200 ಪರ್ಸೆಂಟ್ ಬದುಕಿಸುತ್ತೇವೆ ಎಂದಿದ್ದ ವೈದ್ಯರು, 43 ಲಕ್ಷ ಖರ್ಚು ಮಾಡಿದರೂ ಬದುಕಲಿಲ್ಲ ಮಹಿಳೆ..!

Oparation-01

ಮುಂಬೈ, ಜ.8-ತಜ್ಞ ವೈದ್ಯರು ಶೇಕಡ 200ರಷ್ಟು ಸುರಕ್ಷಿತ ಎಂದು ಭರವಸೆ ನೀಡಿದ ಬಳಿಕ 43 ಲಕ್ಷ ರೂ.ಗಳನ್ನು ಖರ್ಚು ಮಾಡಿದರೂ ಶಸ್ತ್ರಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಮೃತಪಟ್ಟ ಘಟನೆ ಮುಂಬೈನಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಮುಂಬೈನ ಪ್ರತಿಷ್ಠಿತ ಹಿಂದುಜಾ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, 56 ವರ್ಷದ ಮಂಜು ಮೃತಪಟ್ಟ ನತದೃಷ್ಟೆ.   ಖಾಸಗಿ ಕಂಪನಿಯ ಉದ್ಯೋಗಿ ಮಿಥುಲಾಲ್ ಬಾಪ್ನಾ ಎಂಬುವರು ತನ್ನ ಪತ್ನಿಯ ಚಿಕಿತ್ಸೆಗಾಗಿ 43 ಲಕ್ಷ ರೂ.ಗಳನ್ನು ಕಷ್ಟಪಟ್ಟು ಹೊಂದಿಸಿ ಚಿಕಿತ್ಸೆಗಾಗಿ ಧಾರಾಳವಾಗಿ ವ್ಯಯಿಸಿದ್ದರು. ಆದರೆ ತಮ್ಮ ಮಡದಿಯ ಜೀವ ಉಳಿಸಿಕೊಳ್ಳಲು ವಿಫಲಾಗಿದ್ದಾರೆ. ಈ ಸಂಬಂಧ ಅವರು ಮಹಾರಾಷ್ಟ್ರ ವೈದ್ಯಕೀಯ ಮಂಡಳಿ(ಎಂಎಂಎ)ಗೆ ದೂರು ನೀಡಿದ್ದಾರೆ.

ಟ್ರಾನ್ಸ್ ಕೆಥೆಟರ್ ಮಿಟ್ರಲ್ ವಾಲ್ವ್ ದೋಷ ಸರಿಪಡಿಸುವ ಚಿಕಿತ್ಸೆ ಶೇಕಡ 200ರಷ್ಟು ಸುರಕ್ಷಿತ. ಶಸ್ತ್ರಚಿಕಿತ್ಸೆ ನಂತರ ಐದಾರು ದಿನಗಳಲ್ಲಿ ಮನೆಗೆ ವಾಪಸ್ ಕರೆದುಕೊಂಡು ಹೋಗಬಹುದು ಎಂದು ನುರಿತ ವೈದ್ಯರು ಆಶ್ವಾಸನೆ ಕೊಟ್ಟಿದ್ದರು.   ಆದರೆ ಶಸ್ತ್ರಕ್ರಿಯೆ ನಂತರ ಎರಡು ತಿಂಗಳ ಬಳಿಕವೂ ಕೋಮಾ ಸ್ಥಿತಿಯಲ್ಲೇ ಮನೆಗೆ ಕರೆದುಕೊಂಡು ಹೋಗುವಂತೆ ವೈದ್ಯರು ಸೂಚಿಸಿದ್ದರು. ಅದರಂತೆ ಡಿ.19ರಂದು ಆಸ್ಪತ್ರೆಯಿಂದ ಮನೆಗೆ ಕರೆದೊಯ್ಯುತ್ತಿದ್ದಾಗ ಆಂಬ್ಯುಲೆನ್ಸ್‍ನಲ್ಲೇ ಮಂಜು ಕೊನೆಯುಸಿರೆಳೆದರು ಎಂದು ಅವರ ಪತಿ ದೂರು ನೀಡಿದ್ದಾರೆ.

Sri Raghav

Admin