‘1 ರಿಂದ9 ತರಗತಿ ಪರೀಕ್ಷೆ ರದ್ದು ಮಾಡುವ ಕುರಿತು ಸಿಎಂ ಜತೆ ಚರ್ಚೆ’

Spread the love

ಬೆಂಗಳೂರು,ಮಾ.28- ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಮತ್ತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 1ರಿಂದ 9ನೇ ತರಗತಿವರೆಗೆ ಕಳೆದ ಬಾರಿಯಂತೆ ಪರೀಕ್ಷೆಗಳನ್ನು ರದ್ದು ಮಾಡುವ ಬಗ್ಗೆ ನಾಳೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಈ ಮೂಲಕ ಕಳೆದ ಬಾರಿಯಂತೆ ಈ ಬಾರಿಯೂ 1ರಿಂದ 9ನೇ ತರಗತಿವರೆಗೆ ಪರೀಕ್ಷೆಗಳು ರದ್ದಾಗುವ ಸಾಧ್ಯತೆಯಿದೆ ಎಂಬ ಸುಳಿವನ್ನು ಅವರು ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಸೋಂಕು ಕಳೆದ ಎರಡು ವಾರದಿಂದ ರಾಜ್ಯದಲ್ಲಿ ಮತ್ತೆ ನಿಧಾನವಾಗಿ ಏರುಗತಿಯತ್ತ ಸಾಗಿದೆ. ಇನ್ನು ಎರಡು ತಿಂಗಳ ಕಾಲ ಸೋಂಕಿನ ಪ್ರಮಾಣ ಹೆಚ್ಚಾಗುವ ಸಂಭವವಿದೆ ಎಂದು ತಜ್ಞರು ಸಲಹೆ ನೀಡಿರುವುದಾಗಿ ಹೇಳಿದರು.

1ರಿಂದ 9ನೇ ತರಗತಿವರೆಗೆ ಪರೀಕ್ಷೆಗಳನ್ನು ನಡೆಸದೆ ಕಳೆದ ಬಾರಿಯಂತೆ ವಿದ್ಯಾರ್ಥಿಗಳನ್ನು ಉತ್ತೀರ್ಣ ಮಾಡುವ ಬಗ್ಗೆ ಸಿಎಂ ಹಾಗೂ ಸಂಬಂಧಪಟ್ಟ ಇಲಾಖೆಯ ಸಚಿವರು ಹಾಗೂ ಅಧಿಕಾರಿಗಳ ಜೊತೆ ಚರ್ಚೆ ಮಾಡಲಾಗುವುದು. ಅಂತಿಮವಾಗಿ ಮುಖ್ಯಮಂತ್ರಿಗಳೇ ಈ ನಿರ್ಧಾರವನ್ನು ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.

ವಿದ್ಯಾರ್ಥಿಗಳು ಒಂದು ಕಡೆ ಕುಳಿತು ಪರೀಕ್ಷೆ ಬರೆಯುವುದರಿಂದ ಸೋಂಕು ಹೆಚ್ಚಾಗುವ ಸಾಧ್ಯತೆಯಿದೆ. ಇದನ್ನು ತಡೆಗಟ್ಟಲು ಕೆಲವು ಅನಿವಾರ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದರು

Facebook Comments