2020ರ ಒಳಗಾಗಿ ‘ಎಲ್ಲರಿಗೂ ವಿದ್ಯುತ್’ ಎಂಬ ವಿನೂತನ ಯೋಜನೆ : ರಾಜ್ಯಪಾಲ ವಾಲಾ

Spread the love

Rajyapala-1
ಬೆಂಗಳೂರು, ಜ.26-ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಯನ್ನು ನೀಗಿಸಲು ರಾಜ್ಯ ಸರ್ಕಾರ 2020ರ ಒಳಗಾಗಿ ಎಲ್ಲರಿಗೂ ವಿದ್ಯುತ್ ಎಂಬ ವಿನೂತನ ಯೋಜನೆಯನ್ನು ಜಾರಿಗೆ ತರಲಿದೆ ಎಂದು ರಾಜ್ಯಪಾಲ ವಿ.ಆರ್.ವಾಲಾ ಅವರು ಹೇಳಿದರು.  ದಿನದಿಂದ ದಿನಕ್ಕೆ ವಿದ್ಯುತ್ ಬೇಡಿಕೆ ಹೆಚ್ಚುತ್ತಿದ್ದು, ಇದನ್ನು ನೀಗಿಸುವ ಉದ್ದೇಶದಿಂದ ಈ ಯೋಜನೆ ಪ್ರಾರಂಭಿಸಲಾಗುತ್ತದೆ. ಇದರಿಂದ ಎಲ್ಲರಿಗೂ ವಿದ್ಯುತ್ ಲಭ್ಯವಾಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. 68ನೇ ಗಣರಾಜ್ಯೋತ್ಸವದ ಪ್ರಯುಕ್ತ ನಗರದ ಮಾಣಿಕ್ ಕ್ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಅವರು ರಾಜ್ಯವನ್ನು ಉದೇಶಿಸಿ ಮಾತನಾಡಿದರು.

ತಮ್ಮ 8 ಪುಟಗಳ ಸುದೀರ್ಘ ಭಾಷಣದಲ್ಲಿ ರಾಜ್ಯಪಾಲರು ಸರ್ಕಾರ ಕೈಗೊಂಡಿರುವ ಜನಪರ ಯೋಜನೆಗಳು ಹಾಗೂ ಮುಂದೆ ಕೈಗೊಳ್ಳಲಿರುವ ಹೊಸ ಕಾರ್ಯಕ್ರಮಗಳನ್ನು ಅನಾವರಣಗೊಳಿಸಿದರು. ಕರ್ನಾಟಕ ವಿವಿಧ ಮೂಲೆಗಳಿಂದ 3657 ಮೆಗಾವ್ಯಾಟ್ ಹೆಚ್ಚುವರಿ ವಿದ್ಯುತ್ ಉತ್ಪಾದಿಸಲು ತೀರ್ಮಾನಿಸಿದೆ. ಅದರಲ್ಲಿ ಪ್ರಸರಣ ಕಾರ್ಯಜಾಲವನ್ನು (ಟ್ರಾನ್ಸ್‍ಮಿಷನ್ ನೆಟ್‍ವರ್ಕ್) ಬಲ ಪಡಿಸುವುದು, ಗಂಗಾಕಲ್ಯಾಣ ಯೋಜನೆ, ಕುಡಿಯುವ ನೀರಿನ ಪೂರೈಕೆ, ನೀರಾವರಿ ಪಂಪ್‍ಸೆಟ್‍ಗಳ ಸಾಧನಗಳನ್ನು ಅಳವಡಿಸುವುದು ಮುಖ್ಯ ಉದ್ದೇಶವಾಗಿದೆ ಎಂದರು.

