2017ನೇ ಸಾಲಿನ ರಾಜ್ಯ ಬಜೆಟ್’ನ ಒಟ್ಟಾರೆ ನೋಟ ಇಲ್ಲಿದೆ ನೋಡಿ

Spread the love

Siddu-Budget--1111111111111

ಬೆಂಗಳೂರು,ಮಾ.15- ಯಾವುದೇ ಹೊಸ ಯೋಜನೆಗಳನ್ನು ಘೋಷಣೆ ಮಾಡದೆ ಅಹಿಂದ ವರ್ಗ ಸೇರಿದಂತೆ ಎಲ್ಲಾ ಸಮುದಾಯಗಳ ಮೂಗಿಗೆ ತುಪ್ಪ ಸವರಿ, ಆರ್ಥಿಕ ಶಿಸ್ತು ನಿರ್ವಹಣೆಗೆ ಆದ್ಯತೆ ಕೊಟ್ಟು , ಜನಪ್ರಿಯತೆಯ ಬೆನ್ನೇರದೆ ಸಮತೋಲನದ ಬಜೆಟ್ ಮಂಡನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಸರತ್ತು ನಡೆಸಿದ್ದಾರೆ. ನೋಟು ಅಮಾನೀಕರಣದಿಂದ ತೆರಿಗೆ ಸಂಗ್ರಹಣೆಯಾಗದಿದ್ದರೂ ಆರ್ಥಿಕ ನಿರ್ವಹಣೆಗೆ ಆದ್ಯತೆ ನೀಡಲಾಗಿದ್ದು , ಬಹುನಿರೀಕ್ಷಿತ ರೈತರ ಸಹಕಾರ ಸಂಘಗಳ ಸಾಲ ಮನ್ನಾ ಮಾಡದೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುವ ಯೋಜನೆಯನ್ನು ಮುಂದುವರೆಸುವ ಮೂಲಕ ಅನ್ನದಾತನ ಒಲೈಕೆಗೂ ಮುಂದಾಗಿದ್ದಾರೆ.

ಜುಲೈ ತಿಂಗಳಿನಲ್ಲಿ ಬಹು ಉದ್ದೇಶಿತ ಸರಕು ಸೇವಾ ತೆರಿಗೆ(ಜಿಎಸ್‍ಟಿ) ಅನುಷ್ಟಾನಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಹೊಸ ತೆರಿಗೆಗಳನ್ನು ವಿಧಿಸಿಲ್ಲ. ಕೇವಲ ಐಷರಾಮಿ ತೆರಿಗೆಗಳನ್ನು ಹೆಚ್ಚಳ ಮಾಡುವ ಮೂಲಕ ಗ್ರಾಮೀಣ ಮತ್ತು ಮಧ್ಯಮ ವರ್ಗದ ಜನರ ಮನಗೆಲ್ಲುವ ಪ್ರಯತ್ನ ನಡೆಸಲಾಗಿದೆ.
ಉಳಿದಂತೆ ಪ್ರಮುಖ ಇಲಾಖೆಗಳಿಗೆ ಅನುದಾನ ದುಪ್ಪಟ್ಟು ನೀಡಲಾಗಿದ್ದು , ಸರ್ಕಾರಕ್ಕೆ ಆದಾಯ ಹೆಚ್ಚಿಸುವ ಅಬಕಾರಿ, ಮುದ್ರಣ ನೋಂದಣಿ ಶುಲ್ಕ ತೆರಿಗೆಗಳನ್ನೂ ಸಹ ಏರಿಕೆ ಮಾಡಿಲ್ಲ.

ತೀವ್ರ ಬರಗಾಲದ ನಡುವೆಯೂ ಸಹಕಾರ ಸಂಘಗಳಿಂದ ಪಡೆದಿರುವ ರೈತರ ಸಾಲಮನ್ನಾ ಮಾಡದೆ ಮರುಪಾವತಿಯ ಅವಧಿ ವಿಸ್ತರಿಸಿ, 3 ಲಕ್ಷದ ವರೆಗೆ ಶೂನ್ಯ ಬಡ್ಡಿದರದ ಸಾಲ ವಿತರಣೆ ಹಾಗೂ ಸ್ವಸಹಾಯ ಗುಂಪುಗಳಿಗೂ ಶೂನ್ಯ ಬಡ್ಡಿ ಸಾಲ ವಿತರಣೆ ಸೇರಿದಂತೆ ಐಷರಾಮಿ ತೆರಿಗೆಗಳನ್ನು ವಿಧಿಸಿ, ಬಿಯರ್, ಲಿಕ್ಕರ್ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು ತೆಗೆದು ಹಾಕಿ ನೋಂದಣಿ ಮುದ್ರಾಂಕ ಶುಲ್ಕದ 7,750 ಕೋಟಿ ರೂ.ಗಳ ಸಂಗ್ರಹಣೆ ಗುರಿ ಹೊಂದಿರುವ ಅಬಕಾರಿ ಇಲಾಖೆಯ 18,058 ಕೋಟಿ ರೂ.ಗಳ ರಾಜಸ್ವ ಸಂಗ್ರಹಣೆಯ ಗುರಿ ಸಾಧನೆಯ 1,86,561 ಕೋಟಿ ರೂ.ಗಳ ಅಂದಾಜು ವೆಚ್ಚದ 2017-18ನೇ ಸಾಲಿನ ಆಯವ್ಯಯವನ್ನು ಮಂಡಿಸಿದ್ದಾರೆ.

2018ರಲ್ಲಿ ಎದುರಾಗಲಿರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮಹಿಳೆಯರನ್ನು ಓಲೈಸುವ ನಿಟ್ಟಿನಲ್ಲಿ ಹಲವು ಜನಪ್ರಿಯ ಯೋಜನೆಗಳನ್ನು ಘೋಷಿಸಿರುವ ಸಿಎಂ, ತಮಿಳುನಾಡಿನ ಅಮ್ಮಾ ಕ್ಯಾಂಟೀನ್ ಮಾದರಿಯಲ್ಲೇ ರಾಜಧಾನಿ ಬೆಂಗಳೂರಿನಲ್ಲಿ ನಮ್ಮ ಕ್ಯಾಂಟೀನ್ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದ್ದಾರೆ.   2017-18ನೇ ಸಾಲಿನ ಆಯವ್ಯಯ ಮಂಡಿಸಿದ ಹಣಕಾಸು ಸಚಿವರು ಆದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ಅಗ್ರ ತಾಂಬೂಲ ನೀಡಿದ್ದಾರೆ.

ರಾಜಧಾನಿ ಬೆಂಗಳೂರು ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ಕೊಟ್ಟಿದ್ದಾರೆ. ರಸ್ತೆಗಳ ಅಭಿವೃದ್ಧಿ , ಶುಚಿತ್ವಕ್ಕೆ ಸ್ವಚ್ಛ ಕರ್ನಾಟಕ ಯೋಜನೆ ಜಾರಿ, ಬೆಂಗಳೂರು ಒನ್ ಯೋಜನೆಯನ್ನು ಜಿಲ್ಲಾ ಕೇಂದ್ರಗಳಿಗೆ ವಿಸ್ತರಣೆ ಮಾಡುವ ಗುರಿ ಹೊಂದಲಾಗಿದೆ.  ಅನ್ನಭಾಗ್ಯ ಯೋಜನೆಯ ಅಕ್ಕಿ ವಿತರಣೆಯನ್ನು ತಲಾ 5 ಕೆಜಿಯಿಂದ 7 ಕೆಜಿಗೆ ಏರಿಸುವ ನಿರ್ಧಾರ ಪ್ರಕಟಿಸಿದ್ದಾರೆ. ಬಹುನಿರೀಕ್ಷಿತ ಕೃಷಿ ಸಾಲ ಮನ್ನಾ ಮಾಡಲು ನಿರಾಕರಿಸಿರುವ ಸಿದ್ದರಾಮಯ್ಯ ಸಾಲ ಮರುಪಾವತಿ ಅವಧಿಯನ್ನು ವಿಸ್ತರಿಸಿದ್ದಾರೆ. 3 ಲಕ್ಷದ ವರೆಗೆ ಶೂನ್ಯ ಬಡ್ಡಿ ಸಾಲ ವಿತರಣೆಯನ್ನು ಮುಂದುವರೆಸಿದ್ದಾರಲ್ಲದೆ ಸ್ವಸಹಾಯ ಗುಂಪುಗಳಿಗೂ ಶೂನ್ಯ ಬಡ್ಡಿ ಸಾಲವನ್ನು ನೀಡುವುದಾಗಿ ಘೋಷಿಸಿದ್ದಾರೆ.

ರೈತ ಸಾರಥಿ ಯೋಜನೆಯಡಿ ಗ್ರಾಮೀಣ ಜನರಿಗೆ ಚಾಲನಾ ಪರವಾನಗಿ, ಪ್ರವಾಸೋದ್ಯಮ ಇಲಾಖೆ ಅಭಿವೃದ್ಧಿ , ಹೊಸ ರಸ್ತೆಗಳ ನಿರ್ಮಾಣ, 3000 ಹೊಸ ಬಸ್‍ಗಳ ಖರೀದಿ, 6 ಹೊಸ ವೈದ್ಯಕೀಯ ಕಾಲೇಜುಗಳ ಸ್ಥಾಪನೆ ಸೇರಿದಂತೆ ಹಲವು ಯೋಜನೆಗಳನ್ನು ಪ್ರಕಟಿಸಿದ್ದಾರೆ.   ಒಲಿಂಪಿಕ್ಸ್ ಪದಕ ವಿಜೇತರಿಗೆ 5 ಕೋಟಿ ಬಹುಮಾನ, ವೃದ್ಧಾಪ್ಯ ವೇತನ ಹೆಚ್ಚಳ, ಜನಪ್ರತಿನಿಧಿಗಳ ಗೌರವಧನ ಹೆಚ್ಚಳ , 28 ಲಕ್ಷ ಶೌಚಾಲಯಗಳ ನಿರ್ಮಾಣಕ್ಕೆ ಕ್ರಮ, ಬೀಜಧನ ಬಂಡವಾಳ ಯೋಜನೆಯಡಿ ಪಡೆದ 46 ಕೋಟಿ ಸಾಲಮನ್ನಾ , ಎಸ್ಕಾಂಗಳಿಂದ ಬಾಕಿ ಇರುವ 3,766 ಕೋಟಿ ರೂ. ಬಾಕಿ ಪಾವತಿ, 21 ಜಿಲ್ಲೆಗಳಲ್ಲಿ 49 ಹೊಸ ತಾಲ್ಲೂಕುಗಳ ಘೋಷಣೆ, ಹಿಂದುಳಿದ ವಿದ್ಯಾರ್ಥಿಗಳಿಗೆ 5 ಲಕ್ಷ ಪ್ರೊತ್ಸಾಹಧನ, ಪ್ರವಾಸೋದ್ಯಮ ಮೂಲಸೌಕರ್ಯ ಅಭಿವೃದ್ದಿ , ವಿದ್ಯುತ್ ಉತ್ಪಾದನೆಗೆ ಆದ್ಯತೆ ಸೇರಿದಂತೆ ಯುವ ಸಬಲೀಕರಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ , ಶಿಕ್ಷಣ , ಆರೋಗ್ಯ , ಕನ್ನಡ ಮತ್ತು ಸಂಸ್ಕøತಿ ಇಲಾಖೆಗೆ ಆದ್ಯತೆ ಸೇರಿದಂತೆ ಒಟ್ಟು 230 ಪುಟಗಳ ಸುದೀರ್ಘ ಬಜೆಟ್‍ನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದರು.

ರಾಜಧಾನಿ ಬೆಂಗಳೂರಿನಲ್ಲಿ ನಮ್ಮ ಕ್ಯಾಂಟೀನ್ ಸ್ಥಾಪಿಸುವ ಮೂಲಕ ಬಡಜನರಿಗೆ 5 ರೂ.ನಲ್ಲಿ ತಿಂಡಿ, 10 ರೂ.ಗೆ ಊಟ ಒದಗಿಸುವ ಯೋಜನೆ ಘೋಷಿಸಿದರು.  ಕೃಷಿ ಭಾಗ್ಯ ಯೋಜನೆಯನ್ನು ಎಲ್ಲಾ ತಾಲ್ಲೂಕುಗಳಿಗೆ ವಿಸ್ತರಿಸಲು 600 ಕೋಟಿ ರೂ.ಗಳನ್ನು ಒದಗಿಸುವುದಾಗಿ ತಿಳಿಸಿದರು.
ರಾಜ್ಯದಲ್ಲಿ ಪ್ರಮಾಣಿಕೃತ, ಉತ್ಕøಷ್ಟ ಟಗರುಗಳ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು 10 ಸಾವಿರ ಉತ್ಕøಷ್ಟ ಕುರಿ ಮರಿಗಳನ್ನು ಬೆಳೆಸಲು ತೀರ್ಮಾನಿಸಲಾಗಿದ್ದು , ಬಳ್ಳಾರಿಯಲ್ಲಿ ಕುರಿ ಸಂವರ್ಧನ ಕೇಂದ್ರ ಸ್ಥಾಪಿಸಲು ಬಜೆಟ್‍ನಲ್ಲಿ ಅನುದಾನ ಒದಗಿಸಿದ್ದಾರೆ.   ರೇಷ್ಮೆ ಉದ್ಯಮದ ಸಮಗ್ರ ಅಭಿವೃದ್ದಿಗೆ ರೇಷ್ಮೆ ಹುಳು, ಮೊಟ್ಟೆ ಚಾಕಿ ನಿಯಂತ್ರಣ ಪ್ರಾಧಿಕಾರ ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.   ಐಐಟಿ, ಐಐಎಂ ವಿದ್ಯಾರ್ಥಿಗಳಿಗೆ ಪ್ರೊತ್ಸಾಹ ಧನ, ಮಹಿಳಾ ಉದ್ಯಮಿಗಳಿಗೆ ನೀಡುವ ಸಾಲದ ಧನ ಏರಿಕೆ, ಖಾಸಗಿ ವಲಯದ ಉದ್ದಿಮೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿಯನ್ನು ಒದಗಿಸಲು ಮುಂದಾಗಿದ್ದಾರೆ.

[ ರಾಜ್ಯ ಬಜೆಟ್ 2017-18  (Live Updates) ]

HIGHLIGHTS :  ಹೈಲೈಟ್ಸ್  : 


+ ಅಂಗನವಾಡಿ ಕಾರ್ಯಕರ್ತರ ಗೌರವ ಧನ ಹೆಚ್ಚಳ

ಬೆಂಗಳೂರು, ಮಾ.15- ಅಂಗನವಾಡಿ ಕಾರ್ಯಕರ್ತೆ ಯರು ಮತ್ತು ಸಹಾಯಕಿಯರಿಗೆ ರಕ್ಷಣೆ ಒದಗಿಸಲು ಅಪಘಾತ ವಿಮೆ ಯೋಜನೆ ಜಾರಿಗೆ ತರುವುದಾಗಿ ಬಜೆಟ್‍ನಲ್ಲಿ ಘೋಷಿಸಲಾಗಿದೆ.  ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕಿಯರಿಗೆ ನೀಡುವ ಗೌರವ ಧನವನ್ನು ಹೆಚ್ಚಿಸಲು ಉದ್ದೇಶಿಸಿದ್ದು, ಅನುಕ್ರಮವಾಗಿ 1000 ಹಾಗೂ 500 ರೂ ಹೆಚ್ಚಿಸಲಾಗುವುದು.  ಅತ್ಯಾಚಾರ ಮತ್ತು ವಿವಿಧ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ಮತ್ತು ಮಕ್ಕಳಿಗೆ ವಿಶೇಷ ಚಿಕಿತ್ಸೆ ನೀಡಲು ಜಿಲ್ಲಾಸ್ಪತ್ರೆಗಳಲ್ಲಿ ಸ್ಥಾಪಿಸಲಾದ ವಿಶೇಷ ಘಟಕದ ಮಾದರಿಯಲ್ಲಿ ತಾಲ್ಲೂಕು ಆಸ್ಪತ್ರೆಗಳಲ್ಲೂ 145ವಿಶೇಷ ಚಿಕಿತ್ಸಾ ಘಟಕ ಸ್ಥಾಪನೆ ಮಾಡಲಾಗುವುದು.

