ಬೆಂಗಳೂರು,ಜು.30- ಇಬ್ಬರು ಯುವಕರ ಕೊಲೆಯಿಂದ ಪ್ರಕ್ಷುಬ್ದವಾಗಿರುವ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಮತ್ತಿತರ ಕಡೆ ಪರಿಸ್ಥಿತಿ ಈಗಲೂ ಬೂದಿ ಮುಚ್ಚಿದ ಕೆಂಡದಂತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲೆಡೆ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ.
ಮಂಗಳೂರಿನ ಪುತೂರು, ಸುಳ್ಯ, ಕಡಬ, ಸೂರತ್ಕಲ್, ಮಂಗಳೂರು ನಗರ ಮತ್ತಿತರ ಕಡೆ ಈಗಲೂ 144 ಸೆಕ್ಷನ್ ಮುಂದುವರೆಸಲಾಗಿದೆ. ಇತ್ತ ಉಡುಪಿ, ಕಾರವಾರ, ಮಡಿಕೇರಿ, ಶಿವಮೊಗ್ಗ, ಬೆಂಗಳೂರು, ಹುಬ್ಬಳ್ಳಿ, ಧಾರವಾಡ,ಬಾಗಲಕೋಟೆ ಸೇರಿದಂತೆ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳಲ್ಲಿ ತೀವ್ರ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಈ ನಡುವೆ ಮಂಗಳೂರು ಜಿಲ್ಲಾಕಾರಿ ರಾಜೇಂದ್ರ ಹಾಗೂ ನಗರ ಪೆÇಲೀಸ್ ಆಯುಕ್ತ ಶಶಿಕುಮಾರ್ ಅವರ ನೇತೃತ್ವದಲ್ಲಿ ಶಾಂತಿ ಸಂಧಾನ ಸಭೆ ನಡೆಸಲಾಗಿದೆ. ಯಾವುದೇ ಮುಖಂಡರು ಪ್ರಚೋದನಾಕಾರಿ ಹೇಳಿಕೆ ನೀಡುವುದಾಗಲಿ, ಅನಗತ್ಯವಾಗಿ ಕೋಮು ಗಲಭೆ ಸೌಹಾರ್ದ ಕದಡುವಂತಹ ಹೇಳಿಕೆಗಳನ್ನು ಕೊಡಬಾರದು ಎಂದು ತೀರ್ಮಾನ ಕೈಗೊಳ್ಳಲಾಗಿದೆ.
ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಮತ್ತು ಫಾಜಿಲ್ ಕೊಲೆಯಾದ ನಂತರ ಪ್ರಕ್ಷುಬ್ದವಾಗಿರುವ ಸೂರತ್ಕಲ್, ಸುಳ್ಯ ಮತ್ತು ಪುತ್ತೂರಿನಲ್ಲಿ ಈಗಲೂ ಕೂಡ ಪರಿಸ್ಥಿತಿ ಪ್ರಕ್ಷುಬ್ದವಾಗಿದೆ. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಎಲ್ಲೆಡೆ ಕೆಎಸ್‍ಆರ್‍ಪಿ, ಕ್ಷಿಪ್ರ ಕಾರ್ಯಾಚರಣೆ ಪಡೆ ಸೇರಿದಂತೆ ವಿವಿಧ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.