ಲಾಕ್‍ಡೌನ್ ಇಲ್ಲ, ಆದರೆ ಕಠಿಣ ಕ್ರಮ ಜಾರಿ : ಸಚಿವ ಸುಧಾಕರ್


ಬೆಂಗಳೂರು,ಫೆ.20- ಕೇರಳ, ಮಹಾರಾಷ್ಟ್ರದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದ್ದರೂ ರಾಜ್ಯದಲ್ಲಿ ಸದ್ಯಕ್ಕೆ ಮತ್ತೆ ಲಾಕ್‍ಡೌನ್ ಜಾರಿ ಮಾಡುವ ಪ್ರಸ್ತಾವನೆ ರಾಜ್ಯ ಸರ್ಕಾರದ ಮುಂದೆ ಇಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ. ಸದ್ಯಕ್ಕೆ ಕೋವಿಡ್ ಸಂಖ್ಯೆ ಹೆಚ್ಚಾಗುವುದು ಬೇಡ. ಲಾಕ್‍ಡೌನ್ ಮಾಡುವಂತಹ ಪರಿಸ್ಥಿತಿಯೂ ಇಲ್ಲ. ಸರ್ಕಾರದ ಮುಂದೆ ಅಂತಹ ಪ್ರಸ್ತಾವನೆಯೂ ಇಲ್ಲ. ಮುಂದಿನ ದಿನಗಳಲ್ಲಿ ಕೆಲವು ಕಠಿಣ ನಿಯಮಗಳನ್ನು ಜಾರಿ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಕಳೆದ ಒಂದು ವಾರದಿಂದ ಕೋವಿಡ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೆ ನಮ್ಮಲ್ಲಿ ಆತಂಕಪಡುವ ಪರಿಸ್ಥಿತಿ ನಿರ್ಮಾಣವಾಗಿಲ್ಲ. ಮುಂದಿನ ವಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜೊತೆ ಚರ್ಚಿಸುವುದಾಗಿ ಹೇಳಿದರು. ಕಂದಾಯ, ಗೃಹ ಇಲಾಖೆ ಅಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಲಾಗುವುದು. ಕೇವಲ ನಮ್ಮ ಇಲಾಖೆಯಿಂದಲೇ ಎಲ್ಲವನ್ನೂ ಅನುಷ್ಠಾನ ಮಾಡುವುದು ಕಷ್ಟವಾಗುತ್ತದೆ. ಹೀಗಾಗಿ ಬೇರೆ ಬೇರೆ ಇಲಾಖೆಗಳ ನೆರವು ಪಡೆಯುವುದು ಅನಿವಾರ್ಯ ಎಂದು ಹೇಳಿದರು.

ಹೊರ ರಾಜ್ಯದವರಿಗೆ ಕಡ್ಡಾಯ ಆರ್‍ಟಿಪಿಸಿಆರ್  ಕೇರಳ ಮತ್ತು ಮಹಾರಾಷ್ಟ್ರದಿಂದ ಬರುವ ಪ್ರತಿಯೊಬ್ಬರು ಕಡ್ಡಾಯವಾಗಿ ಆರ್‍ಟಿಪಿಸಿಆರ್ ಒಳಗಾಗಬೇಕು. ಇದಕ್ಕಾಗಿ ನಾವು ಈಗಾಗಲೇ ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡಿದ್ದೇವೆ. ಕೋವಿಡ್ ಮಾರ್ಗಸೂಚಿಯನ್ನುಎಲ್ಲರೂ ಕಡ್ಡಾಯವಾಗಿ ಪಾಲನೆ ಮಾಡಬೇಕೆಂದು ಸಲಹೆ ಮಾಡಿದರು.

ಕರ್ನಾಟಕ ಒಟ್ಟು 10 ಗಡಿ ಜಿಲ್ಲೆಗಳ ಜೊತೆ ಸಂಪರ್ಕ ಹೊಂದಿದೆ. ಚಾಮರಾಜನಗರ, ದಕ್ಷಿಣಕನ್ನಡ, ಮೈಸೂರು, ಬೆಳಗಾವಿ, ಹುಬ್ಬಳ್ಳಿ ಧಾರವಾಡ, ಕಲಬುರಗಿ, ಬೀದರ್, ರಾಯಚೂರು ಸೇರಿದಂತೆ ಒಟ್ಟು 10 ಜಿಲ್ಲೆಗಳ ಜೊತೆ ಗಡಿ ಸಂಪರ್ಕವಿದೆ. ಇಲ್ಲಿಂದ ಬರುವವರ ಮೇಲೆ ಕಣ್ಣಿಟ್ಟಿದ್ದಾರೆ. ಎಲ್ಲರೂ ಕಡ್ಡಾಯವಾಗಿ ಆರ್‍ಟಿಪಿಎಸ್‍ಗೆ ಒಳಗಾಗಬೇಕು. ಸೋಂಕು ಹೆಚ್ಚದಂತೆ ನಿಗಾ ವಹಿಸುತ್ತೇವೆ ಎಂದು ಹೇಳಿದರು.