ಪೌಷ್ಠಿಕಾಂಶ ಕೊರತೆ ನಿವಾರಣೆ:

ಷ್ಠಿಕಾಂಶ ಕೊರತೆ ನಿವಾರಣೆಗೆ ಮಾತೃಪೂರ್ಣ ಯೋಜನೆಯನ್ನು ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು. ಅಂಗನವಾಡಿ ಮಕ್ಕಳಿಗೆ ಮುಂದಿನ ಜೂನ್ ತಿಂಗಳಿಂದ ವಾರದಲ್ಲಿ 2 ದಿನ ಮೊಟ್ಟೆ ಮತ್ತು ಜುಲೈನಿಂದ ವಾರಕ್ಕೆ 5 ದಿನ ಹಾಲು ನೀಡಲಾ ಗುವುದು.  ಹೆಚ್‍ಐವಿ ಸೋಂಕಿತ ಹಾಗೂ ಬಾಧಿತರಾದವರಿಗೆ ಪಾಲನೆ ಯೋಜನೆಯಡಿ ನೀಡಲಾಗುವ ಧನ ಸಹಾಯವನ್ನು 800ರಿಂದ 1000ರೂಗೆ ಹೆಚ್ಚಿಸಲಾಗಿದೆ.  ಬೆಂಗಳೂರು ನಗರ ಜಿಲ್ಲೆಯಲ್ಲಿ ಮಕ್ಕಳ ವಿಶೇಷ ನ್ಯಾಯಾಲಯ ನಿರ್ಮಿಸಲು 4 ಕೋಟಿ ರೂ ಅನುದಾನ ಘೋಷಿಸಲಾಗಿದೆ.


+ ಮಲ್ಟಿಪ್ಲೆಕ್ಸ್ ಗಳಲ್ಲಿ ಕನ್ನಡ ಚಿತ್ರ ಕಡ್ಡಾಯ, ಗರಿಷ್ಠ ಟಿಕೆಟ್ ದರ 200 ರೂ.

ಬೆಂಗಳೂರು, ಮಾ.15- ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ 2017-18ನೇ ಸಾಲಿನಲ್ಲಿ 283 ಕೋಟಿ ರೂ ನೀಡುವುದಾಗಿ ಬಜೆಟ್‍ನಲ್ಲಿ ಮುಖ್ಯಮಂತ್ರಿ ಘೋಷಿಸಿದ್ದಾರೆ. ವಿವಿಧ ಇಲಾಖೆಗಳು ಅನುಷ್ಠಾನಗೊಳಿಸಿದ ಯೋಜನೆಗಳ ಬಗ್ಗೆ ಮಾಹಿತಿ ನೀಡಲು ಎಲ್ಲಾ ಜಿಲ್ಲೆಗಳಲ್ಲಿ ಮೂರು ದಿನಗಳ ಜಿಲ್ಲಾ ಮಾಹಿತಿ ಉತ್ಸವ ಆಯೋಜನೆಗಾಗಿ 16 ಕೋಟಿ ರೂ. ಅನುದಾನ ನೀಡುವುದಾಗಿ ಘೋಷಿಸಿದ್ದಾರೆ.

ಧ್ವನಿ-ಬೆಳಕು:  ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮ ವರ್ಷಾ ಚರಣೆಯು 2018ರ ಅಕ್ಟೋಬರ್ 2ರಿಂದ ಪ್ರಾರಂಭವಾಗು ವುದರಿಂದ ಪೂರ್ವಭಾವಿಯಾಗಿ ರಾಜ್ಯಾದ್ಯಂತ ಮಹಾತ್ಮ ಗಾಂಧೀಜಿ ಧ್ವನಿ- ಬೆಳಕು ಪ್ರದರ್ಶನವನ್ನು ಆಯೋಜಿಸಲು 5ಕೋಟಿ ರೂ. ನೀಡುವುದಾಗಿ ಸಿಎಂ ತಿಳಿಸಿದ್ದಾರೆ. ಮಹಾತ್ಮ ಗಾಂಧೀಜಿಯವರ ಚಿತಾಭಸ್ಮವಿರುವ ಅರಸೀಕೆರೆಯ ಕಸ್ತೂರ ಬಾ ಆಶ್ರಮ ಅಭಿವೃದ್ಧಿಗಾಗಿ 2ಕೋಟಿ. ರೂ. ನೀಡಲಾಗುತ್ತದೆ. ರಾಜ್ಯಾದ್ಯಂತ ಮಲ್ಟಿಪ್ಲೆಕ್ಸ್ ಚಿತ್ರ ಮಂದಿರಗಳ ಒಂದು ಪರದೆಯಲ್ಲಿ ಕನ್ನಡ ಹಾಗೂ ಪ್ರಾದೇಶಿಕ ಭಾಷೆಗಳ ಚಲನ ಚಿತ್ರ ಪ್ರದರ್ಶನವನ್ನು ಕಡ್ಡಾಯಗೊಳಿಸುವುದಾಗಿ ಘೋಷಿಸಿದ್ದಾರೆ. ಮದ್ಯಾಹ್ನ 1.30ರಿಂದ 7.30ರ ಅವಧಿಯಲ್ಲಿ ಕಡ್ಡಾಯವಾಗಿ ಕನ್ನಡ ಚಲನಚಿತ್ರ ಪ್ರದರ್ಶನ ಮಾಡಲೇ ಬೇಕಿದೆ. ಮಲ್ಟಿಪ್ಲೆಕ್ಸ್ ಸೇರಿದಂತೆ ಎಲ್ಲಾ ಚಿತ್ರಮಂದಿರಗಳಲ್ಲಿ ಏಕ ರೀತಿಯ ಪ್ರವೇಶ ದರ ನೀತಿ ಜಾರಿಗೆ (200 ರೂ ಗರಿಷ್ಠ ದರ) ತರುವುದಾಗಿ ಬಜೆಟ್‍ನಲ್ಲಿ ಘೋಷಿಸಲಾಗಿದೆ.


+ ದ್ವಿಚಕ್ರ ವಾಹನಗಳ ತೆರಿಗೆ ಹೆಚ್ಚಳ

ಬೆಂಗಳೂರು, ಮಾ.15- ಒಂದು ಲಕ್ಷಕ್ಕೂ ಮೇಲ್ಪಟ್ಟು ಬೆಲೆಯುಳ್ಳ ದ್ವಿಚಕ್ರ ವಾಹನಗಳ ತೆರಿಗೆಯನ್ನು ಶೇ.12ರಿಂದ 18ಕ್ಕೆ ಏರಿಸಲಾಗಿದೆ. ಇದರ ಮೂಲಕ 60 ಕೋಟಿ ಹೆಚ್ಚುವರಿ ತೆರಿಗೆ ನಿರೀಕ್ಷಿಸಲಾಗಿದೆ. ಒಟ್ಟಾರೆ ಸಾರಿಗೆ ವಿಭಾಗದಲ್ಲಿ 6,006 ಕೋಟಿ ರೂ.ಗಳ ರಾಜಸ್ವ ಸಂಗ್ರಹ ಗುರಿ ಹೊಂದಲಾಗಿದೆ.

+ 25 ಹೊಸ ಪಾಲಿಟೆಕ್ನಿಕ್, ಉನ್ನತ ಶಿಕ್ಷಣ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ 

ಬೆಂಗಳೂರು, ಮಾ.15-ರಾಯಚೂರಿನಲ್ಲಿ ಹೊಸ ವಿಶ್ವವಿದ್ಯಾನಿಲಯ ಸ್ಥಾಪನೆ, 25 ಹೊಸ ಪಾಲಿಟೆಕ್ನಿಕ್ ಕಾಲೇಜು, ಉನ್ನತ ಶಿಕ್ಷಣಕ್ಕೆ ದಾಖಲಾಗುವ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‍ಟಾಪ್ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಉನ್ನತ ಶಿಕ್ಷಣಕ್ಕೆ 4,401 ಕೋಟಿ ರೂ. ಅನು ದಾನ ಒದಗಿಸಿರುವ ಸಿದ್ದರಾಮಯ್ಯ ಅವರು, ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ಸೇರುವ ರಾಯಚೂರಿನಲ್ಲಿ ಹೊಸ ವಿಶ್ವವಿದ್ಯಾನಿಲಯ ಸ್ಥಾಪಿಸುವುದಾಗಿ ಪ್ರಕಟಿಸಿದ್ದಾರೆ.

ರಾಯಚೂರು ಮತ್ತು ಯಾದಗಿರಿ ಜಿಲ್ಲೆಯ ಎಲ್ಲಾ ಕಾಲೇಜುಗಳನ್ನು ಈ ವಿಶ್ವವಿದ್ಯಾನಿಲಯ ವ್ಯಾಪ್ತಿಗೆ ತರುವುದಾಗಿ ಹೇಳಿದ್ದಾರೆ. ಗ್ರಾಮೀಣ, ಹಿಂದುಳಿದ ವಿದ್ಯಾರ್ಥಿಗಳು ತಾಂತ್ರಿಕ ಶಿಕ್ಷಣ ಪಡೆಯುವುದಕ್ಕೆ ಉತ್ತೇಜನ ನೀಡಲು ರಾಜ್ಯಾದ್ಯಂತ ಗ್ರಾಮೀಣ ಭಾಗದಲ್ಲಿ 25 ಹೊಸ ಪಾಲಿಟೆಕ್ನಿಕ್ ಕಾಲೇಜುಗಳನ್ನು ಸ್ಥಾಪಿಸಲಾಗುವುದು, ಪ್ರತಿ ಕಾಲೇಜಿಗೆ 4 ಕೋಟಿ ರೂ. ವೆಚ್ಚ ಮಾಡಲಾಗುತ್ತದೆ. ಜೊತೆಗೆ ತಲಾ 2 ಕೋಟಿ ರೂ.ವೆಚ್ಚದಲ್ಲಿ ಸರ್ಕಾರಿ ಪಾಲಿಟೆಕ್ನಿಕ್‍ಗಳಲ್ಲಿ 23 ಮಹಿಳಾ ಹಾಸ್ಟೆಲ್‍ಗಳನ್ನು ಹಂತ ಹಂತವಾಗಿ ಪ್ರಾರಂಭಿಸಲಾಗುತ್ತದೆ.

ಹೆಣ್ಣು ಮತ್ತು ಗಂಡು ಮಕ್ಕಳಿಗೆ ಹಾಸ್ಟೆಲ್ ಸೌಲಭ್ಯಗಳೊಂದಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗಾಗಿ 10 ಮಾದರಿ ವಸತಿಯುಕ್ತ ಪ್ರಥಮ ದರ್ಜೆ ಕಾಲೇಜುಗಳನ್ನು ಸ್ಥಾಪಿಸಲಾಗುತ್ತದೆ.   ಬೆಂಗಳೂರಿನ ಯೂನಿವರ್ಸಿಟಿ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಎಂಜಿನಿಯರಿಂಗ್‍ಗೆ 25 ಕೋಟಿ ರೂ., ಧಾರವಾಡದ ಕರ್ನಾಟಕ ಕಾಲೇಜಿಗೆ 5 ಕೋಟಿ ರೂ.ಗಳನ್ನು ಮೂಲಸೌಕರ್ಯ ಮತ್ತು ನವೀಕರಣಕ್ಕಾಗಿ ಒದಗಿಸಲಾಗುತ್ತಿ ದೆ. ವಿಶ್ವವಿದ್ಯಾಲಯಗಳ ಆಡಳಿತದಲ್ಲಿ ಪಾರದರ್ಶಕತೆ ತರಲು ವಿಶ್ವವಿದ್ಯಾನಿಲಯಗಳ ಅಧಿನಿಯಮ 2000ದ ಸಾಮಾನ್ಯ ಉಪ ಬಂಧ ಗಳನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ. ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಬೆಳ್ಳಿ ಹಬ್ಬದ ಅಂಗವಾಗಿ ಮೂಲಸೌಲಭ್ಯ ಮತ್ತು ಅಭಿವೃದ್ಧಿಗಾಗಿ 25 ಕೋಟಿ ರೂ., ಕರ್ನಾಟಕ ವಿವಿಯ ಮಹಾಯೋಗಿ ವೇಮನ ಅಧ್ಯಯನ ಪೀಠಕ್ಕೆ 3 ಕೋಟಿ ರೂ. ಅನುದಾನ, ಕ್ರಾಂತಿಕಾರಿ ಸಾಹು ಮಹಾರಾಜ್ ಹೆಸರಿನಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದ ಅಧ್ಯಯನ ಪೀಠ ಸ್ಥಾಪಿಸುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ.

ಪ್ರಮುಖವಾಗಿ ಮುಂದಿನ ಶೈಕ್ಷಣಿಕ ವರ್ಷದಿಂದ ಎಂಜಿನಿಯರಿಂಗ್, ವೈದ್ಯಕೀಯ, ಪಾಲಿಟೆಕ್ನಿಕ್, ಪ್ರಥಮ ದರ್ಜೆ ಕಾಲೇಜುಗಳಿಗೆ ಪ್ರವೇಶ ಪಡೆಯುವ 1.5 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‍ಟಾಪ್ ನೀಡಲಾಗುತ್ತದೆ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಬ್ಯಾರಿ ಅಧ್ಯಯನ ಪೀಠ ಸ್ಥಾಪಿಸಲಾಗುತ್ತದೆ.


+ ಕೃಷಿ ಭಾಗ್ಯ ಯೋಜನೆ :
ಕೃಷಿ ಕ್ಷೇತ್ರಕ್ಕೆ 5,280 ಕೋಟಿ ಒದಗಿಸಲಾಗಿದೆ. ಕೃಷಿ ಭಾಗ್ಯ ಯೋಜನೆಯನ್ನು ಎಲ್ಲಾ ತಾಲ್ಲೂಕುಗಳಿಗೆ ವಿಸ್ತರಿಸಿ 600 ಕೋಟಿ ರೂ.ಗಳನ್ನು ಒದಗಿಸಲಾಗಿದೆ ಎಂದು ತಿಳಿಸಿದರು. ಕೃಷಿ ಯಂತ್ರಧಾರೆ ಕಾರ್ಯಕ್ರಮವನ್ನು ಹೋಬಳಿ ಕೇಂದ್ರಗಳಿಗೂ ವಿಸ್ತರಿಸಲು 250ಕ್ಕೂ ಹೆಚ್ಚು ಕೇಂದ್ರಗಳನ್ನು ಸ್ಥಾಪಿಸಲಾಗುವುದು, ಇದಕ್ಕಾಗಿ 122 ಕೋಟಿ ರೂ.ಗಳನ್ನು ಒದಗಿಸುವುದಾಗಿ ಹೇಳಿದರು.

ತೋಟಗಾರಿಕೆ ಇಲಾಖೆಯಲ್ಲಿ ಮೊದಲ ಬಾರಿಗೆ ಕೃಷಿ ಭಾಗ್ಯ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದ್ದು , 200 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಮುಂದಿನ 5 ವರ್ಷಗಳಲ್ಲಿ ಐದು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಗುಣಮಟ್ಟದ ಗೇರು ಬೀಜಗಳನ್ನು ಅಭಿವೃದ್ದಿಪಡಿಸಲು ಗೇರು ಅಭಿವೃದ್ದಿ ಮಂಡಳಿ ಪ್ರಾರಂಭಿಸುವ ಉದ್ದೇಶವಿದ್ದು ಇದಕ್ಕೆ 10 ಕೋಟಿ ರೂ.ಗಳ ಅನುದಾನ ಒದಗಿಸಲಾಗಿದೆ.   ತೆಂಗಿನ ತೋಟಗಳನ್ನು ಪುನಶ್ಚೇತನಗೊಳಿಸಲು 10 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ರಾಜ್ಯದ ಎಲ್ಲ ಗ್ರಾಮಗಳಿಗೆ ಪರಿಣಿತ, ಸುಧಾರಿತ ಪಶುವೈದ್ಯಕೀಯ ಸೇವೆ ವಿಸ್ತರಿಸುವ ಗುರಿ ಹೊಂದಲಾಗಿದೆ. 1512 ಪ್ರಾಥಮಿಕ ಮತ್ತು ವೈದ್ಯಕೀಯ ಕೇಂದ್ರಗಳನ್ನು, ಪಶು ಚಿಕಿತ್ಸಾಲಯಗಳನ್ನು ಮೇಲ್ದರ್ಜೆಗೇರಿಸಲು ಉದ್ದೇಶಿಸಲಾಗಿದೆ.


