ಬೆಂಗಳೂರು, ಮಾ.10- ಶಿಕ್ಷಕರ ಕೊರತೆ ನೀಗಿಸಲು 15,000 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ವಿಧಾನ ಸಭೆಗೆ ತಿಳಿಸಿದರು.ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಪಿ.ರಾಜೀವ್ ಅವರ ಪರವಾಗಿ ದುರ್ಯೋಧನ ಐಹೊಳೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಶಿಕ್ಷಕರ ಕೊರತೆ ಇರುವುದು ನಿಜ. ಸದ್ಯಕ್ಕೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು. ಮೇನಲ್ಲಿ ಶಿಕ್ಷಕರ ಅರ್ಹತಾ ಪರೀಕ್ಷೆ ನಡೆಯಲಿದ್ದು, ಆ ನಂತರ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಉಡುಪಿ ಕ್ಷೇತ್ರದಲ್ಲಿ ಪ್ರಸಕ್ತ ಸಾಲಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ 21 ಶಿಕ್ಷಕರ ಮಂಜೂರಾತಿ ಅಗತ್ಯವಿದ್ದರೂ 13 ಶಿಕ್ಷಕರು ಮತ್ತು ಇಬ್ಬರು ಅತಿಥಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಸದ್ಯದಲ್ಲೇ ರ್ಯಾಷನಲ್ ಪ್ರಕ್ರಿಯೆ ಆರಂಭಿಸಿ ಶಿಕ್ಷಕರ ಹೊಂದಾಣಿಕೆ ಮಾಡಲಾ ಗುವುದು ಎಂದರು.
# ಡಿ ಗ್ರೂಪ್ ಹುದ್ದೆ ಭರ್ತಿಗೆ ಕ್ರಮ:
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 2000 ಡಿ ಗ್ರೂಪ್ ಹುದ್ದೆಗಳು ಖಾಲಿ ಇದ್ದು, ಸದ್ಯದಲ್ಲೇ ಭರ್ತಿಗೆ ಕ್ರಮ ವಹಿಸಲಾಗುವುದು. ಕಾಲೇಜು ಶಿಕ್ಷಣ ಇಲಾಖೆ ಕಚೇರಿ ಹಾಗೂ ಪದವಿ ಕಾಲೇಜುಗಳಲ್ಲಿ ಖಾಲಿ ಇರುವ ಡಿ ಗ್ರೂಪ್ ಹುದ್ದೆಗನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಲು ಆರ್ಥಿಕ ಇಲಾಖೆ ಅನುಮತಿ ನೀಡಿದೆ. ಹೀಗಾಗಿ ನಿಯಮಾನುಸಾರ ಟೆಂಡರ್ ಕರೆದು ನೇಮಕ ಮಾಡಲಾಗುವುದು ಎಂದರು.
ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಡಯಟ್ ಸಂಸ್ಥೆಗೆ ಗುರುವಡೆಯರ ಹಳ್ಳಿಯಲ್ಲಿ ಮೂರು ಎಕರೆ ಎರಡು ಗುಂಟೆ ಜಮೀನು ಮಂಜೂರಾಗಿದ್ದು, ಬೇಗ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಎಂ.ವಿ.ವೀರಭದ್ರಯ್ಯ ಅವರ ಪ್ರಶ್ನೆಗೆ ಉತ್ತರಿಸಿದರು. ಕಟ್ಟಡ ನಿರ್ಮಾಣಕ್ಕಾಗಿ ನಕ್ಷೆ, ಅಂದಾಜು ಪಟ್ಟಿ ತಯಾರಿಸಲು ಲೋಕೋಪಯೋಗಿ ಇಲಾಖೆಗೆ ಪತ್ರ ಬರೆಯಲಾಗಿದೆ. ಅಂದಾಜು ಪಟ್ಟಿ ಪಡೆದು ಆಯವ್ಯಯದಲ್ಲಿ ಒದಗಿಸಲಾದ ಅನುದಾನದ ಆಧಾರದಲ್ಲಿ ಕಟ್ಟಡ ನಿರ್ಮಾಣಕ್ಕೆ ಕ್ರಮ ವಹಿಸಲಾಗಿದೆ ಎಂದರು.
