ಮಸಣವಾಯ್ತು ಮದುವೆ ಮನೆ, ಬಾವಿಗೆ ಬಿದ್ದು 13 ಮಹಿಳೆಯರ ಸಾವು..!

Social Share

ಕುಶಿನಗರ,ಫೆ.17- ಮದುವೆ ಆಚರಣೆ ವೇಳೆ ಆಕಸ್ಮಿಕವಾಗಿ ಬಾವಿಗೆ ಬಿದ್ದು ಹದಿಮೂರು ಮಹಿಳೆಯರು ಮತ್ತು ಬಾಲಕಿಯರು ಸಾವಿಗೀಡಾಗಿರುವ ಘಟನೆ ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯಲ್ಲಿ ಸಂಭವಿಸಿದೆ.  ಘಟನೆ ನೌರಂಗಿಯಾ ಟೋಲಾ ಗ್ರಾಮದಲ್ಲಿ ಜರುಗಿದ್ದು, ಈ ಮಹಿಳೆಯರು ಮತ್ತು ಮಕ್ಕಳು ಕುಳಿತಿದ್ದ ಕಬ್ಬಿಣದ ಗ್ರಿಲ್ ಏಕಾಏಕಿ ಮುರಿದು ಬಾವಿಗೆ ಬಿದ್ದ ಕಾರಣ ಈ ದುರಂತ ಘಟಿಸಿದೆ. ಘಟನೆಯಲ್ಲಿ 10 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ನಿನ್ನೆ ರಾತ್ರಿ ವಿವಾಹ-ಪೂರ್ವ ಆಚರಣೆಯಾದ ಹಳದಿ ಶಾಸ್ತ್ರ ನಡೆಯುತ್ತಿತ್ತು. ಕೆಲವು ಮಹಿಳೆಯರು ಮತ್ತು ಮಕ್ಕಳು ಕಬ್ಬಿಣದ ಗ್ರಿಲ್ ಮೇಲೆ ಕುಳಿತಿದ್ದರು. ಆಗ ಗ್ರಿಲ್ ಹಠಾತ್ತನೆ ಮುರಿದು ಹೋದ ಕಾರಣ ಅವರೆಲ್ಲ ಬಾವಿಗೆ ಬಿದ್ದಿದ್ದಾರೆ ಎಂದು ಜಿಲ್ಲಾಧಿಕಾರಿ ಎಸ್.ರಾಜಲಿಂಗಂ ಅರುಹಿದ್ದಾರೆ.
ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದುವರೆಗೆ ಲಭ್ಯ ಮಾಹಿತಿಯ ಪ್ರಕಾರ ಪೂಜಾ (19), ಶಶಿಕಲಾ (15), ಶಾಕುಂತಲ (35), ಮಮತಾ ದೇವಿ(35), ಮೀರಾ (25), ಪೂಜಾ (20), ಪಾರಿ(1), ಜ್ಯೋತಿ (15), ರಾಧಿಕಾ(16), ಸುಂದರಿ(15), ಆರತಿ (10), ಪಪ್ಪಿ (20) ಮತ್ತು ಮನು (18) ಮೃತರಾಗಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ತನಿಖೆ ಮುಂದುವರಿದಿದೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವುದನ್ನು ಖಚಿತ ಪಡಿಸಿಕೊಳ್ಳುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಕಾರಿಗಳಿಗೆ ಮತ್ತು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದ್ದಾರೆ ಎಂದು ಲಕ್ನೋದಲ್ಲಿ ಸರ್ಕಾರಿ ವಕ್ತಾರರೊಬ್ಬರು ತಿಳಿಸಿದ್ದಾರೆ.
ಮೃತರ ಕುಟುಂಬದವರಿಗೆ ತಲಾ 4 ಲಕ್ಷ ರೂ.ಗಳ ನೆರವು ನೀಡಲಾಗುವುದು ಎಂದು ಅಕಾರಿಗಳು ಹೇಳಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿ ಇದೊಂದು ಹೃದಯ ವಿದ್ರಾವಕ ಘಟನೆಯಾಗಿದೆ ಎಂದಿದ್ದಾರೆ.

Articles You Might Like

Share This Article