ವಾಹನಗಳ ಬೀಗ ಮುರಿದು ಕಳ್ಳತನ ಮಾಡುತ್ತಿದ್ದ ಚೋರರ ಬಂಧನ

ಬೆಂಗಳೂರು,ನ.11- ಹಗಲು ಮತ್ತು ರಾತ್ರಿ ವೇಳೆ ಮನೆಗಳ ಮುಂದೆ ನಿಲ್ಲಿಸಿದ್ದಂತಹ ದ್ವಿಚಕ್ರ ವಾಹನಗಳ ಬೀಗ ಮುರಿದು ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕುಮಾರ ಸ್ವಾಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ನವೀದ್ ಪಾಷಾ(21), ಸೈಯ್ಯದ್ ರೋಷನ್(21) ಬಂಧಿತ ಆರೋಪಿಗಳು.

ಬಂಧಿತ ಆರೋಪಿಗಳಿಂದ 6.45 ಲಕ್ಷ ಬೆಲೆ ಬಾಳುವ 13 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಆರೋಪಿಗಳ ವಿರುದ್ಧ ನಗರದ 9 ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದೆ.

ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ 5 ಪ್ರಕರಣಗಳು, ಸುಬ್ರಮಣ್ಯಪುರ ಪೊಲೀಸ್ ಠಾಣೆ, ಪುಟ್ಟೇನಹಳ್ಳಿ, ಕೋಣನಕೊಂಟೆ, ಜೆ.ಪಿ.ನಗರ, ಬನಶಂಕರಿ, ಹನುಮಂತನಗರಠಾಣೆ, ಸಿ.ಕೆ.ಅಚ್ಚುಕಟ್ಟು ಹಾಗೂ ಆರ್. ಆರ್. ನಗರ ಪೊಲೀಸ್ ಠಾಣೆಗಳಲ್ಲಿ ತಲಾ ಒಂದೊಂದು ಪ್ರಕರಣಗಳು ದಾಖಲಾಗಿವೆ.

ಈ ಪ್ರಕರಣಗಳಿಗೆ ಸಂಬಂಸಿದಂತೆ ಸುಮಾರು 7 ಲಕ್ಷ ಬೆಲೆ ಬಾಳುವ 13 ದ್ವಿ ಚಕ್ರ ವಾಹನಗಳನ್ನು ದಸ್ತಗಿರಿ ಮಾಡಲಾಗಿದೆ. ಬೆಂಗಳೂರು ನಗರ ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತ ಹರೀಶ್ ಪಾಂಡೆ ಅವರ ಮಾರ್ಗದರ್ಶನದಲ್ಲಿ ಸುಬ್ರಮಣ್ಯ ಪುರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶಿವಕುಮಾರ್ ಟಿ.ಎಂ. ಅವರ ನೇತೃತ್ವದಲ್ಲಿ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಪಿ. ಶಿವಕುಮಾರ್, ಸಬ್ ಇನ್ಸೆಪೆಕ್ಟರ್ ನಾಗೇಶ್ ಹೆಚ್.ಎಂ. ಶ್ರೀಕಂಠಯ್ಯ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿದ್ದಾರೆ. ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಕಮಲ್‍ಪಂತ್ ಶ್ಲಾಘಿಸಿದ್ದಾರೆ.