ಇಸ್ಲಾಮಾಬಾದ್, ಜ.24- ದೇಶದ ಜಲಪ್ರದೇಶದೊಳಗೆ ಪ್ರವೇಶಿಸಿದ ಆರೋಪದ ಮೇಲೆ ಪಾಕಿಸ್ತಾನದಿಂದ ಬಂಧಿಸಲ್ಪಟ್ಟ 20 ಭಾರತೀಯ ಮೀನುಗಾರರನ್ನು ಸೋಮವಾರ ವಾಘಾ ಗಡಿಯಲ್ಲಿ ಭಾರತಕ್ಕೆ ಹಸ್ತಾಂತರಿಸಲಾಗುವುದು ಎಂದು ಜೈಲಿನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕರಾಚಿಯ ಲಾಂಧಿ ಜೈಲಿನಲ್ಲಿದ್ದ ಮೀನುಗಾರರನ್ನು ಮಾನವೀಯ ನೆಲೆಯಲ್ಲಿ ಭಾನುವಾರ ಬಿಡುಗಡೆ ಮಾಡಲಾಗಿದೆ. ಸೌಹಾರ್ದತೆಯ ಸೂಚಕವಾಗಿ ಈ 20 ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡುವುದರೊಂದಿಗೆ ಇದೀಗ 568 ಭಾರತೀಯ ಮೀನುಗಾರರು ಜೈಲಿನಲ್ಲಿ ಉಳಿದಿದ್ದಾರೆ ಎಂದು ಉಪ ಪೊಲೀಸ್ ಅಧೀಕ್ಷಕ ಅಜೀಮ್ ಥೆಬೋ ಹೇಳಿದ್ದಾರೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.
ಪಾಕಿಸ್ತಾನದ ಜಲಪ್ರದೇಶವನ್ನು ಅಕ್ರಮವಾಗಿ ಪ್ರವೇಶಿಸಿ ಮತ್ತು ಅನುಮತಿಯಿಲ್ಲದೆ ಮೀನುಗಾರಿಕೆ ನಡೆಸುತ್ತಿದ್ದಕ್ಕಾಗಿ ಬಂಧಿತರಾಗಿದ್ದರು. ನಿನ್ನೆ ಬಿಡುಗಡೆಯಾದ ಅವರನ್ನು ಈಧಿ ಫೌಂಡೇಶನ್ ರಸ್ತೆಯ ಮೂಲಕ ಲಾಹೋರ್‌ಗೆ ಕರೆದೊಯ್ಯಿತು.
ಲಾಭರಹಿತ ಸಮಾಜ ಕಲ್ಯಾಣ ಸಂಸ್ಥೆಯಾದ ಈಧಿ ಫೌಂಡೇಶನ್‌ನ ವಕ್ತಾರರು, ಲಾಹೋರ್‌ಗೆ ಅವರ ಪ್ರಯಾಣದ ವೆಚ್ಚವನ್ನು ಭರಿಸಲಿದ್ದು, ಅಲ್ಲಿ ಅವರನ್ನು ಭಾರತದ ಗಡಿ ಭದ್ರತಾ ಪಡೆಗೆ ಹಸ್ತಾಂತರಿಸಲಾಗುವುದು ಎಂದು ಹೇಳಿದರು.
ಈ ವರ್ಷದ ಆರಂಭದಲ್ಲಿ ಭಾರತ ಮತ್ತು ಪಾಕಿಸ್ತಾನ ವಿನಿಮಯ ಮಾಡಿಕೊಂಡ ಕೈದಿಗಳ ಪಟ್ಟಿಯ ಪ್ರಕಾರ, 51 ನಾಗರಿಕರು ಮತ್ತು 577 ಮೀನುಗಾರರು ಸೇರಿದಂತೆ ಕನಿಷ್ಠ 628 ಭಾರತೀಯ ಕೈದಿಗಳನ್ನು ಪಾಕಿಸ್ತಾನದಲ್ಲಿ ಇರಿಸಲಾಗಿತ್ತು. ಭಾರತ ಸರ್ಕಾರವು 282 ನಾಗರಿಕರು ಮತ್ತು 73 ಮೀನುಗಾರರು ಸೇರಿದಂತೆ 355 ಪಾಕಿಸ್ತಾನಿಯರನ್ನು ಬಂಧಿಸಿತ್ತು.
ಉಭಯ ದೇಶಗಳ ನಡುವಿನ ಅರಬ್ಬಿ ಸಮುದ್ರದ ಕರಾವಳಿ ಪ್ರದೇಶದಲ್ಲಿ ಸ್ಪಷ್ಟವಾದ ಗಡಿರೇಖೆ ಇಲ್ಲದಿರುವುದರಿಂದ ಆಧುನಿಕ ನೌಕಾಯಾನ ಉಪಕರಣಗಳನ್ನು ಹೊಂದಿರದ ಮೀನುಗಾರರು ತಪ್ಪಾಗಿ ಕೆಂಪು ಗೆರೆಗಳನ್ನು ದಾಟಿ ಜೈಲು ಪಾಲಾಗುತ್ತಾರೆ ಎಂದು ಪಾಕಿಸ್ತಾನ್ ಮೀನುಗಾರರ ವೇದಿಕೆ ಎನ್‌ಜಿಒ ಹೇಳಿದೆ.
