ಬೆಂಗಳೂರು, ಜ.1- ಪೊಲೀಸರೆಂದು ಹೇಳಿಕೊಂಡು ಬಂದಿದ್ದ ದರೋಡೆಕೋರರು ಮನೆಗೆ ನುಗ್ಗಿ 19 ಲಕ್ಷ ರೂ.ನಗದು, ಅರ್ಧ ಕೆಜಿ ಚಿನ್ನ ದೋಚಿದ್ದು, ಕುಟುಂಬದ ಸದಸ್ಯರನ್ನು ಅಪರಹಣ ಮಾಡಿ ಹಲವು ಕಡೆ ಸುತ್ತಾಡಿಸಿ, ಕೊನೆಗೆ ಜೀವ ಬೆದರಿಕೆ ಹಾಕಿರುವ ಘಟನೆ ವರ್ಷದ ಕೊನೆಯ ದಿನವೇ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮಹಾಲಕ್ಷ್ಮೀಪುರಂ ಎರಡನೇ ಹಂತದಲ್ಲಿನ ಆದೀತ್ ಹೋಟೆಲ್ ಹಿಂಭಾಗದಲ್ಲಿ ವಾಸವಿರುವ ಸಿವಿಲ್ ಇಂಜಿನಿಯರ್ ಡಿ.ಸಾಮ್ಯಾನಾಯ್ಕ್ ಅವರು ನಿನ್ನೆ ರಾತ್ರಿ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಘಟನೆ ವಿವರ: 50 ವರ್ಷದ ಸಾಮ್ಯನಾಯ್ಕ ಅವರು ಪತ್ನಿ ಮತ್ತು ಮಕ್ಕಳೊಂದಿಗೆ ವಾಸವಿದ್ದು, ಈ ಮೊದಲು ಭಾರತ್ ಬಿಲ್ಡರ್ಸ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದು, ಇತ್ತೀಚೆಗೆ ಕೆಲಸ ಬಿಟ್ಟು ಮನೆಯಲ್ಲಿದ್ದಾರೆ. ನಿನ್ನೆ ಮಧ್ಯಾಹ್ನ ಒಂದು ಗಂಟೆ ಸುಮಾರಿನಲ್ಲಿ ನಾಲ್ಕೈದು ಅಪರಿಚಿತರು ಬಂದಿದ್ದು, ತಿಪಟೂರು ಪೊಲೀಸ್ ಠಾಣೆಯ ಕ್ರೈಂ ಬ್ರಾಂಚ್‍ನವರು ಎಂದು ಪರಿಚಯಿಸಿಕೊಂಡಿದ್ದಾರೆ. ಅವರಲ್ಲಿ ಒಬ್ಬ ಅಸಾಮಿಯ ಜೊತೆ ಇಬ್ಬರು ಪೊಲೀಸರು ಎಂದು ಹೇಳಿ ಮನೆ ಒಳಗೆ ನುಗ್ಗಿದ್ದಾರೆ.
ನಿಮ್ಮ ಅಳಿಯ ಜಯನಾಯ್ಕ್ ಅವರಿಗೆ ಕೊಟ್ಟಿರುವ ಗನ್ ಕೊಡಿ ಹಾಗೂ ಮೂರು ದಿನಗಳ ಹಿಂದೆ ನಿಮಗೆ ಕೊಟ್ಟಿರುವ ಹಣ ಮತ್ತು ವಡವೆಗಳನ್ನು ಕೊಡಿ ಎಂದು ಅಪರಿಚಿತ ಆಸಾಮಿ ಕೇಳಿದ್ದಾನೆ. ದರೋಡೆಕೋರರು ಗನ್ ಮತ್ತು ಚಾಕು ತೋರಿಸಿ ಮನೆಯವರನ್ನು ಬೆದರಿಸಿದ್ದಾರೆ. ಕುಟುಂಬದ ಸದಸ್ಯರ ಬಳಿ ಇದ್ದ ಮೊಬೈಲ್‍ಗಳನ್ನು ಕಸಿದುಕೊಳ್ಳಲಾಗಿದೆ. ಸಾಮ್ಯನಾಯ್ಕ್ ಅವರ ಮೊಬೈಲ್‍ನಿದ ಪುತ್ರ ಮನೋಹರ್‍ಗೆ ಕರೆ ಮಾಡಿ ಮನೆ ಕರೆಸಿಕೊಂಡಿದ್ದಾರೆ.