+ ಮೆಟ್ರೋ ವಿಸ್ತರಣೆ, ಸಂಚಾರ ದಟ್ಟಣೆ ತಗ್ಗಿಸಲು ಉಪನಗರ ರೈಲ್ವೆ

ಬೆಂಗಳೂರು, ಮಾ.15- ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೂ ಮೆಟ್ರೋ ರೈಲು ವಿಸ್ತರಣೆ, ಸಂಚಾರ ದಟ್ಟಣೆ ತಗ್ಗಿಸಲು ಉಪನಗರ ರೈಲ್ವೆ ಯೋಜನೆ , ಬೆಂಗಳೂರು ಮೆಟ್ರೋ ರೈಲು ಯೋಜನೆ ಹಂತ-2ಎ ಅಡಿಯಲ್ಲಿ ಸಿಲ್ಕ್‍ಬೋರ್ಡ್‍ನಿಂದ ಕೆ.ಆರ್.ಪುರಂ ವೃತ್ತದವರೆಗೂ ಹೆಚ್ಚುವರಿ ಮಾರ್ಗ ನಿರ್ಮಾಣಕ್ಕೆ 4,200 ಕೋಟಿ ರೂ.ಗಳನ್ನು ಈ ಬಾರಿಯ ಆಯವ್ಯಯದಲ್ಲಿ ಮೀಸಲಿರಿಸಲಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸೂಕ್ತ ಸಂಪರ್ಕ ಕಲ್ಪಿಸುವ ಮೆಟ್ರೋ ಹಂತ-3ರ ಅಧ್ಯಯನ ವರದಿ ಪೂರ್ಣಗೊಂಡಿದ್ದು, ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದರ ಜತೆಗೆ ಭಾರತೀಯ ರೈಲ್ವೆ ಇಲಾಖೆಯೊಂದಿಗೆ ಒಡಂಬಡಿಕೆ ಮಾಡಿಕೊಂಡು 345 ಕೋಟಿ ರೂ. ವೆಚ್ಚದಲ್ಲಿ ಉಪನಗರ ರೈಲ್ವೆ ಯೋಜನೆಯನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆ ಉದ್ದೇಶದಿಂದ ಮೈಸೂರಿನ ಮಾದರಿಯಲ್ಲೇ ನಗರದ ಆಯ್ದ ಕ್ಲಸ್ಟರ್‍ಗಳಲ್ಲಿ ಬಾಡಿಗೆ ಸೈಕಲ್ ಯೋಜನೆ ಆರಂಭಿಸಲಾಗುವುದು. ಒಟ್ಟಾರೆ ಮೆಟ್ರೋ ಯೋಜನೆಯ ಒಂದನೆ ಹಂತದ ಕಾಮಗಾರಿಯನ್ನು ಏಪ್ರಿಲ್ 2017ರ ವೇಳೆಗೆ ಪೂರ್ಣಗೊಳಿಸಲಾಗುವುದು. 26,405 ಕೋಟಿ ವೆಚ್ಚದ ಎರಡನೆ ಹಂತದ ಯೋಜನೆಯಡಿ ಪುಟ್ಟೇನಹಳ್ಳಿಯಿಂದ ಅಂಜನಾಪುರ, ಮೈಸೂರು ರಸ್ತೆಯಿಂದ ಕೆಂಗೇರಿವರೆಗೆ ಮೆಟ್ರೋ ಯೋಜನೆಯನ್ನು ವಿಸ್ತರಿಸಲಾಗುವುದು.


+ 12 ಸಾವಿರ ಶಿಕ್ಷಕರ ನೇಮಕ, ಹೆಣ್ಣುಮಕ್ಕಳಿಗೆ ಚೂಡಿದಾರ್ ಸಮವಸ್ತ್ರ, ಶಿಕ್ಷಕರ ಹಾಜರಾತಿಗೆ ಬಯೋಮೆಟ್ರಿಕ್

ಬೆಂಗಳೂರು, ಮಾ.15-ಶಿಕ್ಷಣ ಗುಣಮಟ್ಟ ಸುಧಾರಣೆಗೆ ಕರ್ನಾಟಕ ಶಾಲಾ ಶಿಕ್ಷಣ ನೀತಿ ರೂಪಿಸುವ ಭರವಸೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ 1000 ಶಾಲಾ ಕಾಲೇಜುಗಳಲ್ಲಿ ಮಾಹಿತಿ ತಂತ್ರಜ್ಞಾನ ಶಿಕ್ಷಣ, ಗ್ರಾಮ ಪಂಚಾಯ್ತಿ ಕೇಂದ್ರ ಸ್ಥಾನದಲ್ಲಿ ಪಿಯುಸಿವರೆಗೆ 176 ಸಂಯೋಜಿತ ಶಾಲೆಗಳ ಆರಂಭದ ಘೋಷಣೆಗಳನ್ನು ಮಾಡಿದ್ದಾರೆ.   ಜೊತೆಗೆ 12,817 ಮಂದಿ ಶಿಕ್ಷಕರು-ಉಪನ್ಯಾಸ ಕರನ್ನು ನೇಮಿಸಿಕೊಳ್ಳ ಲಾಗುತ್ತಿದೆ ಎಂದು ತಿಳಿಸಿದ್ದಾರೆ.  ವಿಧಾನಸಭೆಯಲ್ಲಿ ಬಜೆಟ್ ಮಂಡಿಸಿದ ಸಿದ್ದರಾಮಯ್ಯ ಅವರು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಗೆ 18,266 ಕೋಟಿ ರೂ. ಅನುದಾನ ಒದಗಿಸಿದ್ದಾರೆ. ಮಹತ್ವದ ನಿರ್ಧಾರವಾಗಿ ಪ್ರಾಥಮಿಕ ಶಾಲೆಗಳಿಗೆ 10 ಸಾವಿರ ತರಬೇತಿ ಪಡೆದ ಪದವೀಧರ ಶಿಕ್ಷಕರು, 1,626 ಪ್ರೌಢಶಾಲಾ ಶಿಕ್ಷಕರು, 1,191 ಪಿಯು ಉಪನ್ಯಾಸಕರನ್ನು ಎರಡು ಹಂತಗಳಲ್ಲಿ ನೇಮಕಾತಿ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ.

ಶಾಲೆಗಳಲ್ಲಿ ವಿದ್ಯಾರ್ಥಿಗಳ ಸುರಕ್ಷತೆ, ಶಿಕ್ಷಣ ಗುಣಮಟ್ಟ ಸುಧಾರಣೆಗಾಗಿ ಕರ್ನಾಟಕ ಶಾಲಾ ಶಿಕ್ಷಣ ನೀತಿ ರೂಪಿಸಲಾಗುತ್ತಿದೆ. ಅಭ್ಯಾಸ ಮತ್ತು ಚಟುವಟಿಕೆಗಳ ಪುಸ್ತಕಗಳನ್ನು ಬಳಸಿ ಒಂದರಿಂದ 8ನೆ ತರಗತಿ ವರೆಗೆ ವಸ್ತುನಿಷ್ಠ ಕಲಿಕಾ ಮೌಲ್ಯಮಾಪನ ಮಾಡಲಾಗುತ್ತದೆ. ಬೇಸಿಗೆ ಮತ್ತು ಇತರ ರಜಾ ಅವಧಿಗಳಲ್ಲಿ ಪೂರಕ ಬೋಧನೆಗಾಗಿ ವಿಶ್ವಾಸಕಿರಣ ಯೋಜನೆ ಜಾರಿಗೆ ತರಲಾಗುತ್ತಿದೆ.  ಒಂದರಿಂದ 10ನೆ ತರಗತಿಯವರೆಗೆ ಪರಿಷ್ಕøತ ಪಠ್ಯಪುಸ್ತಕಗಳನ್ನು, 9ರಿಂದ 12ನೆ ತರಗತಿವರೆಗೆ ಎನ್‍ಸಿಇಆರ್‍ಟಿ ಪಠ್ಯಪುಸ್ತಕಗಳನ್ನು ಅಳವಡಿಸಲಾಗುತ್ತಿದೆ.

ಒಂದನೆ ತರಗತಿಯಿಂದ ಆಂಗ್ಲಭಾಷೆಯನ್ನು ಪರಿಣಾಮಕಾರಿಯಾಗಿ ಬೋಧಿಸಲು ಕ್ರಮಕೈಗೊಳ್ಳಲಾಗುತ್ತಿದೆ. ಗ್ರಾಮ ಪಂಚಾಯ್ತಿ ಕೇಂದ್ರ ಸ್ಥಾನಗಳಲ್ಲಿ ಪಿಯುಸಿವರೆಗೆ 176 ಸಂಚಿತ ಶಾಲೆಗಳನ್ನು ಆರಂಭಿಸಲಾಗುತ್ತಿದೆ. 1 ಸಾವಿರ ಪ್ರೌಢಶಾಲೆ ಮತ್ತು ಪಿಯುಸಿ ಕಾಲೇಜುಗಳಲ್ಲಿ ಐಟಿಃಸ್ಕೂಲ್ ಯೋಜನೆ ಆರಂಭಿಸಲಾಗುತ್ತಿದ್ದು, ಮಾಹಿತಿ ತಂತ್ರಜ್ಞಾನ ಶಿಕ್ಷಣವನ್ನು ನೀಡಲಾಗುವುದು.  ಮಾಹಿತಿ ತಂತ್ರಜ್ಞಾನವನ್ನು ಬಳಸಿಕೊಂಡು ಎಸ್‍ಎಸ್‍ಎಲ್‍ಸಿ ಮತ್ತು ಪಿಯು ಪರೀಕ್ಷೆಗಳ ವ್ಯವಸ್ಥೆ ಸುಧಾರಣೆ ಮಾಡಲಾಗುವುದು ಮತ್ತು ಶಿಕ್ಷಕರ ಹಾಜರಾತಿ ನಿಗಾವಣೆಗೆ ಬಯೋಮೆಟ್ರಿಕ್ ತಂತ್ರಜ್ಞಾನವನ್ನು ಜಾರಿಗೆ ತರಲಾಗುತ್ತಿದೆ.
50 ಸಾವಿರ ಶಿಕ್ಷಕರಿಗೆ, ಉಪನ್ಯಾಸಕರಿಗೆ ಪ್ರಮುಖ ವಿಷಯಗಳು ಮತ್ತು ಇಂಗ್ಲೀಷ್ ಬೋಧನೆಯ ತರಬೇತಿ ನೀಡಲಾಗುವುದು. ಶಾಲಾ ಗ್ರಂಥಾಲಯಗಳಿಗೆ ಸಾಮಾಜಿಕ ಸಂದೇಶವುಳ್ಳ ಕಥಾಪುಸ್ತಕಗಳನ್ನು ಒದಗಿಸಲಾಗುವುದು. ಜುಲೈ ತಿಂಗಳಿನಿಂದ ಜಾರಿಗೆ ಬರುವಂತೆ ವಾರದಲ್ಲಿ ಐದು ದಿನ ಹಾಲು ವಿತರಿಸಲಾಗುವುದು. ಮಧ್ಯಾಹ್ನ ಬಿಸಿಯೂಟ ಕಾರ್ಯಕ್ರಮದಡಿ 4 ಲಕ್ಷ ಮಕ್ಕಳಿಗೆ ಸಾರವರ್ಧಕ ಅಕ್ಕಿ ಉಪಯೋಗ ಯೋಜನೆಯನ್ನು ನಾಲ್ಕು ಜಿಲ್ಲೆಗಳಿಗೆ ವಿಸ್ತರಿಸಲಾಗುವುದು. 8 ರಿಂದ 10ನೆ ತರಗತಿ ಹೆಣ್ಣುಮಕ್ಕಳಿಗೆ ಚೂಡಿದಾರ್ ಸಮವಸ್ತ್ರ ವಿತರಿಸಲಾಗುವುದು, ದೃಷ್ಟಿಪರೀಕ್ಷೆ ಮತ್ತು ಕನ್ನಡಕಗಳನ್ನು ವಿತರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.


+ ಏಪ್ರಿಲ್‍ನಿಂದ 2 ಸ್ಟ್ರೋಕ್ ಆಟೋ ರಿಕ್ಷಾ ರದ್ದು

ಬೆಂಗಳೂರು,ಮಾ.15- ರಾಜಧಾನಿಯಲ್ಲಿ ವಾಯುಮಾಲಿನ್ಯ ಕಡಿಮೆ ಮಾಡಲು ಏಪ್ರಿಲ್‍ನಿಂದ 2 ಸ್ಟ್ರೋಕ್ ಆಟೋ ರಿಕ್ಷಾ ರದ್ದು ಮಾಡಲು ತೀರ್ಮಾನಿಸಲಾಗಿದೆ. ಅದರ ಬದಲು ನಾಲ್ಕು ಸ್ಟ್ರೋಕ್ ಎಲ್‍ಪಿಜಿಯ 10 ಸಾವಿರ ಆಟೋ ರಿಕ್ಷಾಗಳಿಗೆ, ಪ್ರತಿ ಆಟೋರಿಕ್ಷಾಗೆ 30 ಸಾವಿರ ರೂ.ಗಳ ಸಹಾಯಧನಕ್ಕಾಗಿ 30 ಕೋಟಿ ರೂ.ಗಳನ್ನು ಒದಗಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ ಪ್ರಸ್ತಾಪಿಸಿದ್ದಾರೆ. ಮಿತಿಮೀರಿದ ವಾಯುಮಾಲಿನ್ಯ ತಡೆಯಲು ಈ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ ಎಂದು ಅವರು ಹೇಳಿದ್ದಾರೆ.

ಮೂರು ಸಾವಿರ ಹೊಸ ಬಸ್:

ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಬಿಎಂಟಿಸಿ ಬಸ್‍ಗಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಲು ತೀರ್ಮಾನಿಸಿದ್ದು , ಪ್ರಸಕ್ತ ಸಾಲಿನಲ್ಲಿ ಮೂರು ಸಾವಿರ ಹೊಸ ಬಸ್‍ಗಳನ್ನು ಸೇರ್ಪಡೆ ಮಾಡಿಕೊಳ್ಳಲಾಗುವುದು. ಇದರಲ್ಲಿ 1500 ಬಸ್‍ಗಳ ಖರೀದಿ ಮೂಲಕ ಮತ್ತು 1500 ಬಸ್‍ಗಳನ್ನು ಗುತ್ತಿಗೆ ಮೂಲಕ ಪಡೆಯಲಾಗುವುದು, ಸಾರಿಗೆ ನಿಗಮಗಳಿಂದ 3,350 ಬಸ್‍ಗಳನ್ನು ಖರೀದಿಸಲಾಗುವುದು.  ಕೇಂದ್ರದ ಅನುದಾನದೊಂದಿಗೆ ಬೆಂಗಳೂರಿನಲ್ಲಿ 150 ಹಾಗೂ ಮೈಸೂರಿನಲ್ಲಿ 50 ಎಲೆಕ್ಟ್ರಿಕ್ ಬಸ್‍ಗಳನ್ನು ಸಂಚಾರಕ್ಕೆ ಬಿಡಲು ತೀರ್ಮಾನಿಸಲಾಗಿದೆ. ಕಾರ್ಯದಕ್ಷತೆಯನ್ನು ಸುಧಾರಿಸಲು ಶಿವಮೊಗ್ಗದಲ್ಲಿ ಹೊಸ ವಿಭಾಗ ಆರಂಭ. ಎಲ್ಲಾ ಸಾರಿಗೆ ನಿಗಮಗಳ ಮೂಲಕ 44 ಹೊಸ ಬಸ್ ನಿಲ್ದಾಣ, 14 ಹೊಸ ಬಸ್ ಡಿಪೋ, ತರಬೇತಿ ಕೇಂದ್ರಗಳ ಸ್ಥಾಪನೆ.

