ಪೈಪೋಟಿಗೆ ಇಳಿದ ರಾಜಕೀಯ ಪಕ್ಷಗಳು: ಪ್ರಚಾರದ ರಂಗೇರಿಸಿದ ಸಮಾವೇಶ

Social Share

ಬೆಂಗಳೂರು,ಅ.12- ವಿಧಾನಸಭೆ ಚುನಾವಣೆಗೆ ಇನ್ನೂ 8 ತಿಂಗಳು ಬಾಕಿಯಿರುವಾಗಲೇ ಚುನಾವಣೆ ಪ್ರಚಾರದ ಕಾವು ಏರತೊಡಗಿದೆ. ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪೈಪೋಟಿಗೆ ಇಳಿದವರಂತೆ ಮತದಾರರ ಸೆಳೆಯಲು ಒಂದಿಲ್ಲೊಂದು ಕಾರ್ಯಕ್ರಮಗಳನ್ನು ಆಯೋಜಿಸಿ ರ್ಯಾಲಿ, ಯಾತ್ರೆ ಸಮಾವೇಶ ಗಳಂತಹ ಕಾರ್ಯಕ್ರಮಗಳಲ್ಲಿ ನಿರತವಾಗಿವೆ.

ವಿಧಾನಸಭೆಗೆ ಚುನಾವಣೆ ವೇಳಾಪಟ್ಟಿ ಘೋಷಣೆಗೂ ಮುನ್ನವೇ ರಾಜ್ಯದಾದ್ಯಂತ ಚುನಾವಣೆ ಪ್ರಚಾರ ಪೂರ್ಣಗೊಳಿಸಿ ಪಕ್ಷದ ಪರವಾದ ಅಲೆ ನಿರ್ಮಿಸಿಕೊಳ್ಳಲು ಮೂರು ಪಕ್ಷಗಳು ಸಮರೋಪಾದಿಯಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿವೆ.

ಒಂದು ಪಕ್ಷದ ಕಾರ್ಯಕ್ರಮಕ್ಕೆ ಪ್ರತಿಯಾಗಿ ಮತ್ತೊಂದು ಪಕ್ಷವು ಮಗದೊಂದು ಕಾರ್ಯಕ್ರಮ ರೂಪಿಸಿ ಮತದಾರರನ್ನು ಒಲಿಸಿಕೊಳ್ಳಲು ಹಾಗೂ ಪಕ್ಷದ ಕಾರ್ಯಕರ್ತರಲ್ಲಿ ಹುಮ್ಮಸ್ಸು ಮೂಡಿಸಲು ಸಂಘಟಿತವಾಗಿವೆ.
ರಾಜಕೀಯ ಪಕ್ಷಗಳ ಬಿಡುವಿಲ್ಲದ ಚುನಾವಣೆ ಸಂಬಂಧಿತ ಚಟುವಟಿಕೆಗಳಿಂದಾಗಿ ಈಗಿನಿಂದಲೇ ವಿಧಾನಸಭೆ ಚುನಾವಣೆಗೆ ರಂಗು ಬಂದಂತಾಗಿದೆ. ಯಾವ ಕ್ಷಣದಲ್ಲಿ ಚುನಾವಣೆ ಘೋಷಣೆಯಾದರೂ ಎದುರಿಸಲು ಸಿದ್ಧ ಎಂಬ ಸಂದೇಶವನ್ನು ರಾಜಕೀಯ ಪಕ್ಷಗಳು ನೀಡತೊಡಗಿವೆ.

ಕೇಂದ್ರ ಚುನಾವಣೆ ಆಯೋಗ ವಿಧಾನಸಭೆ ಚುನಾವಣೆ ವೇಳಾಪಟ್ಟಿ ಘೋಷಣೆ ಮಾಡಿದರೆ ಚುನಾವಣೆ ನೀತಿ ಸಂಹಿತೆ ಅನ್ವಯವಾಗುತ್ತದೆ. ನೀತಿ ಸಂಹಿತೆಗಳ ಕಟ್ಟುಪಾಡುಗಳ ನಡುವೆ ಅಡೆ ತಡೆಗಳಿಲ್ಲದೆ ಸಮಾವೇಶ, ಚುನಾವಣೆ ರ್ಯಾಲಿ ನಡೆಸುವುದು ಕಷ್ಟವೆನ್ನುವ ಅಭಿಪ್ರಾಯದಿಂದ ರಾಜಕೀಯ ಪಕ್ಷಗಳು ಈಗಿನಿಂದಲೇ ಅಬ್ಬರದ ಚುನಾವಣಾ ಪ್ರಚಾರಕ್ಕೆ ಇಳಿದಿವೆ ಎಂದೂ ಹೇಳಲಾಗುತ್ತಿದೆ.

ಕಾಂಗ್ರೆಸ್ ಪಕ್ಷವು ಎಐಸಿಸಿ ಮುಖ್ಯಸ್ಥರಾದ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ ಜೋಡೋ ಯಾತ್ರೆಯನ್ನು ರಾಜ್ಯದಲ್ಲಿ 21 ದಿನಗಳ ಕಾಲ ನಡೆಸಿ ಕಾಂಗ್ರೆಸ್ ಪರವಾದ ಅಲೆ ನಿರ್ಮಿಸಲು ಶ್ರಮಿಸುತ್ತಿದೆ.

