ಶ್ರೀಕೃಷ್ಣ ಜನ್ಮಾಷ್ಟಮಿ ವೇಳೆ ಕಾಲ್ತುಳಿತ, ಇಬ್ಬರ ಸಾವು

Social Share

ಮಥುರಾ,ಆ.21-ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಸಂದರ್ಭದಲ್ಲಿ ನೂಕುನುಗ್ಗಲು, ಕಾಲ್ತುಳಿತ ಉಂಟಾಗಿ ಇಬ್ಬರು ಭಕ್ತರು ಸಾವನ್ನಪ್ಪಿ, ಹಲವರು ಅಸ್ವಸ್ಥರಾಗಿ ಆಸ್ಪತ್ರೆ ಸೇರಿರುವ ಘಟನೆ ಮಥುರಾದಲ್ಲಿ ಸಂಭವಿಸಿದೆ. ಮೃತರನ್ನು ನೋಯ್ಡಾ ನಿವಾಸಿ ನಿರ್ಮಲಾದೇವಿ, ಜಬಲ್‍ಪುರ ನಿವಾಸಿ ರಾಜ್‍ಕುಮಾರ್ ಎಂದು ಗುರುತಿಸಲಾಗಿದೆ.

ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಕೃಷ್ಣ ಜನ್ಮಸ್ಥಳ ಉತ್ತರಪ್ರದೇಶದ ಮಥುರಾದಲ್ಲಿ ನಿನ್ನೆ ವಿಜೃಂಭಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಿನ್ನೆ ಮಥುರಾದಲ್ಲಿ ಭಾರೀ ಸಡಗರ ಸಂಭ್ರಮ ಮನೆ ಮಾಡಿತ್ತು. ದೇಗುಲಕ್ಕೆ ದೇಶ-ವಿದೇಶಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಕಾಲಿಡುವುದಕ್ಕೂ ಸಹ ಜಾಗವಿಲ್ಲದಂತೆ ಭಕ್ತರು ನೆರೆದಿದ್ದರು. ಪೂಜಾ ಕಾರ್ಯ ನಡೆಯುವವರೆಗೂ ಎಲ್ಲವೂ ಚೆನ್ನಾಗಿತ್ತು.

ಆದರೆ ಮಂಗಳಾರತಿ ವೇಳೆ ಇದ್ದಕ್ಕಿದ್ದಂತೆ ಜನ ನುಗ್ಗಿದ್ದರಿಂದ ಕಾಲ್ತುಳಿತ ಉಂಟಾದ ಹಿನ್ನೆಲೆಯಲ್ಲಿ ದೇವಾಲಯದ ನಿರ್ಗಮನ ದ್ವಾರದಲ್ಲಿ ಜನರ ಮಧ್ಯೆ ಸಿಲುಕಿ ಇಬ್ಬರು ಸಾವನ್ನಪಿರುವ ದುರ್ಘಟನೆ ಸಂಭವಿಸಿತು. ಅಪಾರ ಜನ ಸೇರಿದ್ದರಿಂದ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಯಿತು. ಈ ಸಂದರ್ಭದಲ್ಲಿ 10 ಮಂದಿ ಅಸ್ವಸ್ಥರಾದರು. ಇವರನ್ನು ಹರಸಾಹಸಪಟ್ಟು ಪೊಲೀಸರು ಆಸ್ಪತ್ರೆಗೆ ರವಾನಿಸಿದರು.

ಘಟನೆ ನಂತರ ದೇವಾಲಯದೊಳಗೆ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಯಿತು. ಘಟನೆಗೆ ಆಡಳಿತ ಮಂಡಳಿಯ ವೈಫಲ್ಯ ಕಾರಣ ಎಂದು ಹೇಳಲಾಗಿದೆ. ಶ್ರೀಕೃಷ್ಣ ಜನ್ಮಾಷ್ಟಮಿಗೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ ಎಂದು ಗೊತ್ತಿದ್ದರೂ ದೇವರ ದರ್ಶನಕ್ಕೆ ಸೂಕ್ತ ವ್ಯವಸ್ಥೆ ಮಾಡಿರಲಿಲ್ಲ. ನಿನ್ನೆ ಮುಂಬೈನಲ್ಲಿ ಮೊಸರುಕುಡಿಕೆ ಒಡೆಯುವ ವೇಳೆ ಸಂಭವಿಸಿದ ದುರಂತದಲ್ಲಿ 70ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

Articles You Might Like

Share This Article