2.5 ಲಕ್ಷ ಹುದ್ದೆಗಳ ಭರ್ತಿ : ರಾಜ್ಯೋತ್ಸವದಂದು ಸಿಎಂ ಬೊಮ್ಮಾಯಿ ಮಹತ್ವದ ಘೋಷಣೆ

Social Share

ಬೆಂಗಳೂರು,ನ.1- ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ 2.5 ಲಕ್ಷ ಹುದ್ದೆಗಳ ಭರ್ತಿ, ಬರುವ ಅಧಿವೇಶನದಲ್ಲಿ ಆಡಳಿತದ ಪ್ರತಿಯೊಂದು ಹಂತದಲ್ಲೂ ಕನ್ನಡ ಭಾಷೆಯನ್ನು ಕಡ್ಡಾಯಗೊಳಿಸಲು ವಿಶೇಷ ಕನ್ನಡ ಕಾಯ್ದೆ ಜಾರಿ ಸೇರಿದಂತೆ ರಾಜ್ಯೋತ್ಸವದ ವೇಳೆ ಕನ್ನಡದ ಜನತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಂಪರ್ ಕೊಡುಗೆ ನೀಡಿದ್ದಾರೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮತ್ತು ಸಮಗ್ರ ಶಿಕ್ಷಣ ಕರ್ನಾಟಕ ಇವರ ವತಿಯಿಂದ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿರುವ 67ನೇ ಕರ್ನಾಟಕ ರಾಜ್ಯೋತ್ಸವ ಆಚರಣೆ – 2022ರ ಧ್ವಜಾರೋಹಣ ಕಾರ್ಯವನ್ನು ನೆರವೇರಿಸಿ ಮಾತನಾಡಿದರು. ಸರ್ಕಾರಿ ಇಲಾಖೆಗಳಲ್ಲಿ ಎರಡೂವರೆ ಲಕ್ಷ ಹುದ್ದೆಗಳು ಖಾಲಿ ಇವೆ. ಮೊದಲ ಹಂತದಲ್ಲಿ ಒಂದು ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲಿದ್ದೇವೆ ಎಂದು ಪ್ರಕಟಿಸಿದರು.

ಉಳಿದ ಒಂದೂವರೆ ಲಕ್ಷ ಹುದ್ದೆಗಳನ್ನು ಎರಡು ವರ್ಷದಲ್ಲಿ ಭರ್ತಿ ಮಾಡಲಾಗುವುದು. ನಾಳೆಯಿಂದ ಜಾಗತಿಕ ಹೂಡಿಕೆದಾರರ ಸಮಾವೇಶ ಆರಂಭವಾಗಲಿದೆ. ಅಂದಾಜು ಮೂರುವರೆ ಲಕ್ಷಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಲಿವೆ. ನಿರುದ್ಯೋಗ ನಿವಾರಣೆ ಮಾಡಲು ನಮ್ಮ ಸರ್ಕಾರ ತೆಗೆದುಕೊಂಡಿರುವ ದಿಟ್ಟ ಕ್ರಮ ಇದಾಗಿದೆ ಎಂದು ಹೇಳಿದರು.

ಖಾಸಗಿ ವಲಯದಲ್ಲೂ ನಮ್ಮ ಸರ್ಕಾರ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಿದೆ. ಜಾಗತಿಕ ಹೂಡಿಕೆದಾರರ ಸಮಾವೇಶದಿಂದ ಮೂರುವರೆ ಲಕ್ಷ ಉದ್ಯೋಗಗಳು ಲಭಿಸಲಿವೆ. ಇದರಲ್ಲಿ ಕನ್ನಡಿಗರಿಗೆ ಹೆಚ್ಚಿನ ಪ್ರಾಶಸ್ತ್ಯ ಸಿಗಲಿದೆ ಎಂದು ಭರವಸೆ ಕೊಟ್ಟರು.

ಕನ್ನಡಕ್ಕೆ ಎಲ್ಲ ಹಂತದಲ್ಲೂ ಪ್ರಾಶಸ್ತ್ಯ ಸಿಗಬೇಕು ಎಂಬುದು ನಮ್ಮ ಸರ್ಕಾರದ ಉದ್ದೇಶವಾಗಿದೆ. ಹೀಗಾಗಿಯೇ ಕನ್ನಡ ಭಾಷೆಯನ್ನು ಆಡಳಿತದಲ್ಲಿ ಕಡ್ಡಾಯವಾಗಿ ಜಾರಿಗೊಳಿಸಲು ಅವೇಶನದಲ್ಲಿ ಕಾಯ್ದೆ ಮಂಡಿಸುತ್ತೇವೆ ಎಂದು ಪ್ರಕಟಿಸಿದರು.

