ರಾಜ್ಯದ 155 ಐಟಿಐಗಳು ಮೇಲ್ದರ್ಜೆಗೆ : ಸಚಿವ ಅಶ್ವತ್ಥನಾರಾಯಣ

ಬೆಂಗಳೂರು.ಸೆ.13- ರಾಜ್ಯದಲ್ಲಿ 155 ಕೈಗಾರಿಕೆ ತರಬೇತಿ ಸಂಸ್ಥೆ (ಐಟಿಐ)ಗಳನ್ನು ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಅನುಗುಣವಾಗಿ ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಹಾಗೂ ಬೇಡಿಕೆ ಮತ್ತು ಪೂರೈಕೆ ಅನುಪಾತದ ಮೇಲೆ ತಾಲ್ಲೂಕು ಕೇಂದ್ರಗಳಲ್ಲಿ, ಸರ್ಕಾರಿ ಸಂಸ್ಥೆಗಳಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲಾಗುವುದು ಎಂದು ಉನ್ನತ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.

ವಿಧಾನಪರಿಷತ್‍ನ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯರಾದ ಯು.ಬಿ.ವೆಂಕಟೇಶ್ ಅವರು ಪ್ರಶ್ನೆ ಕೇಳಿ ಸರ್ಕಾರ ಕೌಶಲ್ಯಾಭಿವೃದ್ಧಿ ಅಡಿ ನೀಡುವ ತರಬೇತಿ ಕೋರ್ಸ್‍ಗಳಿಗೆ ನೀಡುತ್ತಿರುವ ಪ್ರಮಾಣ ಪತ್ರಕ್ಕೆ ಮಾನ್ಯತೆ ಇದೆಯೇ ? ಸರ್ಕಾರಿ ಉದ್ಯೋಗಗಳಿಗೆ ಅದನ್ನು ಪರಿಗಣಿಸಲಾಗುತ್ತಿದೆಯೇ ಎಂದು ಪ್ರಶ್ನಿಸಿದರು.

ಅದಕ್ಕೆ ಉತ್ತರ ನೀಡಿದ ಸಚಿವರು, ಕೌಶಲ್ಯಾಭಿವೃದ್ಧಿ ನಿಗಮದ ಮೂಲಕ ಮಾರುಕಟ್ಟೆ ಬೇಡಿಕೆ ಆಧರಿಸಿ ತರಬೇತಿ ನೀಡಲಾಗುತ್ತಿದೆ. ಹೊಸದಾಗಿ ಸ್ಕಿಲ್‍ಕನೆಕ್ಟ್ ಎಂಬ ವೆಬ್‍ಸೈಟ್ ಆರಂಭಿಸಿದ್ದೇವೆ. ಕೈಗಾರಿಕೆಗಳು ತಮ್ಮಲ್ಲಿ ಬೇಡಿಕೆ ಇರುವ ಮಾನವ ಸಂಪನ್ಮೂಲದ ಬಗ್ಗೆ ವೆಬ್‍ಸೈಟ್‍ನಲ್ಲಿ ಮಾಹಿತಿ ನೀಡಿದರೆ ಸರ್ಕಾರವೇ ಸ್ವಂತ ಖರ್ಚಿನಲ್ಲಿ ತರಬೇತಿ ನೀಡಿ ಅಗತ್ಯ ಮಾನವ ಸಂಪನ್ಮೂಲವನ್ನು ಪೂರೈಸಲಿದೆ.

ಐಟಿಐ, ಪಾಲಿಟೆಕ್ನಿಕ್, ಪದವಿ, ಇಂಜನಿಯರಿಂಗ್ ಸೇರಿದಂತೆ ವಿವಿಧ ಕಾಲೇಜುಗಳ ಮೂಲಕವೇ ತರಬೇತಿ ನೀಡಲಾಗುವುದು. ರಾಜ್ಯದಲ್ಲಿ 270 ಐಟಿಐ ಕಾಲೇಜುಗಳ ಪೈಕಿ 150 ಕಾಲೇಜುಗಳನ್ನು ಆಧುನಿಕ ತಂತ್ರಜ್ಞಾನಕ್ಕನುಗುಣವಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ ಎಂದು ವಿವರಿಸಿದರು.

ಕಾಂಗ್ರೆಸ್‍ನ ಮತ್ತೊಬ್ಬ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರು ಪ್ರಶ್ನೆ ಕೇಳಿ ಬೆಂಗಳೂರಿನಲ್ಲಿ ಉದ್ಯೋಗ ಸೃಷ್ಟಿಯ ಪ್ರಮಾಣ ಶೇ.4ರಷ್ಟು ಮಾತ್ರ. ಕೊರೊನಾದಿಂದ ಹೆಚ್ಚು ಬಾದಿತವಾದ ಮಹಾರಾಷ್ಟ್ರದ ಪುಣೆಯಲ್ಲಿ ಶೇ..13ರಷ್ಟಿದೆ. ಹೈದಾರಾಬಾದ್‍ನಲ್ಲಿ ಶೇ.49, ರಾಜಾಸ್ತಾನದಲ್ಲಿ ಶೇ.44ರಷ್ಟು ಉದ್ಯೋಗ ಸೃಷ್ಟಿಯ ಪ್ರಮಾಣ ಇದೆ. ಬೆಂಗಳೂರಿನಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅದಕ್ಕೆ ಉತ್ತರಿಸಿದ ಅಶ್ವತ್ಥನಾರಾಯಣ ಅವರು, ಬೆಂಗಳೂರು ಉದ್ಯೋಗ ಸೃಷ್ಟಿ, ಜೀವನ ನಿರ್ವಹಣೆ ಸೇರಿದಂತೆ ಹಲವಾರು ವಿಷಯಗಳಲ್ಲಿ ಉತ್ತಮ ಸ್ಥಾನದಲ್ಲಿದೆ. ಸದಸ್ಯರು ಪ್ರಸ್ತಾಪಿಸಿದ ಅಂಕಿ-ಅಂಶಗಳು ಖಾಸಗಿ ಸಂಸ್ಥೆಗಳ ಮಾಹಿತಿ ಇರಬಹುದು. ಆದರೆ, ಸರ್ಕಾರದ ಭವಿಷ್ಯ ನಿಧಿ ಮಾಹಿತಿಯ ಪ್ರಕಾರ ಕರ್ನಾಟಕದಲ್ಲಿ ಉದ್ಯೋಗ ಸೃಷ್ಟಿ ಪ್ರಮಾಣ ಉತ್ತಮವಾಗಿದೆ ಎಂದು ಹೇಳಿದರು.

2016ರಿಂದ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲಾಗುತ್ತಿದೆ. ಆದರೆ, ಫಲಪ್ರದವಾಗಿಲ್ಲ. ಹೀಗಾಗಿ ಬೇಡಿಕೆ ಮತ್ತು ಪೂರೈಕೆ ಅನುಪಾತ ಆಧರಿಸಿ ಮುಂದಿನ ದಿನಗಳಲ್ಲಿ ತರಬೇತಿ ನೀಡುವ ಮೂಲಕ ಲೋಪಗಳನ್ನು ಸರಿಪಡಿಸಲಾಗುವುದು ಎಂದು ಹೇಳಿದರು.