ಬೇಡಿಕೆಗೆ ತಕ್ಕಂತೆ ಟ್ರಾನ್ಸವರ್ರ್ ಬ್ಯಾಂಕುಗಳ ಸ್ಥಾಪನೆ, ದುರಸ್ತಿ ಕೇಂದ್ರಗಳನ್ನು ಸ್ಥಾಪಿಸುವುದು, 2×47 ಆಪ್ತ ಸಲಹಾ ಕೇಂದ್ರಗಳೊಂದಿಗೆ ಗಣಕೀಕೃತ ಗ್ರಾಹಕರ ಕುಂದು ಕೊರತೆಯ ನಿವಾಹರಣೆಗಳ ಕೇಂದ್ರ ಸ್ಥಾಪನೆ ಸೇರಿದಂತೆ ಹತ್ತು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದ್ದು, ವಿದ್ಯುತ್ ಉತ್ಪಾದನೆ ಹೆಚ್ಚಿಸಲು ದಿಟ್ಟ ಕ್ರಮಕೈಗೊಂಡಿದೆ ಎಂದು ಹೇಳಿದರು.
ಬೆಂಗಳೂರು, ಮೈಸೂರು, ಬೀದರ್ ಮತ್ತು ಬಳ್ಳಾರಿಯಲ್ಲಿರುವ ನಾಲ್ಕು ಸರ್ಕಾರಿ ವೈದ್ಯಕೀಯ ಆಸ್ಪತ್ರೆಗಳನ್ನು ಈಗಾಗಲೇ ಮೇಲ್ದರ್ಜೆಗೇರಿಸಲಾಗಿದೆ. ಜತೆಗೆ ತಾಲ್ಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಡಯಾಲಿಸೀಸ್ ಕೇಂದ್ರಗಳಿಗೆ ಹೆಚ್ಚುವರಿ ಸೌಲಭ್ಯ, ಪ್ರತಿಯೊಬ್ಬರಿಗೂ ಕಡಿಮೆ ದರದಲ್ಲಿ ಹೆಚ್ಚಿನ ಗುಣಮಟ್ಟದ ಔಷಧಗಳು ಸಿಗುವ ಉದ್ದೇಶದಿಂದ ಜಿಲ್ಲಾ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಜನರಿಕ್ ಔಷಧಲಾಯಗಳನ್ನು ಸ್ಥಾಪನೆ ಮಾಡುವುದಾಗಿ ಘೋಷಿಸಿದರು.

ಇತ್ತೀಚೆಗೆ ನಡೆದ ಪ್ರವಾಸಿ ಭಾರತ್ ದಿವಸ್ ಕಾರ್ಯಕ್ರಮದಲ್ಲಿ ರಾಜ್ಯದಲ್ಲಿ ಹೆಚ್ಚಿನ ಬಂಡವಾಳ ಹೂಡುವ ಆಸಕ್ತಿಯನ್ನು ಉದ್ಯಮಿಗಳು ತೋರಿದ್ದಾರೆ. 72 ದೇಶಗಳಿಂದ 7200 ಪ್ರತಿನಿಧಿಗಳು ಹಾಜರಾಗಿದ್ದರು. ಈ ಸಮ್ಮೇಳನದಲ್ಲಿ ಪ್ರದಾನ ಮಾಡಾಲದ 30 ಪ್ರಶಸ್ತಿಗಳ ಪೈಕಿ 2 ಪ್ರಶಸ್ತಿಗಳು ಕರ್ನಾಟಕಕ್ಕೆ ಬಂದಿರುವುದು ಹೆಮ್ಮೆಯ ವಿಷಯ ಎಂದು ಪ್ರಶಂಸಿಸಿದರು. ವಿವಿಧತೆಯಲ್ಲಿ ಏಕತೆ ಎಂಬ ಸಂದೇಶದೊಂದಿಗೆ ಎಲ್ಲರಲ್ಲೂ ಶಾಂತಿ, ಸಾಮರಸ್ಯ ಕಾಪಾಡಲು ಸರ್ಕಾರ ಕಂಕಣಬದ್ಧವಾಗಿದೆ. ಶಕ್ತಿಶಾಲಿ ರಾಷ್ಟ್ರವನ್ನಾಗಿ ಮಾಡುವ ಉದ್ದೇಶವೊಂದಿದೆ. ನಮ್ಮ ರಾಜ್ಯದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿ ಇಂದು ಮುನ್ನಡೆಯುತ್ತಿರುವುದು ಶ್ಲಾಘನೀಯ ಎಂದು ರಾಜ್ಯಪಾಲರು ಸರ್ಕಾರದ ಯೋಜನೆಗಳನ್ನು ಕೊಂಡಾಡಿದರು.

ಸರ್ಕಾರಕ್ಕೆ ಪ್ರಶಂಸೆ:

Rajyapala-2

ಇನ್ನು ರಾಜ್ಯಪಾಲರು ತಮ್ಮ ಭಾಷಣದಲ್ಲಿ ರಾಜ್ಯ ಸರ್ಕಾರದ ಸಾಧನೆಗಳು, ಜನರಿಗಾಗಿ ಕೈಗೊಂಡಿರುವ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸ್ವಚ್ಛ ಭಾರತ ಅಭಿಯಾನದಲ್ಲಿ ಕರ್ನಾಟಕ ದಿಟ್ಟ ಹೆಜ್ಜೆ ಇಟ್ಟಿದೆ. ಮೈಸೂರು ನಗರಕ್ಕೆ ದೇಶದಲ್ಲೇ ಅತ್ಯುತ್ತಮ ಸ್ವಚ್ಛ ನಗರ ಎಂದು ಪ್ರಶಸ್ತಿ ಸಿಕ್ಕಿರುವುದು ಕರ್ನಾಟಕ ಸ್ವಚ್ಚತೆಯತ್ತ ಮುನ್ನಡೆಯುತ್ತದೆ ಎಂಬುದರ ಸಂಕೇತವಾಗಿದೆ. ಸ್ಮಾರ್ಟ್ ಸಿಟಿ ಮಿಷನ್ ಯೋಜನೆಯಡಿ ರಾಜ್ಯದ ಮಂಗಳೂರು, ಬೆಳಗಾವಿ, ಶಿವಮೊಗ್ಗ, ಹುಬ್ಬಳ್ಳಿ-ಧಾರವಾಡ, ತುಮಕೂರು ಮತ್ತು ದಾವಣಗೆರೆ ನಗರಗಳು ಸೇರ್ಪಡೆಯಾಗಿರುವುದು ಉತ್ತಮ ಬೆಳವಣಿಗೆ. ಈ ಯೋಜನೆಗೆ 2016-17ನೇ ಅವಧಿಯಲ್ಲಿ 776ಕೋಟಿ ಬಿಡುಗಡೆ ಮಾಡಲಾಗಿದ್ದು, 2017-18ನೇ ಸಾಲಿನಲ್ಲಿ 1188ಕೋಟಿ ರೂ. ಹಣ ಬಿಡುಗಡೆ ಮಾಡಲಾಗುವುದು, ಜನರಿಗೆ ಉತ್ತಮ ಮೂಲಮೂತ ಸೌಕರ್ಯಗಳನ್ನು ಕಲ್ಪಿಸಿಕೊಡುವುದು ಇದರ ಮೂಲ ಉದ್ದೇಶ ಎಂದರು.

ಕರ್ನಾಟಕ ಇಂದು ದೇಶದಲ್ಲೇ ಬಂಡವಾಳ ಹೂಡಿಕೆಯಲ್ಲಿ ಪ್ರಥಮ ಸ್ಥಾನದಲ್ಲಿರುವುದು ಅತ್ಯಂತ ಹೆಮ್ಮೆಯ ವಿಷಯ. 2016ರವರೆಗೆ ರಾಜ್ಯದಲ್ಲಿ 1.4ಲಕ್ಷ ಕೋಟಿ ಬಂಡವಾಳ ಹೂಡಿಕೆ ಮಾಡಲಾಗಿದ್ದು, ಸುಮಾರು 15 ಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ. ಐಟಿ-ಬಿಟಿ ಕ್ಷೇತ್ರದಲ್ಲಿ ನಾವು ನಿರಂತರವಾಗಿ ಮುನ್ನಡೆ ಸಾಧಿಸಿಕೊಂಡು ಬಂದಿದ್ದೇವೆ. ಪ್ರತಿ ವರ್ಷ ಶೇ.10ರಿಂದ 12ರಷ್ಟು ಬೆಳವಣಿಗೆ ಹೆಚ್ಚಾಗುತ್ತಿದೆ.  ಕರ್ನಾಟಕ ಭೌಗೋಳಿಕ ಮಾಹಿತಿ ವ್ಯವಸ್ಥೆ ದೇಶದಲ್ಲೇ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಉತ್ತಮ ಆಡಳಿತಕ್ಕಾಗಿ ಎಲ್ಲಾ ಇಲಾಖೆಗಳನ್ನು ಒಂದೇ ಸೂರಿನಡಿ ಜಾರಿಗೆ ತಂದು ನಾಗರಿಕರಿಗೆ ಉತ್ತಮ ಸೌಲಭ್ಯ ಕಲ್ಪಿಸುವುದು ಅತ್ಯಂತ ಪ್ರಶಂಸನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಎಪಿಎಂಸಿ ವ್ಯವಸ್ಥಾಪನೆಯನ್ನು ಆನ್‍ಲೈನ್‍ಗೊಳಿಸಿ ರಾಷ್ಟ್ರೀಯ ಇ-ಮಾರುಕಟ್ಟೆಯ ಸೌಲಭ್ಯವನ್ನು ಒದಗಿಸುವಲ್ಲಿ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಕೃಷಿ ಭಾಗ್ಯ ಮತ್ತು ಕೃಷಿ ಅಭಿಯಾನದ ಕಾರ್ಯಕ್ರಮದಡಿ ರೈತ ಸಮುದಾಯಕ್ಕೆ ಮಳೆನೀರು ಸಂರಕ್ಷಣೆ, ತಂತ್ರಜ್ಞಾನ ಬಳಕೆ, 103 ಕೃಷಿ ಮಾರುಕಟ್ಟೆಗಳಿಗೆ ಅಂತರ್ಜಾಲ ಸಂಪರ್ಕ, ರೈತರಿಗೆ ನೆರವು ನೀಡಲು 2×47 ಸಹಾಯವಾಣಿ ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸಿರುವುದಾಗಿ ರಾಜ್ಯಪಾಲರು ತಿಳಿಸಿದರು.

