ಪ್ಯಾರಿಸ್ ಸ್ಫೋಟ ಪ್ರಕರಣ : ಕೇರಳದಲ್ಲಿ ಫ್ರಾನ್ಸ್ ತಂಡದ ತನಿಖೆ
ಕೊಚ್ಚಿ, ಡಿ.6- 2015ರ ಪ್ಯಾರಿಸ್ ಸ್ಫೋಟಗಳಿಗೆ ಸಂಬಂಧಿಸಿ ಕೇರಳದಲ್ಲಿ ಬಂಧಿಸಲಾಗಿರುವ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರ ತನಿಖೆಗಾಗಿ ಫ್ರೆಂಚ್ ತನಿಖಾ ಸಂಸ್ಥೆಯ ಐವರು ಸದಸ್ಯರು ನಿನ್ನೆಯಿಂದ ಕೊಚ್ಚಿಯಲ್ಲಿದ್ದು, ತನಿಖೆ ತೀವ್ರಗೊಳಿಸಿದ್ದಾರೆ. ಈ ತಂಡ ಮುಂದಿನ ಮೂರು ದಿನಗಳ ಕಾಲ ಆರೋಪಿಗಳ ತನಿಖೆ ಕೈಗೊಳ್ಳಲಿದ್ದು, ರಾಷ್ಟ್ರೀಯ ತನಿಖಾ ಸಂಸ್ಥೆಯೊಡನೆ ಈ ಕುರಿತು ಚರ್ಚಿಸಿದೆ.
ತ್ರಿಶೂರ್ ಜಿಲ್ಲೆಯ ಕೇಂದ್ರ ಜೈಲಿನಲ್ಲಿರುವ ತುಡುಪುಲ ನಿವಾಸಿ ಸುಬಹಾನಿ ಹಜಾ ಮೊಯ್ಡೆನ್ ಅವನನ್ನು ಪ್ರಶ್ನಿಸಲು ಶುಕ್ರವಾರದವರೆಗೆ ಫ್ರೆಂಚ್ ತನಿಖಾ ದಳವು ಕೊಚ್ಚಿಯಲ್ಲಿ ನೆಲೆಸಲಿದೆ. ಫ್ರೆಂಚ್ ಭಯೋತ್ಪಾದನಾ ವಿರೋಧಿ ತನಿಖಾ ಸಂಸ್ಥೆಯ ಐವರ ತಂಡ ಇಂದು ಕೊಚ್ಚಿಯಲ್ಲಿ ನಮ್ಮನ್ನು ಭೇಟಿ ಮಾಡಿದೆ ಎಂದು ಎನ್ಐಎ ಉನ್ನತ ಅಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ.
ಕೊಚ್ಚಿಯಲ್ಲಿರುವ ಎನ್ಐಎ ನ್ಯಾಯಾಲಯವು ಸುಯಹಾನಿ ವಿಚಾರಣೆಗೆ ಫ್ರೆಂಚ್ ತನಿಖಾದಲಕ್ಕೆ ಅನುಮತಿ ನೀಡಿದ ಕಾರಣ ತಂಡ ಭಾರತಕ್ಕೆ ಆಗಮಿಸಿದೆ. ಅವರು (ಫ್ರೆಂಚ್ ತಂಡ) ತ್ರಿಶೂರ್ಗೆ ಭೇಟಿ ನೀಡಲಿದ್ದಾರೆ. ಅಲ್ಲಿನ ಕೇಂದ್ರೀಯ ಕಾರಾಗೃಹದಲ್ಲಿ ಆರೋಪಿ ಸುಬಹಾನಿ ಅವರನ್ನು ಡಿ.5 ರಿಂದ 7ರ ವರೆಗೆ ವಿಚಾರಣೆ ನಡೆಸಲಿದೆ ಅಧಿಕಾರಿಗಳು ತಿಳಿಸಿದ್ದಾರೆ.
2015ರಲ್ಲಿ ಪ್ಯಾರೀಸ್ನಲ್ಲಿನ ರಂಗಮಂದಿರದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 100ಕ್ಕೂ ಅಧಿಕ ಜನ ಸಾವನ್ನಪ್ಪಿದ್ದರು. ಇದರಲ್ಲಿ ಇಸಿಸ್ ಸಂಘಟನೆ ಪರವಾಗಿ ಸುಬಹಾನಿ ಸಹ ಪಾಲ್ಗೊಂಡಿದ್ದನೆನ್ನುವುದು ಫ್ರೆಂಚ್ ತಂಡದ ನಂಬಿಕೆಯಾಗಿದ್ದು, ಇದೀಗ ಈ ವಿಷಯದ ಸತ್ಯಾಸತ್ಯತೆ ಅರಿಯಲು ಅವರು ಭಾರತಕ್ಕೆ ಆಗಮಿಸಿದ್ದಾರೆ.