ಸರ್ಕಾರಿ ನೌಕರರ ಮುಷ್ಕರಕ್ಕೆ ಮಣಿದ ಸರ್ಕಾರ, ಶೇ.17 ರಷ್ಟು ವೇತನ ಹೆಚ್ಚಳ

Social Share

ಬೆಂಗಳೂರು,ಮಾ.1- ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆಯಂತೆ ಶೇ.17ರಷ್ಟು ವೇತನ ಹೆಚ್ಚಳ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.

ನೌಕರರ ಕೋರಿಕೆಯಂತೆ ತತ್‍ಕ್ಷಣದಿಂದಲೇ ಜಾರಿಯಾಗುವಂತೆ ಶೇ.17ರಷ್ಟು ವೇತನವನ್ನು ಪರಿಷ್ಕರಣೆ ಮಾಡಲಾಗುವುದು. ಕೂಡಲೇ ಸರ್ಕಾರಿ ಆದೇಶ ಹೊರಡಿಸಲು ಸಂಬಂಧಪಟ್ಟ ಅಕಾರಿಗಳಿಗೆ ಸೂಚನೆ ನೀಡಿರುವುದಾಗಿ ಸುದ್ದಿಗಾರರಿಗೆ ತಿಳಿಸಿದರು.

ಹಣಕಾಸು ಇಲಾಖೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಮಧ್ಯಂತರ ಪರಿಹಾರ ನೀಡುವ ಕುರಿತು ಸಾಧಕಬಾಧಕಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಹಣಕಾಸಿನ ಇತಿಮಿತಿಯೊಳಗೆ ನಾವು ಬೇಡಿಕೆಯನ್ನು ಈಡೇರಿಸಿದ್ದೇವೆ ಎಂದು ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು.

ಹೊಸ ಪಿಂಚಣಿ ಯೋಜನೆ ಬದಲಿಗೆ ಹಳೆ ಪಿಂಚಣಿ ಯೋಜನೆಯನ್ನೇ ಮುಂದುವರೆಸಬೇಕೆಂದು ನೌಕರರ ಸಂಘ ಮನವಿ ಮಾಡಿಕೊಂಡಿದೆ. ಇದು ಬೇರೆ ಬೇರೆ ರಾಜ್ಯಗಳಲ್ಲೂ ಜಾರಿಯಲ್ಲಿದೆ ಎಂಬುದನ್ನು ನಮ್ಮ ಗಮನಕ್ಕೆ ತಂದಿದ್ದಾರೆ ಎಂದು ಹೇಳಿದರು.

ಈ ಕುರಿತು ಯಾವ ಯಾವ ರಾಜ್ಯಗಳಲ್ಲಿ ಹಳೆ ಪಿಂಚಣಿ ಯೋಜನೆ ಜಾರಿಯಲ್ಲಿದೆ ಎಂಬುದನ್ನು ಅಧ್ಯಯನ ನಡೆಸಲು ಹೆಚ್ಚುವರಿ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯು ವರದಿ ನೀಡಬೇಕೆಂದು ಸೂಚನೆ ನೀಡಲಾಗಿದೆ.

ವರದಿ ಸರ್ಕಾರಕ್ಕೆ ಬಂದ ನಂತರ ಒಪಿಎಸ್ ಮುಂದುವರೆಸುವ ಬಗ್ಗೆ ತೀರ್ಮಾನಿಸುತ್ತೇವೆ. ನೌಕರರ ಬಹುತೇಕ ಬೇಡಿಕೆಯನ್ನು ಈಡೇರಿಸಿರುವುದರಿಂದ ಕೂಡಲೇ ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಬೇಕೆಂದು ಸಿಎಂ ಬೊಮ್ಮಾಯಿ ಮನವಿ ಮಾಡಿದರು.

ಪಟ್ಟು ಸಡಿಲಿಸದ ನೌಕರರು:

ಶೇ.17ರಷ್ಟು ಮಧ್ಯಂತರ ವೇತನ ಪರಿಹಾರ ನೀಡುವುದಾಗಿ ಸಿಎಂ ಹೇಳಿದ್ದರೂ ಸರ್ಕಾರಿ ನೌಕರರು ಮಾತ್ರ ತಮ್ಮ ಪಟ್ಟು ಸಿಡಿಲಿಸದೆ ಮುಂದುವರೆಸಿದ್ದಾರೆ.

ಈ ಹಿಂದೆ ಇದೇ ರೀತಿ ಬೊಮ್ಮಾಯಿ ಅವರು ಅನೇಕ ಬಾರಿ ಭರವಸೆಗಳನ್ನು ಕೊಟ್ಟಿದ್ದರು. ಆದರೆ ಅವುಗಳು ಯಾವುದು ಕೂಡ ಈಡೇರಿಲ್ಲ. ಸರ್ಕಾರಿ ಆದೇಶ ಹೊರಬೀಳುವವರೆಗೂ ಮುಷ್ಕರವನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಸ್ಪಷ್ಟಪಡಿಸಿದರು.

ಮುಖ್ಯಮಂತ್ರಿಗಳು ಭರವಸೆಯನ್ನು ಮಾತ್ರ ನೀಡಿದ್ದಾರೆ. ಇದು ಅನೇಕ ಬಾರಿ ನಮಗೆ ಕಹಿ ಅನುಭವವಾಗಿರುವುದರಿಂದ ನಾವು ಸರ್ಕಾರಿ ಆದೇಶ ಆಗುವವರೆಗೂ ಮುಷ್ಕರ ಕೈಬಿಡುವುದಿಲ್ಲ. ಸಂಘದ ಪದಾಕಾರಿಗಳ ಜೊತೆ ಚರ್ಚೆ ಮಾಡಲಾಗುವುದು.

ಹಣಕಾಸು ಇಲಾಖೆ ಅಕಾರಿಗಳು ನಮ್ಮನ್ನು ಸಭೆಗೆ ಆಹ್ವಾನಿಸಿದ್ದಾರೆ. ಅಲ್ಲಿ ಏನಾಗುತ್ತದೆಯೋ ನೋಡೋಣ. ಅಲ್ಲಿಯವರೆಗೂ ನಮ್ಮ ನಿಲುವಿನಲ್ಲಿ ಯಾವುದೇ ರೀತಿಯ ಬದಲಾವಣೆ ಇಲ್ಲ ಎಂದು ಹೇಳಿದರು.

#17%SalaryHike, #GovernmentEmployees, #SalaryHike,

Articles You Might Like

Share This Article