ಗೋವಾ ಮತ್ತು ಸ್ವಾತಂತ್ರ್ಯ ಹೋರಾಟಗಾರರಿಗೆ ಉಚಿತ ಬಸ್ ಪಾಸ್, ಅರ್ಜುನ್ ಮತ್ತು ಖೇಲ್ ರತ್ನ ಪ್ರಶಸ್ತಿ ಪುರಸ್ಕøತರಿಗೆ ಉಚಿತ ಬಸ್ ಪಾಸ್ ನೀಡಲಾಗುವುದು. ಮಹಿಳಾ ಪ್ರಯಾಣಿಕರಿಗೆ ಹೆಚ್ಚಿನ ಸುರಕ್ಷತೆ ಒದಗಿಸಲು ಬಿಎಂಟಿಸಿ ಮೊಬೈಲ್ ಅಪ್ಲಿಕೇಷನ್‍ನಲ್ಲಿ ಹೊಸದಾಗಿ ಎಸ್‍ಒಎಸ್ ಬಟನ್ ಮತ್ತು ಟ್ರ್ಯಾಕಿಂಗ್ ಸೌಲಭ್ಯ ಒದಗಿಸಲಾಗುವುದು ಎಂದು ಸಿದ್ದು ಹೇಳಿದರು.

ಸ್ಮಾರ್ಟ್‍ಕಾರ್ಡ್ ವಿತರಣೆ:

ರಿಯಾಯ್ತಿ ದರದ ಪಾಸ್‍ಗಳನ್ನು ಹೊಂದಿದವರಿಗೆ ಸ್ಮಾರ್ಟ್ ಕಾರ್ಡ್‍ಗಳನ್ನು ವಿತರಿಸಲಾಗುವುದು. ಚಾಲಕರು ಮತ್ತು ಮೆಕಾನಿಕ್‍ಗಳಿಗೆ ಕೌಶಲ್ಯಾಭಿವೃದ್ದಿ ಕೇಂದ್ರ ಸ್ಥಾಪನೆ, ಪ್ರತಿ ವರ್ಷ 25 ಸಾವಿರ ಅಭ್ಯರ್ಥಿಗಳಿಗೆ ತರಬೇತಿ ನೀಡಲು ಅನುವಾಗುವಂತೆ ಮೇಲ್ದರ್ಜೆಗೇರಿಸಲಾಗುವುದು ಎಂದರು.


+ ಬೆಂಗಳೂರಿಗರಿಗೆ ಅಮ್ಮ ಕ್ಯಾಂಟೀನ್ ಮಾದರಿಯಲ್ಲಿ ನಮ್ಮ ಕ್ಯಾಂಟೀನ್ : 
ನಪ್ರಿಯತೆಗೆ ಮನ್ನಣೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನಗರದ ಸರ್ವಾಗೀಂಣ ಅಭಿವೃದ್ಧಿ ಜೊತೆಗೆ ಜನಸಾಮಾನ್ಯರಿಗೆ ಹತ್ತಿರವಾಗಲು ತಮಿಳುನಾಡಿನ ಅಮ್ಮ ಮಾದರಿಯಲ್ಲೇ ನಮ್ಮ ಕ್ಯಾಂಟೀನ್ ತೆರೆಯಲು ತೀರ್ಮಾನಿಸಿದ್ದಾರೆ.  198 ವಾರ್ಡ್‍ಗಳಲ್ಲಿ ತಲಾ ಒಂದೊಂದು ನಮ್ಮ ಕ್ಯಾಟೀನ್ ತೆರೆದು 5 ರೂ.ಗಳಿಗೆ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿ ಕೇವಲ 10 ರೂ.ಗಳಿಗೆ ಹೊಟ್ಟೆ ಊಟ ನೀಡಲು 100 ಕೋಟಿ ರೂ.ಗಳನ್ನು ಈ ಬಾರಿಯ ಅಯವ್ಯಯದಲ್ಲಿ ಮೀಸಲಿರಿಸಲಾಗಿದೆ.

ನಗರದ ಮೂಲ ಸೌಕರ್ಯ ಅಭಿವೃದ್ಧಿಗೆ ಮೀಸಲಿಟ್ಟಿರುವ 7,300 ಕೋಟಿ ರೂ.ಗಳ ಅನುದಾನವನ್ನು ಮಾರ್ಚ್ 2018ರ ವೇಳೆಗೆ ಸಂಪೂರ್ಣ ಬಳಕೆ ಮಾಡಿಕೊಂಡು ಹೈಟೆಕ್ ಸಿಟಿಯ ಖ್ಯಾತಿಯನ್ನು ಉಳಿಸಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಭರವಸೆ ನೀಡಿದ್ದಾರೆ.
ಕಳೆದ ವರ್ಷ ಆರಂಭಿಸಿರುವ ವ್ಯವಸ್ಥಿತ ನಗರ ಉನ್ನತೀಕರಣ ನೀತಿಯನ್ನು ಮುಂದುವರಿಸಿಕೊಂಡು ಹೋಗಲು ಕ್ರಿಯಾ ಯೋಜನೆ ರೂಪಿಸಲಾಗಿದ್ದು , ಪ್ರಸಕ್ತ ಸಾಲಿನಲ್ಲಿ 690 ಕೋಟಿ ರೂ. ವೆಚ್ಚದಲ್ಲಿ 80 ಕಿ.ಮೀ. ಉದ್ದದ 40 ರಸ್ತೆಗಳನ್ನು ಹಾಗೂ ಪಾದಚಾರಿ ಮಾರ್ಗಗಳನ್ನು ಮೇಲ್ದರ್ಜೇಗೇರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

250 ಕೋಟಿ ರೂ. ವೆಚ್ಚದಲ್ಲಿ ನಗರದ 25 ಕಿ.ಮೀ. ಉದ್ದದ 25 ಅಂತರ ಸಂಪರ್ಕ ರಸ್ತೆಗಳನ್ನು ಟೆಂಡರ್‍ಶ್ಯೂರ್ ಯೋಜನೆಯಡಿ ಅಭಿವೃದ್ಧಿಪಡಿಸುವುದು. ಸಂಚಾರ ದಟ್ಟಣೆ ತಗ್ಗಿಸಲು 12 ಕಾರಿಡಾರ್‍ಗಳನ್ನು ಅಭಿವೃದ್ಧಿಪಡಿಸಲು 150 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ. ಅದೇ ರೀತಿ 200 ಕಿ.ಮೀ. ಉದ್ದದ ಪಾದಚಾರಿ ಮಾರ್ಗಗಳನ್ನು 200 ಕೋಟಿ ರೂ. ವೆಚ್ಚದಲ್ಲಿ ನವೀಕರಣಗೊಳಿಸಲಾಗುವುದು.  ನಗರದ ಆಯ್ದ 9 ಜಂಕ್ಷನ್‍ಗಳಲ್ಲಿ ಗ್ರೇಡ್ ಸಪರೇಟರ್‍ಗಳನ್ನು ನಿರ್ಮಿಸಿ ತಡೆರಹಿತ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲು 421 ಕೋಟಿ ರೂ.ಗಳನ್ನು ಅನುದಾನ ನೀಡುವುದರ ಜೊತೆಗೆ 150 ಕೋಟಿ ರೂ. ವೆಚ್ಚದಲ್ಲಿ ರೈಲ್ವೆ ಮೇಲ್ಸೇತುವೆ ಮತ್ತು ಕೆಳಸೇತುವೆಗಳನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ.

300 ಕೋಟಿ ರೂ. ವೆಚ್ಚದಲ್ಲಿ ಬೃಹತ್ ಮಳೆ ನೀರು ಕಾಲುವೆ ನಿರ್ಮಾಣ, 200 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಹುಬ್ಬ , ಜಂಕ್ಷನ್ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಪಾದಚಾರಿಗಳು ಸುರಕ್ಷಿತವಾಗಿ ರಸ್ತೆ ದಾಟಲು ಅನುಕೂಲವಾಗುವಂತೆ ಖಾಸಗಿ ಸಹಭಾಗಿತ್ವದಲ್ಲಿ ಸ್ಕೈವಾಕ್ ನಿರ್ಮಿಸಲು 80 ಕೋಟಿ ರೂ.ಗಳ ಉತ್ತೇಜನ ಮೊತ್ತ ಕಾಯ್ದಿರಿಸಲಾಗಿದೆ. ಸ್ವಚ್ಛ ಬೆಂಗಳೂರಿನ ಕನಸಿಗೆ ಸಹಕಾರ ನೀಡುವಂತೆ 1 ಸಾವಿರ ಆಧುನಿಕ ಶೌಚಾಲಯಗಳ ನಿರ್ಮಾಣಕ್ಕೆ 50 ಕೋಟಿ ರೂ. ನಿಗದಿಪಡಿಸಲಾಗಿದೆ.


+ ಬೆಂಗಳೂರು ಮಾದರಿಯಲ್ಲೇ ಹೊಸ 9 ಕರ್ನಾಟಕ ಒನ್ ಕೇಂದ್ರ ಪ್ರಾರಂಭ

ಬೆಂಗಳೂರು, ಮಾ.15-ಬೆಂಗಳೂರು ಒನ್ ಮಾದರಿಯಲ್ಲಿಯೇ ಪ್ರಸಕ್ತ ಸಾಲಿನಲ್ಲಿ ರಾಜ್ಯದ 9 ಕಡೆ 39 ಕರ್ನಾಟಕ ಒನ್ ಕೇಂದ್ರಗಳನ್ನು ರಾಜ್ಯ ಸರ್ಕಾರ ಸ್ಥಾಪಿಸುವುದಾಗಿ ಘೋಷಿಸಿದೆ.   ಸಾರ್ವಜನಿಕರಿಗೆ ತಮ್ಮ ಅಗತ್ಯ ಪೂರೈಸಿಕೊಳ್ಳಲು ಅನುಕೂಲವಾಗುವಂತೆ ಪ್ರಸಕ್ತ ವರ್ಷ 9 ಮಹಾನಗರಗಳಾದ ಹುಬ್ಬಳ್ಳಿ-ಧಾರವಾಡ, ಮಂಗಳೂರು, ಶಿವಮೊಗ್ಗ, ಬೆಳಗಾವಿ, ಬಳ್ಳಾರಿ, ಮೈಸೂರು, ದಾವಣಗೆರೆ, ಕಲಬುರಗಿ ಮತ್ತು ತುಮಕೂರಿನಲ್ಲಿ 39 ಕರ್ನಾಟಕ ಒನ್ ಕೇಂದ್ರಗಳನ್ನು ಸ್ಥಾಪಿಸುವುದಾಗಿ ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದರು.

ಮೊಬೈಲ್ ಒನ್ ಯೋಜನೆಯು ಪ್ರತಿಯೊಬ್ಬ ನಾಗರಿಕರಿಗೂ ಸಿಗಬೇಕು ಎಂಬುದು ನಮ್ಮ ಉದ್ದೇಶ. ಅದಕ್ಕಾಗಿ 2017-18ನೆ ಸಾಲಿನ ಹಣಕಾಸು ವರ್ಷದಲ್ಲಿ 18ಕ್ಕೂ ಅಧಿಕ ಜಿಲ್ಲೆಗಳಲ್ಲಿ ಕರ್ನಾಟಕ ಒನ್ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗುವುದು.  ಕೇಸ್ವಾನ್-2 ಯೋಜನೆಯನ್ನು ಮುಂದಿನ ಐದು ವರ್ಷಗಳಲ್ಲಿ 800 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನ ಮಾಡಲಾಗುವುದು. ಇದರ ವ್ಯಾಪ್ತಿಗೆ ಸರ್ಕಾರಿ ಕಚೇರಿಗಳ ಸಂಖ್ಯೆ 10 ಸಾವಿರಕ್ಕೆ ಏರಿಕೆಯಾಗಲಿದೆ. ಈ ಯೋಜನೆಯಿಂದ ಪ್ರತಿಯೊಬ್ಬ ನಾಗರಿಕನಿಗೂ ಅಗತ್ಯ ಸೇವೆಗಳು ಕಾಲಮಿತಿಯೊಳಗೆ ಲಭ್ಯವಾಗಲಿವೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.


+ ರಾಜ್ಯದ ರಸ್ತೆಗಳ ಅಭಿವೃದ್ಧಿಗೆ ದುಪ್ಪಟ್ಟು ಅನುದಾನ

ಬೆಂಗಳೂರು, ಮಾ.15- ರಾಜ್ಯದ ಪ್ರಮುಖ ರಸ್ತೆ ಜಾಲವನ್ನು ಅಭಿವೃದ್ಧಿಪಡಿಸಲು ಕೆಶಿಪ್-111 ಯೋಜನೆಯಡಿ ಪ್ರಸಕ್ತ ವರ್ಷ ಹೊಸ ರಸ್ತೆಗಳ ನಿರ್ಮಾಣಕ್ಕೆ 5310 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಎಡಿಬಿ ಎರಡನೆ ಲೋನ್ ಯೋಜನೆಯಡಿ 418 ಕಿಲೋ ಮೀಟರ್ ಉದ್ದದ ರಸ್ತೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗುವುದು. ಇದಕ್ಕಾಗಿ 5310 ಕೋಟಿ ಅನುದಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಆಯವ್ಯಯದಲ್ಲಿ ತಿಳಿಸಿದ್ದಾರೆ.
ಕೊಳ್ಳೇಗಾಲ-ಹನೂರು ರಸ್ತೆ 23.8 ಕಿಮೀ, ಚಿಂತಾಮಣಿ-ಆಂಧ್ರ ಪ್ರದೇಶ ಗಡಿ ರಸ್ತೆ 39.8ಕಿಮೀ, ಬೆಂಗಳೂರು-ಮಾಗಡಿ ರಾಷ್ಟ್ರೀಯ ಹೆದ್ದಾರಿ 50.7ಕಿಮೀ, ಹುಲಿಯೂರು ದುರ್ಗ-ನಾಗಮಂಗಲ-ಕೆಆರ್ ಪೇಟೆ 166ಕಿಮೀ ಹಾಗೂ ಗದಗ-ಹೊನ್ನಾಳಿ 138.2ಕಿಮೀ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು. ಬೆಂಗಳೂರು ನಗರದ ವಾಹನದಟ್ಟಣೆ ಕಡಿಮೆ ಮಾಡಲು ಕೆಆರ್‍ಡಿಸಿಎಲ್ ಯೋಜನೆಯಡಿ 1455ಕೋಟಿ ರೂ. ಅಂದಾಜು ಮೊತ್ತದಲ್ಲಿ 150ಕಿಲೋ ಮೀಟರ್ ಅಭಿವೃದ್ಧಿಪಡಿಸುವುದಾಗಿ ಘೋಷಿಸಿದರು.

ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಹೊಸಕೋಟೆ-ಬೂದಿಗೆರೆ-ಮೈಲೇನಹಳ್ಳಿ, ನೆಲಮಂಗಲ-ಮಧುರೆ-ಬ್ಯಾತ, ಆನೇಕಲ್-ಅತ್ತಿಬೆಲೆ-ಸರ್ಜಾಪುರ-ವರ್ತೂರು-ವೈಟ್‍ಫೀಲ್ಡ್-ಹೊಸಕೋಟೆ ರಸ್ತೆ, ಹಾರೋಹಳ್ಳಿ-ಉರುಗನದೊಡ್ಡಿ-ಕೆಐಎಡಿಬಿ ಕೈಗಾರಿಕಾ ಪ್ರದೇಶ-ಜಿಗಣಿ- ಆನೇಕಲ್ ರಸ್ತೆ ಇದರ ವ್ಯಾಪ್ತಿಗೆ ಸೇರಿವೆ. ಮೈಸೂರು ನಗರದ ಸುತ್ತಮುತ್ತಲಿನ 22ಕಿಮೀ ಉದ್ದದ ರಸ್ತೆ ಅಭಿವೃದ್ಧಿಗೆ 117 ಕೋಟಿ, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಂಗಳೂರು-ಅತ್ರಡಿಯ 2.5 ಉದ್ದದ ರಸ್ತೆಗೆ 50 ಕೋಟಿ, ಕೊಡಗು ಜಿಲ್ಲೆಗೆ 50 ಕೋಟಿ ವಿಶೇಷ ಪ್ಯಾಕೇಜ್, ಕಾರವಾರ ಬಂದರಿನಲ್ಲಿ ಆಮದು-ರಫ್ತು ಚಟುವಟಿಕೆಗಳನ್ನು ಉತ್ತೇಜಿಸಲು 17ಕಿಮೀ ಆಳದ 5 ಹಡಗುಗಳ ನಿಲುಗಡೆಗೆ 1508 ಮೀಟರ್ ಉದ್ದದ ದಕ್ಕೆಯನ್ನು ನಿರ್ಮಾಣ ಮಾಡಲಾಗುವುದು. ಪ್ರಸಕ್ತ ವರ್ಷ ಲೋಕೋಪಯೋಗಿ, ಬಂದರು, ಒಳನಾಡು, ಜಲಸಾರಿಗೆ ಇಲಾಖೆಗೆ 8559 ಕೋಟಿ ಒದಗಿಸಲಾಗಿದ್ದು, ರಸ್ತೆಗಳ ಸಂಪರ್ಕ ಜಾಲ ಸರ್ಕಾರದ ಪ್ರಮುಖ ಆದ್ಯತೆ ಎಂದು ತಿಳಿಸಿದ್ದಾರೆ.