ದರೋಡೆಕೋರರು ಸುಮಾರು ಎರಡು ಗಂಟೆ ಕಾಲ ಮನೆಯ ಎಲ್ಲಾ ಭಾಗಗಳನ್ನು ಹುಡುಕಾಡಿದ್ದಾರೆ. ಬೆಡ್‍ರೂಂನಲ್ಲಿ ಸೂಟ್ ಕೇಸಿನಲ್ಲಿ ಇಟ್ಟಿದ್ದ 19 ಲಕ್ಷ ನಗದು ಹಾಗೂ ಬೀರುವಿನಲ್ಲಿದ್ದ ಸುಮಾರು 25 ಲಕ್ಷ ರೂಪಾಯಿ ಮೌಲ್ಯದ 500 ಗ್ರಾಮ್ ಚಿನ್ನವನ್ನು ತೆಗೆದುಕೊಂಡಿದ್ದಾರೆ. ನಂತರ ಪೊಲೀಸ್ ಠಾಣೆಗೆ ಬನ್ನಿ ಎಂದು ಅಪ್ಪ ಮತ್ತು ಮಗನನ್ನು ಅವರನ್ನು ಕಾರಿನಲ್ಲೇ ಕರೆದುಕೊಂಡು ಹೋಗಿದ್ದಾರೆ.
ಗೊರಗುಂಟೆ ಪಾಳ್ಯ ಮಾರ್ಗವಾಗಿ ಬಿಇಎಲ್ ಸರ್ಕಲ್, ಎಂ.ಎಸ್.ಪಾಳ್ಯ ಕಡೆಗೆ ಹೋಗಿ, ಹಲವು ಕಡೆ ಸುತ್ತಾಡಿಸಿ ಯಾವುದೋ ಒಂದು ಸರ್ಕಲ್‍ನಲ್ಲಿ ಕಾರು ನಿಲ್ಲಿಸಿ, 20 ಲಕ್ಷ ರೂ.ಗಳನ್ನು ಕೊಟ್ಟರೆ ನಿಮ್ಮನ್ನು ಬಿಡುತ್ತೇವೆ ಎಂದು ಹೇಳಿದ್ದಾರೆ. ತಮ್ಮ ಬಳಿ ಹಣ ಇಲ್ಲ ಎಂದು ಸಾಮ್ಯ ನಾಯ್ಕ್ ಹೇಳಿದಾಗ ಅಳಿಯ ಕೊಟ್ಟಿರುವ ಹಣದಲ್ಲೇ ಕೊಡಿ ಒತ್ತಾಯಿಸಿದ್ದಾರೆ.
ಅಲ್ಲಿಂದ ಗಂಗಮ್ಮ ಸರ್ಕಲ್ ಬಳಿಗೆ ಕರೆದುಕೊಂಡು ಬಂದು ದರೋಡೆಕೋರರು ಕಾರಿನಿಂದ ಇಳಿದು, ಮನೆಯಿಂದ ತಂದಿರುವ ಹಣ ಮತ್ತು ವಡವೆಗಳನ್ನು ಜಪ್ತಿ ಮಾಡುವುದಾಗಿ ತಿಳಿಸಿದ್ದಾರೆ. ನಾವು ಕರೆದಾಗ ಠಾಣೆಗೆ ಬರಬೇಕು ಎಂದು ಎಚ್ಚರಿಕೆ ನೀಡಿ ಆಟೋದಲ್ಲಿ ಹೋಗಿದ್ದಾರೆ. ಸಾಮ್ಯನಾಯ್ಕ್ ಮತ್ತು ಪುತ್ರ ಮನೋಹರ್ ತಮ್ಮ ಕಾರಿನಲ್ಲಿ ಸಂಜೆ 5.30ರ ವೇಳೆಗೆ ಮನೆಗೆ ಬಂದಿದ್ದಾರೆ.
ನಂತರ ಸಾಮ್ಯನಾಯ್ಕ ಅವರ ಪತ್ನಿಯ ಅಣ್ಣನ ಮಗ ರೋಹನ್ ಕೆಲಸ ಮಾಡುವ ಆರ್.ಜಿ.ಹೋಟೆಲ್ ಬಳಿ ಹೋಗಿ ಆತನ ಮೊಬೈಲ್‍ನಿಂದ ಮನೋಹರ್‍ಗೆ ಕರೆ ಮಾಡಿ ಕರೆಸಿಕೊಂಡಿದ್ದು, ಅಲ್ಲಿ ಇಬ್ಬರ ಮೇಲೂ ಹಲ್ಲೆ ಮಾಡಿ, ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಜೀವಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಸಾಮ್ಯನಾಯ್ಕ್ ತಿಳಿಸಿದ್ದಾರೆ.
ಈ ಬಗ್ಗೆ ಮಹಾಲಕ್ಷ್ಮೀ ಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಗಳ ಬಂಧನಕ್ಕೆ ಶೋಧ ನಡೆಸುತ್ತಿದ್ದಾರೆ.