ಕಳೆದ ಒಂದು ವಾರದಿಂದ ಕೇರಳದಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ನಿನ್ನೆ ಕೇರಳದಲ್ಲಿ 5,405 ಕೋವಿಡ್ ಪ್ರಕರಣಗಳು ದಾಖಲಾಗಿವೆ. ಸಕ್ರಿಯ ಪ್ರಕರಣಗಳು 60 ಸಾವಿರ ಇದೆ. ಪ್ರತಿದಿನ 15 ಮಂದಿ ಸಾವನ್ನಪ್ಪಿದ್ದಾರೆ. ಇದೇ ರೀತಿ ಮಹಾರಾಷ್ಟ್ರದಲ್ಲಿ ನಿನ್ನೆ 6,112 ಪ್ರಕರಣಗಳು ದಾಖಲಾಗಿವೆ. ನಿನ್ನೆ ಒಂದೇ ದಿನ ಇದೇ ಕಾರಣಕ್ಕಾಗಿ 44 ಮಂದಿ ಸಾವನ್ನಪ್ಪಿದ್ದಾರೆ. ನಾವು ಎಚ್ಚರವಹಿಸುವುದು ಅಗತ್ಯ ಎಂದು ಅಭಿಪ್ರಾಯಪಟ್ಟರು.

ರಾಜ್ಯದಲ್ಲಿ ಕೋವಿಡ್ ಸಂಖ್ಯೆ ಇಳಿಮುಖವಾಗಿದ್ದು ಅದು ನಮ್ಮನ್ನು ಸಂಪೂರ್ಣವಾಗಿ ಬಿಟ್ಟು ಹೋಗಿಲ್ಲ ಎಂಬುದನ್ನು ಅರಿಯಬೇಕು. ಮಾರ್ಗಸೂಚಿ ಉಲ್ಲಂಘನೆ, ಮಾಸ್ಕ್ ಧರಿಸದಿರುವುದು, ಇಂತಹ ಪ್ರಮಾದಗಳನ್ನು ಜನ ಮಾಡುತ್ತಲೇ ಇದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ಮಾರ್ಚ್ ತಿಂಗಳ ಅಂತ್ಯದವರೆಗೂ ನಾವು ಅತ್ಯಂತ ವಿಷಮ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಸಾರ್ವಜನಿಕರು ದಯವಿಟ್ಟು ಮಾರ್ಗಸೂಚಿಯನ್ನು ಪಾಲನೆ ಮಾಡಬೇಕು.

ಈಗಾಗಲೇ ಲಾಕ್‍ಡೌನ್ ಜಾರಿ ಮಾಡಿದ ಪರಿಣಾಮ ಆರ್ಥಿಕ ಪರಿಸ್ಥಿತಿ ಬಿಗಡಾಯಿಸಿತ್ತು.ನಾವು ಈಗ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿದ್ದರಿಂದ ಕೆಲವು ವಿನಾಯ್ತಿ ನೀಡಬೇಕಾಯಿತು. ಆದರೂ ಹೆಚ್ಚಿನ ಜನ ಸೇರಿದಂತೆ ಎಚ್ಚರ ವಹಿಸಬೇಕು. ನಮ್ಮ ಜನ ಏಕೆ ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಮಾರ್ಚ್ ತಿಂಗಳ ಅಂತ್ಯದವರೆಗೂ ನಾವು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ಮಾಚ್ ್ ತಿಂಗಳಿನಲ್ಲೇ ಜನಸಾಮಾನ್ಯರಿಗೆಲಸಿಕೆ ಲಭ್ಯವಾಗಲಿದೆ ಎಂದರು.