 + 7 ಲಕ್ಷ ಮನೆಗಳ ನಿರ್ಮಾಣ ಮಾಡುವ ಗುರಿ

ಬೆಂಗಳೂರು, ಮಾ.15– ಗ್ರಾಮೀಣ ಭಾಗಗಳಲ್ಲಿ ಪ್ರತಿಯೊಬ್ಬರಿಗೂ ಸೂರು ನೀಡುವ ಸದುದ್ದೇಶದಿಂದ ಈ ಬಾರಿ ಒಟ್ಟು 6 ಲಕ್ಷ ಮನೆಗಳನ್ನು ನಿರ್ಮಾಣ ಮಾಡುವ ಗುರಿಯನ್ನು ರಾಜ್ಯಸರ್ಕಾರ ಹೊಂದಿದೆ. ವಿವಿಧ ವಸತಿ ಯೋಜನೆಗಳಡಿ ಈ ಬಾರಿ ಒಟ್ಟು 7 ಲಕ್ಷ ಮನೆಗಳನ್ನು ನಿರ್ಮಾಣ ಮಾಡಲಾಗುವುದು. ಗ್ರಾಮೀಣ ಪ್ರದೇಶಗಳಲ್ಲಿ 6 ಲಕ್ಷ ಹಾಗೂ ಬೆಂಗಳೂರಿನಲ್ಲಿ 1 ಲಕ್ಷ ಮನೆ ನಿರ್ಮಾಣ ಮಾಡುವುದಾಗಿ ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ವಸತಿ ಯೋಜನೆಗೆ 2017-18ನೆ ಸಾಲಿನಲ್ಲಿ ಈ ಬಾರಿ 4708 ಕೋಟಿ ಅನುದಾನ ಒದಗಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯವನ್ನು ಗುಡಿಸಲು ಮುಕ್ತ ಮಾಡುವ ಉದ್ದೇಶ ಹೊಂದಿರುವುದು ಸ್ಪಷ್ಟವಾಗಿದೆ.

ಕರ್ನಾಟಕ ಕೊಳಚೆ ಪ್ರದೇಶ ಅಭಿವೃದ್ಧಿ ಮಂಡಳಿ ಮೂಲಕ 50 ಸಾವಿರ ಮನೆಗಳ ನಿರ್ಮಾಣ, ಇಂದಿರಾ ಗ್ರಾಮೀಣ ವಸತಿ ನಿವೇಶನ ಯೋಜನೆಯಡಿ 60:40 ಅನುಪಾತದಲ್ಲಿ ಖಾಸಗಿ ಭೂ ಮಾಲೀಕರ ಪಾಲುದಾರಿಕೆಯಡಿ ಮನೆ, ನಿವೇಶನಗಳನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ.  ಡಾ.ಬಿ.ಆರ್.ಅಂಬೇಡ್ಕರ್ ಅವರ 126ನೆ ಜನ್ಮದಿನಾಚರಣೆ ಅಂಗವಾಗಿ ಈ ವರ್ಷ ಡಾ.ಬಿ.ಆರ್.ಅಂಬೇಡ್ಕರ್ ನಿವಾಸ್ ಯೋಜನೆಯಡಿ ಮನೆಗಳಿಗಾಗಿ ಅರ್ಜಿ ಸಲ್ಲಿಸುವ ನಿವೇಶನ ಹೊಂದಿರುವ ಎಲ್ಲ ವಸತಿ ರಹಿತ ಎಸ್‍ಸಿ-ಎಸ್‍ಟಿ ಪಂಗಡದವರಿಗೆ ವಸತಿ ಸೌಲಭ್ಯ ಒದಗಿಸುವುದಾಗಿ ಘೋಷಣೆ ಮಾಡಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ ಈ ವರ್ಷ 1 ಲಕ್ಷ ಮನೆಗಳನ್ನು ನಿರ್ಮಾಣ ಮಾಡಲಾಗುವುದು. ಈ ಯೋಜನೆಯನ್ವಯ ಲಭ್ಯವಿರುವ ಭೂಮಿಯಲ್ಲಿ ಶೇ.25ರ ವರೆಗಿನ ವಿಸ್ತೀರ್ಣದಲ್ಲಿ ಅಭಿವೃದ್ಧಿಪಡಿಸಿದ ಫ್ಲಾಟ್‍ಗಳು, ಮನೆಗಳ ಮಾರಾಟದಿಂದ ಲಭ್ಯವಾಗುವ ಹಣವನ್ನು ಬಡವರಿಗೆ ಕೈಗೆಟಕುವ ದರದಲ್ಲಿ ವಸತಿ ಸೌಲಭ್ಯ ಕಲ್ಪಿಸಲು ಸಹಾಯಧನ ನೀಡಲಾಗುವುದು. ಅಲ್ಲದೆ, ಈ ಮಾದರಿಯನ್ನು ನಗರ, ಪಟ್ಟಣಗಳಿಗೆ ವಿಸ್ತರಿಸಿ ಬಡಜನತೆಗೆ ಕೈಗೆಟಕುವ ವಸತಿ ಸೌಲಭ್ಯ ಕಲ್ಪಿಸಲು ರಾಜ್ಯಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.


< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  


+ 3 ಮಲ್ಟಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ , 6 ನೂತನ ವೈದ್ಯಕೀಯ ಕಾಲೇಜುಗಳ ಪ್ರಾರಂಭ

ಬೆಂಗಳೂರು, ಮಾ.15- ಪ್ರಸಕ್ತ ವರ್ಷ ರಾಜ್ಯದ ಬೆಳಗಾವಿ, ಕಲಬುರಗಿ ಮತ್ತು ಮೈಸೂರು ಮಹಾನಗರಗಳಲ್ಲಿ 250 ಹಾಸಿಗೆಗಳ ಸಾಮಥ್ರ್ಯದ ಮಲ್ಟಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಆರು ನೂತನ ವೈದ್ಯಕೀಯ ಕಾಲೇಜುಗಳನ್ನು ತೆರೆಯಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.  ವಿಧಾನಸೌಧದಲ್ಲಿಂದು ಮಂಡನೆಯಾದ 2017-18ನೆ ಸಾಲಿನ ಬಜೆಟ್‍ನಲ್ಲಿ ಕಲಬುರಗಿ, ಮೈಸೂರು, ಬೆಳಗಾವಿಯಲ್ಲಿ 310 ಕೋಟಿ ರೂ. ವೆಚ್ಚದಲ್ಲಿ 250 ಹಾಸಿಗೆ ಸಾಮಥ್ರ್ಯದ ಮಲ್ಟಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ನಿರ್ಮಾಣ ಮಾಡುವುದಾಗಿ ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದರು.
ಈ ಆಸ್ಪತ್ರೆಗೆ ಕೇಂದ್ರ ಸರ್ಕಾರ ಶೇ.40ರಷ್ಟು ಆರ್ಥಿಕ ನೆರವು ಒದಗಿಸಿದರೆ, ರಾಜ್ಯ ಸರ್ಕಾರ ಶೇ.60ರಷ್ಟು ಅನುದಾನ ನೀಡಲಿದೆ ಎಂದು ತಿಳಿಸಿದರು.
ಇದೇ ರೀತಿ ಚಿತ್ರದುರ್ಗ, ಬಾಗಲಕೋಟೆ, ಹಾವೇರಿ, ಯಾದಗಿರಿ, ಚಿಕ್ಕಬಳ್ಳಾಪುರ ಮತ್ತು ಚಿಕ್ಕಮಗಳೂರಿನಲ್ಲಿ ಆರು ವೈದ್ಯಕೀಯ ಕಾಲೇಜುಗಳ ನಿರ್ಮಾಣ ಪ್ರಾರಂಭ ಮಾಡುವುದಾಗಿ ಘೋಷಿಸಿದರು.

ಬೆಂಗಳೂರಿನ ಇಂದಿರಾನಗರದಲ್ಲಿ 35 ಕೋಟಿ ವೆಚ್ಚದಲ್ಲಿ ಕರ್ನಾಟಕ ಇನ್ಸ್‍ಟಿಟ್ಯೂಟ್ ಆಫ್ ಎಂಡ್ರೋ ಕೈನಾಲಜಿ ಎಂಬ ಹೊಸ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು. ಹುಬ್ಬಳ್ಳಿಯ ಕಿಮ್ಸ್ ಆವರಣದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರ ಘಟಕ ತೆರೆಯಲಾಗುವುದು. ಮಿಂಟೋ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ 10 ಕೋಟಿ ಅನುದಾನ ಒದಗಿಸಿ ಮೇಲ್ದರ್ಜೆಗೇರಿಸುವ ಭರವಸೆ ಒದಗಿಸಲಾಗಿದೆ.
ಬಡ ಮತ್ತು ಅವಶ್ಯವಿರುವ ರೋಗಿಗಳಿಗೆ ಉತ್ತಮ ಚಿಕಿತ್ಸಾ ಸೌಲಭ್ಯ ನೀಡಲು ಬೆಂಗಳೂರಿನ ಕ್ಷಯರೋಗ ಆಸ್ಪತ್ರೆ ಆವರಣದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ, ಚರ್ಮರೋಗ ಸಂಸ್ಥೆ ಬಳ್ಳಾರಿಯ ವಿಮ್ಸ್ ಬೋಧನಾ ಆಸ್ಪತ್ರೆಗೆ 25 ಕೋಟಿ ರೂ., ಕಲಬುರಗಿ ಮತ್ತು ಮೈಸೂರಿನಲ್ಲಿ ತಲಾ 10 ಕೋಟಿ ರೂ. ವೆಚ್ಚದಲ್ಲಿ ನೆಫ್ರೋ , ಯೂರಾಜಲಿ ಘಟಕ ಪ್ರಾರಂಭ, ರಾಜ್ಯಾದ್ಯಂತ ಸಿಮ್ಯುಲೇಟರ್ ನಿಯೋಜಿಸಲು 5 ಕೋಟಿ ಮೀಸಲಿಡಲಾಗಿದೆ. ಪ್ರಸಕ್ತ ವರ್ಷ ವೈದ್ಯಕೀಯ ಶಿಕ್ಷಣ ಇಲಾಖೆಗೆ 2400 ಕೋಟಿ ಅನುದಾನ ನೀಡಲಾಗಿದೆ.


+ ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಗೌರವಧನ ಹೆಚ್ಚಳ
ಬೆಂಗಳೂರು, ಮಾ.15- ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಗೌರವಧನವನ್ನು ಹೆಚ್ಚಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾಯಿತ ಪ್ರತಿನಿಧಿಗಳ ಮೂಗಿಗೆ ತುಪ್ಪ ಸವರಿದ್ದಾರೆ. ವಿಧಾನಸೌಧದಲ್ಲಿಂದು ಮಂಡನೆಯಾದ 2017-18ನೆ ಸಾಲಿನ ಬಜೆಟ್‍ನಲ್ಲಿ ಚುನಾಯಿತ ಸದಸ್ಯರ ಗೌರವಧನ ಹೆಚ್ಚಳ ಮಾಡುವುದಾಗಿ ಘೋಷಣೆ ಮಾಡಿದರು.  ಈ ಪ್ರಕಾರ ಇನ್ನು ಮುಂದೆ ಜಿಪಂ ಸದಸ್ಯರ ಗೌರವ ಧನ 3000 ದಿಂದ 5000, ತಾಪಂ ಅಧ್ಯಕ್ಷರಿಗೆ 4500 ರಿಂದ 6000, ತಾಪಂ ಉಪಾಧ್ಯಕ್ಷರಿಗೆ 3000 ದಿಂದ 4000, ತಾಪಂ ಸದಸ್ಯರಿಗೆ 1500 ರಿಂದ 3000, ಗ್ರಾಪಂ ಅಧ್ಯಕ್ಷರಿಗೆ 1000 ದಿಂದ 3000, ಗ್ರಾಪಂ ಉಪಾಧ್ಯಕ್ಷರಿಗೆ 600 ರಿಂದ 2000 ಮತ್ತು ಸದಸ್ಯರಿಗೆ 500 ರಿಂದ 1000 ವೇತನ ಏರಿಕೆ ಮಾಡಲಾಗಿದೆ.
ಎಂಜಿಐಆರ್‍ಇಡಿ ಆವರಣದಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ಒಂದು ಮಾದರಿ ಪಾರಂಪರಿಕ ಗ್ರಾಮ ಸ್ಥಾಪನೆ, ಜಿಲ್ಲಾ ಪಂಚಾಯತ್ ಅಭಿವೃದ್ಧಿ ಅನುದಾನವನ್ನು 2 ಕೋಟಿಯಿಂದ 4 ಕೋಟಿಗೆ ಹೆಚ್ಚಳ ಮಾಡಲಾಗಿದೆ.

ನಮ್ಮ ಗ್ರಾಮ ನಮ್ಮ ಯೋಜನೆಗಾಗಿ 20 ಕೋಟಿ ಅನುದಾನ ಒದಗಿಸಲಾಗಿದ್ದು, ಗ್ರಾಮೀಣ ನೀರು ಸರಬರಾಜು ಯೋಜನೆಗೆ 2200 ಕೋಟಿ ಅನುದಾನ ಮೀಸಲಿಡಲಾಗಿದೆ. ರಾಸಾಯನಿಕ ಕಲುಷಿತದಿಂದಾಗಿ ಗ್ರಾಮೀಣ ಜನರ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮ ತಪ್ಪಿಸಲು ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಆದ್ಯತೆ ನೀಡಲಾಗಿದ್ದು, ಈ ಬಾರಿ 2500 ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡುವುದಾಗಿ ತಿಳಿಸಿದರು.
ಗ್ರಾಮೀಣ ನೈರ್ಮಲ್ಯ ಕಾಪಾಡಲು ಹಾಗೂ ರಾಜ್ಯವನ್ನು ಬಹಿರ್ದೆಸೆ ಮುಕ್ತವಾಗಿಸಲು 1585 ಕೋಟಿ ರೂ. ಒದಗಿಸಲಾಗಿದೆ. ಇದರಲ್ಲಿ ಶೌಚಾಲಯ ರಹಿತ ಎಲ್ಲ ಗ್ರಾಮೀಣ ಕುಟುಂಬಗಳಿಗೆ ವೈಯಕ್ತಿಕ ಶೌಚಾಲಯಕ್ಕಾಗಿ ಪ್ರೋತ್ಸಾಹ ಧನ, ಸಮಸ್ಯೆ ಇರುವ ಕಡೆ ಸಾಮೂಹಿಕ ಶೌಚಾಲಯ ಸಂಕೀರ್ಣ, ಗ್ರಾಮ ಸ್ವಚ್ಛತೆ ಕಾಪಾಡಲು ಘನ ಮತ್ತು ದ್ರವ್ಯ ತ್ಯಾಜ್ಯಗಳ ನಿರ್ವಹಣೆ ಮಾಡುವುದಾಗಿ ತಿಳಿಸಿದರು.  ರಾಷ್ಟ್ರೀಯ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆಗಳ ಮಾರ್ಗಸೂಚಿಯಂತೆ ಇನ್ನು ಮುಂದೆ ಗ್ರಾಮೀಣ ರಸ್ತೆ ನಿರ್ವಹಣಾ ನೀತಿ ಜಾರಿಗೊಳಿಸುವುದಾಗಿ ಪ್ರಕಟಿಸಿದ್ದಾರೆ.

