2018ರ ಚುನಾವಣೆಗೆ ತಯಾರಿ : 100 ಕೋಟಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ

Spread the love

BBMP-mayor--01

ಬೆಂಗಳೂರು, ಮೇ 10-ಮುಂಬರುವ 2018ರ ಸಾರ್ವತ್ರಿಕ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಬಿಎಂಪಿ ವ್ಯಾಪ್ತಿಯಲ್ಲಿ 100 ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ.  ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಸಂತಪುರದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮೇಯರ್ ಜಿ.ಪದ್ಮಾವತಿ ಚಾಲನೆ ನೀಡಿದರು.  59.5 ಕೋಟಿ ರೂ. ವೆಚ್ಚದಲ್ಲಿ ರಸ್ತೆ, ಪಾದಚಾರಿ ಮಾರ್ಗಗಳ ಅಭಿವೃದ್ಧಿ, 29.50 ಕೋಟಿ ರೂ. ವೆಚ್ಚದಲ್ಲಿ ಬೃಹತ್ ಮಳೆ ನೀರು ಕಾಲುವೆ ಕಾಮಗಾರಿ ಹಾಗೂ 10.50 ಕೋಟಿ ರೂ. ವೆಚ್ಚದ ವಾರ್ಡ್‍ಮಟ್ಟದ ವಿವಿಧ ಅಭಿವೃದ್ಧಿ ಕಾಮಗಾರಿಗಳೂ ಸೇರಿದಂತೆ ಸುಮಾರು 100 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಮೇಯರ್ ಜಿ.ಪದ್ಮಾವತಿ ಅವರು, ಮಳೆ ಅನಾಹುತ ತಪ್ಪಿಸಲು ಕೈಗೆತ್ತಿಕೊಳ್ಳಲಾಗಿರುವ ಮಳೆ ನೀರುಗಾಲುವೆ ಕಾಮಗಾರಿ ಸೇರಿದಂತೆ ಇಂದು ಚಾಲನೆಗೊಳ್ಳುತ್ತಿರುವ ಎಲ್ಲಾ ಅಭಿವೃದ್ಧಿ ಕಾಮಗಾರಿಗಳನ್ನು ಆರು ತಿಂಗಳೊಳಗೆ ಪೂರ್ಣಗೊಳಿಸುವಂತೆ ಗುತ್ತಿಗೆದಾರರು ಮತ್ತು ಅಧಿಕಾರಿಗಳಿಗೆ ತಾಕೀತು ಮಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನ ಸಮಗ್ರ ಅಭಿವೃದ್ಧಿಗಾಗಿ ಬಜೆಟ್‍ನಲ್ಲಿ 7500 ಕೋಟಿ ರೂ.ಗಳ ಅನುದಾನ ನೀಡಿದ್ದಾರೆ. ಎಲ್ಲಾ ಕಾಮಗಾರಿಗಳು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು ಎಂದು ಸಿಎಂ ಕಟ್ಟಾಜ್ಞೆ ವಿಧಿಸಿದ್ದಾರೆ.

ಅವರ ಸೂಚನೆ ಮೇರೆಗೆ ಎಲ್ಲಾ ಕಾಮಗಾರಿಗಳನ್ನು ಆರು ತಿಂಗಳೊಳಗೆ ಪೂರ್ಣಗೊಳಿಸಬೇಕು. ಪದೇ ಪದೇ ನಾನು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ. ಒಂದು ವೇಳೆ ಕಾಮಗಾರಿ ವಿಳಂಬವಾದರೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.  ಸಂಸದ ಡಿ.ಕೆ.ಸುರೇಶ್ ಮಾತನಾಡಿ, ನಗರದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಕೈಗೆತ್ತಿಕೊಳ್ಳಲಾಗಿರುವ 100 ಕೋಟಿ ರೂ. ವೆಚ್ಚದ ಕಾಮಗಾರಿಗಳ ಉಸ್ತುವಾರಿಯನ್ನು ಅಧಿಕಾರಿಗಳು ಮತ್ತು ಸ್ಥಳೀಯ ಕಾರ್ಪೊರೇಟರ್ ಗಳು ವಹಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.

ಒಟ್ಟಾರೆ ನಗರದ ಸಮಗ್ರ ಬೆಳವಣಿಗೆಗೆ ಕಾಂಗ್ರೆಸ್ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಎಲ್ಲಾ ಕಾಮಗಾರಿಗಳನ್ನು ನಿಗದಿತ ವೇಳೆಯೊಳಗೆ ಪೂರ್ಣಗೊಳಿಸಲು ಅಧಿಕಾರಿಗಳು ಕಟೀಬದ್ಧರಾಗಿರಬೇಕು ಎಂದು ಎಚ್ಚರಿಸಿದರು. ಶಾಸಕ ಎಂ.ಕೃಷ್ಣಪ್ಪ, ಉಪಮೇಯರ್ ಆನಂದ್, ಜೆಡಿಎಸ್ ಗುಂಪಿನ ನಾಯಕಿ ರಮೀಳಾ ಉಮಾಶಂಕರ್ ಸೇರಿದಂತೆ ಹಲವಾರು ಕಾರ್ಪೊರೇಟರ್ ಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin