಿ, ಜೂ.28- ಸವದತ್ತಿ ರೇಣುಕಾ ಯಲ್ಲಮ ದೇವಿ ದರ್ಶನ ಪಡೆದು ಟಿಟಿ ವಾಹನದಲ್ಲಿ ಹಿಂದಿರುಗುತ್ತಿದ್ದಾಗ ಭೀಕರ ಅಪಘಾತದಲ್ಲಿ ಶಿವಮೊಗ್ಗ ಜಿಲ್ಲೆ ಭದ್ರಾವತಿ ಮೂಲದ ಒಂದೇ ಕುಟುಂಬದ ನಾಲ್ವರು ಸೇರಿದಂತೆ 13 ಮಂದಿ ಮೃತಪಟ್ಟಿರುವ ದಾರುಣ ಘಟನೆ ಇಂದು ನಸುಕಿನ ಜಾವ ಸಂಭವಿಸಿದೆ.

ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಗುಂಡೇನಹಳ್ಳಿ ಕ್ರಾಸ್‌‍ ಬಳಿಯ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಬದಿ ನಿಂತಿದ್ದ ಲಾರಿಗೆ ಅತೀ ವೇಗವಾಗಿ ಬರುತ್ತಿದ್ದ ಟಿಟಿ ವಾಹನ ಡಿಕ್ಕಿ ಹೊಡೆದಿದ್ದರಿಂದ ಈ ದುರಂತ ಸಂಭವಿಸಿದೆ.

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ಹೊಳೆಹೊನ್ನೂರು ಬಳಿ ಎಮಿಹಟ್ಟಿ ಗ್ರಾಮದ ನಾಗೇಶ (50) ವಿಶಾಲಾಕ್ಷಿ (40), ಆದರ್ಶ್‌ (23), ಪರಶುರಾಮ್‌ (45), ಭಾಗ್ಯ (40), ಸುಭದ್ರಾಬಾಯಿ (65), ಪುಣ್ಯ (50), ಮಂಜುಳಾ ಬಾಯಿ (62), ಮಾನಸ (24), ರೂಪಾ (40), ಮಂಜುಳಾ (50) ಹಾಗೂ ಎರಡು ಅವಳಿ ಮಕ್ಕಳು ಮೃತಪಟ್ಟಿದ್ದು, ಇವರಿಬ್ಬರ ಹೆಸರು ಸದ್ಯಕ್ಕೆ ತಿಳಿದುಬಂದಿಲ್ಲ.

ಘಟನೆಯಲ್ಲಿ ಇಬ್ಬರು ಗಂಭೀರ ಗಾಯಗೊಂಡಿದ್ದು, ಅವರುಗಳು ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಎಮಿಹಟ್ಟಿ ಗ್ರಾಮದಿಂದ 15 ಮಂದಿ ಕಳೆದ ಸೋಮವಾರ ವಿವಿಧ ದೇವಸ್ಥಾನಗಳ ಪ್ರವಾಸಕ್ಕೆಂದು ಟಿಟಿ ವಾಹನದಲ್ಲಿ ತೆರಳಿದ್ದರು.ನಿನ್ನೆ ಸವದತ್ತಿ ರೇಣುಕಾ ಯಲ್ಲಮ ದೇವಿ ದರ್ಶನ ಪಡೆದು 15 ಮಂದಿ ವಾಪಾಸ್‌‍ ತಮ ಗ್ರಾಮಕ್ಕೆ ಮರಳುತ್ತಿದ್ದರು.

ಇಂದು ನಸುಕಿನ ಜಾವ 4 ಗಂಟೆಯ ಸುಮಾರಿನಲ್ಲಿ ಈ ಟಿಟಿ ವಾಹನ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಗುಂಡೇನಹಳ್ಳಿ ಕ್ರಾಸ್‌‍ ಬಳಿಯ ಪುಣಿ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುತ್ತಿದ್ದಾಗ ರಸ್ತೆ ಬದಿ ಲಾರಿ ನಿಲ್ಲಿಸಿರುವುದು ಟಿಟಿ ಚಾಲನೆ ಮಾಡುತ್ತಿದ್ದ ಚಾಲಕನ ಗಮನಕ್ಕೆ ಬಾರದೆ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿದ್ದಾನೆ.

ಡಿಕ್ಕಿ ರಭಸಕ್ಕೆ ಟಿಟಿ ವಾಹನದ ಅರ್ಧಭಾಗ ಲಾರಿ ಹಿಂಬದಿಗೆ ಸಿಕ್ಕಿಕೊಂಡು ಸ್ಥಳದಲ್ಲೇ 11 ಮಂದಿ ಸಾವನ್ನಪ್ಪಿದರೆ, ಇನ್ನಿಬ್ಬರು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.ಮೃತರ ಪೈಕಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟರೆ ಉಳಿದವರೆಲ್ಲರೂ ಸಂಬಂಧಿಕರು. ಮೃತರಲ್ಲಿ ಇಬ್ಬರು ಅವಳಿ ಮಕ್ಕಳು ತಾಯಿ ಎದುರೇ ಪ್ರಾಣ ಬಿಟ್ಟಿವೆ.

ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಹಾವೇರಿ ಠಾಣೆ ಪೊಲೀಸರು ಹಾಗೂ ಎಸ್‌‍ಪಿ ಅಂಶಕುಮಾರ್‌ ಮತ್ತು ತಂಡ ಪರಿಶೀಲನೆ ನಡೆಸಿ, ಟಿಟಿ ವಾಹನದೊಳಗೆ ಸಿಕ್ಕಿಕೊಂಡಿದ್ದ ಮೃತದೇಹಗಳನ್ನು ಹೊರತೆಗೆಯಲು ಹರಸಾಹಸ ಪಟ್ಟರು.ಎಲ್ಲಾ ಮೃತದೇಹಗಳನ್ನು ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿಡಲಾಗಿದೆ.

ಆಂಬುಲೆನ್ಸ್ ಸಿಬ್ಬಂದಿ ಕಣ್ಣೀರು:
ಯಾವುದೇ ಸಾವಾಗಲಿ, ನಮಗೆ ಅವರು ಪರಿಚಯವಿಲ್ಲದಿದ್ದರೂ ಮೃತದೇಹ ನೋಡಿದಾಗ ಕಣ್ಣೀರು ಬರುತ್ತದೆ. ಮೃತದೇಹಗಳನ್ನು ಸಾಗಿಸಲು ಬಂದಿದ್ದ ಆಂಬುಲೆನ್ಸ್ ಸಿಬ್ಬಂದಿ ಹಾಗೂ ಸ್ಥಳೀಯ ಪೊಲೀಸರು ಈ ಭೀಕರತೆ ಕಂಡು ಮಮಲ ಮರುಗಿದ್ದಾರೆ. ಅವಳಿ ಮಕ್ಕಳ ಮೃತದೇಹಗಳನ್ನು ಆಂಬುಲೆನ್ಸ್ ನಲ್ಲಿ ಇಡುತ್ತಿದ್ದಾಗ ಕೈಯಲ್ಲಿ ಹಿಡಿದು ಕಣ್ಣೀರು ಹಾಕಿದ್ದು, ಎಂತವರ ಮನವೂ ಕರಗುವಂತಿತ್ತು.

ಮೃತದೇಹಗಳು ಛಿದ್ರಛಿದ್ರ :
ಅಪಘಾತದ ರಭಸಕ್ಕೆ ಮೃತದೇಹಗಳು ಛಿದ್ರಛಿದ್ರವಾಗಿವೆ. ಕೆಲವೊಂದು ದೇಹ ಅಪ್ಪಚ್ಚಿಯಾಗಿವೆ.

ಎಮಿಹಟ್ಟಿ ಗ್ರಾಮದಲ್ಲಿ ನೀರವ ಮೌನ :
ಸೋಮವಾರ ದೇವರ ದರ್ಶನಕ್ಕೆ ಹೋಗಿದ್ದ ಸಂಬಂಧಿಕರೆಲ್ಲಾ ಇಂದು ವಾಪಾಸ್‌‍ ಬರುತ್ತಾರೆಂದು ಕುಟುಂಬಸ್ಥರು ಕಾಯುತ್ತಿದ್ದಾಗ ಬರಸಿಡಿಲಿನಂತೆ ಬಂದ ಸಾವಿನ ಸುದ್ದಿಯಿಂದ ಎಮೆಹಟ್ಟಿ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.

ಹಾವೇರಿಗೆ ಸಂಬಂಧಿಕರ ಆಗಮನ :
ಅಪಘಾತದಲ್ಲಿ ತಮವರು ಮೃತಪಟ್ಟಿದ್ದಾರೆಂಬ ಸುದ್ದಿ ತಿಳಿಯುತ್ತಿದ್ದಂತೆ ಮೃತರ ಕುಟುಂಬಸ್ಥರು ಹಾವೇರಿಗೆ ಬಂದಿದ್ದು, ಆಸ್ಪತ್ರೆಯಲ್ಲಿ ಮೃತದೇಹಗಳನ್ನು ಕಂಡು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.

