ಮಂಗಳೂರು, ಜು.29- ಕರಾವಳಿಯಲ್ಲಿ ಮತ್ತೆ ಮತ್ತೆ ಕೊಲೆ ಪ್ರಕರಣಗಳು ಮರು ಕಳಿಸುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯರು ಆತಂಕದಲ್ಲಿದ್ದು, ದಕ್ಷಿಣ ಕನ್ನಡ ಉಡುಪಿ ಜಿಲ್ಲೆಗಳಲ್ಲಿ ಪೊಲೀಸ್ ಭದ್ರೆತೆಗಳನ್ನು ಹೆಚ್ಚಿಸಲಾಗಿದ್ದು, ಹಲವು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಬಿಜೆಪಿ ಯುವಮೋರ್ಚಾ ಪ್ರವೀಣ್ ನೆಟ್ಟಾರು, ಹತ್ಯೆ ನಂತರ ಸೂರತ್‍ಕಲ್‍ಲ್ಲಿ ನಾಲ್ವರು ಅಪರಿಚಿತ ದುಷ್ಕರ್ಮಿಗಳು ಮೊಹಮ್ಮದ್ ಫಾಜಿಲ್ ಎಂಬ ಯುವಕರನ್ನು ಕೊಂದಿದ್ದು, ಇದರಿಂದ ಪರಿಸ್ಥಿತಿ ಬೀಗುವಿನಿಂದ ಕೂಡಿದೆ.
ಸೂರತ್ಕಲ್, ಬಜ್ಪೆ, ಮುಲ್ಕಿ ಮತ್ತು ಪನ್ನಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಮತ್ತು ಮಂಗಳೂರಿನ ಹಲವು ಭಾಗಗಳಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಎಲ್ಲಾ ಮದ್ಯದಂಗಡಿಗಳನ್ನು ಮುಚ್ಚಲಾಗಿದ್ದು, ಕರ್ನಾಟಕ, ಕೇರಳ ಗಡಿ ಸೇರಿದಂತೆ ಆಯಾಕಟ್ಟಿನ ಪ್ರದೇಶದಲ್ಲಿ 19 ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಿ ಹೊರ ಹೋಗುವ ಮತ್ತು ಒಳ ಬರುವ ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ ಎಂದು ಅಕಾರಿಗಳು ತಿಳಿಸಿದ್ದಾರೆ.
ರಾತ್ರಿ 10ರ ನಂತರ ನಗರದಲ್ಲಿ ಓಡಾಟಕ್ಕೆ ಅವಕಾಶ ನೀಡುವುದಿಲ್ಲ ಎಂದು ಪೊಲೀಸರು ಕಟ್ಟಾದೇಶ ನೀಡಿದ್ದಾರೆ. ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ತುಕಡಿಗಳನ್ನು ನಿಯೋಜಿಸಲಾಗಿದ್ದು, ಗುಂಪು-ಗುಂಪಾಗಿ ತೆರಳುತ್ತಿದ್ದವರನ್ನು ಎಚ್ಚರಿಕೆ ನೀಡಿ ಕಳುಹಿಸಲಾಗುತ್ತಿದೆ.
ಹುಟ್ಟೂರಲ್ಲಿ ಅಂತ್ಯಸಂಸ್ಕಾರ:
ಕಳೆದ ರಾತ್ರಿ ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡ ಸೂರತ್ಕಲ್‍ನ ಅಂಗಡಿಯೊಂದರ ಮುಂದೆ ನಿಂತಿದ್ದ ಫಾಜಿಲ್ ಮೇಲೆ ಏಕಾಏಕಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿಸಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಇಂದು ಬೆಳಗ್ಗೆ ಫಾಜಿಲ್ ಮೃತದೇಹದ ಅಂತ್ಯ ಸಂಸ್ಕಾರ ಹುಟ್ಟೂರಾದ ಮಂಗಳಪೇಟೆಯಲ್ಲಿ ನಡೆಯಿತು. ಅಂತ್ಯಸಂಸ್ಕಾರದಲ್ಲಿ ಭಾರಿ ಜನಸ್ತೋಮವೇ ನೆರೆದಿತ್ತು.
ಅಹಿತಕರ ಘಟನೆ ನಡೆಯದಂತೆ ಸೂರತ್ಕಲ್ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಈ ಪ್ರದೇಶದಲ್ಲಿ ಅಂಗಡಿ ಮುಂಗಟ್ಟು ಬಂದ್ ಆಗಿದ್ದು, ವಾಹನ ಸಂಚಾರ ವಿರಳವಾಗಿದೆ.
ಹಲವರ ಮೇಲೆ ನಿಗಾ: ಕೆಲವೆಡೆ ದುಷ್ಕರ್ಮಿಗಳು ಪರಿಸ್ಥಿತಿಯ ಲಾಭ ಪಡೆಯುವ ಸಾಧ್ಯತೆ ಇರುವುದರಿಂದ ರೌಡಿ ಶೀಟರ್‍ಗಳು ಮತ್ತು ಕೆಲವು ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳನ್ನು ವಶಕ್ಕೆ ಪಡೆದು ಕೆಲವರ ಮೇಲೆ ನಿಗಾ ಇಡಲಾಗುತ್ತಿದೆ.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು, ಪುತ್ತೂರಿಗೆ ಭೇಟಿ ನೀಡಿದ ಸಂದರ್ಭದಲ್ಲೇ ಸೂರತ್ಕಲ್‍ನಲ್ಲಿ ಕೊಲೆ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ.
ಇದರ ನಡುವೆ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಫಾಜಿಲ್ ಹತ್ಯೆಯನ್ನು ಖಂಡಿಸಿದ್ದು, ದುಷ್ಕರ್ಮಿಗಳನ್ನು ಸುಮ್ಮನೆ ಬಿಡುವುದಿಲ್ಲ. ಕಾನೂನು ರೀತಿ ಶಿಕ್ಷಿಸಲಾಗುವುದು ಎಂದು ಹೇಳಿದ್ದಾರೆ.