ವಾಷಿಂಗ್ಟನ್,ಅ.2-ಭಾರತದಲ್ಲಿ 1984ರಲ್ಲಿ ನಡೆದ ಸಿಖ್ ವಿರೋಧಿ ದಂಗೆ ಕರಾಳ ಅಧ್ಯಾಯವಾಗಿ ಉಳಿದುಕೊಂಡಿದೆ ಎಂದು ಅಮೆರಿಕ ಸೆನೆಟರ್ ಪ್ಯಾಟ್ ಟೂಮಿ ಹೇಳಿದ್ದಾರೆ. ಅಕ್ಟೋಬರ್ 31, 1984 ರಂದು ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ಸಿಖ್ ಅಂಗರಕ್ಷಕರಿಂದ ಹತ್ಯೆಯಾದ ನಂತರ ದೆಹಲಿ ಮತ್ತು ದೇಶದ ಇತರ ಭಾಗಗಳಲ್ಲಿ ಹಿಂಸಾಚಾರ ಭುಗಿಲೆದ್ದಿತು. ಭಾರತದಾದ್ಯಂತ 3,000 ಸಿಖ್ಖರು ಕೊಲ್ಲಲ್ಪಟ್ಟರು ಎಂಬುದನ್ನು ಅವರು ಸ್ಮರಿಸಿಕೊಂಡಿದ್ದಾರೆ.
ಇಂತಹ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಧಿಕೃತ ಅಂಕಿ ಅಂಶ ನೀಡುವುದಿಲ್ಲ. ಆದರೆ 30,000 ಕ್ಕೂ ಹೆಚ್ಚು ಸಿಖ್ ಪುರುಷರು, ಮಹಿಳೆಯರು ಮತ್ತು ಮಕ್ಕಳನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿ, ಅತ್ಯಾಚಾರ, ಹತ್ಯೆಮಾಡಲಾಗಿದೆ ಎಂಬುದನ್ನು ಯಾರು ಮರೆಯುವಂತಿಲ್ಲ ಎಂದಿದ್ದಾರೆ.
ಭವಿಷ್ಯದ ಮಾನವ ಹಕ್ಕುಗಳ ಉಲ್ಲಂಘನೆಯನ್ನು ತಡೆಗಟ್ಟಲು, ನಾವು ಅವರ ಹಿಂದಿನ ಘಟನೆಗಳನ್ನು ನೆನಪಿಟ್ಟುಕೊಳ್ಳಬೇಕು, ಈ ರೀತಿಯ ದುರಂತವು ಜಗತ್ತಿನ ಯಾವ ದೇಶಗಳಲ್ಲೂ ಪುನರಾವರ್ತನೆಯಾಗಬಾರದು ಎಂದರು.
ವಿಶ್ವದ ಪ್ರಮುಖ ಧರ್ಮಗಳಲ್ಲಿ ಒಂದಾಗಿರುವ ಸಿಖ್ ಧರ್ಮವು ಭಾರತದ ಪಂಜಾಬ್ ಪ್ರದೇಶದಲ್ಲಿ ಸುಮಾರು 600 ವರ್ಷಗಳ ಇತಿಹಾಸವನ್ನು ಹೊಂದಿದೆ. ಜಾಗತಿಕವಾಗಿ ಸುಮಾರು 30 ಮಿಲಿಯನ್ ಅನುಯಾಯಿಗಳು ಇದ್ದಾರೆ ಎಂದು ಅವರು ಸ್ಮರಿಸಿಕೊಂಡರು.
ಅಮೆರಿಕಾದ ಹಲವಾರು ಪ್ರಾಂತ್ಯಗಳಲ್ಲಿ ವಾಸವಾಗಿರುವ ಸಿಖ್ ಸಮುದಾಯದವರು ಜಾತಿ ಮತ ಎಣಿಸದೆ ಕೊರೊನಾ ಸಂದರ್ಭದಲ್ಲಿ ಹಲವಾರು ಕುಟುಂಬಗಳಿಗೆ ಸಹಾಯ ಹಸ್ತ ಚಾಚಿ ಗಮನ ಸೆಳೆದಿದ್ದಾರೆ ಎಂದು ಅವರು ಉಲ್ಲೇಖಿಸಿದ್ದಾರೆ.