ಬೆಂಗಳೂರು,ಫೆ.3- ಸಾಮಾನ್ಯ ಜನರು ಒಂದು ತಿಂಗಳು ನೀರಿನ ಬಿಲ್ ಕಟ್ಟದಿದ್ದರೆ ಸಂಪರ್ಕ ಕಡಿತಗೊಳಿಸುವ ಜಲ ಮಂಡಳಿ ಅಧಿಕಾರಿಗಳು ಕೋಟಿ ಕೋಟಿ ನೀರಿನ ಬಿಲ್ ಬಾಕಿ ಉಳಿಸಿಕೊಂಡಿರುವ ಸರ್ಕಾರಿ ಕಟ್ಟಡಗಳ ತಂಟೆಗೆ ಮಾತ್ರ ಹೋಗದಿರುವುದು ವಿಪರ್ಯಾಸವಾಗಿದೆ.
ಕೇಂದ್ರ, ರಾಜ್ಯ ಸರ್ಕಾರ, ಬಿಬಿಎಂಪಿ, ರೈಲ್ವೆ ಹಾಗೂ ರಕ್ಷಣಾ ಇಲಾಖೆಯವರು ಇದುವರೆಗೂ ಕೋಟ್ಯಂತರ ರೂ. ನೀರಿನ ಬಿಲ್ ಪಾವತಿಸಿಲ್ಲ.ಕೋಟಿ ಕೋಟಿ ಬಾಕಿ ಉಳಿಸಿಕೊಂಡಿರುವ ಸರ್ಕಾರಿ ಕಟ್ಟಡಗಳಿಗೆ ಕೇವಲ ನೋಟೀಸ್ ಜಾರಿ ಮಾಡಿ ಜಲಮಂಡಳಿ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತಿರುವುದು ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ.
ಜಲಮಂಡಳಿಗೆ ಸರ್ಕಾರದ ವಿವಿಧ ಕಟ್ಟಡ ಗಳಿಂದ 135 ಕೋಟಿ ರೂ.ಗಳಿಗೂ ಹೆಚ್ಚು ನೀರಿನ ಬಿಲ್ ಬರಬೇಕಿದೆ. ಆದರೂ ಬಿಲ್ ಪಾವತಿಸದಿರುವ ಕಟ್ಟಡಗಳ ನೀರಿನ ಸರಬರಾಜು ಬಂದ್ ಮಾಡದಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ನಗರದಲ್ಲಿರುವ ಕೇಂದ್ರ ಸರ್ಕಾರದ 170 ಕಟ್ಟಡಗಳಿಂದ 2,17,98,165 ರೂ. ರಾಜ್ಯ ಸರ್ಕಾರದ 542 ಕಟ್ಟಡಗಳಿಂದ 20,82,57,162, ಬಿಬಿಎಂಪಿಯ 497 ಕಟ್ಟಡಗಳಿಂದ 1,94,75,6800, ಸರ್ಕಾರಿ ಸೌಮ್ಯದ 172 ಕಟ್ಟಡಗಳಿಂದ 7,51,16,150, ರಕ್ಷಣಾ ಇಲಾಖೆಯ 49 ಕಟ್ಟಡಗಳಿಂದ 21,84,13,278, ರೈಲ್ವೇ ಇಲಾಖೆಯ 23 ಕಟ್ಟಡಗಳಿಂದ 16,52,09,615 ಹಾಗೂ ಪೊಲೀಸ್ ಇಲಾಖೆಯ 163 ಕಟ್ಟಡಗಳಿಂದ 46,73,39,864 ರೂ.ಗಳು ಸೇರಿದಂತೆ ಒಟ್ಟು 135 ಕೋಟಿ ರೂ.ಗಳಿಗೂ ಹೆಚ್ಚು ನೀರಿನ ಬಿಲ್ ಪಾವತಿಯಾಗಬೇಕಿದೆ.
ಸರ್ಕಾರಿ ಕಟ್ಟಡಗಳಿಂದ ಪಾವತಿ ಯಾಗಬೇಕಿರುವ 135 ಕೋಟಿ ರೂ. ನೀರಿನ ಬಿಲ್ ವಸೂಲಿಗೆ ಅಗತ್ಯ ಕ್ರಮ ಕೈಗೊಳ್ಳ ಲಾಗಿದೆ ಎಂದು ಜಲ ಮಂಡಳಿ ಚೀಫ್ ಎಂಜಿನಿಯರ್ ದೇವರಾಜ್ ತಿಳಿಸಿದ್ದಾರೆ. 46 ಕೋಟಿ ರೂ.ಗಳಿಗೂ ಹೆಚ್ಚು ನೀರಿನ ಬಿಲ್ ಬಾಕಿ ಉಳಿಸಿಕೊಂಡಿರುವ ಪೊಲೀಸ್ ಇಲಾಖೆ ಮುಖ್ಯಸ್ಥರಿಗೆ ಮಾರ್ಚ್ ತಿಂಗಳ ಅಂತ್ಯದ ವೇಳೆಗೆ ಬಿಲ್ ಪಾವತಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಅವರು ವಿವರಣೆ ನೀಡಿದ್ದಾರೆ.
ಅದೇ ರೀತಿ ಕೋಟಿ ಕೋಟಿ ನೀರಿನ ಬಿಲ್ ಪಾವತಿಸಿಕೊಂಡಿರುವ ಕಟ್ಟಡಗಳಿಗೂ ನೋಟೀಸ್ ಜಾರಿ ಮಾಡಲಾಗಿದ್ದು, ಕೂಡಲೆ ಬಿಲ್ ಪಾವತಿಸುವಂತೆ ಆಯಾ ಇಲಾಖೆಯ ಮುಖ್ಯಸ್ಥರಿಗೆ ಮನವಿ ಮಾಡಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.
ಸಾರ್ವಜನಿಕರು ಒಂದು ತಿಂಗಳ ತಮ್ಮ ನೀರಿನ ಬಿಲ್ ಬಾಕಿ ಉಳಿಸಿಕೊಂಡರೆ ತಕ್ಷಣ ನೀರಿನ ಸಂಪರ್ಕ ಕಡಿತಗೊಳಿಸುವ ಜಲ ಮಂಡಳಿ ಅಕಾರಿಗಳು ಕೋಟಿ ಕೋಟಿ ಬಾಕಿ ಉಳಿಸಿಕೊಂಡಿರುವ ಸರ್ಕಾರಿ ಕಟ್ಟಡಗಳ ತಂಟೆಗೆ ಹೋಗದಿರುವುದು ಯಾವ ನ್ಯಾಯ ಎನ್ನುವುದು ಪ್ರಜ್ಞಾವಂತ ನಾಗರೀಕರ ಪ್ರಶ್ನೆಯಾಗಿದೆ.