ನಮ್ಮ ಹೊಲ ನಮ್ಮ ದಾರಿ ಯೋಜನೆಯಡಿ ರಾಜ್ಯದ ಪ್ರತಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 25ಕಿಮೀ ಉದ್ದದ ಹೊಲಗಳಿಗೆ ಹೋಗುವ ಮಣ್ಣಿನ ರಸ್ತೆಯನ್ನು ನರೇಗ ವತಿಯಿಂದ ನಿರ್ಮಾಣ ಮಾಡಲಾಗುವುದು. ಇದಕ್ಕಾಗಿ 100 ಕೋಟಿ ಅನುದಾನ ಮೀಸಲಿಡಲಾಗಿದೆ.   ಮುಖ್ಯಮಂತ್ರಿಗಳ ಗ್ರಾಮ ವಿಕಾಸ ಯೋಜನೆಯಡಿ ಪ್ರತಿ ಗ್ರಾಮಕ್ಕೆ 21 ಕೋಟಿ ರೂ.ಗಳಂತೆ ನೀಡುವ ಅನುದಾನದ ಜತೆಗೆ ಮುಖ್ಯಮಂತ್ರಿಗಳ 21 ಅಂಶಗಳ ಕಾರ್ಯಕ್ರಮಗಳ ಒಗ್ಗೂಡಿಸಿ ಸಾವಿರ ಗ್ರಾಮಗಳನ್ನು ಸರ್ವತೋಮುಖವಾಗಿ ಎರಡು ವರ್ಷಗಳಲ್ಲಿ ಅಭಿವೃದ್ಧಿಪಡಿಸುವ ಪ್ರಸ್ತಾವನೆ ಮಾಡಲಾಗಿದೆ.  ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಹಂತ-1V ಯನ್ನು ಪ್ರಸಕ್ತ ಸಾಲಿನಲ್ಲಿ ಪ್ರಾರಂಭಿಸಿ 4386 ಕಿಮೀ ರಸ್ತೆ ಅಭಿವೃದ್ಧಿಪಡಿಸಲು ಒಟ್ಟು 1765 ಕೋಟಿ ಅನುದಾನ ನೀಡಲಾಗಿದೆ.

ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಪ್ರತಿ ತಾಲೂಕಿಗೆ ಕನಿಷ್ಠ 200 ತೋಟಗಾರಿಕಾ ಕ್ಷೇತ್ರಗಳ ಅಭಿವೃದ್ಧಿ ಕಾಮಗಾರಿ ಅನುಷ್ಠಾನ, ಪಶು, ಜಾನುವಾರುಗಳಿಗೆ ಅನುಕೂಲವಾಗುವಂತೆ ಗ್ರಾಮಗಳಲ್ಲಿ ಸಮುದಾಯ ದನದ ಕೊಟ್ಟಿಗೆ ನಿರ್ಮಾಣ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಜಾರಿಮಾಡುವುದಾಗಿ ತಿಳಿಸಿದ್ದಾರೆ.  ಈ ಬಾರಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ 14061 ಕೋಟಿ ಅನುದಾನ ನೀಡಲಾಗಿದೆ.


+ ರೈತರ ಸಾಲ ಮನ್ನಾ ಇಲ್ಲ  : 

ಕಳದೆರಡು ವರ್ಷದಿಂದ ತೀವ್ರ ಬರಗಾಲದಿಂದ ಕಂಗೆಟ್ಟಿದ್ದ ಅನ್ನದಾತನ ಸಾಲ ಮನ್ನಾ ಮಾಡಲಾಗುತ್ತದೆ ಎಂಬ ನಿರೀಕ್ಷೆ ಹುಸಿಯಾಗಿದೆ. ರೈತರಿಗೆ ನೀಡುವ ಶೂನ್ಯ ಬಡ್ಡಿ ದರದ ಸಾಲವನ್ನು ಮುಂದುವರೆಸಿರುವ ಸಿದ್ದರಾಮಯ್ಯ ಮರುಪಾವತಿ ಅವಧಿಯನ್ನು ವಿಸ್ತರಿಸಿದ್ದಾರೆಯೇ ಹೊರತು ಸಾಲ ಮನ್ನಾ ಆಗಲಿ ಅಥವಾ ಬಡ್ಡಿ ಮನ್ನಾ ಆಗಲಿ ಪ್ರಸ್ತಾಪ ಮಾಡಿಲ್ಲ.


+  ಬೆಂಗಳೂರಿನ ಕೊಳಚೆ ಪ್ರದೇಶದ ನಿವಾಸಿಗಳಿಗೆ ತಿಂಗಳಿಗೆ 10,000 ಲೀ. ಉಚಿತ ಕುಡಿಯುವ ನೀರು

ಬೆಂಗಳೂರು, ಮಾ.15- ನಗರದ ಕೊಳಚೆ ಪ್ರದೇಶದ ನಿವಾಸಿಗಳಿಗೆ ಪ್ರತಿ ತಿಂಗಳು 10,000 ಲೀಟರ್ ಕುಡಿಯುವ ನೀರನ್ನು ಉಚಿತವಾಗಿ ವಿತರಿಸುವ ಮಹತ್ವದ ನಿರ್ಧಾರವನ್ನು ಕೈಗೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದರಿ ನಿವಾಸಿಗಳ ಬಾಕಿ ಬಿಲ್‍ನ್ನು ಮನ್ನಾ ಮಾಡಲು ಮನಸ್ಸು ಮಾಡಿದ್ದಾರೆ.
ನಗರದಲ್ಲಿ ಕುಡಿಯುವ ನೀರಿನ ಅಭಾವ ತಪ್ಪಿಸುವ ಉದ್ದೇಶದಿಂದ ತಿಪ್ಪಗೊಂಡನಹಳ್ಳಿ ಜಲಾಶಯವನ್ನು ಪುನಶ್ಚೇತನಗೊಳಿಸುವುದರ ಜತೆಗೆ ಬೆಂಗಳೂರು ಜಲಮಂಡಳಿ ವತಿಯಿಂದ 845 ಕೋಟಿ ರೂ. ವೆಚ್ಚದಲ್ಲಿ 340 ದಶಲಕ್ಷ ಲೀಟರ್ ಸಾಮಥ್ರ್ಯದ 12 ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು ಕೈಗೆತ್ತಿಕೊಳ್ಳಲಾಗಿದೆ.

ಇದೇ ರೀತಿ 110 ಗ್ರಾಮಗಳಿಗೆ ಕಾವೇರಿ ನೀರಿನ ಸಂಪರ್ಕ ಕಲ್ಪಿಸುವ 1886 ಕೋಟಿ ವೆಚ್ಚದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಈ ಯೋಜನೆಯನ್ನು 2 ವರ್ಷದೊಳಗೆ ಪೂರ್ಣಗೊಳಿಸುವ ಸಂಕಲ್ಪ ಮಾಡಲಾಗಿದೆ.  2012-13ರಲ್ಲಿ ಇದ್ದ ನೀರಿನ ಸೋರಿಕೆಯ ಪ್ರಮಾಣವನ್ನು ಗಣನೀಯವಾಗಿ ಇಳಿಸಲಾಗಿದ್ದು, ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ 2.43 ಲಕ್ಷ ಹೊಸ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಜೈಕಾ ಸಹಯೋಗದೊಂದಿಗೆ 5052 ಕೋಟಿ ರೂ. ವೆಚ್ಚದಲ್ಲಿ ಕಾವೇರಿ 5ನೆ ಹಂತದ ಯೋಜನೆಗೆ ಸರ್ಕಾರ ಅನುಮೋದನೆ ನೀಡಿದ್ದು ಈ ಯೋಜನೆಯಿಂದ ನಗರಕ್ಕೆ 775 ದಶಲಕ್ಷ ಲೀಟರ್ ಕುಡಿಯುವ ನೀರು ಲಭ್ಯವಾಗಲಿದೆ.

ರಾಜ್ಯಾದ್ಯಂತ ಕುಡಿಯುವ ನೀರಿನ ಅಭಾವ ತಪ್ಪಿಸಲು 14 ನೀರು ಸರಬರಾಜು ಮತ್ತು 13 ಒಳಚರಂಡಿ ಯೋಜನೆ ಸೇರಿದಂತೆ , 865.41 ಕೋಟಿ ರೂ. ವೆಚ್ಚದ 27 ಯೋಜನೆಗಳನ್ನು ಪ್ರಸಕ್ತ ಸಾಲಿನಲ್ಲಿ ಪೂರ್ಣಗೊಳಿಸಲು ತೀರ್ಮಾನಿಸಲಾಗಿದೆ. ಕುಡಿಯುವ ನೀರಿನ ಕೊರತೆ ನೀಗಿಸಲು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಮಂಗಳೂರಿನಲ್ಲಿ ಸಮುದ್ರ ನೀರು ಸಂಸ್ಕರಣಾ ಘಟಕ ಆರಂಭಿಸಲಾಗುವುದು.


+ ನೋಟು ಅಮಾನೀಕರಣದಿಂದ ರಾಜ್ಯದ ಆದಾಯ ಸಂಗ್ರಹಣೆಯಲ್ಲಿ ನಷ್ಟವಿಲ್ಲ

ಬೆಂಗಳೂರು, ಮಾ.15 – ನೋಟು ಅಮಾನೀಕರಣದಿಂದ ರಾಜ್ಯದ ಆದಾಯ ಸಂಗ್ರಹಣೆಯಲ್ಲಿ ದೊಡ್ಡ ನಷ್ಟವಾಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಜೆಟ್ ಸ್ಪಷ್ಟಪಡಿಸಿದೆ. ಜೊತೆಗೆ ತೆರಿಗೆ ಪದ್ಧತಿಯಲ್ಲಿ ಹೆಚ್ಚಿನ ಬದಲಾವಣೆ ಮಾಡದಿರುವುದು ಜನಸಾಮಾನ್ಯರಲ್ಲಿ ನಿಟ್ಟುಸಿರು ಬಿಡುವಂತೆ ಮಾಡಿದೆ.
ಕಳೆದ ವರ್ಷ 51,338 ಕೋಟಿ ರೂ. ವಾಣಿಜ್ಯ ತೆರಿಗೆ ಗುರಿ ನಿಗದಿಪಡಿಸಲಾಗಿತ್ತು. ನೋಟುಗಳ ಅಮಾನೀಕರಣದಿಂದ ಆರ್ಥಿಕತೆ ಹಾಗೂ ತೆರಿಗೆ ಸಂಗ್ರಹಣೆ ಮೇಲೆ ಪ್ರತಿಕೂಲ ಪರಿಣಾಮ ಬೀರಿದ್ದರೂ ಸರ್ಕಾರದ ವೆಚ್ಚಗಳು ಮತ್ತು ಅವಶ್ಯಕತೆಗಳಿಗೆ ಹಣಕಾಸು ಸಂಗ್ರಹಕ್ಕೆ ಎಲ್ಲಾ ಪ್ರಯತ್ನ ನಡೆಸಲಾಗುತ್ತಿದೆ.
ಈ ಬಾರಿ ತೆರಿಗೆ ಸಂಗ್ರಹದಲ್ಲಿ ನಿಗದಿತ ಗುರಿಯನ್ನು ತಲುಪುವ ನಿರೀಕ್ಷೆ ಇದೆ. ಮುಂದಿನ ವರ್ಷ 55 ಸಾವಿರ ಕೋಟಿ ವಾಣಿಜ್ಯ ತೆರಿಗೆ ಸಂಗ್ರಹದ ಗುರಿ ನಿಗದಿಪಡಿಸಲಾಗಿದೆ ಎಂದು ಸಿದ್ದರಾಮಯ್ಯ ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ.

ಈ ವರ್ಷದ ಜುಲೈ1 ರಿಂದ ದೇಶದಲ್ಲಿ ಸರಕು ಮತ್ತು ಸೇವಾ ತೆರಿಗೆಯನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ. ಇದಕ್ಕೆ ಅಗತ್ಯವಾದ ಸಂವಿಧಾನ ತಿದ್ದುಪಡಿಗಳನ್ನು ಮಾಡಲಾಗಿದೆ. ಮಹತ್ವಪೂರ್ಣ ತೆರಿಗೆ ವಿಧೇಯಕಗಳು ಸಿದ್ದಗೊಂಡಿದೆ. ಸರಕು ಮತ್ತು ಸೇವಾ ಪರಿಷತ್ ಹೊಸ ವಿಧೇಯಕಗಳಿಗೆ ಅಂಗೀಕಾರ ನೀಡಿದೆ. ಕರ್ನಾಟಕ ಸರಕು ಮತ್ತು ಸೇವಾ ತೆರಿಗೆ ಪದ್ದತಿಯನ್ನು ಮೊದಲಿನಿಂದಲೂ ಬೆಂಬಲಿಸುತ್ತಾ ಬಂದಿದೆ. ಈ ತೆರಿಗೆ ನೀತಿಯ ಚೌಕಟ್ಟು ರಚಿಸುವ ಪ್ರಕ್ರಿಯೆಯಲ್ಲಿ ರಾಜ್ಯ ಸರ್ಕಾರ ಸಕ್ರಿಯವಾಗಿ ಪಾಲ್ಗೊಂಡಿದೆ.

ಇ-ಉಪಾಸ್ ಈ ಉಪಕ್ರಮಗಳನ್ನು ಈಗಾಗಲೇ ರಾಜ್ಯಸರ್ಕಾರ ಜಾರಿಗೊಳಿಸಿರುವುದರಿಂದ ಸರಕು ಮತ್ತು ಸೇವಾ ತೆರಿಗೆ ಪದ್ಧತಿಗೆ ಸುಗಮವಾಗಿ ಸ್ಥಿತ್ಯಂತರಗೊಳ್ಳಲು ಅನುಕೂಲವಾಗಲಿದೆ.  ವ್ಯಾಪಾರಿಗಳು , ತೆರಿಗೆ ಪಾವತಿದಾರರು ಈಗಾಗಲೇ ಜಿಎಸ್‍ಟಿಗೆ ಸ್ಥಿತ್ಯಂತರಗೊಳ್ಳುತ್ತಿದ್ದಾರೆ ಮತ್ತು ಉತ್ಸಾಹ ತೋರುತ್ತಿದ್ದಾರೆ. ಇದಕ್ಕಾಗಿ ತೆರಿಗೆ ಪಾವತಿದಾರರನ್ನು ಅಭಿನಂದಿಸುತ್ತೇನೆ.   ಜಿಎಸ್‍ಟಿ ಕುರಿತು ಜಾಗೃತಿ ಮೂಡಿಸಲು 100ಕ್ಕೂ ಹೆಚ್ಚು ಕಾರ್ಯಾಗಾರಗಳನ್ನು ಪರಿಣಿತರ ಜೊತೆ ಮಾಡಲಾಗಿದೆ. ರೋಡ್‍ಶೋಗಳನ್ನು ನಡೆಸಲಾಗಿದೆ. ವಾಣಿಜ್ಯ ತೆರಿಗೆ ಇಲಾಖೆಯಲ್ಲಿ 3000ಕ್ಕೂ ಹೆಚ್ಚು ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ.


+ ಬೀಯರ್,ವೈನ್ ಮತ್ತು ಲಘು ಮದ್ಯಗಳಿಗೆ ವ್ಯಾಟ್ ಇಲ್ಲ

ಬೆಂಗಳೂರು, ಮಾ.15-ಬೀಯರ್, ಫೆನ್ನಿ, ಲಿಕ್ಯುಯೆರ್ ಮತ್ತು ವೈನ್ ಸೇರಿದಂತೆ ಮದ್ಯಗಳ ಮೇಲಿನ ವ್ಯಾಟನ್ನು ಏ.1ರಿಂದ ಜಾರಿಗೆ ಬರುವಂತೆ ತೆಗೆದುಹಾಕಲಾಗಿದೆ. ಬದಲಾಗಿ ಹೆಚ್ಚುವರಿ ಅಬಕಾರಿ ಸುಂಕವನ್ನು ವಿಧಿಸಲಾಗುತ್ತಿದೆ. ಅಬಕಾರಿ ಸುಂಕ 17 ಘೋಷಿತ ಸ್ಲ್ಯಾಬ್‍ಗಳನ್ನು ಹೊಂದಿದೆ. ಇವುಗಳನ್ನು ತರ್ಕಬದ್ಧಗೊಳಿಸುವ ಕ್ರಮವಾಗಿ 5 ಮತ್ತು 11 ಸ್ಲ್ಯಾಬ್‍ಗಳ ಮೇಲೆ ಶೇ.6ರಷ್ಟು, ಉಳಿದ 15 ಸ್ಲ್ಯಾಬ್‍ಗಳ ಮೇಲೆ ಶೇ.10 ಮತ್ತು 16ರಷ್ಟು ಅಬಕಾರಿ ಸುಂಕವನ್ನು ಹೆಚ್ಚಿಸಲಾಗಿದೆ. ಇದರಿಂದ ದರಪಟ್ಟಿ ಆಧಾರದ ಮೇಲೆ ಬೀಯರ್ ಮತ್ತು ಇತರ ಮದ್ಯಗಳ ಬೆಲೆ ಹೆಚ್ಚಾಗಲಿದೆ.

