2ಎಗೆ ರೆಡ್ಡಿ ಸಮುದಾಯ : ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ
ಬೆಂಗಳೂರು, ಜ.29-ಕೆ.ಸಿ.ರೆಡ್ಡಿ ಅವರ ಪ್ರತಿಮೆ ಸ್ಥಾಪಿಸಲು ಸರ್ಕಾರ ಬದ್ಧವಾಗಿದ್ದು, ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಕಾನೂನು ತಜ್ಞರ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅಖಿಲ ಕರ್ನಾಟಕ ರೆಡ್ಡಿ ಸಮುದಾಯದ ಸಮಾವೇಶದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ವೇಮನ ಹಾಗೂ ಮಲ್ಲಮ್ಮ ಅವರ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಣೆ ಮಾಡುವ ಬಗ್ಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಹೇಳಿದರು. ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ವರದಿ ಕೊಟ್ಟ ನಂತರ ರೆಡ್ಡಿ ಸಮುದಾಯವನ್ನು 2ಎಗೆ ಸೇರಿಸುವ ಬಗ್ಗೆ ಆಯೋಗದ ಜತೆ ಚರ್ಚೆ ಮಾಡುವುದಾಗಿ ತಿಳಿಸಿದರು.
ಸಮುದಾಯದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಹಾಗೂ ಶಿಕ್ಷಣಕ್ಕೆ ಆರ್ಥಿಕ ಸಹಾಯ ಒದಗಿಸಲು ಸರ್ಕಾರ ಸಿದ್ದವಿದೆ. ಎಲ್ಲರೂ ಆಯೋಗ ಬೇಕು ಎಂದರೆ ಹೇಗೆ? ಪ್ರಶ್ನಿಸುತ್ತಾ ಸಮುದಾಯದ ಅಭಿವೃದ್ದಿ ನಿಗಮದ ಬಗ್ಗೆ ಪರಿಶೀಲಿಸುವುದಾಗಿ ಹೇಳಿದರು. ಅವಕಾಶ ವಂಚಿತ ಸಮುದಾಯಗಳು ಒಗ್ಗಟ್ಟಾಗಿ ಹೋರಾಟ ಮಾಡುವ ಮೂಲಕ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಕರೆ ನೀಡಿದರು. ರೆಡ್ಡಿ ಸಮುದಾಯದ ವೇಮನ, ಮಲ್ಲಮ್ಮ ಅವರ ಸೇವೆಗಳು ಅಪಾರ. ಬಸವಣ್ಣ, ತಿರುವಳ್ಳುವರ್ ಅವರಂತೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಸಾಮಾಜಿಕ, ಶಿಕ್ಷಣ, ಕೃಷಿ, ಆರ್ಥಿಕ ಕ್ಷೇತ್ರದಲ್ಲಿ ರೆಡ್ಡಿ ಜನಾಂಗ ತನ್ನದೇ ಆದ ಕೊಡುಗೆ ನೀಡಿದೆ. ರಾಜ್ಯದ ಮುಖ್ಯಮಂತ್ರಿಯಾಗಿ, ಕೇಂದ್ರದ ಸಚಿವರಾಗಿ ಕೆ.ಸಿ.ರೆಡ್ಡಿ ಯವರ ಕೊಡುಗೆ ಅಪಾರ ಎಂದು ಸ್ಮರಿಸಿದರು. ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿಯ ಹರಿಕಾರ ಕೆ.ಸಿ.ರೆಡ್ಡಿ. ವಿಧಾನಸೌಧಕ್ಕೆ ಅಡಿಗಲ್ಲು ಹಾಕಿದ್ದರು ಎಂದು ಹೇಳಿದರು. ಇದೊಂದು ಐತಿಹಾಸಿಕ ಸಮಾವೇಶ. ಅತ್ಯಂತ ಸಂತೋಷದಲ್ಲಿ ಸಮಾವೇಶದಲ್ಲಿ ಭಾಗವಹಿಸಿದ್ದೇನೆ. ನಮ್ಮ ಸಮಾಜ ಜಾತಿ ವ್ಯವಸ್ಥೆಯಿಂದ ಕೂಡಿದೆ. ಅವಕಾಶ ವಂಚಿತ, ಶಿಕ್ಷಣ ವಂಚಿತ ಸಮುದಾಯಗಳು ಒಗ್ಗೂಡಿ ಚಿಂತಿಸಿ ಸಂಘಟನೆಯ ಮೂಲಕ ಅಭಿವೃದ್ಧಿ ಕಂಡುಕೊಳ್ಳಬೇಕು ಎಂದು ತಿಳಿಸಿದರು.
ಸಮಾವೇಶದಲ್ಲಿ ರೆಡ್ಡಿ ಸಮುದಾಯವನ್ನು 2ಎಗೆ ಸೇರಿಸಬೇಕು, ಕೇಂದ್ರ ಮೀಸಲಾತಿ ನೀತಿಯಡಿ ಒಬಿಸಿ ಸೇರಿಸಬೇಕು, ಮಹಾಯೋಗಿ ವೇಮನ ಹಾಗೂ ಹೇಮರೆಡ್ಡಿ ಮಲ್ಲಮ್ಮ ಜಯಂತಿಯನ್ನು ಸರ್ಕಾರ ವತಿಯಿಂದ ಆಚರಿಸಬೇಕು.ಎರಡು ವಿಶ್ವವಿದ್ಯಾಲಯಗಳಿಗೆ ಇವರ ಹೆಸರು ಇಡಬೇಕು, ಕೆ.ಸಿ.ರೆಡ್ಡಿ ಹಾಗೂ ಕೆ.ಎಸ್.ಪಾಟೀಲ್ ಪುತ್ಥಳಿ ಸ್ಥಾಪಿಸಬೇಕು, ಶಿಕ್ಷಣ ಸಂಸ್ಥೆ, ಆಸ್ಪತ್ರೆ ಸ್ಥಾಪನೆಗೆ ಸರ್ಕಾರಿ ಜಾಗ ನೀಡಬೇಕು. ಕೆಪಿಎಸ್ಸಿ ಇನ್ನಿತರ ಆಯೋಗಗಳು ನಿಗಮ ಮಂಡಳಿಗಳಿಗೆ ರೆಡ್ಡಿ ಸಮುದಾಯದವರನ್ನು ನೇಮಿಸಬೇಕು. ರೆಡ್ಡಿ ಸಮುದಾಯದ ಅಭಿವೃದ್ಧಿಗೆ ನಿಗಮ ಸ್ಥಾಪಿಸಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS