ಬೆಂಗಳೂರು, ಆ.27- ಕರ್ನಾಟಕ, ಕೇರಳ, ಗೋವಾ ಸೇರಿದಂತೆ ಹಲವೆಡೆ 160ಕ್ಕೂ ಹೆಚ್ಚು ಮನೆಗಳ್ಳತನ, ಚಿನ್ನಾಭರಣ ಮಳಿಗೆಗಳಿಗೆ ಕನ್ನ ಹಾಕಿದ್ದ ಕುಖ್ಯಾತ ಕಳ್ಳನನ್ನು ರಾಜಾಜಿನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈಗಾಗಲೇ ಸುಮಾರು 10 ಬಾರಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರಗೆ ಬಂದಿರುವ ಈತ ಅಂತಾರಾಜ್ಯ ಮನೆಗಳ್ಳನಾಗಿದ್ದು, ಗೋವಾದಲ್ಲಿ ಜ್ಯುವೆಲರಿ ಅಂಗಡಿಯೊಂದಕ್ಕೆ ಕನ್ನ ಹಾಕಿ ಸುಮಾರು 7 ಕೆಜಿ ಚಿನ್ನವನ್ನು ದೋಚಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ವಿಚಾರಣೆ ವೇಳೆ ಸುಮಾರು 160ಕ್ಕೂ ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದಿದ್ದು, ಈ ಆಸಾಮಿ ಬೆಂಗಳೂರು, ಬಳ್ಳಾರಿ, ಕೋಲಾರದಲ್ಲಿ ಮೂವರನ್ನು ಮದುವೆಯಾಗಿದ್ದು, 7 ಮಕ್ಕಳಿದ್ದಾರೆ. ಅಳಿಯ ಹಾಗೂ ಇನ್ನಿಬ್ಬರು ಸಹಚರರ ಜತೆ ಸೇರಿಕೊಂಡು ಕಳ್ಳತನ ನಡೆಸುತ್ತಿದ್ದ ಎಂದು ತಿಳಿದುಬಂದಿದೆ.
ಚಿಕ್ಕಂದಿನಿಂದಲೇ ಕಳ್ಳತನವನ್ನೇ ವೃತ್ತಿ ಮಾಡಿಕೊಂಡಿದ್ದ ಈತ ಕಳ್ಳತನ ಮಾಡಿರುವ ಅಪಾರ ಪ್ರಮಾಣದ ಚಿನ್ನಾಭರಣ ಹಾಗೂ ಬೆಲೆಬಾಳುವ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.