ಕಳ್ಳತನ ಮಾಡಿದ್ದ ಆರೋಪಿ ಅರೆಸ್ಟ್ : 15 ಲಕ್ಷ ಮೌಲ್ಯದ ಚಿನ್ನಾಭರಣ, 3 ಕಾರುಗಳ ಜಪ್ತಿ

Social Share

ಬೆಂಗಳೂರು, ಸೆ.17- ಮನೆಯ ಬೀಗ ಮೀಟಿ ಒಳ ನುಗ್ಗಿ ಚಿನ್ನದ ಆಭರಣಗಳು, ಬೆಳ್ಳಿ ವಸ್ತುಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ ಆರೋಪಿಯೊಬ್ಬನನ್ನು ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿ, 15 ಲಕ್ಷ ರೂ. ಮೌಲ್ಯದ ಆಭರಣಗಳು ಹಾಗೂ ಕೃತ್ಯಕ್ಕೆ ಬಳಸಿದ್ದ 3 ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.

ಬನ್ನೇರುಘಟ್ಟ ರಸ್ತೆಯ ಬಸವನ ಪುರ ಗ್ರಾಮದ ಮೊಹಮ್ಮದ್ ತೌಹಿದ್ ಅಲಿಯಾಸ್ ತೌಹಿದ್(20) ಬಂಧಿತ ಆರೋಪಿ.
ಜೂನ್ 10ರಂದು ರಾತ್ರಿ ಎಂ.ಪಿ.ಎಂ. ಲೇಔಟ್‍ನ ವಿಶ್ವೇಶ್ವರಯ್ಯ ಲೇಔಟ್ 9ನೇ ಬ್ಲಾಕ್‍ನ ಮನೆಯೊಂದರ ಮುಂಭಾಗಿಲು ಬೀಗ ಮೀಟಿ ಚಿನ್ನದ ಆಭರಣಗಳು ಹಾಗೂ ಬೆಳ್ಳಿ ಸಾಮಾನುಗಳನ್ನು ಕಳವು ಮಾಡಿಕೊಂಡು ಹೋಗಿದ್ದ ಬಗ್ಗೆ ಅನ್ನಪೂರ್ಣೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ಹೆಚ್ಚಿನ ತನಿಖೆ ಸಲುವಾಗಿ ಪೊಲೀಸ್ ಅಭಿರಕ್ಷೆಗೆ ಪಡೆದು ವಿಚಾರಣೆಗೆ ಒಳಪಡಿಸಿದಾಗ, ಆತ ತನ್ನ ಸಹಚರರಾದ ಮುಹೀಬುಲ್ಲಾ ಅಲಿಸಾ ಮುದಾಸೀರ್ ಅಲಿಯಾಸ್ ಮುದ್ದು ಮತ್ತು ಇಮ್ರಾನ್ ಜೊತೆ ಸೇರಿ ದಾವಣಗೆರೆ ಜಿಲ್ಲೆಯ ವಿದ್ಯಾನಗರ ಹಾಗೂ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ವಿವಿಧ ಕನ್ನಗಳವು ಮಾಡಿದ್ದ 300 ಗ್ರಾಂ ತೂಕದ ಚಿನ್ನದ ಒಡವೆಗಳು 100 ಗ್ರಾಂ ತೂಕದ ಬೆಳ್ಳಿ ಸಾಮಾನುಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಮೂರು ಕಾರುಗಳು ಮತ್ತು ಕಬ್ಬಿಣದ ರಾಡನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಯ ಬಂಧನದಿಂದ ಅನ್ನಪೂರ್ಣೇಶ್ವರಿ ನಗರ ಠಾಣೆಯ ಒಂದು ಪ್ರಕರಣ, ವಿದ್ಯಾನಗರದ ಎರಡು ಪ್ರಕರಣ ಹಾಗೂ ಚಳ್ಳಕೆರೆ ಪೊಲೀಸ್ ಠಾಣೆಯ ಒಂದು ಪ್ರಕರಣ ಪತ್ತೆಯಾಗಿವೆ. ಇನ್‍ಸ್ಪೆಕ್ಟರ್ ರಾಮಮೂರ್ತಿ ಅವರನ್ನೊಳಗೊಂಡ ಸಿಬ್ಬಂದಿ ಈ ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ಬಂಧಿಸಿ ಮಾಲುಗಳನ್ನು ವಶಪಡಿಸಿ ಕೊಳ್ಳುವಲ್ಲಿ ಯಶಸ್ವಿಯಾಗಿ ದ್ದಾರೆ.

Articles You Might Like

Share This Article