ಮರದ ಕೊಂಬೆ ಬಿದ್ದು 2 ವರ್ಷದಿಂದ ಕೋಮಾದಲ್ಲಿದ್ದ ಬಾಲಕಿ ರಿಚೆಲ್ ಸಾವು

Social Share

ಬೆಂಗಳೂರು,ಫೆ.10- ತಂದೆ ಜೊತೆ ಬೈಕ್‍ನಲ್ಲಿ ತೆರಳುತ್ತಿದ್ದಾಗ ಒಣ ಮರದ ಕೊಂಬೆ ಬಿದ್ದು ತೀವ್ರವಾಗಿ ಗಾಯಗೊಂಡು ಕಳೆದ ಎರಡು ವರ್ಷಗಳಿಂದ ಕೋಮದಲ್ಲಿದ್ದ ರಿಚೆಲ್ ಪ್ರಿಶಾ(10) ಬಾಲಕಿ ಕೊನೆಗೂ ಬದುಕುಳಿಯಲಿಲ್ಲ. ತನ್ನದಲ್ಲದ ತಪ್ಪಿಗೆ ಗಂಭೀರವಾಗಿ ಗಾಯಗೊಂಡು ಸಾವುಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಬಾಲಕಿ ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.
ತಂದೆ ಜೊತೆ ಬೈಕ್‍ನಲ್ಲಿ ತೆರಳುತ್ತಿದ್ದಾಗ 2020 ಮಾರ್ಚ್ 11ನೇ ತಾರೀಖು ಬೆಳಗ್ಗೆ 8.45ರಲ್ಲಿ ರಾಮಮೂರ್ತಿನಗರದ ಕೌಡಲಹಳ್ಳಿ ಸಮೀಪ ಒಣಮರದ ಕೊಂಬೆ ಬಿದ್ದು ಈಕೆ ತಲೆಗೆ ಗಂಭೀರವಾಗಿ ಗಾಯವಾಗಿತ್ತು. ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ ಎರಡು ವರ್ಷಗಳಿಂದ ಸತತ ಚಿಕಿತ್ಸೆ ನೀಡಿದರೂ ಬಾಲಕಿ ಬದುಕುಳಿಯಲಿಲ್ಲ.
ಒಣ ಕೊಂಬೆಗಳನ್ನು ತೆರವು ಮಾಡದೆ ಬಿಬಿಎಂಪಿ ನಿರ್ಲಕ್ಷ್ಯ ತೋರಿದ ಕಾರಣ ಬಾಲಕಿಯ ಜೀವ ಬಲಿಯಾಯಿತು. ಕೌಡ್ಲಳ್ಳಿ ಭಾಗದಲ್ಲಿ ಮರಗಳು ಒಣಗಿವೆ. ಇವುಗಳನ್ನು ತೆರವುಗೊಳಿಸಿ ಎಂದು ಬಿಬಿಎಂಪಿ ಅಕಾರಿಗಳಿಗೆ ಮನವಿ ಮಾಡಿದ್ದರೂ ಅದನ್ನು ತೆರವು ಮಾಡಿರಲಿಲ್ಲ.ಈ ಘಟನೆಗೆ  ಬಿಬಿಎಂಪಿಯೇ ಕಾರಣ ಎಂದು ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಅಕಾರಿಗಳ ವಿರುದ್ಧ ಸ್ಥಳೀಯರು ದೂರು ದಾಖಲಿಸಿದ್ದರು. ರಾಮಮೂರ್ತಿನಗರ ಪೆÇಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು.
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಹಲವು ರಾಜಕೀಯ ವ್ಯಕ್ತಿಗಳು ಆಸ್ಪತ್ರೆಗೆ ತೆರಳಿ ಬಾಲಕಿಯ ಆರೋಗ್ಯ ವಿಚಾರಿಸಿದ್ದರು.
ಕಿಚ್ಚಾ ಸುದೀಪ್ ಕೂಡ ಈ ಘಟನೆಯನ್ನು ಖಂಡಿಸಿದ್ದರಲ್ಲದೆ ವಿಡಿಯೋ ಕಾಲ್ ಮಾಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದರು. ದುರಂತರವೆಂದರೆ ಬಾಲಕಿ ಸಾವನ್ನಪ್ಪಿದ್ದಾಳೆ.
ಸೂಕ್ತ ಪರಿಹಾರ: ಘಟನೆ ದುರದೃಷ್ಟಕರ ಎಂದು ಹೇಳಿರುವ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತ ಅವರು, ಬಾಲಕಿಗೆ ಚಿಕಿತ್ಸಾ ವೆಚ್ಚವನ್ನು ಭರಿಸಲಿದೆ. ಘಟನೆ ನಡೆದ ಸಂದರ್ಭದಲ್ಲಿ ಯಾವ ರೀತಿಯ ಪರಿಹಾರ ಘೋಷಣೆ ಮಾಡಲಾಗಿದೆ ಎಂಬುದನ್ನು ಪರಿಶೀಲಿಸಿ ಸೂಕ್ತ ಪರಿಹಾರ ಒದಗಿಸಲಾಗುವುದು ಎಂಬ ಭರವಸೆ ನೀಡಿದರು. ಇಂತಹ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಲಾಗುವುದು ಎಂದು ಅವರು ತಿಳಿಸಿದರು.

Articles You Might Like

Share This Article