ಎಐಸಿಸಿ ಮುಖಂಡ ರಾಹುಲ್ ಗಾಂಧಿ ಜೊತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಇತರ ಪ್ರಮುಖ ನಾಯಕರು ಪಾಲ್ಗೊಂಡು ಕಾಂಗ್ರೆಸ್ ಪರ ಪ್ರಚಾರ ನಡೆಸುತ್ತಿದ್ದಾರೆ.

ಕಾಂಗ್ರೆಸ್ ಪಕ್ಷದಿಂದ ಚುನಾವಣಾ ಅಭ್ಯರ್ಥಿಗಳಾಗಲಿರುವ ಹಾಲಿ ಶಾಸಕರು, ಮಾಜಿ ಶಾಸಕರು, ಹೊಸದಾಗಿ ಟಿಕೆಟ್ ಬಯಸುವ ಮುಖಂಡರು, ರಾಹುಲ್ ಗಾಂಧಿ ಜೊತೆ ತಮ್ಮ ಕ್ಷೇತ್ರದ ಕಾರ್ಯಕರ್ತರ ಒಡಗೂಡಿ ಪಾದಯಾತ್ರೆ ಮೂಲಕ ಮತಾರರ ಗಮನ ಸೆಳೆಯುತ್ತಿದ್ದಾರೆ.

ಕಾಂಗ್ರೆಸ್ ಪಕ್ಷದ ಪಾದಯಾತ್ರೆಯಿಂದ ಎಚ್ಚೆತ್ತಕೊಂಡಿರುವ ಆಡಳಿತಾರೂಢ ಬಿಜೆಪಿ, ಕಾಂಗ್ರೆಸ್ ಪರ ಅಲೆಗೆ ತಡೆಯೊಡ್ಡಲು ಪ್ರತಿ ಕಾರ್ಯಕ್ರಮ ರೂಪಿಸತೊಡಗಿದೆ. ರಾಜ್ಯದಾದ್ಯಂತ ರ್ಯಾಲಿ ಸಮಾವೇಶ, ಸಂವಾದ, ಸಭೆಗಳನ್ನು ನಡೆಸುವ ಮೂಲಕ ಮತದಾರರನ್ನು ಓಲೈಸಿಕೊಳ್ಳಲು ನಾನಾ ಕಸರತ್ತು ನಡೆಸಿದೆ.

ಇದರ ಭಾಗವಾಗಿ ಬಿಜೆಪಿಯು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಜನಸ್ಪಂದನೆ ಯಾತ್ರೆ ನಡೆಸಿದ್ದು, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್‍ಕುಮಾರ್ ಕಟೀಲು ಮುಂದಾಳತ್ವದಲ್ಲಿ ಮತ್ತೊಂದು ತಂಡ ಜನಸ್ಪಂದನೆ ಯಾತ್ರೆ ಕೈಗೊಂಡು ಬಿಜೆಪಿ ಸರ್ಕಾರದ ಸಾಧನೆ ಮತ್ತು ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯಗಳನ್ನು ಜನತೆಗೆ ತಲುಪಿಸುತ್ತಿದೆ.

ಕಾಂಗ್ರೆಸ್ ಪಕ್ಷದ ಭಾರತ ಐಕ್ಯತಾ ಯಾತ್ರೆ ಮತ್ತು ಬಿಜೆಪಿಯ ಜನಸ್ಪಂದನ ಯಾತ್ರೆ ಮತ್ತು ಸಮಾವೇಶಗಳಿಗೆ ಕೌಂಟರ್ ನೀಡಲು ಜೆಡಿಎಸ್ ಸಹ ಹಲವಾರು ಸಮಾವೇಶಗಳನ್ನು ನಡೆಸಲು ಸಿದ್ಧತೆ ನಡೆಸಿದೆ. ಈಗಾಗಲೇ ಜನಮಿತ್ರ ಸಮಾವೇಶ ಪೂರ್ಣಗೊಳಿಸಿದ ಜಾತ್ಯಾತೀತ ಜನತಾದಳವು ನವೆಂಬರ್ 1ರಿಂದ ಪಂಚರತ್ನ ಸಮಾವೇಶಕ್ಕೆ ಮೈಸೂರಿನಲ್ಲಿ ಚಾಲನೆ ನೀಡಲಿದೆ.

ಆಡಳಿತ ಪಕ್ಷ ಬಿಜೆಪಿ, ಪ್ರತಿ ಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್‍ನ ಬಿಡುವಿಲ್ಲದ ಪಾದಯಾತ್ರೆ, ರ್ಯಾಲಿ, ಸಮಾವೇಶದ ಕಾರ್ಯಕ್ರಮಗಳಿಂದಾಗಿ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಪ್ರಚಾರದ ವಾತಾವರಣ ಸೃಷ್ಟಿಯಾಗಿದೆ. ಅಬ್ಬರದ ಪ್ರಚಾರ ಈಗಿನಿಂದಲೇ ಆರಂಭವಾಗಿದೆ.

Articles You Might Like

Share This Article