ಡಿಸೆಂಬರ್‍ನಲ್ಲಿ ನಡೆಯುವ ಅವೇಶನದಲ್ಲಿ ಕನ್ನಡಕ್ಕೆ ಆದ್ಯತೆ ನೀಡುವ ಕಾನೂನು ಜಾರಿಗೆ ತರಲು ತೀರ್ಮಾನಿಸಿದ್ದೇವೆ. ನವ ಕರ್ನಾಟಕದಿಂದ ನವ ಭಾರತ ನಿರ್ಮಾಣ ಮಾಡೋಣ ಎಂದು ಜನತೆಗೆ ಸಿಎಂ ಕರೆ ಕೊಟ್ಟರು.ಶಿಕ್ಷಣ ಹಾಗೂ ಉದ್ಯೊಗದಲ್ಲಿ ಸಾಕಷ್ಡು ಸಾಧನೆ ಮಾಡಿದ ಕರ್ನಾಟಕ ಮುಂಚೂಣಿ ರಾಜ್ಯವಾಗಿದೆ. ಈಗಾಗಲೇ ಆರೂವರೆ ದಶಕ ಪೂರೈಸಿದ್ದೇವೆ.

ಕನ್ನಡ ನಾಡು ಕಟ್ಟಲು ನನ್ನ ಪಾತ್ರ ಏನು, ನನ್ನ ಜವಾಬ್ದಾರಿ ಏನು ಎಂಬುದನ್ನು ಅರಿತುಕೊಳ್ಳಬೇಕು. ಈ ರಾಜ್ಯೋತ್ಸವದ ಸುಸದಂರ್ಭದಲ್ಲಿ ನಾವೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದರು. ನಮ್ಮ ಹಿರಿಯರು ನಮಗೆ ಸಾಕಷ್ಟು ಬಳುವಳಿ ಕೊಟ್ಟಿದ್ದಾರೆ. ನಾವು ಅದನ್ನು ಉಳಿಸಿಕೊಂಡು ಅಂಕತರಣ ನಮ್ಮ ಗುಣ ಎಲ್ಲರನ್ನು ಒಪ್ಪಿಕೊಳ್ಳುವುದು ನಮ್ಮ ಗುಣಧರ್ಮ, ಉತ್ತಮ ಶಿಕ್ಷಣ, ಆರೋಗ್ಯ, ಉದ್ಯೊಗ, ತಂತ್ರಜ್ಞಾನ, ವಿಜ್ಞಾನ ಜೊತೆಗೆ ಎಲ್ಲ ಮೂಲಭೂತ ಸೌಕರ್ಯ ಇರುವ ಸುಂದರ ನಾಡು ಕಟ್ಟುವ ಸಂಕಲ್ಪ ಮಾಡಬೇಕಿದೆ ಎಂದು ಹೇಳಿದರು.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (01-11-2022)

ಕರ್ನಾಟಕದಲ್ಲಿ 10 ಕೃಷಿ ವಲಯಗಳಿವೆ. ವರ್ಷದ ಎಲ್ಲ ದಿನಗಳಲ್ಲಿ ಕೃಷಿ ಮಾಡಲು ಅವಕಾಶ ಇರುವ ರಾಜ್ಯ ಕರ್ನಾಟಕ, ರಾಜ್ಯದಲ್ಲಿ ಉತ್ತಮ ಮಳೆಯಾಗಿದ್ದು, ಇನ್ನು ಮೂರು ನಾಲ್ಕು ವರ್ಷ ರಾಜ್ಯದಲ್ಲಿ ನೀರಿನ ಸಮಸ್ಯೆ ಇರುವುದಿಲ್ಲ ಎಂದರು. ಪ್ರವಾಹದ ಸಂದರ್ಭದಲ್ಲಿ ಎರಡು ಪಟ್ಟು ಪರಿಹಾರ ನೀಡಿದ್ದೇವೆ. ಒಂದು ವರ್ಷದಲ್ಲಿ ಸುಮಾರು 8 ಸಾವಿರ ಶಾಲಾ ಕೊಠಡಿ ಕಟ್ಟುವ ತೀರ್ಮಾನ ಮಾಡಿದ್ದೇವೆ.