ಅಧಿಕಾರಿಗಳ ಬೇಜಾವಬ್ದಾರಿತನ: ರಾಜ್ಯದಲ್ಲಿ ಕೋವಿಡ್ ಲಸಿಕೆ ಅಭಿಯಾನ ಆರಂಭವಾದ ನಂತರ ಈವರೆಗೆ ಶೇ.51ರಷ್ಟು ವಾರಿಯರ್ಸ್‍ಗಳು ಲಸಿಕೆ ಪಡೆದಿದ್ದಾರೆ. ಈವರೆಗೂ ಶೇ.49ರಷ್ಟು ಮಂದಿ ಲಸಿಕೆ ಪಡೆದಿಲ್ಲ. ದುರಂತವೆಂದರೆ ಕೋವಿಡ್ ಸಂದರ್ಭದಲ್ಲಿ ಮುಂಚೂಣಿಯಲ್ಲಿ ನಿಂತಿದ್ದ ಆರೋಗ್ಯ ಇಲಾಖೆಯ ಫ್ರಂಟ್‍ಲೈನ್ ವಾರಿಯರ್ಸ್‍ಗಳು ಲಸಿಕೆ ಹಾಕಿಸಿಕೊಂಡಿಲ್ಲ ಎಂದು ವಿವರಿಸಿದರು. ಕಂದಾಯ, ಗೃಹ, ನಗರಾಭಿವೃದ್ಧಿ ಸೇರಿದಂತೆ ವಿವಿಧ ಇಲಾಖೆಗಳ ಸಿಬ್ಬಂದಿಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ತೆಗೆದುಕೊಂಡಿದ್ದಾರೆ. ಆದರೆ ಆರೋಗ್ಯ ಇಲಾಖೆಯ ಸಿಬ್ಬಂದಿ ಯಾವ ಕಾರಣಕ್ಕಾಗಿ ಈವರೆಗೂ ಲಸಿಕೆ ಕಾಣಿಸಿಕೊಂಡಿಲ್ಲ ಎಂದು ಪ್ರಶ್ನಿಸಿದರು.

ವೈದ್ಯರು, ನರ್ಸ್‍ಗಳು, ವೈದ್ಯಕೀಯ ವಿದ್ಯಾರ್ಥಿಗಳು ಸೇರಿದಂತೆ ಮತ್ತಿತರ ಸಿಬ್ಬಂದಿಗಳು ಕೂಡಲೇ ಲಸಿಕೆ ಪಡೆಯಬೇಕು. ಆರೋಗ್ಯ ಇಲಾಖೆಯ ಸಿಬ್ಬಂದಿಯೇ ಲಸಿಕೆ ಪಡೆಯದಿದ್ದರೆ ಇನ್ಯಾರು ಪಡೆಯಲು ಮುಂದಾಗುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಲಸಿಕೆ ಪಡೆದುಕೊಂಡವರಿಗೆ ಸೋಂಕು ಬರಬಹುದು. ಆದರೆ ಸಾವಿನ ಸಂಖ್ಯೆ ಕಡಿಮೆಯಾಗುತ್ತದೆ. ಲಸಿಕೆಯನ್ನು ಉಚಿತವಾಗಿ ವಿತರಿಸುತ್ತಿದ್ದರೂ ಏಕೆ ಮೀನಾಮೇಷ. ಇದು ಬೇಜವಾಬ್ದಾರಿಯ ಪರಮಾವಧಿ ಎಂದು ಟೀಕಿಸಿದರು.

ನಾವೇ ತೆಗೆದುಕೊಳ್ಳದಿದ್ದರೆ ಜನಸಾಮಾನ್ಯರು ಲಸಿಕೆ ಹಾಕಿಸಿಕೊಳ್ಳುವುದಿಲ್ಲ. ಸಾಮಾಜಿಕ ಜಾಲತಾಣ ನಂಬಿ ನೀವು ಮನೆಯಲ್ಲಿ ಕೂರಬೇಕಿಲ್ಲ. ಅದನ್ನು ನಂಬಿ ಮನೆಯಲ್ಲೇ ಕೂತರೇ ಬಲಿಪಶುಗಳಾಗುತ್ತೀರಿ ಎಂದರು. ಇದುವರೆಗೂ 1,12,558 ಸಿಬ್ಬಂದಿ ಲಸಿಕೆ ತೆಗೆದುಕೊಂಡಿದ್ದಾರೆ. ನೋಂದಣಿ ಮಾಡಿಕೊಂಡವರ ಸಂಖ್ಯೆಯೂ ಹೆಚ್ಚಾಗಿದೆ. ಈವರೆಗೂ 6,12,018 ಲಸಿಕೆ ನೀಡಿದ್ದೇವೆ. ಇಡೀ ದೇಶಕ್ಕೆ ಕರ್ನಾಟಕವೇ ಮೊದಲ ಸ್ಥಾನದಲ್ಲಿದೆ ಎಂದು ಪ್ರಶಂಸಿಸಿದರು.