ಪಶ್ಚಿಮ ಬಂಗಾಳದಲ್ಲಿ ದಿಶಾ ಶೈಲಿ ಭೀಭತ್ಸ ಘಟನೆ

ಬಾಲುಘಾಟ್(ಪ.ಬಂ)  – ಹೈದರಾಬಾದ್‍ನ ಪಶುವೈದ್ಯೆ ದಿಶಾ ಮೇಲೆ ನಡೆದ ಪೈಶಾಚಿಕ ಸಾಮೂಹಿಕ ಅತ್ಯಾಚಾರ ಮತ್ತು ಸಜೀವ ದಹನದ ಘೋರ ಕೃತ್ಯ ಪಶ್ಚಿಮ ಬಂಗಾಳದ ಮರುಕಳಿಸಿದೆ. ದಿನಾಜ್‍ಪುರ್ ಜಿಲ್ಲೆಯ ಬಾಲುಘಾಟ್ ಪ್ರದೇಶದಲ್ಲಿ 17 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಬೆಂಕಿ ಹಚ್ಚಿ ಸುಟ್ಟು ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ.

ಈ ಸಂಬಂಧ ಮೂವರು ದುಷ್ಕರ್ಮಿಗಳನ್ನು ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಲಾಗಿದೆ. ಭಾನುವಾರ ಸಂಜೆ ಅಂಗಡಿಯೊಂದಕ್ಕೆ ಹೋಗಿದ್ದ ಯುವತಿ ಮನೆಗೆ ಹಿಂತಿರುಗಿರಲಿಲ್ಲ. ಮನೆಯವರು ತೀವ್ರ ಹುಡುಕಾಟ ನಡೆಸಿದ ನಂತರ ಪೊಲೀಸರಿಗೆ ದೂರು ನೀಡಿದ್ದರು. ನಿನ್ನೆ ಸಂಜೆ ಕುಮಾರ್‍ಗಂಜ್ ಪ್ರದೇಶದ ಕಾಲುವೆಯೊಂದರಲ್ಲಿ ಸುಟ್ಟು ಕರಕಲಾದ ಯುವತಿ ಶವ ಪತ್ತೆಯಾಗಿತ್ತು.

ಈ ಸಂಬಂಧ ಕ್ಷಿಪ್ರ ಕಾರ್ಯಾಚರಣೆ ನಡೆಸಿರುವ ಪೊಲೀಸರು ಮೂವರು ದುಷ್ಕರ್ಮಿಗಳನ್ನು ಬಂಧಿಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.