ಎಸ್‍ಸಿ-ಎಸ್‍ಟಿ ಹಾಗೂ ಹಿಂದುಳಿದ ವರ್ಗಗಗಳತ್ತ ಬಿಜೆಪಿ ಚಿತ್ತ

Social Share

ಬೆಂಗಳೂರು,ಜು.16- 2023ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ತರಲು ಬಿಜೆಪಿ ಎಸ್ಸಿ, ಎಸ್ಟಿ ಹಾಗೂ ಹಿಂದುಳಿದ ವರ್ಗಗಳು ಸೇರಿದಂತೆ ಎಲ್ಲ ಸಮುದಾಯಗಳ ಮತ ಸೆಳೆಯಲು ಕಾರ್ಯತಂತ್ರ ಹೆಣೆದಿದೆ.

ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ಎಲ್ಲ ಸಮುದಾಯಗಳ ಮತಗಳನ್ನು ಕ್ರೋಢೀಕರಿಸಲು ಚಿಂತನೆ ನಡೆಸಿದ್ದು, ಮೇಲ್ವರ್ಗದ ಜನರ ಪಕ್ಷ ಎನ್ನುವ ಬಿಜೆಪಿಯ ಬಗ್ಗೆ ಇರುವ ಸಾರ್ವಜನಿಕರ ಅಭಿಪ್ರಾಯವನ್ನು ಬದಲಾಯಿಸಲು ದಲಿತರು, ಹಿಂದುಳಿದವರು, ರೈತರು ಮತ್ತು ಕಾರ್ಮಿಕ ವರ್ಗದವರಿಗೆ ಕೇಂದ್ರದ ಮೋದಿ ಸರ್ಕಾರ ಹಾಗೂ ರಾಜ್ಯದ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳನ್ನು ಆಯಾ ಸಮುದಾಯಗಳ ಜನರಿಗೆ ತಲುಪಿಸಿ ಮನವರಿಕೆ ಮಾಡುವ ಕೆಲಸ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.

ಅದಕ್ಕಾಗಿ ಸರ್ಕಾರದ ಫಲಾನುಭವಿಗಳಾಗಿರುವ ಸಮುದಾಯಗಳ ಪ್ರತ್ಯೇಕ ಸಮಾವೇಶಗಳನ್ನು ಮಾಡುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ. ಬಿಜೆಪಿ ಹಳೆ ಮೈಸೂರು ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಇನ್ನಷ್ಟು ಬಲಗೊಳ್ಳಲು ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆಯೂ ಸಭೆಯಲ್ಲಿ ಚರ್ಚೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಹಳೆ ಮೈಸೂರು ಭಾಗದಲ್ಲಿ ಬಿಜೆಪಿಯ ಕಡೆ ಒಲವಿರುವ ಮುಖಂಡರನ್ನು ಬಿಜೆಪಿಯ ಕಡೆಗೆ ಸೆಳೆಯುವ ಕುರಿತಂತೆಯೂ ಸಭೆಯಲ್ಲಿ ಚರ್ಚೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಈಗಿರುವ ಶಾಸಕರ ಸಂಖ್ಯೆಯನ್ನು ಎರಡರಷ್ಟು ಹೆಚ್ಚಿಸಲು ಆ ಭಾಗಕ್ಕೆ ಒಬ್ಬರು ಹಿರಿಯ ನಾಯಕರನ್ನು ಉಸ್ತುವಾರಿಯನ್ನಾಗಿ ನೇಮಿಸುವ ಬಗ್ಗೆಯೂ ಚರ್ಚಿಸಲಾಗಿದೆ ಎಂದು ತಿಳಿದುಬಂದಿದೆ.

