15 ಕೋಟಿ ಹಫ್ತಾ ಕೇಳಿ ಪೊಲೀಸರ ಅತಿಥಿಯಾದ ಕನ್ನಡದ ಖಾಸಗಿ ನ್ಯೂಸ್ ಚಾನಲ್ ಮುಖ್ಯಸ್ಥ
ಬೆಂಗಳೂರು, ಏ.15 – ಹತ್ತು ಕೋಟಿ ಲಂಚ ನೀಡಬೇಕು. ಇಲ್ಲದಿದ್ದಲ್ಲಿ ನಿಮ್ಮ ವಿರುದ್ಧ ಅವಹೇಳನಕಾರಿ ಸುದ್ದಿ ಬಿತ್ತರಿಸಲಾಗುವುದು ಎಂದು ಉದ್ಯಮಿಯೊಬ್ಬರಿಗೆ ಬೆದರಿಕೆ ಹಾಕಿ 15 ಕೋಟಿ ರೂ.ಗಳ ಹಫ್ತಾಗೆ ಬೇಡಿಕೆಯಿಟ್ಟಿದ್ದ ಖಾಸಗಿ ಸುದ್ದಿ ವಾಹಿನಿಯೊಂದರ ಮುಖ್ಯಸ್ಥ ಹಾಗೂ ಆತನ ಸಹಾಯಕ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. ಖಾಸಗಿ ವಾಹಿನಿಯೊಂದರ ಮುಖ್ಯಸ್ಥನಾಗಿದ್ದ ಲಕ್ಷ್ಮೀಪ್ರಸಾದ್ ವಾಜಪೇಯಿ(42) ಹಾಗೂ ಆತನ ಸಹಚರ ಮಿಥುನ್ ಬಂಧಿತ ಆರೋಪಿಗಳು. ಪ್ರತಿಷ್ಠಿತ ಖಾಸಗಿ ಸುದ್ದಿ ವಾಹಿನಿಯೊಂದರ ಮುಖ್ಯಸ್ಥನಾಗಿರುವ ವಾಜಪೇಯಿ ವಾಣಿಜ್ಯೋದ್ಯಮಿಯೊಬ್ಬರ ವಿರುದ್ಧದ ತುಣುಕು ಸುದ್ದಿಯೊಂದನ್ನು ಬಿತ್ತರಿಸಿ ನಂತರ ಅವರಿಗೆ ಕರೆ ಮಾಡಿ 15 ಕೋಟಿ ಲಂಚ ನೀಡಬೇಕು, ಇಲ್ಲದಿದ್ದರೆ ನಿಮ್ಮ ವಿರುದ್ಧ ಇಡೀ ಸುದ್ದಿಯನ್ನು ಬಿತ್ತರಿಸಲಾಗುವುದು ಎಂದು ಬೆದರಿಕೆ ಹಾಕಿದ್ದರು.
ಹದಿನೈದು ಕೋಟಿಯಲ್ಲಿ ಮುಂಗಡ 10 ಕೋಟಿ ನೀಡಬೇಕು. ನಾವು ತಿಳಿಸುವ ವ್ಯಕ್ತಿಗಳ ಹೆಸರಿನ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಬೇಕೆಂದು ಆರೋಪಿಗಳು ಉದ್ಯಮಿಗೆ ತಿಳಿಸಿದ್ದರು ಎನ್ನಲಾಗಿದೆ. ಈ ಕುರಿತಂತೆ ಉದ್ಯಮಿ ಕೋರಮಂಗಲ ಪೊಲೀಸರಿಗೆ ನೀಡಿದ ದೂರನ್ನು ಆಧರಿಸಿ ಕಾರ್ಯಾಚರಣೆಗಿಳಿದ ಪೊಲೀಸರಿಗೆ ವಾಜಪೇಯಿ ಮತ್ತು ಆತನ ಸಹಚರ ಮಿಥುನ್ ಉದ್ಯಮಿ ಕಡೆಯವರಿಂದ ತಮ್ಮ ಕಚೇರಿಯಲ್ಲೇ 10 ಕೋಟಿ ಹಣ ಜಮಾವಣೆ ಬಗ್ಗೆ ಮಾತನಾಡುತ್ತಿದ್ದಾಗ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಆರೋಪಿಗಳು ಈ ಹಿಂದೆ ಕಮರ್ಷಿಯಲ್ಸ್ಟ್ರೀಟ್ ಪೊಲೀಸ್ ಠಾಣೆ ವ್ಯಾಪ್ತಿಯ ಉದ್ಯಮಿಯೊಬ್ಬರಿಂದ 10ಕೋಟಿ ಹಣ ಮತ್ತು 30 ಲಕ್ಷ ಮೌಲ್ಯದ ಚಿನ್ನಾಭರಣ ವಸೂಲಿ ಮಾಡಿದ್ದ ಆರೋಪಕ್ಕೂ ಗುರಿಯಾಗಿದ್ದಾರೆ. ಅದೇ ರೀತಿ ಮಹಾಲಕ್ಷ್ಮಿಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲೂ ಈ ಆರೋಪಿಗಳ ವಿರುದ್ಧ ಹಫ್ತಾ ವಸೂಲಿ ಬೇಡಿಕೆ ಪ್ರಕರಣ ದಾಖಲಾಗಿದೆ. ನಗರದಲ್ಲಿರುವ ಪ್ರಮುಖ ಉದ್ಯಮಿಗಳನ್ನು ಗುರುತಿಸಿ ಅವರ ಕೆಲವು ನಕಾರಾತ್ಮಕ ಅಂಶಗಳನ್ನು ಪತ್ತೆ ಮಾಡಿ ನೀವು ಹಫ್ತಾ ನೀಡಬೇಕು. ಇಲ್ಲದಿದ್ದರೆ ನಿಮ್ಮ ವಿರುದ್ಧ ನಮ್ಮ ಚಾನಲ್ನಲ್ಲಿ ಸುದ್ದಿ ಬಿತ್ತರಿಸಿ ನಿಮ್ಮ ಘನತೆಗೆ ಕಳಂಕ ತರಲಾಗುವುದು ಎಂದು ಬೆದರಿಕೆಯೊಡ್ಡಿ ಕೋಟಿ ಕೋಟಿ ಹಣ ವಸೂಲಿ ಮಾಡುವುದನ್ನೇ ಇವರು ದಂಧೆ ಮಾಡಿಕೊಂಡಿದ್ದರು ಎಂದು ಆಗ್ನೇಯ ವಿಭಾಗ ಡಿಸಿಪಿ ಬೋರಲಿಂಗಯ್ಯ ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಕೋರಮಂಗಲ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS