ಪಾಟ್ನಾ, ಆ.24- ಮುಖ್ಯಮಂತ್ರಿ ನಿತೀಶ್ ಕುಮಾರ್ ವಿಶ್ವಾಸ ಮತಯಾಚನೆಯ ದಿನದಂತೆ ಮಹಾಘಟ್ ಬಂಧನ್‍ನ ಪ್ರಮುಖ ಪಕ್ಷವಾದ ಆರ್‌ಜೆಡಿ ನಾಯಕರ ಮೇಲೆ ಸಿಬಿಐ ದಾಳಿ ನಡೆಸಿದ್ದು, ಶೋಧ ಕಾರ್ಯಾಚರಣೆ ನಡೆಸಿದೆ.
ಲಾಲು ಪ್ರಸಾದ್ ಯಾದವ್ ಅವರು ಕೇಂದ್ರ ರೈಲ್ವೆ ಸಚಿವರಾಗಿದ್ದ 2008-09ರ ಅವಧಿಯಲ್ಲಿ ಉದ್ಯೋಗಕ್ಕಾಗಿ ಭೂಮಿ ಎಂಬ ಹಗರಣ ನಡೆದಿತ್ತು ಎಂಬ ಆರೋಪಗಳಿವೆ. ಇದಕ್ಕಾಗಿ ದೂರು ದಾಖಲಿಸಿರುವ ಸಿಬಿಐ, 2021ರ ಸೆಪ್ಟಂಬರ್ 23ರಂದು ಪ್ರಾಥಮಿಕ ತನಿಖೆ ನಡೆಸಿತ್ತು. ಮುಂದುವರೆದ ತನಿಖೆಯ ಭಾಗವಾಗಿ ಇಂದು ಲಾಲು ಪ್ರಸಾದ್ ಯಾದವ್ ಅವರ ಆಪ್ತರ ಮೇಲೆ ದಾಳಿ ನಡೆಸಲಾಗಿದೆ.
ಇಂದು ಬೆಳಗ್ಗೆ ಆರ್‌ಜೆಡಿಯ ರಾಜ್ಯಸಭಾ ಸದಸ್ಯ ಅಹ್ಮದ್ ಅಶಾಕ್ ಕರೀಂ, ಬಿಹಾರದ ವಿಧಾನ ಪರಿಷತ್ ಸದಸ್ಯ ಸುನಿಲ್ ಸಿಂಗ್, ಫಯಾಜ್ ಅಹಮ್ಮದ್, ವಿಧಾನ ಪರಿಷತ್‍ನ ಮಾಜಿ ಸದಸ್ಯ ಸುಬೋದ್ ರಾಯ್ ಅವರಿಗೆ ಸೇರಿದ ಮನೆ, ಕಚೇರಿ ಹಾಗೂ ಇತರ ಸ್ಥಳಗಳಲ್ಲಿ ಸಿಬಿಐ ತಂಡಗಳು ಶೋಧ ನಡೆಸಿವೆ.
ಹಗರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರ ಪತ್ನಿ ಹಾಗೂ ಮಾಜಿ ಮುಖ್ಯಮಂತ್ರಿ ರಾಬ್ಡಿದೇವಿ, ಪುತ್ರಿಯರಾದ ಭಾರತಿ, ಹೇಮಾ ಯಾದವ್ ಹಾಗೂ ಇತರ 12 ಮಂದಿ ವಿರುದ್ಧ ಸಿಬಿಐ ಆರೋಪ ಪಟ್ಟಿ ದಾಖಲಿಸಿದೆ. ರೈಲ್ವೆ ವಲಯಗಳಾದ ಮುಂಬೈಮ ಜಬ್ಲಾಪುರ್, ಕೊಲ್ಕತ್ತಾ, ಹಜಿಪುರ್ ಸೇರಿದಂತೆ ಇತರೆಡೆಗಳಲ್ಲಿ ಉದ್ಯೋಗಕ್ಕಾಗಿ ಭೂಮಿ ಎಂಬ ಹಗರಣ ನಡೆದಿರುವುದಾಗಿ ಆರೋಪಿಸಲಾಗಿದೆ.
ರೈಲ್ವೆ ಇಲಾಖೆಯಲ್ಲಿ ಡಿ ದರ್ಜೆಯ ಉದ್ಯೋಗಕ್ಕೆ ನೇಮಕವಾದ ಅಭ್ಯರ್ಥಿಗಳು ತಮ್ಮ ಅಥವಾ ಸಂಬಂಧಿಕರ ಹೆಸರಿನಲ್ಲಿ ಇರುವ ಜಮೀನುಗಳನ್ನು ತಕ್ಷಣವೇ ಲಾಲು ಕುಟುಂಬ ಮತ್ತು ಅವರ ಆಪ್ತರ ಹೆಸರಿಗೆ ಬರೆದು ಕೊಡಬೇಕಿತ್ತು ಎಂದು ಹೇಳಲಾಗಿದೆ.