ಇನ್ನು ಸರ್ಕಾರದ ಮೇಲೆ ಕೇಳಿ ಬಂದಿರುವ ಗಂಭೀರ ಆರೋಪಗಳ ಬಗ್ಗೆಯೂ ಚರ್ಚಿಸಲಾಗಿದ್ದು, ಪ್ರತಿ ಪಕ್ಷ ಕಾಂಗ್ರೆಸ್ ಮಾಡುತ್ತಿರುವ ಆರೋಪಗಳಿಗೆ ಪತ್ಯುತ್ತರ ನೀಡುವ ಬಗ್ಗೆಯೂ ಚರ್ಚಿಸಲಾಗಿದೆ. ಪಕ್ಷ ಸಂಘಟನೆ ಮತ್ತು ಸರ್ಕಾರದ ವರ್ಚಸ್ಸು ಹೆಚ್ಚಿಸುವ ಯೋಜನೆಗಳನ್ನು ಅನುಷ್ಠಾನ ಮಾಡಬೇಕೆಂದು ಸಂಘ ಪರಿವಾರದ ಹಿರಿಯ ನಾಯಕರು ಸಲಹೆ ಮಾಡಿದ್ದಾರೆಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ಇದೇ ವೇಳೆ ಹಿಜಾಬ್, ಆಜಾನ್ ಹಾಗೂ ಪಿಎಸ್‍ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ರಾಜ್ಯ ಸರ್ಕಾರದ ನಡೆಯನ್ನು ಮುಕ್ತವಾಗಿ ಪ್ರಶಂಸೆ ಮಾಡಿರುವ ಬಿಜೆಪಿ ವರಿಷ್ಠರು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜ್ಯ ನಾಯಕರಿಗೆ ಕಿವಿಮಾತು ಹೇಳಿದ್ದಾರೆ.

ಪಿಎಸ್‍ಐ ನೇಮಕಾತಿ ಅಕ್ರಮ ಆರೋಪ ಪ್ರಕರಣ ಚರ್ಚೆಗೆ ಬಂದಿತು. ಐಪಿಎಸ್ ಮತ್ತು ಐಎಎಸ್ ಅಧಿಕಾರಿಗಳ ಬಂಧನದ ವಿಚಾರ ಪ್ರಸ್ತಾಪಿಸಿದ ಸಂತೋಷ್, ಎಡಿಜಿಪಿ ಮಟ್ಟದ ಅಧಿಕಾರಿಯನ್ನು ಯಾವ ರಾಜ್ಯದಲ್ಲಿಯೂ ಬಂಧಿಸಿಲ್ಲ, ಅದೇ ರೀತಿ, ಐಎಎಸ್ ಅಧಿಕಾರಿಯನ್ನೂ ಬೇರೆ ರಾಜ್ಯದಲ್ಲಿ ಬಂಧಿಸಿಲ್ಲ. ಆದರೆ, ಭ್ರಷ್ಟಾಚಾರದ ಆರೋಪದ ಮೇಲೆ ಐಪಿಎಸ್ ಮತ್ತು ಐಎಎಸ್ ಅಧಿಕಾರಿಯ ಬಂಧನದ ಮೂಲಕ ಕರ್ನಾಟಕದಲ್ಲಿ ಭ್ರಷ್ಟಾಚಾರದಂತಹ ಯಾವುದೇ ಚಟುವಟಿಕೆಗೂ ಬೆಂಬಲ ಇಲ್ಲ ಎಂಬುದನ್ನು ರಾಜ್ಯ ಸರ್ಕಾರ ಸಾಬೀತುಪಡಿಸಿದೆ ಎಂದು ಸಂತೋಷ್ ಶ್ಲಾಘಿಸಿದ್ದಾರೆ.

ಇದೇ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯ ಬಣ ಕಿತ್ತಾಟದ ಬಗ್ಗೆಯೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಕೆಲವು ನಾಯಕರಿಂದ ಮಾಹಿತಿ ಪಡೆದುಕೊಳ್ಳಲಾಗಿದೆ. ಕುಟುಂಬದ ಮೇಲಿನ ಆರೋಪವನ್ನು ಸಭೆಯಲ್ಲಿಯೇ ರಮೇಶ್ ಜಾರಕಿಹೊಳಿ ತಳ್ಳಿಹಾಕಿದರು ಎನ್ನಲಾಗಿದೆ.

ತನ್ನ ಕುಟುಂಬದ ಪಕ್ಷ ನಿಷ್ಟೆಯನ್ನು ಅನುಮಾನಿಸಬೇಡಿ, ಬೆಳಗಾವಿ ಲೋಸಕಭಾ ಉಪ ಚುನಾವಣೆ ವೇಳೆ ತಮ್ಮ ಸಹೋದರನನ್ನೇ ಸೋಲಿಸಿದ್ದೇವೆ ಎಂದು ಪರಿಷತ್ ಸೋಲಿಗೆ ತಾವು ಕಾರಣರಲ್ಲ ಎನ್ನುವ ಸಮಜಾಯಿಷಿ ನೀಡಿದರು.

ಸದ್ಯ ಯಾವ ವಿಚಾರದಲ್ಲಿ ವೈಫಲ್ಯವಾಗಿದೆ ಎಂದು ಪಟ್ಟಿ ಮಾಡಿ ಮತ್ತೆ ಅಂತಹ ವೈಫಲ್ಯ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.

Articles You Might Like

Share This Article