ಅಬಕಾರಿ ಇಲಾಖೆಗೆ 2016-17ನೇ ಸಾಲಿನಲ್ಲಿ 16,510 ಕೋಟಿ ರೂ. ತೆರಿಗೆ ಸಂಗ್ರಹದ ಗುರಿ ನಿಗದಿಪಡಿಸಲಾಗಿತ್ತು. ಬಹುತೇಕ ಗುರಿ ಸಾಧಿಸುವ ನಿರೀಕ್ಷೆ ಇದೆ. ಮುಂದಿನ ವರ್ಷ 18,050 ಕೋಟಿ ರೂ.ಗಳ ತೆರಿಗೆ ಸಂಗ್ರಹಿಸುವ ಗುರಿ ನಿಗದಿಪಡಿಸಲಾಗಿದೆ. ಎಥೆನಾಲ್ ಹೊರತುಪಡಿಸಿದ ಸ್ಪಿರಿಟ್ ರಫ್ತಿನ ಮೇಲೆ ಲೀಟರ್‍ಗೆ 2 ರೂ.ನಂತೆ ಆಮದಿನ ಮೇಲೆ ಪ್ರತಿ ಲೀಟರ್‍ಗೆ 1ರೂ.ನಂತೆ ವಿಧಿಸಲಾಗಿದ್ದ ಆಡಳಿತಾತ್ಮಕ ಶುಲ್ಕವನ್ನು ಹಿಂಪಡೆಯಲಾಗಿದೆ.


+ ಯಾವುದೇ ತೆರಿಗೆ ಏರಿಕೆ ಇಲ್ಲ, ಆಹಾರ ಧಾನ್ಯ ಮತ್ತು ಸಿರಿಧಾನ್ಯಗಳ ಬೆಲೆ ಇಳಿಕೆ

ಬೆಂಗಳೂರು, ಮಾ.15-ಸಂತೋಷದ ವಿಷಯವೆಂದರೆ, ಈ ವರ್ಷದ ಬಜೆಟ್‍ನಲ್ಲಿ ಯಾವುದೇ ತೆರಿಗೆ ಏರಿಕೆ ಮಾಡಲಾಗಿಲ್ಲ. ಬದಲಾಗಿ ಆಹಾರ ಧಾನ್ಯ ಮತ್ತು ಸಿರಿಧಾನ್ಯಗಳ ಮೇಲಿನ ತೆರಿಗೆ ವಿನಾಯಿತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದುವರೆಸಿದ್ದಾರೆ. ಇದರಿಂದಾಗಿ ಆಹಾರಧಾನ್ಯಗಳ ಬೆಲೆ ಇಳಿಕೆಯಾಗುವ ನಿರೀಕ್ಷೆ ಇದೆ.  ವಿಧಾನಸಭೆಯಲ್ಲಿಂದು 2017-18ನೆ ಸಾಲಿನ ಬಜೆಟ್ ಮಂಡಿಸಿದ ಸಿದ್ದರಾಮಯ್ಯ ಅವರು, ಈ ವರ್ಷ ಸರಕು ಮತ್ತು ಸೇವಾ ತೆರಿಗೆ ಪದ್ಧತಿ ಜಾರಿಯಾಗುವುದರಿಂದ ತೆರಿಗೆ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಭತ್ತ, ಅಕ್ಕಿ, ಗೋಧಿ, ಬೇಳೆಕಾಳು, ಸಂಸ್ಕರಿಸಿದ ರಾಗಿ, ಗೋಧಿ ಪದಾರ್ಥಗಳ ಮೇಲಿನ ತೆರಿಗೆ ವಿನಾಯಿತಿಯನ್ನು ಮುಂದುವರೆಸಲಾಗುತ್ತಿದೆ. ಜೊತೆಗೆ ಸಿರಿಧಾನ್ಯಗಳಾದ ನವಣೆ, ಸಾಮೆ, ಅರಕ, ಬರುಗು ಹಿಟ್ಟಿನ ಮೇಲಿನ ತೆರಿಗೆ ವಿನಾಯಿತಿಯನ್ನು ಘೋಷಿಸಲಾಗಿದೆ. ದ್ವಿದಳ ಧಾನ್ಯ, ತೆಂಗಿನಕಾಯಿ ಸಿಪ್ಪೆ ಮೇಲಿನ ತೆರಿಗೆಯನ್ನೂ ಕೈ ಬಿಡಲಾಗಿದೆ.

ಕರ ಸಮಾಧಾನ ಯೋಜನೆ:

ಮುಂದಿನ ದಿನಗಳಲ್ಲಿ ಸರಕು ಮತ್ತು ಸೇವಾ ತೆರಿಗೆ ಯೋಜನೆ ಜಾರಿಗೆ ಬರುತ್ತಿರುವುದರಿಂದ ಹಾಲಿ ಜಾರಿಯಲ್ಲಿರುವ ಮೌಲ್ಯವರ್ಧಿತ ತೆರಿಗೆ ಪದ್ದತಿಯಲ್ಲಿ ಬಾಕಿಉಳಿಸಿಕೊಂಡಿರುವವರಿಗೆ ಕರ ಸಮಾಧಾನ ಯೋಜನೆ ಜಾರಿಗೊಳಿಸಲಾಗಿದೆ. 2017ರ ಮೇ 31ರೊಳಗೆ ಬಾಕಿ ಇರುವ ಪೂರ್ಣ ತೆರಿಗೆ ಹಾಗೂ ಬಾಕಿ ಇರುವ ದಂಡ ಮತ್ತು ಬಡ್ಡಿಯ ಶೇ.10ರಷ್ಟನ್ನು ಪಾವತಿಸಿದರೆ, ಉಳಿದ ಶೇ.90ರ ಬಡ್ಡಿ ಮತ್ತು ದಂಡವನ್ನು ಮನ್ನಾ ಮಾಡುವುದಾಗಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಇದರಿಂದ ತೆರಿಗೆದಾರರು ಋಣಮುಕ್ತರಾಗಿ ಹೊಸ ತೆರಿಗೆ ಪದ್ಧತಿಗೆ ಹೊಂದಿಕೊಳ್ಳಲು ಅನುಕೂಲವಾಗಲಿದೆ ಎಂದಿದ್ದಾರೆ.


+ ಮುದ್ರಾಂಕ ಶುಲ್ಕ ಸಂಗ್ರಹಣೆ ಇಳಿಕೆ-ವಾಹನ ನೋಂದಣಿ ಏರಿಕೆ

ಬೆಂಗಳೂರು, ಮಾ.15-ನೋಟುಗಳ ಅಮಾನೀಕರಣದಿಂದ ವ್ಯಾಟ್ ಸಂಗ್ರಹದ ಮೇಲೆ ಪರಿಣಾಮ ಬೀರದೆ ಇದ್ದರೂ, ನೋಂದಣಿ ಮತ್ತು ಮುದ್ರಾಂಕ ಶುಲ್ಕದ ಮೇಲೆ ಅಡ್ಡಪರಿಣಾಮ ಬೀರಿದೆ. 2016-17ನೆ ಸಾಲಿನಲ್ಲಿ 9,100ಕೋಟಿ ರೂಗಳ ರಾಜಸ್ವ ಗುರಿ ನಿಗದಿಪಡಿಸಲಾಗಿತ್ತು. ನೋಟು ಅಮಾನೀಕರಣವಾಗದೆ ಇದ್ದಿದ್ದರೆ ನಿಗದಿತ ತೆರಿಗೆ ಸಂಗ್ರಹಿಸಲಾಗುತ್ತಿತ್ತು.

2016ರ ನವೆಂಬರ್ ನಂತರ ದಸ್ತಾವೇಜುಗಳ ನೋಂದಣಿ ಸಂಖ್ಯೆಯಲ್ಲಿ ಶೇ.25ರಷ್ಟು ಇಳಿಮುಖವಾಗಿದೆ. ಇದರಿಂದ 1,350 ಕೋಟಿ ತೆರಿಗೆ ನಷ್ಟವಾಗುವ ಅಂದಾಜಿದೆ. ಬಹುತೇಕ 7,750 ಕೋಟಿ ರೂ.ಗಳ ನೋಂದಣಿ ಮುದ್ರಾಂಕ ಶುಲ್ಕ ಸಂಗ್ರಹವಾಗುವ ನಿರೀಕ್ಷೆ ಇದೆ. ಮುಂದಿನ ವರ್ಷ 9000 ಕೋಟಿ ರೂ.ಗಳ ತೆರಿಗೆ ಸಂಗ್ರಹದ ಗುರಿ ನಿಗದಿ ಮಾಡಲಾಗಿದೆ. ಕರ್ನಾಟಕ ಮುದ್ರಾಂಕ ಕಾಯ್ದೆ 1957ಕ್ಕೆ 4 ಪ್ರಮುಖ ತಿದ್ದುಪಡಿ ತರಲಾಗುತ್ತಿದೆ. ಒಂದೆಡೆ ರಿಯಲ್ ಎಸ್ಟೇಟ್ ಬಿದ್ದು ಹೋಗಿ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಸಂಗ್ರಹದಲ್ಲಿ ಇಳಿಮುಖವಾಗಿದ್ದರೆ, ವಾಹನಗಳ ತೆರಿಗೆ ಹೆಚ್ಚಾಗಿ ಗುರಿ ಮೀರಿ ಆದಾಯ ಬರುವ ನಿರೀಕ್ಷೆ ವ್ಯಕ್ತವಾಗಿದೆ.

2016-17ನೆ ಸಾಲಿಗೆ 5,116 ಕೋಟಿ ರೂ. ಆದಾಯ ನಿರೀಕ್ಷೆ ಮಾಡಲಾಗಿತ್ತು. ವಾಹನಗಳ ನೋಂದಣಿಯಲ್ಲಿ ಏರಿಕೆಯಾಗಿ 5,450 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ. 290 ಕೋಟಿ ಹೆಚ್ಚುವರಿ ಕೋಟಿ ತೆರಿಗೆ ಬೊಕ್ಕಸಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಮುಂದಿನ ವರ್ಷ 6006 ಕೋಟಿ ರೂ.ಗಳ ತೆರಿಗೆ ಸಂಗ್ರಹದ ಗುರಿ ನಿಗದಿಯಾಗಿದೆ. 2010ರಿಂದ ಈವರೆಗೂ ಮೋಟಾರು ವಾಹನ ತೆರಿಗೆ ಹೆಚ್ಚಳ ಮಾಡಿಲ್ಲ. ಆದ್ದರಿಂದ 1ಲಕ್ಷ ಮೇಲ್ಪಟ್ಟ ಬೆಲೆಯುಳ್ಳ ದ್ವಿಚಕ್ರ ವಾಹನಗಳಿಗೆ ಮಾತ್ರ ಶೇ.12 ರಷ್ಟಿದ್ದ ತೆರಿಗೆಯನ್ನು ಶೇ.18ಕ್ಕೆ ಹೆಚ್ಚಿಸಲಾಗಿದೆ. ಇದರಿಂದ 60 ಕೋಟಿ ರೂ.ನಷ್ಟು ಹೆಚ್ಚುವರಿ ತೆರಿಗೆ ಸಂಗ್ರಹವಾಗುವ ನಿರೀಕ್ಷೆ ಇದೆ.


+ 2017-18ನೇ ಸಾಲಿನಲ್ಲಿ 3,975 ಮೆ.ವ್ಯಾಟ್ ವಿದ್ಯುತ್ ಉತ್ಪಾದನೆ ಗುರಿ

ಬೆಂಗಳೂರು,ಮಾ.15-ಪಾವಗಡದ ಸೌರಶಕ್ತಿ ಇಂಧನ ಪಾರ್ಕ್‍ನಿಂದ 1000 ಮೆಗಾವ್ಯಾಟ್, ಯರಮರಸ್ ಯೋಜನೆಯಿಂದ 1000 ಮೆಗಾವ್ಯಾಟ್ ಮತ್ತು ನವೀಕರಿಸಬಹುದಾದ ಇಂಧನ ಮೂಲಗಳಿಂದ 1375 ಮೆಗಾವ್ಯಾಟ್ ಸೇರಿದಂತೆ 2017-18ನೇ ಸಾಲಿನಲ್ಲಿ 3,975 ಮೆಗಾವ್ಯಾಟ್ ಸಾಮಥ್ರ್ಯವನ್ನು ಸೇರ್ಪಡೆ ಮಾಡಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಹೇಳಿದರು. ಹಣಕಾಸು ಸಚಿವರೂ ಆದ ಸಿಎಂ ಪ್ರಸಕ್ತ ಸಾಲಿನ ಬಜೆಟ್ ಮಂಡಿಸಿದ ಸಂದರ್ಭದಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಇಂಧನ ಇಲಾಖೆಗೆ 14,094 ಕೋಟಿ ರೂ.ಗಳ ಅನುದಾನ ಒದಗಿಸಲಾಗಿದೆ ಎಂದು ತಿಳಿಸಿದರು.

ವಿದ್ಯುತ್‍ಚ್ಛಕ್ತಿಯ ಸಮರ್ಥ ಬಳಕೆಗೆ ಕ್ರಮಗಳನ್ನು ಕೈಗೊಳ್ಳುವ ಮೂಲಕ ಪ್ರತಿಯೊಂದು ವಿಧಾನಸಭಾ ಸದಸ್ಯರ ಮತಕ್ಷೇತ್ರ ವ್ಯಾಪ್ತಿಯ ಐದು ಗ್ರಾಮಗಳನ್ನು ಮಾದರಿ ವಿದ್ಯುತ್ ಗ್ರಾಮಗಳಾಗಿ ಪರಿವರ್ತಿಸಲು ಉದ್ದೇಶಿಸಲಾಗಿದೆ. ಪ್ರಸರಣ ಜಾಲವನ್ನು ಬಲಪಡಿಸುವ ನಿಟ್ಟಿನಲ್ಲಿ 40 ಹೊಸ ಉಪಕೇಂದ್ರಗಳನ್ನು ಸ್ಥಾಪಿಸಲು ತೀರ್ಮಾನಿಸಲಾಗಿದೆ. ಬಹುಕಾಲದಿಂದ ಬಾಕಿ ಇರುವ ಗ್ರಾಮ ಪಂಚಾಯ್ತಿಗಳ ವಿದ್ಯುಚ್ಛಕ್ತಿ ಬಾಕಿ ಬಿಲ್‍ಗಳು, ಎಸ್ಕಾಂಗಳು ಹಾಗೂ ಕರ್ನಾಟಕ ವಿದ್ಯುತ್ ನಿಗಮಕ್ಕೆ ಬಹಳಷ್ಟು ಆರ್ಥಿಕ ಒತ್ತಡವನ್ನು ಉಂಟು ಮಾಡಿವೆ.

ಹೀಗಾಗಿ 31-3-2015ವರೆಗಿನ ಬಾಕಿ ಇರುವ ಮೊತ್ತ 3,766 ಕೋಟಿ ರೂ.ಗಳ ಬಾಕಿಯನ್ನು ಪಾವತಿಸಲು ತೀರ್ಮಾನಿಸಲಾಗಿದೆ. ಇದರಿಂದಾಗಿ ಉನ್ನತೀಕರಣ ಮತ್ತು ಮೂಲಭೂತ ಸೌಲಭ್ಯಗಳಿಗಾಗಿ ತೊಡಗಿಸಿಕೊಳ್ಳಲು ಈ ಕಂಪನಿಗಳಿಗೆ ಆರ್ಥಿಕ ಅವಕಾಶ ಕಲ್ಪಿಸಿದಂತಾಗುತ್ತದೆ ಎಂದು ಹೇಳಿದರು. ಭಾಗ್ಯ ಜ್ಯೋತಿ ಯೋಜನೆಯಡಿ ಉಚಿತವಾಗಿ ನೀಡುತ್ತಿರುವ ವಿದ್ಯುತ್ ಮಿತಿಯನ್ನು 18 ಯೂನಿಟ್‍ಗಳಿಂದ 40 ಯೂನಿಟ್‍ಗಳಿಗೆ ಹೆಚ್ಚಿಸಲಾಗಿದೆ ಎಂದು ಅವರು ತಿಳಿಸಿದರು.


