ಕೋಲ್ಕತ್ತಾ,ಫೆ.13- ರೈಲ್ವೆ ಹಳಿ ಮಾರ್ಗದಲ್ಲೇ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ ರೈಲು ಡಿಕ್ಕಿ ಹೊಡೆದು ಇಬ್ಬರು ಸಾವನ್ನಪ್ಪಿರುವ ಘಟನೆ ಪಶ್ಚಿಮ ಬಂಗಾಳದ ಪಶ್ಚಿಮ ಮೇದಿನಿಪುರದಲ್ಲಿ ಇಂದು ನಡೆದಿದೆ. ಮಿಥುನ್ ಖಾನ್ (36) ಮತ್ತು ಅಬ್ದುಲ್ ಗೇನ್ (32) ಸೆಲ್ಫಿ ಗೀಳಿಗೆ ಪ್ರಾಣ ಕಳೆದಕೊಂಡವರು.
ಈ ಇಬ್ಬರು ತಮ್ಮ ಸ್ನೇಹಿತರೊಂದಿಗೆ ಮೇದಿನಿಪುರ ಪಟ್ಟಣದ ಹೊರವಲಯದಲ್ಲಿರುವ ರಂಗಮತಿ ಪ್ರದೇಶದ ರೈಲ್ವೆ ಸೇತುವೆ ಸಮೀಪದ ಕಂಗಸಾವತಿ ನದಿಯ ದಡದಲ್ಲಿರುವ ವಿಹಾರ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ವೇಳೆ ಸ್ನೇಹಿತರೆಲ್ಲರೂ ಸೆಲಿ ತೆಗೆದುಕೊಳ್ಳುತ್ತಿದ್ದರು. ಆ ಮಾರ್ಗದಲ್ಲಿ ಮೇದಿನಿಪುರದಿಂದ ಹೌರಾಕ್ಕೆ ಸ್ಥಳೀಯ ರೈಲು ಬರುತ್ತಿತ್ತು. ಚಾಲಕ ಪದೇ ಪದೇ ಹಾರ್ನ್ ಮಾಡುತ್ತಿದ್ದರೂ ಯುವಕರು ಸೆಲ್ಫಿ ಯಲ್ಲೇ ತಲೀನರಾಗಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ರೈಲು ಡಿಕ್ಕಿ ಹೊಡೆದ ರಭಸಕ್ಕೆ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇತರ ಸ್ನೇಹಿತರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ರೈಲ್ವೆ ಮಾರ್ಗದ ಈ ಭಾಗದಲ್ಲಿ ಎಲ್ಲರಿಗೂ ಹತ್ತುವುದನ್ನು ನಿಷೇಧಿಸಲಾಗಿದೆ. ನಿಷೇಧದ ನಡುವೆಯೂ ಹಲವರು ರೈಲು ಹಳಿಗಳ ಮೇಲೆ ಮಲಗಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ. ಹಾಗಾಗಿ ಇಂತಹ ಅವಘಢಗಳು ಸಂಭವಿಸುತ್ತಿವೆ ಎಂದು ಪ್ರಾಥಮಿಕ ತನಿಖೆಯ ನಂತರ ರೈಲ್ವೇ ಹಿರಿಯ ಸೆಕ್ಷನ್ ಇಂಜಿನಿಯರ್ ಬಿಸ್ವಜಿತ್ ಬಾಲಾ ತಿಳಿಸಿದ್ದಾರೆ.