ಮೂರು ಮಾರಾಟ ಕರಾರುಗಳ ಜೊತೆಗೆ ವ್ಯವಹಾರ ನಡೆದಿತ್ತು. ಒಂದು ರಾಬ್ಡಿ ದೇವಿ ಹೆಸರಿಗೆ, ಮತ್ತೊಂದು ಮಿಸ್ಸಾ ಭಾರತಿ ಮತ್ತು ಹೇಮಾ ಅವರ ಹೆಸರಿಗೆ ಉಡುಗೊರೆ ಕರಾರು ಮಾಡಲಾಗಿತ್ತು ಎಂದು ಸಿಬಿಐ ಆರೋಪಿಸಿದೆ. ಇದು ಉದ್ದೇಶಪೂರ್ವಕವಾಗಿ ದಾಳಿ ಎಂದು ಆರ್‌ಜೆಡಿ ನಾಯಕರು ಆರೋಪಿಸಿದ್ದಾರೆ. ನಮ್ಮ ಶಾಸಕರನ್ನು ಭಯಪಡಿಸಲು ಬಿಜೆಪಿ ಪ್ರಯತ್ನ ನಡೆಸಿದೆ ಎಂದು ಕಿಡಿಕಾರಿದ್ದಾರೆ.
ಬಿಹಾರದಲ್ಲಿ ಅಕಾರ ಕೈತಪ್ಪಿದ ಬಿಜೆಪಿ ತೀವ್ರ ಆಕ್ರೋಶಗೊಂಡಿರುವ ಕಾರಣ ಸಿಬಿಐ ಮತ್ತು ಇತರ ಕೇಂದ್ರೀಯ ಸಂಸ್ಥೆಗಳು ದಾಳಿಗೆ ಸಿದ್ಧತೆ ನಡೆಸುತ್ತಿವೆ ಎಂದು ಆರ್‍ಜೆಡಿ ವಕ್ತಾರರು ನಿನ್ನೆ ರಾತ್ರಿ ಟ್ವೀಟ್ ಮಾಡಿದ್ದರು. ಆರೋಪಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ಅಶೋಕ್ ಸಿನ್ಹಾ, ಕೆಲವು ಕುಖ್ಯಾತ ರಾಜಕಾರಣಿಗಳ ವಿರುದ್ಧ ಈ ದಾಳಿಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದರು. ಆರ್‌ಜೆಡಿ ಕಾರ್ಯಕರ್ತರು ಕೂಡ ಇಂದು ಸಂತೋಷವಾಗಿದ್ದಾರೆ.
ಯಾದವ್ ಮತ್ತು ಅವರ ಕುಟುಂಬ ಸದಸ್ಯರು ರೈಲ್ವೇ ಉದ್ಯೋಗಗಳನ್ನು ನೀಡುವುದಕ್ಕಾಗಿ ಭೂಮಿ ಮತ್ತು ಆಸ್ತಿಗಳನ್ನು ಲಂಚವಾಗಿ ಪಡೆದಿದ್ದಾರೆ ಎಂದು ಸಿಬಿಐ ಪ್ರಕರಣದಲ್ಲಿ ಆರೋಪಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ನಲ್ಲಿ ಸಿಬಿಐ ಲಾಲು ಯಾದವ್ ಅವರ ಸಹಾಯಕ ಭೋಲಾ ಯಾದವ್ ಅವರನ್ನು ಬಂಧಿಸಿತ್ತು. ಇತ್ತೀಚಿನ ದಾಳಿಗಳು, ಭೋಲಾ ಯಾದವ್ ಅವರ ವಿಚಾರಣೆಯ ಸಮಯದಲ್ಲಿ ಬೆಳಕಿಗೆ ಬಂದ ಮಾಹಿತಿಯನ್ನು ಆಧರಿಸಿವೆ ಎಂದು ಸಿಬಿಐ ಮೂಲಗಳು ತಿಳಿಸಿವೆ.
ಜೆಡಿಯು ಪಕ್ಷ ಬಿಜೆಪಿಯಿಂದ ಬೇರ್ಪಟ್ಟು ಆರ್‍ಜೆಡಿಯೊಂದಿಗೆ ಕೈಜೋಡಿಸಿ ಸರ್ಕಾರ ರಚಿಸಿ ಎರಡು ವಾರಗಳ ನಂತರ ಸಿಎಂ ನಿತೀಶ್ ಕುಮಾರ್ ವಿಧಾನಸಭೆಯಲ್ಲಿ ಬಹುಮತದ ಪರೀಕ್ಷೆಯ ದಿನದಂದೇ ಈ ದಾಳಿ ನಡೆದಿರುವುದು ಕುತೂಹಲ ಕೆರಳಿಸಿದೆ.