+ 16 ಪ್ರವಾಸಿ ಕೇಂದ್ರಗಳ ಅಭಿವೃದ್ಧಿಗೆ 572 ಕೋಟಿ ಅನುದಾನ

ಬೆಂಗಳೂರು,ಮಾ.15-ಹದಿನಾರು ಪ್ರವಾಸಿ ಕೇಂದ್ರಗಳನ್ನು ವಿಶ್ವದರ್ಜೆ ಪ್ರವಾಸಿ ತಾಣಗಳನ್ನಾಗಿ ಅಭಿವೃದ್ದಿಪಡಿಸುವುದು, ಮೈಸೂರಿನಲ್ಲಿ ಏರೋ ಸ್ಪೋಟ್ರ್ಸ್ ಕ್ಲಬ್ ನಿರ್ಮಾಣದ ಗುರಿ, ಪ್ರವಾಸೋದ್ಯಮ ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ಪ್ರವಾಸೋದ್ಯಮ ಇಲಾಖೆಗೆ ಒಟ್ಟಾರೆಯಾಗಿ ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ 572 ಕೋಟಿ ರೂ.ಗಳನ್ನು ಒದಗಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.  2017-18ರ ಬಜೆಟ್ ಮಂಡಿಸಿದ ಅವರು, ಉತ್ತರ ಕರ್ನಾಟಕದ ಐತಿಹಾಸಿಕ ತಾಣಗಳಾದ ಲಕ್ಕುಂಡಿ, ಹಂಪಿ, ಬಾದಾಮಿ, ಪಟ್ಟದ ಕಲ್ಲು , ಐಹೊಳೆ, ಬನವಾಸಿ, ಮುಂತಾದ ಸ್ಥಳಗಳನ್ನು ಪುನಶ್ಚೇತನಗೊಳಿಸಿ ಆಕರ್ಷಿತಗೊಳಿಸಲು ಕಾರವಾರದಿಂದ ವಿಜಯಪುರದವರೆಗೆ ಹಾಗೂ ಬೆಳಗಾವಿಯಿಂದ ಬಳ್ಳಾರಿವರೆಗೆ ಮತ್ತು ಬೀದರ್‍ನಿಂದ ಕೊಪ್ಪಳದವರೆಗೆ ಬೆಳ್ಳಿ ಶೃಂಗವನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದರು.

ಅರಣ್ಯ ಪ್ರವಾಸೋದ್ಯಮ ಮತ್ತು ಚಾರಣ ರಥಗಳನ್ನು ಜನಪ್ರಿಯಗೊಳಿಸಲು ನಿರ್ಜನ ಕಾಡು ಪ್ರದೇಶ, ವನ್ಯಜೀವಿಯನ್ನು ಅನ್ವೇಷಿಸಲು 2017ನ್ನು ವನ್ಯಜೀವಿ ವರ್ಷ ಎಂದು ಘೋಷಿಸಲಾಗಿದೆ ಎಂದು ಹೇಳಿದರು.   ಅತಿಥಿ ಉದ್ಯಮದಲ್ಲಿ ಪರಿಣಿತ ಮಾನವ ಸಂಪನ್ಮೂಲವನ್ನು ಹೆಚ್ಚಿಸಲು 5 ಕೋಟಿ ವೆಚ್ಚದ ಕಾರ್ಯಕ್ರಮ ರೂಪಿಸಲಾಗಿದೆ. ಕರಾವಳಿ ತೀರವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ವಾರ್ಷಿಕ ಸರ್ಫಿಂಗ್ ಉತ್ಸವ ಏರ್ಪಡಿಸಲಾಗುವುದು ಹಾಗೂ ಪ್ರವಾಸೋದ್ಯಮ ಮೂಲಸೌಕರ್ಯ ಅಭಿವೃದ್ದಿಗೆ 385 ಕೋಟಿ ರೂ.ಗಳನ್ನು ಒದಗಿಸಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.


+ 49 ಹೊಸ ತಾಲೂಕುಗಳ ಘೋಷಣೆ
ಬೆಂಗಳೂರು, ಮಾ.15- ಬಹುದಿನಗಳ ಬೇಡಿಕೆಯಂತೆ ರಾಜ್ಯ ಸರ್ಕಾರ ಪ್ರಸಕ್ತ ಸಾಲಿನಲ್ಲಿ 49 ಹೊಸ ತಾಲೂಕುಗಳನ್ನು ಘೋಷಣೆ ಮಾಡಿದೆ. ಭೌಗೋಳಿಕ ಮತ್ತು ಆಡಳಿತಾತ್ಮಕ ಅಗತ್ಯೆಗಳನ್ನು ಪರಿಗಣಿಸಿ 49 ತಾಲೂಕುಗಳನ್ನು ರಚನೆ ಮಾಡುವುದಾಗಿ ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಘೋಷಣೆ ಮಾಡಿದರು.  ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ, ರಬಕವಿ, ಬನಹಟ್ಟಿ, ಇಳಕಲ್, ಬೆಳಗಾವಿ ಜಿಲ್ಲೆಯ ನಿಪ್ಪಾಣಿ, ಮೂಡಲಗಿ, ಕಾಗವಾಡ, ಚಾಮರಾಜನಗರ ಜಿಲ್ಲೆಯ ಹನೂರು, ದಾವಣಗೆರೆ ಜಿಲ್ಲೆಯ ನ್ಯಾಮತಿ, ಬೀದರ್ ಜಿಲ್ಲೆಯ ಚಿಟಗುಪ್ಪ, ಇಲಸೂರು ಮತ್ತು ಕಮಲಾನಗರ ಹೋಬಳಿಗಳನ್ನು ತಾಲೂಕು ಕೇಂದ್ರಗಳನ್ನಾಗಿ ರಚನೆ ಮಾಡಲಾಗಿದೆ.

ಬಳ್ಳಾರಿಯ ಕುರುಗೋಡು, ಕೊಟ್ಟೂರು, ಕಂಪ್ಲಿ, ಧಾರವಾಡ ಜಿಲ್ಲೆಯ ಅಣ್ಣಿಗೇರಿ, ಆಳ್ನಾವರ, ಹುಬ್ಬಳ್ಳಿ ನಗರ, ಗದಗ ಜಿಲ್ಲೆಯ ಗಜೇಂದ್ರಗಡ, ಲಕ್ಷ್ಮೇಶ್ವರ, ಕಲಬುರಗಿಯ ಕಾಳಗಿ, ಕಮಲಾಪುರ, ಯಡ್ರಾವಿ, ಶಹಬಾದ್, ಯಾದಗಿರಿ ಜಿಲ್ಲೆಯ ಹುಣಸಗಿ, ವಾಡಗೆರೆ ಮತ್ತು ಗುರುಮಿಟ್ಕಲ್‍ಗಳು ತಾಲೂಕು ಕೇಂದ್ರಗಳಾಗಿ ಪರಿವರ್ತನೆಯಾಗಿವೆ.  ಕೊಪ್ಪಳದ ಕುಕನೂರು, ಕನಕಗಿರಿ, ಕಾರಟಗಿ, ರಾಯಚೂರಿನ ಮಸ್ಕಿ, ಶಿರವಾರ, ಉಡುಪಿಯ ಬ್ರಹ್ಮಾವರ, ಕಾಪು, ಬೈಂದೂರು, ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆ, ಕಡಬ, ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲೂಕು ಕೇಂದ್ರಗಳಾಗಿ ರಚನೆಯಾಗಿವೆ. ವಿಜಯಪುರದ ಬಬಲೇಶ್ವರ, ಇಡಗುಂದಿ, ತಿಕೋಟ, ದೇವರ ಹಿಪ್ಪರಗಿ, ತಾಳಿಕೋಟೆ, ಚಡಚಣ, ಕೊಲ್ಲಾರ, ಹಾವೇರಿ ಜಿಲ್ಲೆಯ ರಟ್ಟೆಹಳ್ಳಿ, ಮೈಸೂರು ಜಿಲ್ಲೆಯ ಸರಗೂರು, ಚಿಕ್ಕಮಗಳೂರಿನ ಅಜ್ಜಂಪುರ, ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಹಾಗೂ ಕೋಲಾರ ಜಿಲ್ಲೆಯ ಕೆಜಿಎಫ್‍ಗಳನ್ನು ತಾಲೂಕು ಕೇಂದ್ರಗಳನ್ನಾಗಿ ಘೋಷಿಸಿದರು.


+ ವಕೀಲರ ಕಲ್ಯಾಣಕ್ಕೆ 5 ಕೋಟಿ ರೂ.

ರಾಜ್ಯದಲ್ಲಿ ವಕೀಲರ ಕಲ್ಯಾಣ ಕಾರ್ಯಕ್ರಮಗಳಿಗಾಗಿ ವಕೀಲರ ಪರಿಷತ್‍ಗೆ ನೀಡುತ್ತಿದ್ದ ಎರಡು ಕೋಟಿ ರೂ.ಗಳ ಅನುದಾನವನ್ನು 5 ಕೋಟಿ ರೂ.ಗಳಿಗೆ ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ ಹೆಚ್ಚಿಸಲಾಗಿದೆ. 2017 -18ನೇ ಸಾಲಿನ ಬಜೆಟ್‍ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ವಿಷಯ ಪ್ರಸ್ತಾಪಿಸಿದರು.   ರಾಜ್ಯದಲ್ಲಿ ನ್ಯಾಯಾಲಯಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಹಾಗೂ ಕಕ್ಷಿದಾರರಿಗೆ ತ್ವರಿತಗತಿ ನ್ಯಾಯ ದೊರಕಿಸಿಕೊಡುವ ಉದ್ದೇಶದಿಂದ ಕಳೆದ ನಾಲ್ಕು ವರ್ಷಗಳಿಂದ ಇಲ್ಲಿಯವರೆಗೆ ವಿವಿಧ ಸ್ತರದ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.


+ ಸ್ವ ಸಹಾಯ ಗುಂಪುಗಳಿಗೆ ಶೂನ್ಯ ದರದಲ್ಲಿ ಸಾಲ ವಿತರಣೆ : 

ಬೆಂಗಳೂರು, ಮಾ.15- ಮಹಿಳಾ ಸ್ವ ಸಹಾಯ ಗುಂಪುಗಳಿಗೆ ಸಹಕಾರ ಸಂಘಗಳ ಮೂಲಕ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಈವರೆಗೂ ಮಹಿಳಾ ಸ್ವ ಸಹಾಯ ಗುಂಪುಗಳಿಗೆ ಸಹಕಾರ ಸಂಘಗಳಿಂದ ಶೇ.4ರ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತಿತ್ತು. ಇನ್ನು ಮುಂದೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲಾಗುವುದು ಎಂದು ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‍ನಲ್ಲಿ ಘೋಷಣೆ ಮಾಡಿದ್ದಾರೆ.
ಇಂಟರ್‍ನೆಟ್ ಸಂಪರ್ಕವಿರುವ ಪ್ರಾಥಮಿಕ ಕೃಷಿ ಸಹಕಾರ ಸಂಘಗಳಿಗೆ ಡಿಸಿಸಿ ಬ್ಯಾಂಕ್‍ಗಳು ನಬಾರ್ಡ್ ಸಹಾಯದೊಂದಿಗೆ ಮೈಕ್ರೋ ಎಟಿಎಂ ಕಂ ಪಿಒಎಸ್ ಯಂತ್ರಗಳನ್ನು ಒದಗಿಸುವುದಾಗಿ ತಿಳಿಸಿದ್ದಾರೆ.

ಇದಕ್ಕಾಗಿ ರಾಜ್ಯ ಸರ್ಕಾರ ಶೇ.25ರಷ್ಟು ಆರ್ಥಿಕ ನೆರವು ನೀಡಲಿದೆ. ಮಧ್ಯಮಾವಧಿ, ದೀರ್ಘಾವಧಿ ಕೃಷಿ ಸಾಲವನ್ನು 3 ಲಕ್ಷದವರೆಗೆ ಶೂನ್ಯ ಬಡ್ಡಿದರದಲ್ಲಿ ವಿತರಣೆ ಮಾಡಲಾಗುವುದು ಹಾಗೂ ಶೇ.3ರ ಬಡ್ಡಿದರದಲ್ಲಿ 10 ಲಕ್ಷದವರೆಗೆ ಮಧ್ಯಮ ಮತ್ತು ದೀರ್ಘಾವಧಿ ಕೃಷಿ ಸಾಲ ನೀಡಿಕೆ ಮುಂದುವರಿಸುವುದಾಗಿ ಘೋಷಿಸಿದರು.  ಪ್ರಸಕ್ತ ಸಾಲಿನಲ್ಲಿ 25 ಲಕ್ಷ ರೈತರಿಗೆ 13,500 ಕೋಟಿ ರೂ.ಗಳ ಕೃಷಿ ಸಾಲ ವಿತರಿಸುವ ಗುರಿ ಹೊಂದಲಾಗಿದೆ. ಇದಲ್ಲದೆ, ಕೃಷಿ ಉತ್ಪನ್ನ ಮಾರುಕಟ್ಟೆ ಮೂಲಕ ಗದಗದಲ್ಲಿ ಈರುಳ್ಳಿ ಗೋದಾಮು ಸ್ಥಾಪನೆಗೆ 5 ಕೋಟಿ, ಜಾನುವಾರುಗಳ ಮಾರುಕಟ್ಟೆ ಸೌಲಭ್ಯಗಳ ಆಧುನೀಕರಣಕ್ಕೆ 5 ಕೋಟಿ, ತರಕಾರಿ ಮಾರುಕಟ್ಟೆಗಳಿಗೆ ಕ್ರೇಟ್, ಟ್ರಾಲಿ, ಎಲೆಕ್ಟ್ರಾನಿಕ್ ತೂಕದ ಯಂತ್ರಗಳಂತಹ ಆಧುನಿಕ ಸೌಲಭ್ಯ ಒದಗಿಸಲು 5 ಕೋಟಿ ರೂ. ನೀಡಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ಸಹಕಾರ ಇಲಾಖೆಗೆ 1663 ಕೋಟಿ ಅನುದಾನ ನೀಡಿದ್ದಾರೆ.


+ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ವೇತನ ಆಯೋಗ ರಚನೆ

ಬೆಂಗಳೂರು, ಮಾ.15- ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆಯಂತೆ ವೇತನ ಹೆಚ್ಚಳ ಸಂಬಂಧ ಏಳನೆ ವೇತನ ಆಯೋಗ ರಚನೆ ಮಾಡಲಾಗಿದೆ. ವಿಧಾನಸೌಧದಲ್ಲಿಂದು ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಸಂಬಂಧ ಏಳನೆ ವೇತನ ಆಯೋಗ ರಚನೆ ಮಾಡುವುದಾಗಿ ಘೋಷಣೆ ಮಾಡಿದರು.  2012 ಜನವರಿ 4ರಂದು ವೇತನ ಸಮಿತಿಯ ಶಿಫಾರಸಿನಂತೆ ನೌಕರರ ವೇತನ ಪರಿಷ್ಕರಣೆ ಮಾಡಲಾಗಿತ್ತು. ಆಯೋಗ ಅಂತಿಮ ವರದಿ ನೀಡಿದ ನಂತರ ವೇತನವನ್ನು ಪರಿಷ್ಕರಣೆ ಮಾಡುವುದಾಗಿ ತಿಳಿಸಿದರು. ಇದೇ ವೇಳೆ ಸ್ವತಂತ್ರ್ಯಯೋಧರ ಮಾಸಾಶನವನ್ನು 8 ಸಾವಿರದಿಂದ 10 ಸಾವಿರ ಹಾಗೂ ಗೋವಾ ವಿಮೋಚನಾ ಹೋರಾಟಗಾರರ ಮಾಸಾಶನವನ್ನು 3 ಸಾವಿರದಿಂದ 4 ಸಾವಿರಕ್ಕೆ ಏರಿಕೆ ಮಾಡಲಾಗಿದೆ.


Sri Raghav

Admin