ಈ ನಾಡಿನಲ್ಲಿ ದುಡಿಮೆಗೆ ಅತಿ ಹೆಚ್ಚು ಬೆಲೆ ಇದೆ. ನಮ್ಮ ಸರ್ಕಾರ ದುಡಿಯುವ ವರ್ಗಕ್ಕೆ ಹೆಚ್ಚು ಆದ್ಯತೆ ನೀಡುತ್ತದೆ. ರೈತರ, ಮಕ್ಕಳು ಎಲ್ಲ ಕ್ಷೇತ್ರದಲ್ಲಿ ಸಾಧನೆ ಮಾಡಲು ವಿದ್ಯಾನಿ ಯೋಜನೆ ಜಾರಿಗೆ ತಂದಿದ್ದೇವೆ. ಕೃಷಿ ಕಾರ್ಮಿಕರು, ನೇಕಾರರ ಮಕ್ಕಳು, ಮೀನುಗಾರರ ಮಕ್ಕಳು, ಆಟೊ ಡ್ರೈವರ್ ಮಕ್ಕಳಿಗೆ ವಿದ್ಯಾನಿ ವಿಸ್ತರಿಸಿದ್ದೇವೆ ಎಂದು ವಿವರಿಸಿದರು.

ಮಹಿಳೆಯರ ಸಾಮಥ್ರ್ಯ ಹೆಚ್ಚಿಸುವ ಕೆಲಸ ಮಾಡಿದ್ದೇವೆ. ಪ್ರತಿ ಗ್ರಾಮದಲ್ಲಿ ಸ್ತ್ರೀ ಸಾಮಥ್ರ್ಯ ಯೋಜನೆ ಅಡಿಯಲ್ಲಿ 5 ಲಕ್ಷ ವರೆಗೆ ಸಾಲ ನೀಡುತ್ತಿದ್ದೇವೆ. ಯುವಕರಿಗೆ ಯುವಕ ಸಂಘಗಳ ಸ್ಥಾಪನೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ನಮ್ಮ ಮಕ್ಕಳು ವಿಶ್ವದಲ್ಲಿ ದೊಡ್ಡ ಮಟ್ಟದ ಹೆಸರು ಮಾಡಬೇಕು. ನುಗ್ಗು ನಡೆ ಮುಂದೆ ನುಗ್ಗು ನಡೆ ಮುಂದೆ ಎಂದು ಮುನ್ನಡೆಯಬೇಕು. ಕನ್ನಡ ನಮ್ಮ ಉಸಿರು ಎಂದು ಮುನ್ನಡೆಯೊಣ ನಮ್ಮ ಪ್ರಧಾನಿ ಎಲ್ಲ ಪ್ರಾದೇಶಿಕ ಭಾಷೆಗಳಿಗೆ ಮಾನ್ಯತೆ ನೀಡುತ್ತಾರೆ. ಕನ್ನಡ ನಮ್ಮ ಮಾತೃ ಭಾಷೆ ಅಷ್ಟೇ ಅಲ್ಲ ನಮ್ಮ ರಾಷ್ಟ್ರ ಭಾಷೆಯೂ ಆಗಿದೆ ಎಂದು ಹೇಳಿದರು.

ಈ ನಾಡಲ್ಲಿ ಹುಟ್ಟಬೇಕಾದರೆ ಏಳು ಜನ್ಮದ ಪುಣ್ಯ ಮಾಡಿರಬೇಕು. ಇಲ್ಲಿ ಯಾವುದಕ್ಕೂ ಕೂಡ ಕೊರತೆ ಇಲ್ಲ. ಇಲ್ಲಿಯ ನಿಸರ್ಗ ಎಲ್ಲವೂ ಕೂಡ ಕನ್ನಡ ನಾಡಿಗೆ ದೊರಕಿದೆ. ಕರ್ನಾಟಕ ವನ್ನು ಒಂದು ರಾಜ್ಯವನ್ನಾಗಿ ಮಾಡಿರುವ ಹಿರಿಯನ್ನು ಮರೆಯಲು ನಾವು ಸಾಧ್ಯ ಇಲ್ಲ. ಕನ್ನಡ ಮನಸ್ಸು ಗಳು, ಕನ್ನಡ ನಾಡು ಒಂದಾಗಲು ಕುವೆಂಪು ಕಾರಣ. ಹೋರಾಟದಿಂದ ಬಂದ ಈ ಕನ್ನಡ ನಾಡು. ಸಂಪದ್ಭರಿತ ಕನ್ನಡ ನಾಡು ಭಾರತದ ಭವಿಷ್ಯ ಬರೆಯುವ ಶಕ್ತಿ ಹೊಂದಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಚಿವರಾದ ಬಿ.ಸಿ. ನಾಗೇಶ್, ಸಂಸದ ಪಿ.ಸಿ. ಮೋಹನ್ ಶಾಸಕ ರಿಜ್ವಾನ್ ಅರ್ಷದ್, ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ, ಗೋವಿಂದರಾಜ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಹಾಗೂ ಮತ್ತಿತರರು ಹಾಜರಿದ್ದರು.

Articles You Might Like

Share This Article