ಅತಿವೃಷ್ಟಿ-ಪ್ರವಾಹದಿಂದ ಹಾನಿಗೀಡಾದ ರಸ್ತೆ ದುರಸ್ತಿಗೆ 200 ಕೋಟಿ ರೂ. ಬಿಡುಗಡೆ

Social Share

ಬೆಂಗಳೂರು,ಜು.19- ಅತಿವೃಷ್ಟಿ ಹಾಗೂ ಪ್ರವಾಹದಿಂದ ಹಾನಿಗೀಡಾದ ರಸ್ತೆ ದುರಸ್ತಿಗೆ ತುರ್ತಾಗಿ 200 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ತಿಳಿಸಿದರು. ಅತಿವೃಷ್ಟಿ ಹಾಗೂ ಪ್ರವಾಹದಿಂದ ರಸ್ತೆ ಹಾನಿಗೀಡಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಲೋಕೋಪಯೋಗಿ, ರಾಷ್ಟ್ರೀಯ ಹೆದ್ದಾರಿ, ರಾಷ್ಟ್ರೀಯ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯವನ್ನು ತಿಳಿಸಿದರು.

ಕೊಡಗು, ಹಾಸನ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳು ವಚ್ರ್ಯುವಲ್ ಮೂಲಕ ಸಭೆಯಲ್ಲಿ ಪಾಲ್ಗೊಂಡು ಆಯಾ ಜಿಲ್ಲೆಗಳ ಸಮಸ್ಯೆಗಳನ್ನು ಹೇಳಿದ್ದಾರೆ. ಮಳೆ ಹಾಗೂ ಪ್ರವಾಹದಿಂದ ಹಾನಿಗೀಡಾಗಿರುವ ರಸ್ತೆ, ಸೇತುವೆಗಳನ್ನು ಸರಿಪಡಿಸಲು 750 ಕೋಟಿ ರೂ. ವೆಚ್ಚವಾಗಲಿದೆ. ನಾಳೆಯಿಂದಲೇ ಹಾನಿಗೀಡಾಗಿರುವ ರಸ್ತೆಗಳ ದುರಸ್ತಿ ಕಾರ್ಯವನ್ನು ಪ್ರಾರಂಭಿಸಲಾಗುವುದು.

ಮೇ ಮತ್ತು ಜುಲೈ ತಿಂಗಳಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾದ ಪರಿಣಾಮ 141 ಕಿ.ಮೀ ರಾಜ್ಯ ಹೆದ್ದಾರಿ, 924 ಕಿ.ಮೀ ಜಿಲ್ಲಾ ಮುಖ್ಯರಸ್ತೆಗಳು, 357 ಅಡ್ಡಮೋರಿ ಮತ್ತು ಸಣ್ಣ ಸೇತುವೆಗಳು ಹಾನಿಗೀಡಾಗಿವೆ. 2019ರಿಂದಲೂ ನಿರಂತರವಾಗಿ ಮಳೆಯಿಂದ ರಸ್ತೆಗಳು ಹಾಳಾಗುತ್ತಿವೆ.

ಕಳೆದ ನವೆಂಬರ್‍ನಲ್ಲಿ ಬಿದ್ದ ಮಳೆಯಿಂದಾಗಿ ಹಾನಿಗೀಡಾದ ರಸ್ತೆಗಳನ್ನು ಸರಿಪಡಿಸಲು 160 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, 617 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ ಎಂದರು.

ಶಿರಾಡಿ ಘಾಟ್‍ನಲ್ಲಿ ಭೂ ಕುಸಿತವಾಗಿ ಸಂಚಾರಕ್ಕೆ ತೊಂದರೆಯಾಗಿದೆ. ದೋಣಗಲ್ ಕೊಪ್ಪಲ್ ನಡುವೆ 3 ಕಿ.ಮೀ ರಸ್ತೆಯನ್ನು ಏಕಮುಖ ಸಂಚಾರವನ್ನು ಮಾಡಲು ತೀರ್ಮಾನಿಸಲಾಗಿದೆ. ಐದಾರು ದಿನಗಳಲ್ಲಿ ಶಿರಾಡಿಘಾಟ್‍ನಲ್ಲಿ ಸಂಚಾರಕ್ಕೆ ಅನುವು ಮಾಡಿಕೊಳ್ಳಲು ಉದ್ದೇಶಿಸಲಾಗಿದೆ. ಇದು ತಾತ್ಕಾಲಿಕ ವ್ಯವಸ್ಥೆಯಾಗಿದೆ ಎಂದು ಹೇಳಿದರು.

ಆಗುಂಬೆ ಘಾಟ್‍ನಲ್ಲಿ ಒಂದು ದೊಡ್ಡ ಹಾಗೂ ಇತರೆ ಸಣ್ಣ ಪ್ರಮಾಣದ ಭೂ ಕುಸಿತವಾಗಿದ್ದು 700 ಕೋಟಿ ರೂ. ವೆಚ್ಚವಾಗಲಿದೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಅಬಕಾರಿ ಸಚಿವ ಕೆ.ಗೋಪಾಲಯ್ಯ ಇದ್ದರು.

Articles You Might Like

Share This Article