ಹೈದ್ರಾಬಾದ್, ಜ.12- ಕೊರೊನಾ ಲಸಿಕಾ ಕೇಂದ್ರದಿಂದ ಕೋವಿಶೀಲ್ಡ್ ಹಾಗೂ ಕೋವಾಕ್ಸಿನ್ ಲಸಿಕೆಗಳನ್ನು ದೋಚಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಮಿರ್‍ಚೌಕ್ ಠಾಣೆಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಮಿರ್‍ಚೌಕ್‍ನ ನಿವಾಸಿಗಳಾದ ಜವೇದ್‍ಖಾನ್ ಮತ್ತು ಗೌಸ್ ಪಾಷಾ ಎಂದು ಗುರುತಿಸಲಾಗಿದೆ.
ಆರೋಪಿಗಳು ಜನವರಿ 9 ರಂದು ಜಮಬಾಗ್‍ನ ಯುಪಿಎಚ್‍ಸಿ ಆರೋಗ್ಯ ಕೇಂದ್ರದ ಒಳಗೆ ನುಗ್ಗಿ ಅಲ್ಲಿದ್ದ 24 ಕೋವಿಶೀಲ್ಡ್ ಬಾಟಲುಗಳು ಹಾಗೂ 17 ಕೋವಾಕ್ಸಿನ್ ಬಾಟಲ್‍ಗಳನ್ನು ದೋಚಿದ್ದರು. ಮನೆ ಮನೆಗೆ ಲಸಿಕೆ ನೀಡುವ ಅಂಗವಾಗಿ ಈ ಆರೋಗ್ಯ ಕೇಂದ್ರದಲ್ಲಿ 340 ಡೋಸ್ ಕೋವಿಶೀಲ್ಡ್ ಹಾಗೂ 270 ಡೋಸ್ ಕೋವಾಕ್ಸಿನ್ ಬಾಟಲ್‍ಗಳನ್ನು ಶೇಖರಿಸಿಡಲಾಗಿತ್ತು.
ಆರೋಪಿಗಳು ಕೋವಿಶೀಲ್ಡ್ ಹಾಗೂ ಕೋವಾಕ್ಸಿನ್ ಲಸಿಕೆ ಬಾಟಲಿಗಳನ್ನು ದೋಚಿದ್ದಲ್ಲದೆ ಲಸಿಕೆ ಅಭಿಯಾನಕ್ಕೆ ಬಳಸುತ್ತಿದ್ದ ಆಟೋ ರಿಕ್ಷಾದ ಟೈರ್‍ಗಳನ್ನು ಕೂಡ ಕಳಚಿಕೊಂಡು ಪರಾರಿಯಾಗಿದ್ದರು.
ಯುಪಿಎಚ್‍ಸಿ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಮಿರ್‍ಚೌಕ್ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿ ಅವರಿಂದ ಲಸಿಕೆ ಬಾಟಲುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳಾದ ಜವೇದ್‍ಖಾನ್ ಮತ್ತು ಗೌಸ್ ಪಾಷಾ ಅವರು ಈ ಹಿಂದೆಯೂ ಹಲವು ಅಪರಾಧ ಕೃತ್ಯಗಳಲ್ಲಿ ಪಾಲ್ಗೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