ಹೊಸ ಟಿಟಿ ಖರೀದಿ :
ನಾಗೇಶ ಅವರು ಹೊಸ ಟಿಟಿ ಖರೀದಿಸಿದ್ದರು. ನಾಗೇಶ ಅವರ ಮಗ ಆದರ್ಶ ಟಿಟಿ ಚಾಲನೆ ಮಾಡುತ್ತಿದ್ದನು. ಹೊಸದಾಗಿ ವಾಹನ ಖರೀದಿಸಿದ್ದರಿಂದ ಸಂಬಂಧಿಕರನ್ನೆಲ್ಲಾ ಕರೆದುಕೊಂಡು ದೇವರ ದರ್ಶನಕ್ಕೆ ಹೋಗಿ ವಾಪಾಸ್‌‍ ಬರುವಾಗ ಈ ದುರಂತ ಸಂಭವಿಸಿರುವುದು ವಿಪರ್ಯಾಸ.ನಾಗೇಶ್‌ ಎಂಬುವರ ಕುಟುಂಬದ ನಾಲ್ವರು ಮೃತಪಟ್ಟಿರುವುದು ದುರದೃಷ್ಟಕರ.

ಮನೆಯೇ ಸರ್ವನಾಶ :
ತಮವರನ್ನು ಕಳೆದುಕೊಂಡ ಮೃತನ ಸಹೋದರ ಕಣ್ಣೀರು ಹಾಕುತ್ತಾ ಮನಯೇ ಸರ್ವನಾಶವಾಯಿತೆಂದು ಗೋಳಾಡುತ್ತಿದ್ದುದು ಕರಳು ಕಿತ್ತುಬರುವಂತಿತ್ತು.

ಅತೀವೇಗವೇ ಕಾರಣ :
ಊರಿಗೆ ಬೇಗ ಹೋಗಬೇಕೆನ್ನುವ ಆತುರದಲ್ಲಿ ನಿದ್ದೆಗೆಟ್ಟು ಅತಿವೇಗವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಾಲನೆ ಮಾಡಿಕೊಂಡು ಬಂದಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ. ನಿದ್ದೆ ಮಂಪರಿನಿಂದಾಗಿ ಈ ಅಪಘಾತ ಸಂಭವಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಹಾವೇರಿ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸೂಕ್ತ ಚಿಕಿತ್ಸೆ, ತ್ವರಿತ ಪರಿಹಾರಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಒತ್ತಾಯ :
ಹುಬ್ಬಳ್ಳಿ,ಜೂ.28- ಹಾವೇರಿ ಜಿಲ್ಲೆ ಗುಂಡೇನಹಳ್ಳಿ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಸರ್ಕಾರ ತ್ವರಿತವಾಗಿ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಒತ್ತಾಯಿಸಿದ್ದಾರೆ.

ಈ ಭೀಕರ ಅಪಘಾತದಲ್ಲಿ 13 ಜನರು ಸಾವಿಗೀಡಾದ ಸುದ್ದಿ ತಿಳಿದು ಸಚಿವ ಜೋಶಿ ಅವರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.ದೇವರು ಮೃತರ ಆತಕ್ಕೆ ಶಾಂತಿ ನೀಡಲಿ ಮತ್ತು ಅವರ ಕುಟುಂಬಸ್ಥರಿಗೆ ನೋವು ಸಹಿಸಿಕೊಳ್ಳು ಶಕ್ತಿ ನೀಡಲೆಂದು ಸಚಿವರು ಪ್ರಾರ್ಥಿಸಿದ್ದಾರೆ.

ರಾಜ್ಯ ಸರ್ಕಾರ ಈ ಕೂಡಲೇ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಒದಗಿಸಲು ಆದ್ಯತೆ ನೀಡಬೇಕು ಹಾಗೂ ಮೃತರ ಕುಟುಂಬಕ್ಕೆ ತ್ವರಿತ ಪರಿಹಾರ ನೀಡಲು ಮುಂದಾಗಬೇಕೆಂದು ಒತ್ತಾಯಿಸಿ ಸಚಿವ ಪ್ರಲ್ಹಾದ ಜೋಶಿ ಟ್ವೀಟ್‌ ಮಾಡಿದ್ದಾರೆ.

RELATED ARTICLES

Latest News