ರಾಜ್ಯವು ಜಾನುವಾರು ಲಸಿಕೆಗಳ ಉತ್ಪಾದನೆಯಲ್ಲಿ ಸ್ವಾವಲಂಭನೆ ಸಾಧಿಸಿದೆ. ವಿವಿಧ ರೀತಿಯ ಸೋಂಕುರೋಗಗಳನ್ನು ತಡೆಗಟ್ಟಲು ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಈಗಾಗಲೇ ಅಸ್ತಿತ್ವದಲ್ಲಿರುವ 176 ಸಂಚಾರಿ ಪಶು ಚಿಕಿತ್ಸಾಲಯಗಳ ಜತೆಗೆ 45 ಸಂಚಾರಿ ಪಶುಚಿಕಿತ್ಸಾಲಯ ಪ್ರಾರಂಭಿಸಲಾಗಿದೆ ಎಂದು ಹೇಳಿದರು. ನೀರಾವರಿ ವ್ಯವಸ್ಥೆಯಲ್ಲಿ ನಾವು ಇತರೆ ರಾಜ್ಯಗಲಿಗೆ ಹೋಲಿಸಿದರೆ ಮುಂಚೂಣಿಯಲ್ಲಿದ್ದೇವೆ. ಆಲಮಟ್ಟಿ ಮತ್ತು ನಾರಾಯಣಪುರ ಅಣೆಕಟ್ಟೆಯ ಪುನರ್ ವ್ಯವಸ್ಥೆ ಮತ್ತು ಸುಧಾರಣೆಯ ಕಾರ್ಯಕ್ರಮಗಳಿಗಾಗಿ ಕೇಂದ್ರ ಜಲಾ ಆಯೋಗವು ಕರ್ನಾಟಕ್ಕೆ ಉತ್ಕøಷ್ಟ ಪ್ರಶಸ್ತಿಯನ್ನು ನೀಡಿದೆ.

ಡಿಟಿ-ಐಟಿ ಯೋಜನೆಯಡಿ 27 ಭಾರೀ ಮತ್ತು ಮಧ್ಯಮ ನೀರಾವರಿ ಅಣೆಕಟ್ಟೆಗಳನ್ನು ಪುನರ್‍ವ್ಯವಸ್ಥೆಗೊಳಿಸಲಾಗುತ್ತದೆ. ಕಾವೇರಿ, ಹೇಮಾವತಿ, ಕಬಿನಿ ಮತ್ತು ಹಾರಂಗಿ ಅಣೆಕಟ್ಟು ಪ್ರದೇಶ ವ್ಯಾಪ್ತಿ 72 ಕಿ.ಮೀ. ಉದ್ದದ ಕಾಮಗಾರಿಗಳನ್ನು ಆಧುನೀಕರಣಗೊಳಿಸಲಾಗಿದೆ. ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹಲವು ದಿಟ್ಟ ಕ್ರಮಗಳನ್ನು ಕೈಗೊಂಡಿದೆ. ಕರ್ನಾಟಕ ಜ್ಞಾನ ಆಯೋಗದ ಮೂಲಕ ಮಾಹಿತಿ ಮತ್ತು ತಂತ್ರಜ್ಞಾನದಡಿ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅಳವಡಿಸಲಾಗಿದೆ. ಖಾಸಗಿ ಸಹಭಾಗಿತ್ವದಲ್ಲಿ ಹೊಸ ಹೊಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಪ್ರಾಥಮಿಕ ಶಿಕ್ಷಣವನ್ನು ಸಾರ್ವತ್ರಿಕಗೊಳಿಸುವ ದೃಷ್ಟಿಯಿಂದ ಶಿಕ್ಷಣ ಹಕ್ಕು ಅಧಿನಿಯಮವನ್ನು ಯಶಸ್ವಿಯಾಗಿ ಅನುಷ್ಟಾನ ಮಾಡಲಾಗಿದೆ. ಶಿಕ್ಷಣದಲ್ಲಿ ಬೋಧನ ಗುಣಮಟ್ಟ ಸುಧಾರಿಸಲು ವೈಜ್ಞಾನಿಕ ತರಬೇತಿ, ಹೊಸ ಪಠ್ಯಕ್ರಮ ರೂಪಿಸುವುದು, ತಂತ್ರಜ್ಞಾನದ ಬಳಕೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ರಾಜ್ಯಪಾಲರು ತಮ್ಮ ಭಾಷಣದಲ್ಲಿ ವಿವರಿಸಿದರು.  ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಧಾನಪರಿಷತ್ ಸಭಾಧ್ಯಕ್ಷ ಡಿ.ಎಚ್.ಶಂಕರಮೂರ್ತಿ, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ನಗರ ಪೊಲೀಸ್ ಆಯುಕ್ತ ಪ್ರವೀಣ್‍ಸೂದ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Rajyapala-4

Rajyapala-3

Sri Raghav

Admin